ಸಾಮಾನ್ಯವಾಗಿ ಭತ್ತ ಬೆಳೆಯಬೇಕಾದರೆ ಗದ್ದೆಯಲ್ಲಿ ಸದಾ ನೀರು ನಿಂತಿರಬೇಕು ಎಂಬ ಭಾವನೆ ಇದೆ. ಆದರೆ ಮೈಸೂರು ಜಿಲ್ಲೆ ಟಿ. ನರಸೀಪುರ ತಾಲೂಕು ಮಾಡ್ರಹಳ್ಳಿಯ ರೈತರೊಬ್ಬರು ಯಾವುದೇ ರಸಗೊಬ್ಬರ, ಕಳೆನಾಶಕ ಬಳಸದೇ ಅತ್ಯಂತ ಕಡಿಮೆ ನೀರು ಬಳಸುವ ಮೂಲಕ ಬಂಪರ್ ಭತ್ತದ ಫಸಲು ತೆಗೆದಿದ್ದಾರೆ.
ಅಂಶಿ ಪ್ರಸನ್ನಕುಮಾರ್
ರೈತ ಸಂಘದ ಸಂಸ್ಥಾಪಕ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರ ಸ್ವಗ್ರಾಮವಾದ ಮಾಡ್ರಹಳ್ಳಿಯ ಸಹಜ ಕೃಷಿಕ ಎಂ.ಕೆ. ಕೈಲಾಸಮೂರ್ತಿ. ಇವರು ತಮ್ಮ ಎರಡು ಎಕರೆ ಜಮೀನಿನಲ್ಲಿ ಸಹಜ ಕೃಷಿ ಪದ್ದತಿ ಮೂಲಕ ಬಂಪರ್ ಭತ್ತದ ಬೆಳೆದಿದ್ದಾರೆ. ಕೈಲಾಸಮೂರ್ತಿ ಅವರು ಕೊಳ್ಳೇಗಾಲ ತಾಲೂಕು ದೊಡ್ಡಿಂದುವಾಡಿಯಲ್ಲಿರುವ ಜಮೀನಿನಲ್ಲಿ ಹಲವಾರು ರೀತಿಯ ಪ್ರಯೋಗಗಳನ್ನು ಮಾಡಿ, ವೈವಿಧ್ಯಮಯ ಬೆಳೆಗಳನ್ನು ಬೆಳೆದು, ಯಶಸ್ಸು ಪಡೆದಿದ್ದಾರೆ. ಅದೇ ರೀತಿ ಮಾಡ್ರಹಳ್ಳಿ ಜಮೀನಿನಲ್ಲಿ ಈ ರೀತಿಯ ಪ್ರಯೋಗಗಳನ್ನು ಇತ್ತೀಚಿನ ವರ್ಷಗಳಲ್ಲಿ ಮಾಡಿಕೊಂಡು ಯಶ ಸಾಧಿಸಿದ್ದಾರೆ. ಪ್ರತಿ ಎಕರೆಗೆ ಇತರರು 20 ಕ್ವಿಂಟಾಲ್ ಒಳಗೆ ಬೆಳೆದರೆ ಇವರು 25 ರಿಂದ 30 ಕ್ವಿಂಟಾಲ್ ಭತ್ತ ಬೆಳೆದಿದ್ದಾರೆ. ಒಂದು ಕ್ವಿಂಟಾಲ್ ಭತ್ತ ಮಿಲ್ ಮಾಡಿಸಿದರೆ 73-75 ಕೆಜಿ ಅಕ್ಕಿ ಬರುತ್ತದೆ. ಇತರದ್ದು 60-62 ಕೆಜಿ ಮಾತ್ರ ಬರುತ್ತದೆ.
ಮೆಕ್ಕೆಜೋಳದಲ್ಲಿ ಹೋದ ಹಣ ತರಕಾರಿಯಲ್ಲಿ ಬಂತು!
ಹೊಸ ಪ್ರಯೋಗದ ಮೂಲಕ ನೀರು ಉಳಿತಾಯ
ಭತ್ತದ ಪೈರನ್ನು ಒಟ್ಲು ಪಾತಿ ಮೂಲಕ ಬೆಳೆಸಿ, ನಂತರ ನಾಟಿ ಮಾಡಲಾಗುತ್ತದೆ. ಆದರೆ ಕೈಲಾಸಮೂರ್ತಿ ಅವರು ತಾವೇ ನಿರ್ಮಿಸಿಕೊಂಡ ಕೂರಿಗೆಯಿಂದ ಒಣಭೂಮಿಗೆ ಸಾಲು ಬಿತ್ತನೆ ಮಾಡುತ್ತಾರೆ. ಕೇವಲ ಶೇ.10 ರಷ್ಟುನೀರು ಮತ್ತು ಕೃಷಿ ಕಾರ್ಮಿಕರನ್ನು ಬಳಕೆ ಮಾಡುತ್ತಾರೆ. ಅಂದರೆ ಹತ್ತು ದಿನಕ್ಕೊಮ್ಮೆ ಮಾತ್ರ ನೀರು ಹಾಯಿಸುತ್ತಾರೆ. 22ನೇ ದಿನ ಕಳೆ ಮಿಷನ್ ಬಳಸಿ, ಕಳೆ ತೆಗೆಯುತ್ತಾರೆ. ಇದರಿಂದ ಶೇ.90 ರಷ್ಟುನೀರು ಮತ್ತು ಕೃಷಿ ಕೂಲಿ ಉಳಿತಾಯವಾಗುತ್ತಿದೆ. ಜೀವವೈವಿಧ್ಯತೆ ರಕ್ಷಣೆಯಾಗಿ, ಮಣ್ಣಿನ ಫಲವತ್ತತೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಈ ಗದ್ದೆಯಲ್ಲಿ ಮೀಥೇನ್ ಹಾಗೂ ನೈಟ್ರಸ್ ಆಕ್ಸೈಡ್ ಉತ್ಪತ್ತಿಯಾಗುವುದಿಲ್ಲ. ಕಳೆ ನಾಶಕ ಬಳಸಬೇಕಾಗಿಲ್ಲ. ಆಹಾರ ಪದಾರ್ಥ ರಾಸಾಯನಿಕರಹಿತ ಆಗಿರುತ್ತದೆ. ನೀರಿನ ಉಳಿತಾಯವಾಗುವುದರಿಂದ ವಾರ್ಷಿಕ ಮೂರು ಬೆಳೆ ಬೆಳೆಯಬಹುದು. ರೈತರ ಆರ್ಥಿಕತೆ ದ್ವಿಗುಣವಾಗುತ್ತದೆ.
ರಾಸಾಯನಿಕ ಮುಕ್ತ ಆಹಾರ
ಕೈಲಾಸಮೂರ್ತಿ ಅವರು ತಾವು ಬೆಳೆದ ಎಲ್ಲಾ ಬೆಳೆಗಳನ್ನು ಸಂಗ್ರಹಿಸಿ, ಸೂರ್ಯನ ಶಾಖ ಬಳಸಿ,ಸಂಸ್ಕರಿಸಿ, ಗ್ರಾಹಕರಿಗೆ ರಾಸಾಯನಿಕ ಮುಕ್ತ ಆಹಾರವನ್ನು ಕಡಿಮೆ ಬೆಲೆಯಲ್ಲಿ ನೇರವಾಗಿ ಮಾರಾಟ ಮಾಡುತ್ತಾರೆ. ಅಕ್ಕಿಯನ್ನು ಪ್ರಸ್ತುತ ಪ್ರತಿ ಕೆಜಿಗೆ 70 ರೂ,ಗೆ ಮಾರಾಟ ಮಾಡುತ್ತಿದ್ದು, ಮುಂದೆ 60-65 ರೂ.ಗಳಲ್ಲಿ ಮಾರಾಟ ಮಾಡುವ ಉದ್ದೇಶ ಇದೆ. ಮುಂದಿನ ದಿನಗಳಲ್ಲಿ ಸಾಸಿವೆ, ಬೇಳೆ, ದ್ವಿದಳ ಧಾನ್ಯಗಳನ್ನು ಬೆಳೆಯುವ ಗುರಿ ಹಾಕಿಕೊಂಡಿದ್ದಾರೆ.
ರೇಷ್ಮೆ ಬೆಳೆಯಿಂದ 5.60ಲಕ್ಷ ಎಣಿಸುತ್ತಿರುವ ಬಳ್ಳಾರಿ ಕೊಟ್ರಮ್ಮ!
ಗದ್ದೆಯಲ್ಲಿ ತೇವಾಂಶ ಇದ್ದರೆ ಸಾಕು
ಸಾಮಾನ್ಯವಾಗಿ ಭತ್ತ ಬೆಳೆಯುವುದು ಎಂದರೆ ಗದ್ದೆಗಳಲ್ಲಿ ಸದಾ ನೀರು ನಿಂತಿರಬೇಕು ಎಂಬ ತಪ್ಪು ಕಲ್ಪನೆ ರೈತರಲ್ಲಿದೆ. ನನ್ನ ಪ್ರಕಾರ ಭತ್ತದ ಬೆಳೆಗೆ ತೇವಾಂಶ ಇದ್ದರೆ ಸಾಕು. ಸಸ್ಯಗಳು ಆಮ್ಲಜನಕವನ್ನು ಬಿಡುಗಡೆ ಮಾಡಿ, ಇಂಗಾಲದ ಡೈಆಕ್ಸೈಡ್ ಹೀರಿಕೊಳ್ಳುತ್ತವೆ. ಇದರಿಂದ ತೇವಾಂಶ ಹೆಚ್ಚು ಹಿಡಿದಿಟ್ಟುಕೊಳ್ಳಲು ಸಹಾಯವಾಗುತ್ತದೆ. ನಾನು ದೊಡ್ಡಿಂದುವಾಡಿಯ ಜಮೀನಿನಲ್ಲಿ ಸೂರ್ಯನ ಬೆಳಕಿನ ಆಧಾರದ ಮೇಲೆ ಬಾಳೆ, ಅಡಕೆ, ಮಾವು, ಹಲಸು, ಪಪ್ಪಾಯ ಬೆಳೆಯುವ ಪ್ರಯೋಗಗಳನ್ನು 1988 ರಿಂದಲೂ ಮಾಡುತ್ತಿದ್ದೆ. ಇದನ್ನು ಮಾಡ್ರಹಳ್ಳಿಯ ಜಮೀನಿನಲ್ಲೂ ಮಾಡಿದೆ ಎನ್ನುತ್ತಾರೆ ಕೈಲಾಸಮೂರ್ತಿ.
ಅಡಿಕೆ ತೋಟದಲ್ಲೂ ಬತ್ತದ ಕೃಷಿ; ಹೊಸ ಪ್ರಯೋಗಕ್ಕೆ ಕೈ ಹಾಕಿದ ರೈತ!
ಹೆಚ್ಚು ಸೂರ್ಯನ ಶಾಖ ಮತ್ತು ಕಡಿಮೆ ನೀರನ್ನು ಬಳಸಿಕೊಂಡು ಸಹಜ ಕೃಷಿ ಮಾಡಿ, ಹಣ ಗಳಿಸದೆ ಪರಿಸರ ಮತ್ತು ಪ್ರಕೃತಿ ಸಂಪತ್ತನ್ನು ಉಳಿಸುವ ಕೆಲಸ ಮಾಡುತ್ತಿದ್ದಾರೆ. ಬೆಳೆದ ಆಹಾರ ಪದಾರ್ಥವನ್ನು ಸಂಸ್ಕರಿಸಲು ಸಹ ಸೂರ್ಯನ ಶಕ್ತಿಯನ್ನು ಬಳಸುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಎದುರಾಗುವ ಕಾರ್ಬನ್ ಸೀಕ್ವಿಸ್ಪ್ರೇಷನ್, ಜೀವವೈವಿಧ್ಯತೆ, ಮಣ್ಣಿನ ಫಲವತ್ತತೆ, ಅಂತರ್ಜಲ ಸಂರಕ್ಷಣೆ, ಜೈವಿಕ ನಿಯಂತ್ರಣ, ಪ್ರಕೃತಿ ಸಂಪತ್ತಿನ ರಕ್ಷಣೆ, ಹೆಚ್ಚಿನ ಆಹಾರೋತ್ಪಾದನೆ- ಈ ಸವಾಲುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಅವರದ್ದು.
ಕೈಲಾಸಮೂರ್ತಿ ಅವರ ಪ್ರಕಾರ, ವಿಶ್ವದಲ್ಲಿ ಶೇ.60 ರಷ್ಟುಮಂದಿಯ ಆಹಾರ ಭತ್ತ. ಅಮೆರಿಕಾ, ಏಷ್ಯಾ ಖಂಡದಲ್ಲಿಯೂ ಹೆಚ್ಚಾಗಿ ಬೆಳೆಯುತ್ತಾರೆ. ಭತ್ತ ಬೆಳೆಯುವಾಗ ಉಂಟಾಗುವ ಮೀಥೇನ್ ಹಾಗೂ ನೈಟ್ರಸ್ ಆಕ್ಸೈಡ್‌ನಿಂದ ಜಾಗತಿಕ ತಾಪಮಮಾನಕ್ಕೆ ಕಾರಣವಾಗುತ್ತಿದೆ. ಕೃಷಿ ತಂತ್ರಜ್ಞಾನ ಸರಳೀಕರಣಗೊಳಿಸಿದರೆ ಈ ಪರಿಸ್ಥಿತಿ ಉಂಟಾಗುವುದಿಲ್ಲ. ಆಹಾರ ಉತ್ಪಾದನೆಯೂ ಹೆಚ್ಚಾಗುತ್ತದೆ. ದುರಂತವೆಂದರೆ ಆಹಾರ ತಂತ್ರಜ್ಞಾನ ದಿನದಿಂದ ದಿನಕ್ಕೆ ಸಂಕೀರ್ಣವಾಗುತ್ತಿದೆ. ಇದು ತಪ್ಪಬೇಕು. ರೋಗನಿರೋಧಕ ತಳಿಗಳನ್ನು ಅಭಿವೃದ್ಧಿಪಡಿಸಬೇಕು. ಜೈವಿಕ ನಿಯಂತ್ರಣ ಮಾಡಿಕೊಡಬೇಕು. ಪರಿಸರ ಮತ್ತು ಪ್ರಕೃತಿ ಸಂಪತ್ತು ಉಳಿಸಬೇಕು. ಆಗ ಮಾತ್ರ ಆಹಾರೋತ್ಪಾದನೆ ದ್ವಿಗುಣ ಮಾಡಲು ಸಾಧ್ಯ ಎನ್ನುತ್ತಾರೆ.
ನಿಮ್ಮ ಜಮೀನಲ್ಲಿ ಎರೆಹುಳು ಬರುವಂತೆ ಮಾಡಿದ್ರೆ ಕೈತುಂಬಾ ಹಣವೂ ಬರುತ್ತೆ!
ಕೈಲಾಸಮೂರ್ತಿ ಅವರ ಸಂಪರ್ಕಕ್ಕೆ ಮೊ.98801 85757.