35ಕ್ಕೂ ಹೆಚ್ಚು ಹೊಸ ಕೃಷಿ ಯಂತ್ರ ಸಂಶೋಧನೆ; ಕೃಷಿ ಯಂತ್ರಕರ್ತೆ ಶೈಲಜಾ ವಿಠಲ್‌!

By Suvarna News  |  First Published Feb 11, 2020, 3:12 PM IST

ಒಂದು ಸಣ್ಣ ಸಮಸ್ಯೆ ದೊಡ್ಡ ಅನ್ವೇಷಣೆಗೆ ಕಾರಣವಾದ ಕಥೆ ಶೈಲಜಾ ವಿಠಲ್‌ ಅವರದು. ಕೈಕೊಟ್ಟಅಡಿಕೆ ಸಿಪ್ಪೆ ತೆಗೆಯುವ ಯಂತ್ರ ಅವರಿಗೆ ಹೊಸ ಯಂತ್ರ ಸಂಶೋಧಿಸಲು ಸ್ಫೂರ್ತಿ ಕೊಟ್ಟಿತು. ಇಂದು ಸಾವಿರಾರು ರೈತರು ಇವರು ಸಂಶೋಧಿಸಿದ ಕೃಷಿ ಮೆಶಿನ್‌ಗಳ ಪ್ರಯೋಜನ ಪಡೆದಿದ್ದಾರೆ. ಶೈಲಜಾ ಅವರ ಕೃಷಿ ಯಂತ್ರ ಸಂಶೋಧನೆಯ ಹಿಂದಿನ ಕತೆ ಇಲ್ಲಿದೆ.


ಉಗಮ ಶ್ರೀನಿವಾಸ್‌

ಒಂದೂವರೆ ದಶಕಗಳ ಹಿಂದಿನ ಕಥೆ. ದೂರದ ಅಸ್ಸಾಂನಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿದ್ದ ತನ್ನನ್ನು ತೊಡಗಿಕೊಂಡಿದ್ದ ಮಹಿಳೆಯೊಬ್ಬರು ಈಗ ರೈತರಿಗೆ, ರೈತ ಮಹಿಳೆಯರಿಗೆ ಕೃಷಿ ಸಂಬಂಧಿ ವಿಷಯದಲ್ಲಿ ನೆರವಾಗುತ್ತಿರುವ ಯಶೋಗಾಥೆ ಇದು. ಹುಟ್ಟಿದ್ದು ಮೈಸೂರು ಆದರೂ ಉದ್ಯೋಗದ ಹಿನ್ನೆಲೆಯಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ಕೆಲಸ ಮಾಡಿ ಈಗ ರೈತ ಮಹಿಳೆಯರಿಗೆ, ಅನ್ನದಾತರ ಕೃಷಿಗೆ ಉಪಯೋಗವಾಗುವಂತೆ ಯಂತ್ರಗಳನ್ನು ಕಂಡು ಹಿಡಿಯುತ್ತಾ ತುಮಕೂರಿನ ಸಪ್ತಗಿರಿ ಬಡಾವಣೆಯಲ್ಲಿ ನೆಲೆ ನಿಂತಿದ್ದಾರೆ.

Tap to resize

Latest Videos

undefined

ಕೃಷಿ ಮಾಡಿದ್ರೆ ಇಲ್ಲ ಲಾಸ್; ಕೋಟಿ ದುಡಿದ ರೈತರು ಖುಷ್!

ಅಂದ ಹಾಗೆ ಇವರ ಹೆಸರು ಶೈಲಜಾ ಹೆಚ್‌ ವಿಠಲ್‌. 15 ವರ್ಷಗಳ ಕೆಳಗೆ 50 ಸಾವಿರ ರು. ಮೂಲ ಬಂಡವಾಳ ಇಟ್ಟುಕೊಂಡು ರೈತರು, ರೈತ ಮಹಿಳೆಯರಿಗಾಗಿ ಕೃಷಿ ಮತ್ತು ತೋಟಗಾರಿಕಾ ಯಂತ್ರಗಳನ್ನು ಕಂಡು ಹಿಡಿದು ಅನ್ನದಾತರ ಸಮಯ ಹಾಗೂ ಹಣವನ್ನು ಉಳಿತಾಯ ಮಾಡುತ್ತಿದ್ದಾರೆ.

ಯಂತ್ರ ಅನ್ವೇಷಣೆ ಶುರುವಾದದ್ದು ಹೀಗೆ..

ಒಮ್ಮೆ ಶೈಲಜಾ ಅವರು ಅಸ್ಸಾಂನಲ್ಲಿದ್ದಾಗ ತುಮಕೂರು ಸಮೀಪ ಗೂಳೂರಿನಲ್ಲಿ ಇವರ ಸಂಬಂಧಿಕರ ಮನೆಯಲ್ಲಿ ಅಡಿಕೆ ಸಿಪ್ಪೆ ಕೀಳಬೇಕಾಗಿ ಬಂತು. ಇದಕ್ಕಾಗಿ ಅಸ್ಸಾಂನಿಂದ ವ್ಯಕ್ತಿಯೊಬ್ಬರು ಡಿಸೈನ್‌ ಮಾಡಿದ್ದ ಅಡಿಕೆ ಸುಲಿಯುವ ಯಂತ್ರವನ್ನು ಗೂಳೂರಿಗೆ ಕಳಿಸಿದರು. ಅವತ್ತಿನ ಮಟ್ಟಿಗೆ ಈ ಯಂತ್ರ ಹೊಸದು. ಆದರೆ ನಿರೀಕ್ಷೆ ಮಟ್ಟದ ಯಶಸ್ಸು ಈ ಯಂತ್ರದಿಂದ ಸಿಗಲಿಲ್ಲ. ಈ ಘಟನೆಯೇ ಶೈಲಜಾ ಅವರಿಗೆ ಕೃಷಿ ಮತ್ತು ತೋಟಗಾರಿಕಾ ಕೆಲಸದಲ್ಲಿ ತೊಡಗಿಕೊಂಡಿರುವ ರೈತರು ಎದುರಿಸುತ್ತಿರುವ ಸಂಕಷ್ಟಗಳು ಅರಿವಾಯಿತು. ಅಂದಿನಿಂದಲೇ ಕೃಷಿ ಉಪಯೋಗಿ ಯಂತ್ರಗಳನ್ನು ಅನ್ವೇಷಿಸುವ ಕೆಲಸಕ್ಕೆ ನಿಂತರು. ಇವರಿಗೆ ಪ್ರೋತ್ಸಾಹಕರಾಗಿ ಇವರ ಪತಿ ಡಾ ವಿಜಯ ಸಿ.ಬಿ ವಿಠಲ್‌ ಹೆಗಲು ಕೊಟ್ಟರು.

ತುಮಕೂರಿನ ಶಿವಮೂಕಾಂಬಿಕ ನಗರದಲ್ಲಿ 2006 ರಲ್ಲಿ ಪುಟ್ಟದಾದ ಕೃಷಿ ಹಾಗೂ ತೋಟಗಾರಿಕಾ ಅನುಕೂಲದ ರೈತ ಸ್ನೇಹಿ ಕೈಗಾರಿಕೆ ಸ್ಥಾಪಿಸಿದರು. ಇದಕ್ಕೆ ‘ಧರ್ಮ ಟೆಕ್ನಾಲಜಿ’ ಎಂದು ಹೆಸರಿಟ್ಟು ತಮ್ಮ ನೂತನ ಸಾಹಸಕ್ಕೆ ಓಂಕಾರವಿಟ್ಟರು. ಅಂದಿನಿಂದ ಇಂದಿನವರೆಗೂ ಅವರು ಹಿಂದಿರುಗಿ ನೋಡಲೇ ಇಲ್ಲ. ಬೆಂಗಳೂರಿನಲ್ಲಿ ಇವರ ಪತಿ ಕೆಲಸದಲ್ಲಿದ್ದರೆ ತುಮಕೂರಿನ ಶಿವ ಮೂಕಾಂಬಿಕ ನಗರ, ಬಳಿಕ ಸಪ್ತಗಿರಿ ಬಡಾವಣೆಯಲ್ಲಿ ಇವರೊಬ್ಬರೇ ರೈತರಿಗೆ ನೆರವಾಗುವ ಪಣ ತೊಟ್ಟು ಹೊಸ ಕೃಷಿ ಹಾಗೂ ತೋಟಗಾರಿಕೆ ಯಂತ್ರಗಳನ್ನು ಡಿಸೈನ್‌ ಮಾಡುತ್ತಾ ಹೋದರು.

ಬರದ ನೆಲದಲ್ಲಿ ಸಿರಿಧಾನ್ಯ ಬೆಳೆದು ಕೈತುಂಬ ಆದಾಯ ಪಡೆದ ಚಿತ್ರದುರ್ಗದ ರೈತ!

ಸಾವಿರಾರು ರೈತರಿಗೆ ಯಂತ್ರ ಪೂರೈಕೆ

ದಿನದ 12 ಗಂಟೆಗಳಿಗೂ ಹೆಚ್ಚು ಕಾಲ ಇದರಲ್ಲಿ ತೊಡಗಿಕೊಂಡ ಶೈಲಜಾ ಅವರು ದಾಳಿಂಬೆ ಹಣ್ಣಿನ ಕಾಳು ಬಿಡಿಸುವ ಯಂತ್ರ, ಅಡಿಕೆ ಸಿಪ್ಪೆ ತೆಗೆಯುವ ಯಂತ್ರ, ಅಡಿಕೆ ಗೊರಬಲು ಪಾಲಿಷ್‌ ಯಂತ್ರ, ಹುಣಸೇಹಣ್ಣು ಬೀಜ ತೆಗೆಯುವುದು, ಸಿಪ್ಪೇ ತೆಗೆಯುವ ಯಂತ್ರವನ್ನು ಅನ್ವೇಷಿಸಿದರು.

ಅಲ್ಲದೇ ಅಡುಗೆ ಮನೆ ತ್ಯಾಜ್ಯದಿಂದ ಮನೆಯಲ್ಲೇ ಗೊಬ್ಬರ ತಯಾರು ಮಾಡುವ ಯಂತ್ರವನ್ನು ಸಂಶೋಧಿಸಿದರು. ಇದರ ಜೊತೆಗೆ ಈರುಳ್ಳಿ ಬಿತ್ತನೆ ಯಂತ್ರ, ಹಾಗೂ ಬಿತ್ತನೆ ಬೀಜಗಳನ್ನು ಬಿತ್ತನೆ ಮಾಡಲು ಸೈಕಲ್‌ ಮಾದರಿಯ ಯಂತ್ರವನ್ನು ಅನ್ವೇಷಿಸಿದರು. ತುಮಕೂರಿನ ಸಪ್ತಗಿರಿ ಬಡಾವಣೆಯ ಫ್ಯಾಕ್ಟರಿಯಲ್ಲಿ ತಯಾರಾಗುವ ಕೃಷಿ ಮತ್ತು ತೋಟಗಾರಿಕಾ ಯಂತ್ರಗಳು ದೇಶದ ಮೂಲೆ ಮೂಲೆಗಳಲ್ಲೂ ರೈತರಿಗೆ ನೆರವಾಗುತ್ತಿದೆ.

ಈವರೆಗೆ 34 ಡಿಸೈನ್‌ನ ಯಂತ್ರಗಳನ್ನು ಅನ್ವೇಷಿಸಿರುವ ಶೈಲಜಾ ಹೆಚ್‌. ವಿಠಲ್‌ ಅವರು ಸಾವಿರಾರು ಯಂತ್ರಗಳನ್ನು ಸಿದ್ಧಪಡಿಸಿದ್ದು ರೈತರಿಗೆ ನೀಡಿದ್ದಾರೆ. 450 ರುಪಾಯಿಯಿಂದ 15 ಲಕ್ಷ ರು. ಮೌಲ್ಯದ ಯಂತ್ರಗಳನ್ನು ಶೈಲಜಾ ಹೆಚ್‌. ಸಿದ್ಧಪಡಿಸಿದ್ದಾರೆ.

ರೈತರ ಅಗತ್ಯ ತಿಳಿದು ಸಂಶೋಧನೆ

ದಿನದ ಬಹುಪಾಲ ಸಮಯ ರೈತರಿಗೆ ನೆರವಾಗಲು ಯಾವೆಲ್ಲಾ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಯೋಚಿಸುವ, ಅದರ ಕಾರ್ಯರೂಪಕ್ಕೆ ತರಲು ಪ್ರಯತ್ನಿಸುವ ಶೈಲಜಾ ಅವರ ಪ್ರಕಾರ ದೂರ ದೂರುಗಳಿಂದ ಇವರ ಕೈಗಾರಿಕೆಗೆ ಬರುವ ರೈತರ ಜೊತೆ ಸಂವಾದಿಸುವಾಗ ರೈತರು ಎದುರಿಸುತ್ತಿರುವ ಸಂಕಷ್ಟಗಳು ಅರಿವಾಗುತ್ತದೆಯಂತೆ. ತಕ್ಷಣವೇ ಇದಕ್ಕೆ ಪರಿಹಾರವನ್ನು ಹೊಸ ಹೊಸ ಯಂತ್ರಗಳನ್ನು ಅನ್ವೇಷಿಸಿ ಸಮಸ್ಯೆ ಬಗೆಹರಿಸುತ್ತಾಬಂದಿದ್ದಾರೆ. ಬೇರೆ ಬೇರೆ ಭಾಗಗಳಲ್ಲಿ ಬೆಳೆಯುವ ಬೆಳೆಗಳ ಬಗ್ಗೆಯೂ ಅಧ್ಯಯನ ನಡೆಸಿ ರಾಜ್ಯದ ಹಾಗೂ ದೇಶದ ಎಲ್ಲಾ ರೈತರ ನೆರವಿಗೆ ಸದ್ದಿಲ್ಲದೆ ಧಾವಿಸುತ್ತಿದ್ದಾರೆ.

ಹುಣಸೆ, ಲಿಂಬು ಬೆಳೆದ ರಾಮದುರ್ಗ ರೈತನ ಕೈ ಸೇರಿತು ಕೋಟಿ ಸಂಪಾದನೆ.!

15 ವರ್ಷದ ಕೆಳಗೆ ನಿರ್ಜನ ಪ್ರದೇಶವಾಗಿದ್ದ ತುಮಕೂರಿನ ಸಪ್ತಗಿರಿ ಬಡಾವಣೆಯಲ್ಲಿ ಏಕಾಂಗಿಯಾಗಿ ಶೈಲಜಾ ಅವರು ಯಂತ್ರಗಳ ಜೊತೆ ರಾತ್ರಿ ಹಗಲೆನ್ನೆದೆ ಕೆಲಸ ಮಾಡುತ್ತಿದ್ದುರ ಪರಿಶ್ರಮಕ್ಕೆ ಈಗ ಫಲಸಿಕ್ಕಿದೆ. ಇವರು ಡಿಸೈನ್‌ ಮಾಡಿರುವ ಯಂತ್ರಗಳನ್ನು ಉಪಯೋಗಿಸಿ ರೈತರು, ರೈತ ಮಹಿಳೆಯರು ಹೆಚ್ಚು ಲಾಭ ಗಳಿಸಿ ಸಂತೃಪ್ತ ಜೀವನ ನಡೆಸುತ್ತಿದ್ದಾರೆ.

ಕೇವಲ ಕೃಷಿ ಮತ್ತು ತೋಟಗಾರಿಕಾ ಯಂತ್ರಗಳ ನಿರ್ಮಾಣ ಕ್ಷೇತ್ರದಲ್ಲಷ್ಟೆಅಲ್ಲದೆ ವ್ಯಕ್ತಿತ್ವ ವಿಕಸನ ಶಿಬಿರ ಆಯೋಜಿಸಿ ಜನರನ್ನು ಸಾಮಾಜಿಕವಾಗಿ ತೊಡಗಿಸಿಕೊಳ್ಳಲು ಪ್ರೇರೇಪಿಸುತ್ತಿದ್ದಾರೆ. ಇವರ ಈ ಕಾರ್ಯಕ್ಕೆ ಹಲವಾರು ರಾಜ್ಯ ಹಾಗೂ ರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿರುವ ಶೈಲಜಾ ಅವರ ಬಸವಣ್ಣನವರ ಕಾಯಕ ಧರ್ಮದಲ್ಲಿ ನಂಬಿಕೆ ಇಟ್ಟವರು. ಸಾಲದ ಶೂಲದಲ್ಲಿ ಆತ್ಮಹತ್ಯೆಗೆ ತೊಡಗಿಕೊಳ್ಳುವ ರೈತ ಸಮುದಾಯಕ್ಕೆ ಶೈಲಜಾ ಹೆಚ್‌. ವಿಠಲ್‌ ಬದುಕು ರೂಪಿಸುವ ಆಶಾಕಿರಣವಾಗಿ ಗೋಚರಿಸಿದ್ದಾರೆ.

ಯಾವೆಲ್ಲ ಯಂತ್ರಗಳು?

ಒಣ ಅಡಿಕೆ ಸಿಪ್ಪೆ ತೆಗೆಯುವ ಯಂತ್ರ, ಕೆಂಪು ಗೋಟು ಸಿಪ್ಪೆ ತೆಗೆಯೋ ಮೆಶಿನ್‌, ಗೊರಬಲು ಯಂತ್ರ, ಅರಕನಟ್‌ ಸೈಜರ್‌, ಈರುಳ್ಳಿ ಸಿಪ್ಪೆ ತೆಗೆಯೋ ಯಂತ್ರ, ಹುಣಸೇ ಹಣ್ಣಿನ ಸಿಪ್ಪೆ ಬೇರ್ಪಡಿಸುವ ಯಂತ್ರ, ಅಡುಗೆ ಮನೆ ತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸುವ ಯಂತ್ರ, ಈರುಳ್ಳಿ, ರಾಗಿ ಬಿತ್ತನೆ ಯಂತ್ರ ಹೀಗೆ ಅವರು ಅನ್ವೇಷಿಸಿ ಪೂರೈಕೆ ಮಾಡುತ್ತಿರುವ ಯಂತ್ರಗಳ ಪಟ್ಟಿದೊಡ್ಡದಿದೆ. ಹೆಚ್ಚಿನ ಮಾಹಿತಿಗೆ ಧರ್ಮಾ ಟೆಕ್ನಾಲಜಿ ಸಂಪರ್ಕ ಸಂಖ್ಯೆ: 098867 37260.

click me!