ಐದು ಕೋಣೆಯ ಮನೆಯೊಳಗೆ ಯಾವಾಗ ಎಲ್ಲಿರಬೇಕು!

By Kannadaprabha News  |  First Published Apr 18, 2021, 10:05 AM IST

ಬದುಕು ಒಂದೇ ಆಗಿದ್ದರೂ ಬದುಕುವ ರೀತಿ ಬೇರೆ ಬೇರೆಯಾಗಿರುತ್ತದೆ. ನಾವು ಹೇಗೆ ನೋಡುತ್ತೇವೋ ಹಾಗೆ ಜೀವನ ನಮಗೆ ಕಾಣುತ್ತದೆ. ಅದೊಂದು ರೀತಿಯಲ್ಲಿ ಕೊಡುಕೊಳುವ ವ್ಯವಹಾರ. ನಾವು ಕೊಟ್ಟಷ್ಟನ್ನು ಬದುಕು ನಮಗೆ ಮರಳಿ ಕೊಡುತ್ತದೆ.


-ಶುಭಾ ಗಿರಣಿಮನೆ

ಕಾಲ ನಿರಂತರ ಚಲಿಸುತ್ತಲೇ ಇರುತ್ತದೆ. ಕಾಲದ ಜೊತೆ ಮನುಷ್ಯನ ಪ್ರಯಾಣ ಕೂಡ ಸಾಗಿರುತ್ತದೆ. ಆದರೆ ದಿನವೂ ನಾವು ಆ ಕಾಲವನ್ನಾಗಲಿ, ನಮ್ಮ ಆಯುಷ್ಯವನ್ನಾಗಲಿ ಲೆಕ್ಕಕ್ಕೆ ತೆಗೆದುಕೊಳ್ಳದೇ ಬದುಕನ್ನು ನಿರರ್ಥಕವಾಗಿ ಕಳೆಯುತ್ತಿದ್ದೇವೆ ಎಂದು ಮಾತ್ರ ನಮಗೆ ತಿಳಿಯುತ್ತಿಲ್ಲ. ನಿನ್ನೆಯ ಕಹಿಯನ್ನೇ ನೆನಯುತ್ತ ನಾಳೆಯದನ್ನು ದುಃಖವಾಗಿಸಿಕೊಂಡು ಬದುಕುವ ಜನರೇ ಹೆಚ್ಚಾಗಿಬಿಟ್ಟಿದ್ದಾರೆ.

Latest Videos

undefined

ಎರಡು ಮಹಿಳೆಯರ ಸ್ಥಿತಿ ಒಂದೇ ತೆರನಾಗಿದ್ದು ಅವರು ಮಾಡುವ ಯೋಚನೆಗಳು ಮಾತ್ರ ಭಿನ್ನತೆಯಿಂದ ಕೂಡಿತ್ತು. ಇಬ್ಬರಿಗೂ ಮದುವೆಯಾಗಿ ಎರಡೆರಡು ಮಕ್ಕಳು. ಒಬ್ಬಳಿಗೆ ಎರಡು ಗಂಡು ಮಕ್ಕಳು, ಮತ್ತೊಬ್ಬಳಿಗೆ ಎರಡು ಹೆಣ್ಣು ಮಕ್ಕಳು. ಇಬ್ಬರಿಗೂ ಗಂಡನಿಲ್ಲ. ವಿಧವೆಯರಾಗಿ ಸಮಾಜದಲ್ಲಿ ಬದುಕುವುದು ಸಸಾರವಾದದ್ದೇನಲ್ಲ. ಮಕ್ಕಳ ವಿದ್ಯಾಭ್ಯಾಸ, ಆರ್ಥಿಕ ಮುಗ್ಗಟ್ಟು, ತನ್ನ ಜೀವನ ನಿರ್ವಹಣೆ. ಇರುವ ಒಂದು ಎಕರೆ ಅಡಿಕೆ ತೋಟದ ನಿರ್ವಹಣೆ ಎಲ್ಲ ಜವಾಬ್ದಾರಿ ಆ ಇಬ್ಬರಿಗೂ ಇತ್ತು.

ಕೊರೋನಾ ಎದುರಿಸಲು 10 ಹಾದಿ: ಡಾ. ಬಿಎಂ ಹೆಗ್ಡೆ ಕೊಟ್ಟ ಸಲಹೆಗಳಿವು

ಎರಡು ಹೆಣ್ಣು ಮಕ್ಕಳಿರುವ ತಾಯಿ ಗಂಡನಿಲ್ಲ ಎಂದು ಸುಮ್ಮನೆ ಕೂರಲಿಲ್ಲ. ಅಕ್ಕಪಕ್ಕದವರ ಮನೆಯ ಮಕ್ಕಳಿಗೆ ಟ್ಯೂಶನ್‌ ಹೇಳಲು ಮೊದಲು ಪ್ರಾರಂಭಿಸಿದಳು. ಅದು ಗಂಡನಿಲ್ಲದ ಬೇಸರ ಕಳೆಯಲಿ ಎಂದು ಹಣವನ್ನು ಪಡೆಯದೇ ತನಗೆ ತಿಳಿದ ವಿದ್ಯೆ ಹೇಳಲು ಪ್ರಾರಂಭಿಸಿದಳು. ನಂತರದಲ್ಲಿ ಮಕ್ಕಳಿಗೆ ಹೇಳಿಕೊಡಲು ತಾನು ಸಮರ್ಥನಾಗಬೇಕು ಎಂದು ಮತ್ತಷ್ಟುಓದಿದಳು. ಸರಳವಾಗಿ ಬಾರದಿದ್ದ ಇಂಗ್ಲಿಷನ್ನು ತಾನು ಕ್ಲಾಸುಗಳಿಗೆ ಹೋಗಿ ಕಲಿತಳು. ಮಕ್ಕಳ ಶಿಕ್ಷಕರೊಟ್ಟಿಗೆ ಮಾತನಾಡಿ ತನ್ನೊಳಗಿನ ಜ್ಞಾನ ಹೆಚ್ಚಿಸಿಕೊಂಡಳು. ಹೀಗೆ ದಿನೇ ದಿನೇ ತನ್ನ ಎರಡು ಹೆಣ್ಣು ಮಕ್ಕಳ ಜೊತೆ ಊರಿನ ಮಕ್ಕಳ ಮೆಚ್ಚಿನ ಅಮ್ಮನಾದಳು. ಗಂಡನಿಲ್ಲ ಎನ್ನುವ ನೋವನ್ನು ಮೀರಿ ಮಕ್ಕಳಿಗೆ ಟ್ಯೂಶನ್‌ ಹೇಳಿಕೊಡುವ ಒಂದು ಸಂಸ್ಥೆಯನ್ನೇ ತೆಗೆದು ಸೈ ಎನ್ನಿಸಿಕೊಂಡಳು.

ಹಾಗೆ ಇನ್ನೊಬ್ಬಳು, ಇರುವುದು ಎರಡು ಗಂಡು ಮಕ್ಕಳು. ಮಕ್ಕಳು ತುಂಬ ಜಾಣರೂ ಹೌದು. ಆದರೆ ಆಕೆ ನಿರಾಸಕ್ತಿಯಲ್ಲೆ ದಿನ ಕಳೆದಳು. ತನಗೆ ವಿಧಿ ಮೋಸ ಮಾಡಿತು. ಗಂಡನಿಲ್ಲ. ಅವನಿಲ್ಲದ ಮೇಲೆ ತಾನೇಕೆ ಬದುಕಬೇಕು. ಮಕ್ಕಳು ಶಾಲೆಗೆ ಹೋಗಿ ಬರ್ತಾವೆ. ಕಲಿಯೋ ಮನಸಿದ್ರೆ ಮಕ್ಕಳು ಕಲಿತಾವೆ. ತನಗೆ ಓದಿಸೋಕೆ ಆಗೋದಿಲ್ಲ. ಹೀಗೆ ಋುಣಾತ್ಮಕ ಯೋಚನೆಗಳೇ ಅವಳ ಸುತ್ತ ಇತ್ತು. ಆಕೆ ಏನು ಜಾಣೆ ಅಲ್ಲವೆಂದಲ್ಲ. ಕಸೂತಿ, ಹೊಲಿಗೆ, ವಿವಿಧ ರೀತಿಯ ಕಲಾಕೃತಿಯ ರಚನೆ ಮಾಡಲು ಬರುತಿತ್ತು. ಹೂವಿನ ಗಿಡಗಳನ್ನು ಬೆಳೆಸುವ ಕಲೆ ಅವಳಲ್ಲಿತ್ತು. ಆದರೆ ತನ್ನ ಗಂಡ ತೀರಿಹೋದ ಎನ್ನುವ ಒಂದು ನೆಪದಲ್ಲಿ ತನ್ನನ್ನು ಕಾಲದಲ್ಲಿ ಕಳೆದುಕೊಳ್ಳಲು ಬಿಟ್ಟುಬಿಟ್ಟಿದ್ದಳು. ಯಾವಾಗೂ ತಾನು ಸಾಯಬೇಕು ಎನ್ನುವ ಯೋಚನೆ ಮಾತ್ರ ಅವಳಲ್ಲಿತ್ತು.

ಚೊಕ್ಕಾಡಿ; ಬಂಟಮಲೆಯ ತಪ್ಪಲಲ್ಲಿ ಒಂಟಿ ಕವಿ

ಈ ಎರಡು ಉದಾಹರಣೆಗಳು ನಮಗೆ ಬದುಕಿನ ದಾರಿಯನ್ನು ಆಯ್ಕೆ ಮಾಡಲು ಸಹಾಯ ಮಾಡುತ್ತದೆ. ಮನುಷ್ಯನಿಗೆ ಬದುಕಲು ಐದು ಕೋಣೆಗಳಿರುವ ಒಂದು ಮನೆಯನ್ನು ದೇವರು ಸೃಷ್ಟಿಸಿದ್ದಾನೆ. ಮೊದಲನೆಯದು ಪಾಲಕರು, ಎರಡನೆಯದು ತನ್ನದೇ ಸಂಸಾರ, ಮೂರನೆಯದು ಬಂಧುಗಳು, ನಾಲ್ಕನೆಯದು ಸಮಾಜ ಮತ್ತು ಹೆಸರು, ಐದನೆಯದು ಆರ್ಥಿಕ ಬೆಳವಣಿಗೆ. ಈ ಐದು ಕೋಣೆಯಲ್ಲಿ ನಾವು ಯಾವುದೆಲ್ಲವನ್ನು ಆಯ್ಕೆ ಮಾಡಿಕೊಳ್ಳಬೇಕು. ಎಷ್ಟೆಷ್ಟುನಮ್ಮ ಸಮಯವನ್ನು ಇವುಗಳಿಗೆ ಮೀಸಲಾಗಿಡಬೇಕು ಎನ್ನುವದು ಮುಖ್ಯವಾಗುತ್ತದೆ. ನಮಗೆ ಸಮಾಜದಲ್ಲಿ ಹೆಸರು ಹಣ ಬೇಕಿಂದಿದ್ದರೆ ಬಂಧುಗಳ ಸಂಪರ್ಕದಿಂದ ತಕ್ಕಮಟ್ಟಿಗೆ ದೂರ ಇಡಬೇಕಾಗುತ್ತದೆ. ಗಂಡ ಮಕ್ಕಳ ಭವಿಷ್ಯವೇ ಮುಖ್ಯ ಎಂದಾದರೆ ಪಾಲಕರು ಎನ್ನಿಸಿಕೊಂಡವರ ಚುಚ್ಚು ಮಾತುಗಳಿಗೆ ಲಕ್ಷ್ಯ ಕೊಡದೇ ನಡೆಯುತ್ತಿರಬೇಕಾಗುತ್ತದೆ. ಹೀಗೆ ಒಂದನ್ನು ಪಡೆಯಲು ಮತ್ತೊಂದಷ್ಟುಬೇಕು ಬೇಡ ಎನ್ನದೇ ದೂರ ಇಟ್ಟು ಬಿಡುವುದು ಉತ್ತಮ.

ಕೇವಲ ಹಳೆಯದಾದ ಎಷ್ಟೋ ವಿಚಾರಗಳನ್ನು ಮತ್ತೆಮತ್ತೆ ನೆನಪಿಸಿಕೊಂಡು ನೋವು ತಿನ್ನುತ್ತ ಬದುಕುವುದು ಸರಿಯಲ್ಲ. ಪರಿಪೂರ್ಣ ಬದುಕು ಬೇರೆ ಯಾರಿಂದಲೋ ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಅದನ್ನು ನಾವೇ ಪಡೆದುಕೊಳ್ಳಬೇಕು. ಅಂಥಹ ಬದುಕಿಗೆ ಸವಾಲನ್ನು ಎದುರಿಸುವ ಶಕ್ತಿ ಮನುಷ್ಯ ಪಡೆಯಬೇಕು. ಧನಾತ್ಮಕ ಚಿಂತನೆಯನ್ನು ಹೆಚ್ಚುಹೆಚ್ಚು ನಡೆಸಬೇಕು. ಸವಾಲು ಇದ್ದಾಗ ಮಾತ್ರ ಮನುಷ್ಯ ಹೊಸತನ್ನು ಕಂಡುಕೊಳ್ಳಬಲ್ಲ. ಇಲ್ಲವಾದಲ್ಲಿ ಆತ ಕೇವಲ ಮನುಷ್ಯನಾಗಿ ಮಾತ್ರ ಭೂಮಿಯಲ್ಲಿ ಇರುತ್ತಾನೆ. ನಡೆದಷ್ಟುಹಾದಿ ಇದೆ. ನಿಂತು ಕಾಲು ನೋಯಿಸಿಕೊಳ್ಳುವುದಕ್ಕಿಂತ ನಡೆದು ಕಾಲು ನೋಯಿಸಿಕೊಂಡು ಸುಂದರ ಪ್ರಕೃತಿಯ ಸೊಬಗನ್ನು ಸವಿಯುವುದು ಉತ್ತಮ.

click me!