ನಾನ್ಯಾಕೆ ಮಗುವಿಗೆ ಹಾಲೂಡುವುದನ್ನು ನಿಲ್ಲಿಸಿದೆ?

By Kannadaprabha NewsFirst Published Sep 3, 2018, 10:58 AM IST
Highlights

‘ಆತ ಹೆಣ್ಣಲ್ಲವಲ್ಲ, ಅವನಿಗೇನು ಗೊತ್ತು, ದಿನದಲ್ಲಿ ನನ್ನ ಬೆಸ್ಟ್ ಟೈಮ್ ಅಂದರೆ ಮಗುವಿಗೆ ಹಾಲೂಡಿಸುವ ಹೊತ್ತು ಅಂತ..’

ಈ ಮಾತನ್ನು ಒಬ್ಬ ಸಾಮಾನ್ಯ ಹೆಣ್ಣುಮಗಳು ಹೇಳಿದ್ರೆ, ಏನೋ ಮದರ್ ಸೆಂಟಿಮೆಂಟ್ ಅಂತ ಸುಮ್ಮನಾಗಬಹುದಿತ್ತೇನೋ. ಆದರೆ ಇದನ್ನು ಹೇಳಿದ್ದು ಟೆನ್ನಿಸ್ ದಂತಕತೆ ಸೆರೆನಾ ವಿಲಿಯಮ್ಸ್. ಸಿಂಗಲ್ಸ್‌ನಲ್ಲಿ 23 ಗ್ರ್ಯಾಂಡ್ ಸ್ಲ್ಯಾಮ್‌ಗಳನ್ನು ಬಾಚಿದ ಅಸಾಮಾನ್ಯ ಆಟಗಾರ್ತಿ ಈಕೆ. ನೀರು ಕುಡಿದಷ್ಟು ಸಲೀಸಾಗಿ ಪ್ರಶಸ್ತಿ ಬಾಚಿಕೊಳ್ಳುತ್ತಿದ್ದವಳಿಗೆ ತಾಯಿಯಾದ ಮೇಲೆ ಫಿಟ್ನೆಸ್ ಕಾಯ್ದುಕೊಳ್ಳುವುದು, ಮರಳಿ ಹಿಂದಿನ ಫಾರ್ಮ್ಗೆ ಬರುವುದೇ ಸಮಸ್ಯೆಯಾಗಿತ್ತು.

ಆಗ ಮಗಳು ಒಲಿಂಪಿಯಾಗೆ 6 ತಿಂಗಳು. ಆಗಷ್ಟೇ ಅಂಬೆಗಾಲಿಡಲು ಶುರು ಮಾಡಿತ್ತು ಕಂದಮ್ಮ. ಸೆರೆನಾಗೆ ಮತ್ತೆ ವಿಂಬಲ್ಡನ್ ಕೈ ಬೀಸಿ ಕರೆಯುತ್ತಿತ್ತು. ಮತ್ತೆ ಟೆನ್ನಿಸ್ ಅಭ್ಯಾಸದಲ್ಲಿ ಮುಳುಗಿದಳು ಸೆರೆನಾ. ಫಿಟ್‌ನೆಸ್ ಕಳೆದುಕೊಂಡ, ಹೆರುವಾಗ ಎರಡೆರಡು ಸರ್ಜರಿ ಮಾಡಿಸಿಕೊಂಡ ದೇಹ ಅಂದುಕೊಂಡ ಹಾಗೆ ಆಡಲು ಬಿಡುತ್ತಿರಲಿಲ್ಲ. ಬಹಳ ಕಾಲ ಹೀಗೇ ಪ್ರಾಕ್ಟೀಸ್ ನಡೆಯಿತು. ಎಷ್ಟು ಪ್ರಯತ್ನಿಸಿದರೂ ಮೊದಲಿನ ಫಾರ್ಮ್‌ಗೆ ಬರುವುದು ಸಾಧ್ಯವಾಗದೇ ಹೋದಾಗ ಕೋಚ್ ಹೇಳಿದರು,‘ನೀನು ಮೊದಲು ಎದೆಹಾಲು ನೀಡೋದನ್ನು ನಿಲ್ಲಿಸಿಬಿಡು’ ಅಂತ.

ಸೆರೆನಾಗೆ ಆ ಹೊತ್ತಿಗೆ ಏನು ಹೇಳಲೂ ತೋಚಲಿಲ್ಲ. ಮುಂದೆ ಯಾವುದೋ ಸಂದರ್ಭದಲ್ಲಿ ಆಕೆ ಹೇಳುತ್ತಾಳೆ,‘ ಕೋಚ್ ಬಹಳ ಸುಲಭವಾಗಿ ಹೇಳಿದರು, ಎದೆ ಹಾಲು ಕೊಡೋದನ್ನು ನಿಲ್ಲಿಸಿಬಿಡು ಅಂತ. ಅವನೇನು ಹೆಣ್ಣಲ್ಲವಲ್ಲಾ, ಅವನಿಗೆ ಹೇಗೆ ಗೊತ್ತಾಗಬೇಕು, ಇಡೀ ದಿನದಲ್ಲಿ ಅವಳಿಗೆ ಹಾಲುಣಿಸೋದು ನನ್ನ ಬೆಸ್ಟ್ ಟೈಮ್ ಅಂತ’ ಭಾವೋದ್ವೇಗದಿಂದ ಆಕೆ ತನ್ನ ಮಾತು ಮುಂದುವರಿಸುತ್ತಾ, ‘ನನ್ನ ಇಡೀ ಬದುಕನ್ನು ಇತರರನ್ನು ಖುಷಿ ಪಡಿಸಲು ಮೀಸಲಿಟ್ಟೆ. ಮಗುವಿಗೆ ಹಾಲುಣಿಸುವುದರಲ್ಲಿ ನನಗೆ ನೆಮ್ಮದಿ, ಆನಂದವಿದೆ. ನಾನ್ಯಾಕೆ ಮಗುವಿಗೆ ಹಾಲೂಡುವುದನ್ನು ನಿಲ್ಲಿಸಲಿ?’ ಅಂದದ್ದು, ಆ ಸಣ್ಣ ಖುಷಿಯನ್ನೂ ನನ್ನಿಂದ ಕಿತ್ತುಕೊಳ್ಳಬೇಡಿ ಎಂಬ ಆರ್ತತೆಯಲ್ಲಿ.

ಆಟ ಕೊನೆಗೂ ಅವರಿಬ್ಬರ ಸಂತಸ ಕಿತ್ತುಕೊಂಡಿತು. ಎದೆ ಹಾಲುಣಿಸುವುದು ಆಕೆಯ ಫಿಟ್‌ನೆಸ್‌ಗೆ ಸಮಸ್ಯೆಯಾಗಿತ್ತು. ಆಗ ‘ಮಗಳನ್ನ ಮೈಗೊತ್ತಿಕೊಂಡು ಹೇಳಿದೆ,ಇವತ್ತೇ ಕೊನೆ, ಇನ್ಯಾವತ್ತೂ ನಿನಗೆ ಈ ಮಮ್ಮಿ ಹಾಲುಣಿಸುವುದಿಲ್ಲ’ ನನ್ನ ಕಣ್ಣು ತುಂಬಿ ಬಂದಿತ್ತು. ಮಗಳೇನೂ ಬೇಗ ಚೇತರಿಸಿಕೊಂಡಳು. ಸೆರೆನಾಗೆ ಆ ನೋವು ಇನ್ನೂ ಉಳಿದುಕೊಂಡಿದೆ.

ಜುಲೈನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಈ ನೋವಿನ ನಡುವೆಯೂ ಬಿರುಸಿನ ಪ್ರದರ್ಶಿಸಿದಳು. ಮತ್ತೆ ವಿಂಬಲ್ಡನ್ ಪದಕಕ್ಕೆ ಮುತ್ತಿಕ್ಕಿದಳು. ಎದೆಹಾಲು ನಿಲ್ಲಿಸು ಅಂದಾಗ ಆಕೆ ದಿಕ್ಕೆಟ್ಟರೂ ಕೆಚ್ಚಿನ ಹೋರಾಟ ನೀಡಿ ವಿಂಬಲ್ಡನ್ ಟ್ರೋಫಿ ಗೆದ್ದಿದ್ದು ತಾಯ್ತತನದ ಗೆಲುವಾಗಿ ಕಾಣುತ್ತದೆ.

ಮಗುವಿಗೆ ಎದೆಹಾಲು ನಿಲ್ಲಿಸುವುದು ಯಾವಾಗ?
ಮಗುವಿಗೆ ಹಾಲುಣಿಸುವಾಗ ತಾಯಿ ಮಗು ಇಬ್ಬರಲ್ಲೂ ಸುರಕ್ಷತಾ ಭಾವ. ಇದರಿಂದ ಬಹುಬೇಗ ಅಗಲುವುದು ಅಮ್ಮ ಮಗು ಇಬ್ಬರಿಗೂ ಬೇಕಿರುವುದಿಲ್ಲ. ಆದರೆ ಒಂದು ಹಂತದಲ್ಲಿ ತಾಯಿ ಮಗು ಇಬ್ಬರಿಗೂ ಇನ್ನು ಎದೆಹಾಲು ಸಾಕು ಎನಿಸುತ್ತೆ. ಆಗ ನಿಲ್ಲಿಸಿಬಿಡಬೇಕು. ಈ ಬಗ್ಗೆ ಬೇರೆಯವರ ಅನಿಸಿಕೆ ಕೇಳಲು ಹೊರಟರೆ ಒಬ್ಬೊಬ್ಬರು ಒಂದೊಂಥರ ಹೇಳುತ್ತಾರೆ. ಎಷ್ಟೋ ಸಲ ತಾಯಿ, ಮಗುವಿಗೆ ಎದೆಹಾಲು ನಿಲ್ಲಿಸಲು ಇನ್ನೂ ಸ್ವಲ್ಪ ಸಮಯ ಬೇಕು ಅಂತನಿಸಿದರೂ ಬಂಧುಗಳ, ಆಪ್ತರ ಒತ್ತಾಯಕ್ಕೆ ಮಣಿದು ಎದೆಹಾಲು ನಿಲ್ಲಿಸಬೇಕಾಗುತ್ತದೆ.

ಬೇಗ ಹಾಲುಣಿಸುವುದು ನಿಲ್ಲಿಸಿದರೆ?
ಮಗುವಿಗೆ ಬೇಕಾದಷ್ಟು ಪೌಷ್ಠಿಕಾಂಶ ಸಿಗಲಿಕ್ಕಿಲ್ಲ. ರೋಗ ನಿರೋಧಕ ಶಕ್ತಿ ಕಡಿಮೆಯಾಗಬಹುದು. ಎದೆಯಲ್ಲಿ ಹಾಲು ಹೆಪ್ಪುಗಟ್ಟಿ ನೋವು, ಕೀವಾಗುವಿಕೆ ಮೊದಲಾದ ಸಮಸ್ಯೆಗಳಾಗಬಹುದು. ಹಾಲು ಸ್ರವಿಸುವ ಹಾರ್ಮೋನ್‌ಗಳ ಅಸಮತೋಲನದಿಂದ ಖಿನ್ನತೆಯಂಥ ಸಮಸ್ಯೆ ಕಾಣಿಸಿಕೊಳ್ಳಬಹುದು. ತಾಯಿಯ ತೂಕ ಹೆಚ್ಚಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಮಗುವಿನಲ್ಲಿ ಅನಾಥಪ್ರಜ್ಞೆ, ಅಸುರಕ್ಷತೆ, ಅಭದ್ರತಾ ಭಾವ ಹೆಚ್ಚಾಗುವ ಸಾಧ್ಯತೆ ಇದೆ. ಪರಿಣಾಮ ಮಗುವಿನ ಸ್ವಭಾವದಲ್ಲಿ ಹಠ, ಮುಂಗೋಪ ಇತ್ಯಾದಿಗಳು ಹೆಚ್ಚಾಗಿ ಭವಿಷ್ಯದಲ್ಲಿ ನೆಗೆಟಿವ್ ವ್ಯಕ್ತಿತ್ವ ರೂಪುಗೊಳ್ಳುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

click me!