ಕಷ್ಟಪಟ್ಟು ಬರೆದ ಪ್ರೇಮಪತ್ರ ಅವಳ ಕೈಗಿತ್ತಾಗ...

Published : Oct 17, 2018, 03:13 PM ISTUpdated : Oct 17, 2018, 04:55 PM IST
ಕಷ್ಟಪಟ್ಟು ಬರೆದ ಪ್ರೇಮಪತ್ರ ಅವಳ ಕೈಗಿತ್ತಾಗ...

ಸಾರಾಂಶ

ಮೊದಲ ಪ್ರೇಮ ಪತ್ರವೇ ನೆನಪುಗಳಿಗೆ ಸೇತುವೆ.... ಎಂಬ ಹಾಡನ್ನು ನಾವೆಲ್ಲಾ ಕೇಳಿದ್ದೇವೆ. ಎಷ್ಟೋ ಸಲ ನಾವೂ ಈ ಹಾಡನ್ನು ಹೇಳಿರುತ್ತೇವೆ. ಮೊದಲ ನೋಟ, ಪ್ರೇಮ, ಪ್ರೀತಿ ಎಲ್ಲವೂ ಮರೆಯಲಾರದ್ದು. ಇಲ್ಲೊಬ್ಬರು ಮೊದಲ ಪ್ರೇಮ ಪತ್ರ ಬರೆದ ಅನುಭವವನ್ನು ಹಂಚಿಕೊಂಡಿದ್ದು ಬಹಳ ಮಜವಾಗಿದೆ. 

ಬೆಂಗಳೂರು (ಅ. 17): ದಿನಗಳು ಯಾವಾಗಲೂ ಮುಮ್ಮುಖವಾಗಿಯೇ ಚಲಿಸುತ್ತವೆ. ಇದು ಅವುಗಳ ಗುಣ. ಈ ಚಲನೆಯಲ್ಲಿ ಸಿಕ್ಕ ಎಲ್ಲರೂ ಅವುಗಳ ಜೊತೆಗೇ ಮುಂದೆ ಸಾಗಬೇಕು. ಹೀಗೆ ಸಾಗುವಾಗ ಮತ್ತೆ ಹಿಂದೆ ಹೋಗುವುದಕ್ಕೆ ಸುತಾರಂ ಸಾಧ್ಯವಿಲ್ಲ.

ಆದರೆ ಮನುಷ್ಯನೆನಿಸಕೊಂಡವನಿಗೆ ನೆನಪುಗಳು ಈ ಕಳೆದ ದಿನಗಳನ್ನು ವಾಸ್ತವದಲ್ಲಿ ಮೆಲುಕು ಹಾಕಲು ಒಂದು ಒಳ್ಳೆಯ ಅವಕಾಶ ನೀಡಿವೆ. ಅವುಗಳ ಮೂಲಕವೇ ಬದುಕಿನ ಯಾವುದೇ ಘಟ್ಟದಲ್ಲಿ ನಿಂತು ಬೇಕಾದರೂ ಹಳೆಯದ್ದನ್ನು ನೆನೆಯಬಹುದು. ಈ ನೆನಪು ಸಿಹಿಯಾಗಿರಬಹುದು, ಕಹಿಯಾಗಿರಬಹುದು, ಅಂದು ಸಿಹಿಯಾಗಿದ್ದು ಇಂದು ಕಹಿಯಾಗಿಯೂ, ಅಂದು ಕಹಿಯಾಗಿದ್ದು ಇಂದು ಸಿಹಿಯಾಗಿಯೂ ಇರಬಹುದು. ಇಂಥದ್ದೇ ಅಂದಿಗೆ ಕಹಿಯಾಗಿದ್ದ ನೆನಪು ಇಂದು ಮಧುರ ಯಾತನೆ ನೀಡುತ್ತಿದೆ. ಇದು ನನ್ನದೇ ಲವ್ ಲೆಟರ್ ಪುರಾಣ.

ಹಳ್ಳಿಗಾಡಿನಲ್ಲಿ ಹುಟ್ಟಿ ಬೆಳೆದ ನನಗೆ ಓದು ಅಷ್ಟಾಗಿ ತಲೆಗತ್ತಲಿಲ್ಲ. ಹಾಗಂತ ನಾನೇನು ದಡ್ಡನೂ ಅಲ್ಲ. ಮೇಷ್ಟ್ರು ಕೊಟ್ಟ ಕೆಲಸವನ್ನು ನನ್ನ ಕ್ಲಾಸ್ ಹುಡುಗಿಯರ ಸಹಾಯದಿಂದ ಮಾಡಿ ಮುಗಿಸಿ ಬುದ್ದಿವಂತ ಅನ್ನಿಸಿಕೊಂಡೇ ಬಂದೆ. ಆಗ 6 ನೇ ತರಗತಿಯಲ್ಲಿದ್ದೆ. ಪುಟ್ಟದಾಗಿ ಮೀಸೆ ಚಿಗುರೋ ವೇಳೆ. ಆಸೆ ಮೊಳೆಯೋ ಕಾಲ. ಅದೇ ಸಮಯಕ್ಕೆ ಒಂದು ಭಾನುವಾರ ಸಂಜೆ ವಿಷ್ಣುವರ್ಧನ್ ಅವರ ‘ಬಂಧನ’ ಚಿತ್ರ ನೋಡಿದ್ದೇ ಬಂತು, ಈ ಪ್ರೀತಿಲಿ ಏನಿದೆ? ಅಷ್ಟಕ್ಕೂ ಪ್ರೀತಿ ಅಂದ್ರೆ ಏನು ಅಂತ ತಿಳಿಯೋ ಕುತೂಹಲ ಶುರುವಾಯಿತು. ಅದಕ್ಕಾಗಿ ನಾನು ಮಾಡಿದ್ದು ಏನು ಅಂತೀರಾ... ಮುಂದೆ ಓದಿ.

ನಾನು ಶಾಲೆಗೆ ರಜೆ ಮಾಡಿದಾಗ ಅಂದು ಮೇಷ್ಟ್ರು ಬರೆಸಿದ್ದನ್ನು ಬರೆದುಕೊಳ್ಳಲು ಅಥವಾ ಕೊಟ್ಟ ಹೋಮ್ ವರ್ಕ್ ಅನ್ನು ಮಾಡಲು ಅವಳ ಬಳಿಯೇ ನೋಟ್ಸ್ ಪಡೆಯುತ್ತಿದ್ದೆ. ಅವಳೇ ನನ್ನೆಲ್ಲಾ ಓದಿಗೆ ಆಧಾರವಾಗಿದ್ದಳು. ಇತ್ತ ‘ಬಂಧನ’ ಸಿನಿಮಾ ನೋಡಿ ಬಂದಿದ್ದೆ. ಅತ್ತ ಅವಳ ನೋಟ್ಸ್ ನನ್ನ ಕಣ್ಣ ಮುಂದೆಯೇ ಇತ್ತು. ಅದಕ್ಕಿಂತ ಹೆಚ್ಚಾಗಿ ಅವಳ ಬಗ್ಗೆ ದೊಡ್ಡದಾದ ಬಾಲ ಸೆಳೆತವೊಂದು ನನ್ನ ಕಿರಿಯ ಎದೆಯನ್ನು ಹಿರಿದಾಗಿ ಆವರಿಸಿಕೊಂಡಿತ್ತು. ಆದ ಹಾಗೆ ಆಗಲಿ ಮಾದಪ್ಪನ ಜಾತ್ರೆ ಅವಳಿಗೇ ಲವ್ ಲೆಟರ್ ಬರೆದುಬಿಡೋಣ ಅಂತ ನಿರ್ಧಾರ ಮಾಡಿದೆ.

ಆದರೆ ಬರೆಯುವುದಾದರೂ ಹೇಗೆ ಎನ್ನುವ ಗೊಂದಲ ಉಂಟಾಯಿತು. ಆಗ ಸಹಾಯಕ್ಕೆ ಬಂದವರು ಗೆಳೆಯ ನಾಗರಾಜ ಮತ್ತು ಧನಂಜಯ. ಇವರಿಬ್ಬರೂ ಏನು ಪ್ರೇಮ ಪಂಡಿತರಲ್ಲ. ಆದರೆ ಭಯ, ಗೊಂದಲಗೊಂಡಿದ್ದ ಮನಸ್ಸಿಗೆ ನೆರವಾದರು ಅಷ್ಟೇ. ಕೊನೆಗೂ ನನ್ನ ಬದುಕಿನ ಮೊದಲ ಪ್ರೇಮಪತ್ರ ಸಿದ್ಧವಾಯಿತು. ಆದರೆ ಈಗ ಹುಟ್ಟಿದ ಪ್ರಶ್ನೆ ಇದನ್ನು ಅವಳಿಗೆ ಕೊಡುವುದು ಹೇಗೆ ಎಂದು. ಒಂದೇ ಊರಿನವಳು.

ಏನಾದರೂ ಹೆಚ್ಚು ಕಮ್ಮಿ ಆದರೆ ಏನು ಮಾಡುವುದು ಅನ್ನೋ ಭಯ ಇನ್ನೊಂದು ಕಡೆ ಶುರುವಾಯಿತು. ಆದರೆ ಧೈರ್ಯ ಮಾಡಿ ಅವಳೇ ಕೊಟ್ಟಿದ್ದ ನೋಟ್ ಬುಕ್ ಒಳಗೆ ಲೆಟರ್ ಇಟ್ಟು ಅವಳ ಮನೆಗೇ ನಾನು ಮತ್ತು ನಾಗರಾಜ, ಧನಂಜಯ್ ಹೋಗಿ ಕೊಡುವಾಗ ನನ್ನ ಕೈ ನಡುಗುತ್ತಿತ್ತು. ಹೇಗೋ ಕೊಟ್ಟೆ. ಕೊಟ್ಟು ನಾವು ಮೂವರೂ ಮಾಡಿದ ಕೆಲಸ ಎಂದರೆ ನಮ್ಮೂರ ಕೆರೆಯ ತನಕ ಒಂದೇ ಉಸಿರಿನಲ್ಲಿ ಓಡಿದ್ದು. ಕೆರೆಯ ಬಳಿ ಬಂದು ನಿಂತಾಗ ನನ್ನ ಎದೆಯಲ್ಲಿ ಆಗುತ್ತಿದ್ದ ಬಡಿತ ಇನ್ನೂ ನನ್ನ ಕಿವಿಗೆ ಕೇಳುವಹಾಗಿದೆ.

ನಾನು ಲೆಟರ್ ಕೊಟ್ಟು ಬಂದ ಒಂದೆರಡು ಗಂಟೆಯಲ್ಲೇ ಅವಳು ಆ ಪತ್ರವನ್ನು ಓದಿ, ದೀಪದಲ್ಲಿ ಸುಡುತ್ತಿದ್ದಳಂತೆ. ಸುಟ್ಟರೆ ಒಳ್ಳೆಯದೇ ಆಗುತ್ತಿತ್ತು. ಆದರೆ ನನ್ನ ದುರಾದೃಷ್ಟಕ್ಕೆ ಅದನ್ನು ಅವಳ ಅಮ್ಮ ನೋಡಿದ್ದಳು. ಅದೇ ಬಂದದ್ದು. ಅಂದು ಅವಳ ಅಮ್ಮ ಆ ಘಟನೆಯನ್ನು ನೋಡಿದ್ದೇ ಇಂದಿಗೂ ನನ್ನ ಹುಟ್ಟೂರಿನಲ್ಲಿ ನಾನು ಲೆಟರ್ ಮೂರ್ತಿ ಎಂದು ಪ್ರಸಿದ್ಧವಾಗಲು ಕಾರಣವಾಗಿ ಬಿಟ್ಟಿತು. ಅದು ಹೇಗೆ ಎಂದು ಮುಂದೆ ಹೇಳುತ್ತೇನೆ ಓದಿ.

ಮಗಳು ಯಾವುದೋ ಲೆಟರ್ ಸುಡುವುದನ್ನು ನೋಡಿ ಅವಳಮ್ಮ ಏನು ಎಂದು ಕೇಳಿದಾಗ ಅವಳು ಎಲ್ಲವನ್ನೂ ಯಥಾವತ್ ಹೇಳಿಬಿಟ್ಟಿದ್ದಾಳೆ. ಇದೆಲ್ಲಾ ಆಗಿ ಮೂರು ಗಂಟೆ ಆಗಿರಬಹುದು ಅಷ್ಟೇ, ಅವಳ ತಾಯಿ ನಮ್ಮ ಮನೆ ಮುಂದೆ ಬಂದು ಭರ್ಜರಿಯಾಗಿ ಜಗಳಕ್ಕಿಳಿದಿದ್ದರು. ನಾನು ಕೆರೆ ಕಡೆಯಿಂದ ಮನೆಕಡೆಗೆ ಬರುವಾಗ ನಮ್ಮ ಮನೆ ಮುಂದೆ ಶುರುವಾಗಿದ್ದ ರಾಮಾಯಣ ನೋಡಿಯೇ ನನಗೆ ಅನ್ನಿಸಿಬಿಟ್ಟಿತು, ಓ ಇದು ನನ್ನ ಪ್ರೇಮಾಯಣದ ಪ್ರತೀಕ ನಡೆಯುತ್ತಿರುವ ರಾಮಾಯಣ ಎಂದು.

ದಡ್ಡ ನಾನು ಆಗಾದರೂ ಓಡಿ ಹೋಗಬೇಕಿತ್ತು. ಆದರೆ ಅಷ್ಟರಲ್ಲಿ ಅವಳಮ್ಮ ನನ್ನನ್ನು ನೋಡಿ ‘ನಿನ್ನ ಬಹಳ ಒಳ್ಳೆಯ ಹುಡುಗ ಎಂದುಕೊಂಡಿದ್ದೆ. ಆದರೆ ನೀನು ಹೀಗೆ ಮಾಡಿದ್ದಿಯಲ್ಲಾ, ಚಡ್ಡಿ ಹಾಕೋ ವಯಸ್ಸಿಗೆ ನಿಂಗೆ ಇದೆಲ್ಲಾ ಬೇಕಾ’ ಎಂದು ಕೈಲಿ ಹಿಡಿದಿದ್ದ ತೆಳ್ಳಗಿನ ಬೇವಿನ ಕಡ್ಡಿಯಿಂದ ನನ್ನ ಕುಂಡಿಗೆ ಸರಿಯಾಗಿ ಬಾರಿಸಿದಳು. ಆಗ ನನಗೆ ಅನ್ನಿಸಿತು ಮಗಳಿಗೆ ಸಿಹಿಯಾದ ಪ್ರೇಮ ಪತ್ರ ಕೊಟ್ಟರೆ, ಅವಳಮ್ಮ ಬಂದು ಕಹಿಯಾದ ಬೇವಿನ ಕಡ್ಡಿಯಿಂದ ಕುಂಡಿಗೆ ಬಾರಿಸುತ್ತಾಳೆ ಎಂದು.

ಅಷ್ಟಕ್ಕೆ ನನ್ನ ತಾತ ದೇವರಂತೆ ಬಂದು, ‘ಹೋಗಲಿ ಬಿಡವ್ವಾ ಏನೋ ಚಿಕ್ಕ ಹುಡುಗ ಏನೋ ಮಾಡಿದ್ದಾನೆ ಕ್ಷಮಿಸು’ ಎಂದು ಸಮಾಧಾನ ಮಾಡಿದ್ದರ ಫಲವಾಗಿ ಅವಳ ಅಮ್ಮನ ಕೈಯಿಂದ ತಪ್ಪಿಸಿಕೊಂಡೆ. ಆದರೆ ಊರವರ ಬಾಯಿಯಿಂದ ಇಂದಿಗೂ ತಪ್ಪಿಸಿಕೊಳ್ಳಲು ಆಗಿಲ್ಲ. ಯಾಕೆಂದರೆ ನಾನು ಈಗಲೂ ಊರವರ ದೃಷ್ಟಿಯಲ್ಲಿ ಲೆಟರ್ ಮೂರ್ತಿಯಾಗಿಯೇ ಖ್ಯಾತಿ ಪಡೆದಿರುವುದು. ಅಂದು ಅವಳ ಅಮ್ಮನ ಕೈಲಿ ಏಟು ತಿಂದು ಊರಿನ ಒಳಗೆ ತಿರುಗಾಡುತ್ತಿದ್ದರೆ ಎಲ್ಲರೂ ನನ್ನನ್ನು ಏ ಲೆಟರ್, ಏ ಲೆಟರ್ ಮೂರ್ತಿ ಎಂದೇ ಕರೆಯುತ್ತಿದ್ದರು. ಅಯ್ಯೋ ಇದೇನಿದು ಎಂದುಕೊಂಡು
ತಲೆತಗ್ಗಿಸಿಯೇ ನಡೆಯುತ್ತಿದ್ದೆ.

‘ಬಂಧನ’ ಸಿನಿಮಾ ನೋಡಿ ನಾನು ಈಗ ಈ ಲೆಟರ್ ಬಂಧನದಲ್ಲಿ ಸಿಕ್ಕಿದೆನೇ ಎನ್ನಿಸುತ್ತಿತ್ತು. ಎರಡು ದಿನ, ಮೂರು ದಿನ, ಹೀಗೆ ವಾರ ಕಳೆದರೂ ಎಲ್ಲರ ಬಾಯಲ್ಲೂ ನಂದೇ ಸುದ್ದಿ. ನನ್ನ ಮತ್ತೊಂದು ದುರಾದೃಷ್ಟಕ್ಕೆ ನನ್ನ ಸುದ್ದಿ ಮಾಸುವಂತಹ ಮತ್ತೊಂದು ದೊಡ್ಡ ಸುದ್ದಿ ಬರಲೇ ಇಲ್ಲ. ಊರವರ ಖಾಲಿ ಬಾಯಿಗೆ ನಾನು ರಸವತ್ತಾದ ಎಲೆಯಡಿಕೆಯಾಗಿದ್ದೆ.

ದೊಡ್ಡವರು ಇದನ್ನೆಲ್ಲಾ ಬೇಗ ಮರೆತರೂ ನನ್ನ ಸ್ನೇಹಿತರೇ ಇದನ್ನು ಮರೆತಿಲ್ಲ. ಇಷ್ಟು ದಿನ ನಾನು ಎಲ್ಲರನ್ನೂ ರೇಗಿಸುತ್ತಿದ್ದೆ. ಈಗ ಎಲ್ಲರೂ ನನ್ನನ್ನು ರೇಗಿಸಲು ನಾನೇ ಅವರ ಕೈಗೆ ಪ್ರಬಲ ಅಸ್ತ್ರ ನೀಡಿದ್ದೆ. ಅಂದು ನೀಡಿದ ಅಸ್ತ್ರ ಇಂದಿಗೂ ನನ್ನನ್ನು ಊರಿನಲ್ಲಿ ಲೆಟರ್ ಮೂರ್ತಿಯಾಗಿಯೇ ಉಳಿದಿದೆ. ಲೆಟರ್ ಕೊಟ್ಟ ಹುಡುಗಿಗೆ ಮದುವೆಯಾಗಿ ಅವಳ ಮಕ್ಕಳೂ ನನ್ನನ್ನು ಲೆಟರ್ ಮೂರ್ತಿ ಅಂಕಲ್ ಅನ್ನುವಾಗ ‘ನಗಲಾರದೇ, ಅಳಲಾರದೇ ತೊಳಲಾಡಿದೇ ಜೀವ...’ ಎನ್ನುವ ಹಾಡು ನೆನೆದು ಸುಮ್ಮನಾಗುತ್ತೇನೆ.

- ಜ್ಞಾನಮೂರ್ತಿ 

PREV
click me!

Recommended Stories

ಮದುವೆ ಔಟ್‌ಡೇಟೆಡ್‌ ಆಗೋಯ್ತಾ!
ಒಟ್ರಾವರ್ಟ್‌ ಅನ್ನೋ ಹೊಸ ವ್ಯಕ್ತಿತ್ವ ಮಾದರಿ, ನೀವಿದ್ದೀರ ಇದ್ರಲ್ಲಿ?