
ಒಮ್ಮೆ ಕಪ್ಪೆಗಳ ಸಮೂಹ ಕಾಡಿನ ದಾರಿಯಲ್ಲಿ ಹೋಗುತ್ತಿತ್ತು. ನಡುವೆ ದೊಡ್ಡ ಕಂದಕಕ್ಕೆ ಎರಡು ಕಪ್ಪೆಗಳು ಬಿದ್ದವು. ಉಳಿದ ಕಪ್ಪೆಗಳು ಆ ಕಂದಕದ ಆಳ ಕಂಡು ತಮ್ಮ ಸಹಚರರು ಇನ್ನು ಮೇಲೆ ಬರಲು ಸಾಧ್ಯವಿಲ್ಲ. ತಾವು ಮುಂದುವರಿಯುವುದು ಒಳಿತು ಅಂತ ಮಾತನಾಡಿಕೊಂಡವು. ಆದರೆ ಬಿದ್ದ ಕಪ್ಪೆಗಳು ಮೇಲೆ ಬರುವ ಪ್ರಯತ್ನ ಮಾಡುತ್ತಲೇ ಇದ್ದವು. ಆದರೆ ಮೇಲಿರುವ ಕಪ್ಪೆಗಳು, ನೀವು ಮೇಲೆ ಬರೋದು ಸಾಧ್ಯವೇ ಇಲ್ಲ. ಯಾಕೆ ಸುಮ್ಮನೇ ಹೀಗೆ ಪ್ರಯತ್ನ ಮಾಡಿ ನೋವುಣ್ಣುತ್ತೀರಿ, ಇದಕ್ಕಿಂತ ಸತ್ತು ಬಿಡುವುದು ಉತ್ತಮ ಅನ್ನುತ್ತಲೇ ಇದ್ದವು.
ಅದರಲ್ಲಿ ಒಂದು ಕಪ್ಪೆ ಅವುಗಳ ಮಾತು ಕೇಳಿ ಪ್ರಯತ್ನ ಬಿಟ್ಟಿತು. ಇನ್ನೂ ಆಳಕ್ಕೆ ಜಿಗಿದು ಸಾವನ್ನಪ್ಪಿತ್ತು. ಆದರೆ ಮತ್ತೊಂದು ಕಪ್ಪೆ ಮಾತ್ರ ಪ್ರಯತ್ನ ಮುಂದುವರಿಸುತ್ತಲೇ ಇತ್ತು. ಉಳಿದ ಕಪ್ಪೆಗಳು ಮೇಲಿಂದ ಕಿರುಚತೊಡಗಿದವು. ವೃಥಾ ಪ್ರಯತ್ನ ಮಾಡಬೇಡ, ಅಷ್ಟು ಆಳದ ಕಂದಕದಿಂದ ಮೇಲೆ ಬರಲು ಸಾಧ್ಯವೇ ಇಲ್ಲ. ಹೀಗೆ ನೋವನುಭವಿಸುವುದನ್ನು ಬಿಡು, ಆ ಕಪ್ಪೆಯಂತೆ ಒಮ್ಮೆಲೇ ಸತ್ತು ಬಿಡು, ಅದೇ ಉತ್ತಮ ಆಯ್ಕೆ. ಆದರೆ ಅವರೆಷ್ಟು ಕಿರುಚಿದರೂ ತನ್ನ ಪ್ರಯತ್ನ ಬಿಡದೇ ಈ ಕಪ್ಪೆ ಜಿಗಿಯುತ್ತಲೇ ಇತ್ತು. ತನ್ನ ಪ್ರಯತ್ನ ಮುಂದುವರಿಸುತ್ತಲೇ ಇತ್ತು. ಕೊನೆಗೊಮ್ಮೆ ಮೇಲೆ ಬಂತು.
ಆಗ ಉಳಿದ ಕಪ್ಪೆಗಳು ಕೇಳಿದವು, ‘ನಿನಗೆ ನಮ್ಮ ಮಾತು ಕೇಳಲಿಲ್ವಾ?’ ಕಪ್ಪೆ ಸುಮ್ಮನೇ ಅವರತ್ತ ನೋಡಿತ್ತು, ‘ನನಗೆ ಕಿವಿ ಕೇಳಿಸುವುದಿಲ್ಲ, ಆದರೂ ಎನ್‌ಕರೇಜ್ ಮಾಡ್ತಿರೋದು ಕಾಣ್ತಿತ್ತು, ಥ್ಯಾಂಕ್ಸ್, ನಿಮ್ಮ ಪ್ರೋತ್ಸಾಹದ ನುಡಿಗಳು ನಾನೀಗ ಮೇಲೆ ಬಂದು ಜೀವ ಉಳಿಸಿಕೊಳ್ಳಲು ಸಾಧ್ಯವಾಯಿತು.