ಮಂಗಳೂರಿನ ಬೀದಿನಾಯಿ ಪಿಂಕಿ ಕ್ಯೂಟೆಸ್ಟ್ ಇಂಡಿಯನ್ ಡಾಗ್

By Kannadaprabha NewsFirst Published Sep 6, 2018, 12:21 PM IST
Highlights

ಮೊನ್ನೆ ಮೊನ್ನೆ ಪೆಟಾ ಸಂಸ್ಥೆ ನಡೆಸಿದ ‘ಕ್ಯೂಟೆಸ್ಟ್ ಇಂಡಿಯನ್ ಡಾಗ್ ಅಲೈವ್ ಕಂಟೆಸ್ಟ್’ನಲ್ಲಿ ಮಂಗಳೂರಿನ ನಾಯಿ (ಪಿಂಕಿ) ಮೊದಲ ಸ್ಥಾನ ಪಡೆದು ದೇಶದಲ್ಲೇ ಸುದ್ದಿಯಾಗಿದೆ. ಆರು ತಿಂಗಳ ಮರಿಯಿದ್ದಾಗ ಗಾಯಗೊಂಡು ಸಾವು ಬದುಕಿಮ ಮಧ್ಯೆ ಹೋರಾಟ ಮಾಡುತ್ತಿದ್ದಾಗ, ಇದನ್ನು ತಂದು ಹಾರೈಕೆ ಮಾಡಿದವರು ಜೀನ್ ಕ್ರಾಸ್ತಾ. ಈಗ ಅದೇ ಪಿಂಕಿ ಎಲ್ಲರ ಮುದ್ದಿನ ನಾಯಿ.

ಯಾರಿಗೆ ತಾನೆ ಗೊತ್ತಿತ್ತು ಮಂಗಳೂರಿನ ಲೇಡಿಹಿಲ್ ಬಳಿ ನಿರ್ಮಾಣ ಹಂತದ ಕಟ್ಟಡದೊಳಗೆ ಸಿಲುಕಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ 6 ತಿಂಗಳ ಬೀದಿ ನಾಯಿ ಮರಿಯೊಂದು ಇಷ್ಟೊಂದು ಫೇಮಸ್ ಆಗುತ್ತೆ ಎಂದು. ರಕ್ಷಿಸಲ್ಪಟ್ಟ ಬೀದಿ ನಾಯಿಗಳಿಗಾಗಿ ಪೆಟಾ (ಪೀಪಲ್ಸ್ ಫಾರ್ ದಿ ಎಥ್ನಿಕಲ್ ಟ್ರೀಟ್‌ಮೆಂಟ್ ಆಫ್ ಅನಿಮಲ್ಸ್) ಸಂಸ್ಥೆ ನೀಡುವ ‘ಕ್ಯೂಟೆಸ್ಟ್ ಇಂಡಿಯನ್ ಡಾಗ್ ಅಲೈವ್ ಕಂಟೆಸ್ಟ್’ನಲ್ಲಿ ಮೊದಲ ಸ್ಥಾನಿಯಾಗುತ್ತೆ ಎಂದು.

ಇದಕ್ಕೆಲ್ಲಾ ಕಾರಣ ಜೀನ್ ಕ್ರಾಸ್ತಾ
‘ಅಂದು ಜೋರು ಮಳೆ ಬೀಳುತ್ತಿತ್ತು. ನಾನು ಮನೆಗೆ ಹೋಗುತ್ತಿರುವಾಗ ನಿರ್ಮಾಣ ಹಂತದ ಕಟ್ಟಡದ ಒಳಗೆ ಸಣ್ಣ ನಾಯಿ ಮರಿಯೊಂದು ನರಳುತ್ತಿರುವುದು ಕೇಳಿಸಿ ಬಳಿಗೆ ಹೋದೆ. ಅದಾಗಲೇ ಮಣ್ಣಿನೊಳಗೆ ಸಿಕ್ಕಿಕೊಂಡು ಹೊರಗೆ ಬರಲಾಗದೇ ಚಡಪಡಿಸುತ್ತಿತ್ತು. ಎಲ್ಲಿಂದ ಬಂದಿತ್ತೋ ಏನೋ, ದೊಡ್ಡ ನಾಯಿಗಳೆಲ್ಲಾ ಕಚ್ಚಿ ಗಾಯ ಮಾಡಿದ್ದವು. ರಕ್ತ ಹರಿಯುತ್ತಿತ್ತು. ಆಗ ಅಲ್ಲಿದ್ದ ಕೆಲಸದವರ ಸಹಾಯ ಪಡೆದು ಆ ನಾಯಿ ಮರಿಯನ್ನು ಮನೆಗೆ ತಂದು ಆರೈಕೆ ಮಾಡಿದೆ. ಇಂದು ಅದೇ ನಾಯಿ ನನ್ನ ಪ್ರೀತಿಯ ಪಿಂಕಿಯಾಗಿ ದೇಶದ ಸಂರಕ್ಷಿತ ನಾಯಿಗಳ ಪೈಕಿ ಮೊದಲ ಸ್ಥಾನಕ್ಕೇರಿದೆ’ ಎನ್ನುವ ಜೀನ್ ಕ್ರಾಸ್ತಾ ಮಕ್ಕಳು ಮತ್ತು ಪ್ರಾಣಿಗಳ ಪಾಲಿಗೆ ಮಾತೆಯೂ ಹೌದು.

ಮಕ್ಕಳಿಗಾಗಿ ಕೌನ್ಸೆಲಿಂಗ್ ಸೆಂಟರ್
1998ರಲ್ಲಿಯೇ ಮಕ್ಕಳಲ್ಲಿ ಧೈರ್ಯ ತುಂಬುವ ಉದ್ದೇಶದಿಂದ ‘ದಿ ಲಿಟಲ್ ಫ್ಲವರ್ ಚೈಲ್ಡ್ ಕೌನ್ಸೆಲಿಂಗ್’ ಎನ್ನುವ ಸಂಸ್ಥೆ ಕಟ್ಟಿ ಖ್ಯಾತ ವೈದ್ಯರು, ಲಾಯರ್‌ಗಳಿಂದ ಮಕ್ಕಳಿಗೆ ಸಹಾಯ ಮಾಡಿಕೊಂಡು ಬಂದಿದ್ದಾರೆ ಕ್ರಾಸ್ತಾ. ‘ನಾವು ಮನುಷ್ಯರು. ನಮಗೆ ನಮ್ಮ ಕಷ್ಟ ಸುಖ ಹೇಳಿಕೊಳ್ಳುವುದಕ್ಕೆ ಭಾಷೆ ಇದೆ. ಆದರೆ ಮೂಖ ಪ್ರಾಣಿಗಳು ಮತ್ತು ಚಿಕ್ಕ ಮಕ್ಕಳಿಗೆ ತಮ್ಮ ನೋವನ್ನು ಹೇಳಿಕೊಳ್ಳಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿಯೇ ನಾನು ಮಕ್ಕಳು ಮತ್ತು ಪ್ರಾಣಿಗಳ ರಕ್ಷಣೆಗೆ ನನ್ನ ಕೈಲಾದಷ್ಟು ಕೆಲಸ ಮಾಡಬೇಕು ಎಂದು ಈ ರೀತಿಯ ಕೆಲಸ ಮಾಡುತ್ತಿದ್ದೇನೆ’ ಎನ್ನುವ ಕ್ರಾಸ್ತಾ ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡಿಕೊಂಡು ಅದರಿಂದ ಬಂದ ಹಣವನ್ನು ಈ ರೀತಿಯ ಸೇವೆಗೇ ಮೀಸಲಿಟ್ಟಿದ್ದಾರೆ.

ಬೀದಿನಾಯಿಗಳು ತುಂಬಾ ಕ್ಯೂಟ್
ನನಗೆ ಲೇಡಿಹಿಲ್‌ನಲ್ಲಿ ಸಿಕ್ಕ ನಾಯಿ ಮರಿ ಪಿಂಕ್ ಕಲರ್ ಇದ್ದು, ತುಂಬಾ ಕ್ಯೂಟ್ ಆಗಿತ್ತು. ಅದಕ್ಕಾಗಿಯೇ ಅದಕ್ಕೆ ‘ಪಿಂಕಿ’ ಎಂದು ಹೆಸರಿಟ್ಟೆ. ಮುದ್ದು ಮುದ್ದಾಗಿದ್ದ ಅದು ಇಂದು ನ್ಯಾಷನಲ್ ಅವಾರ್ಡ್ ಪಡೆದಿದೆ. ಹಾಗೆಯೇ ನಮ್ಮ ಬೀದಿ ನಾಯಿಗಳು ತುಂಬಾ ಕ್ಯೂಟ್ ಆಗಿರುತ್ತವೆ. ಅವು ಯಾವುದೇ ವಿದೇಶಿ ತಳಿಗಿಂತ ಕಡಿಮೆ ಇಲ್ಲ. ಆದರೆ ಅವಕ್ಕೆ ತುತ್ತು ಅನ್ನ ಹಾಕಬೇಕು. ಚೆನ್ನಾಗಿ ನೋಡಿಕೊಳ್ಳಬೇಕು ಅಷ್ಟೇ. ಅದಕ್ಕಾಗಿಯೇ ನಾನು ೫ ವರ್ಷಗಳಿಂದಲೂ ಮಂಗಳೂರಿನ ಜನತೆಗೆ ಪ್ರಾಣಿ ಪಕ್ಷಿಗಳಿಗೆ ತುತ್ತು ಅನ್ನ, ನೀರು ಕೊಡಿ ಎಂದು ಜಾಗೃತಿ ಮೂಡಿಸುತ್ತಾ ಬಂದಿದ್ದೇನೆ’ ಎನ್ನುತ್ತಾರೆ ಜೀನ್ ಕ್ರಾಸ್ತಾ.

ನಾಯಿಗಳಿಗೆ ಸಿಕ್ಕ ಘನತೆ
‘ನನ್ನ ಪಿಂಕಿಗೆ ಬಂದಿರುವ ಪ್ರಶಸ್ತಿಯಿಂದ ಬೀದಿ ನಾಯಿಗಳಿಗೆ ಒಂದು ಘನತೆ ಸಿಕ್ಕಂತಾಗಿದೆ. ನನ್ನ ಪ್ರಕಾರ ನಾಯಿಗಳು ಮನೆಗೆ ಕಳ್ಳ ಬರದೇ ಇರಲಿ ಎಂದು ಸಾಕುವುದಕ್ಕೆ ಇಲ್ಲ. ಅವುಗಳನ್ನೂ ಚೆನ್ನಾಗಿ ನೋಡಿಕೊಳ್ಳಬೇಕು. ಬಂಧಿಸಿ, ಗೂಡಿನಲ್ಲಿ ಇಟ್ಟರೆ ಯಾವ ನಾಯಿಯೂ ಆರೋಗ್ಯವಾಗಿ ಇರುವುದಿಲ್ಲ. ಅವುಗಳನ್ನು ಸ್ವಂತ್ರವಾಗಿ ಬಿಡಬೇಕು. ಈಗ ಪಿಂಕಿಗೆ ಪ್ರಶಸ್ತಿ ಬಂದದ್ದೇ ಸಾಕಷ್ಟು ಜನ ನನಗೆ ಕಾಲ್ ಮಾಡಿ ನನ್ನ ಬಳಿ ಇರುವ ಸಂರಕ್ಷಿತ ನಾಯಿಗಳನ್ನು ತಾವು ತೆಗೆದುಕೊಂಡು ಸಾಕಲು ಮುಂದೆ ಬಂದಿದ್ದಾರೆ’ ಎನ್ನುವ ಜೀನ್ ಕ್ರಾಸ್ತಾ ತಮ್ಮ ಮನೆಯಲ್ಲೇ ಹತ್ತಾರು ಬೀದಿ ಬೆಕ್ಕುಗಳು, ನಾಯಿಗಳಿಗೆ ಆಶ್ರಯ ನೀಡಿರುವುದು ವಿಶೇಷ.

click me!