ಕರ್ಕಿ ಇದು ಗಣೇಶನ ತವರೂರು

First Published 10, Sep 2018, 11:18 AM IST
Highlights

ಪುರಾಣೋಕ್ತವಾಗಿಯೂ ಸೈ, ಪರಿಸರ ಸ್ನೇಹಿಯಾಗಿಯೂ ಸೈ. ಶಾಸ್ತ್ರೋಕ್ತ, ವೇದೋಕ್ತ ಪೂಜೆಗೂ ಸೈ..! ಇದು ಮಣ್ಣಿನ ಗಣಪತಿ. ಹೊನ್ನಾವರ ತಾಲೂಕಿನ ಕರ್ಕಿ ಗ್ರಾಮದ ಭಂಡಾರಿಗಳ ಮನೆತನ ತಲೆತಲೆಮಾರುಗಳಿಂದ ಅನುಚಾನವಾಗಿ ಇಂತಹ ಮಣ್ಣಿನ ಗಣಪತಿ ಮೂರ್ತಿಯ ತಯಾರಿಕೆಯನ್ನು ಮಾಡಿಕೊಂಡು ಬಂದಿದ್ದು, ಈ ವರ್ಷ ಈಗಾಗಲೇ ನೂರಾರು ಭಿನ್ನ ಭಿನ್ನ ಗಣಪನ ಮೂರ್ತಿಗಳು ಮೈತಳೆದು ನಿಂತಿವೆ.

ಹೊನ್ನಾವರದಿಂದ ಕುಮಟಾಕ್ಕೆ ಸಾಗುವ ಹೆದ್ದಾರಿ ನಡುವೆ ಸಿಗುವ ಕರ್ಕಿಯಲ್ಲಿನ ಭಂಡಾರಿ ಕುಟುಂಬಸ್ಥರ ಮನೆಗೆಳಿಗೆ ಹೋದರೆ ಭಿನ್ನ ಭಿನ್ನ ಗೌರಿ ಗಣೇಶ ಮೂರ್ತಿಗಳು ನಿಮ್ಮನ್ನು ಸ್ವಾಗತಿಸುತ್ತವೆ. ಮನೆ ಮುಂದೆ ತಯಾರಾದ, ತಯಾರಾಗುತ್ತಿರುವ ಹಲವು ಬಗೆಯ ಪರಿಸರ ಸ್ನೇಹಿ ಮೂರ್ತಿಗಳು ಸಾಲು ಸಾಲಾಗಿ ನಿಂತಿರುತ್ತವೆ.

ನೈಸರ್ಗಿಕವಾಗಿ ಸಿಗುವ ಅಂಟು ಮಣ್ಣಿನಿಂದ ರೂಪುಗೊಳ್ಳುವ ಇಲ್ಲಿನ ಗಣಪತಿ ಮೂರ್ತಿಗಳು ರಾಸಾಯನಿಕ ರಹಿತ ಬಣ್ಣ ಲೇಪನದಿಂದ, ಪರಿಸರ ಸ್ನೇಹಿಯಾಗಿ ತಲೆತಲಾಂತರದಿಂದ ರೂಪುಗೊಳ್ಳುತ್ತಿರುವುದು ವಿಶೇಷ. ಪುರಾಣ ಕಾಲಘಟ್ಟದಿಂದ ವರ್ತಮಾನದ ವಿದ್ಯಮಾನಗಳನ್ನು ಪ್ರತಿಬಿಂಬಿಸುವ ಗಣಪತಿಯ ಪೂಜಾ ಮೂರ್ತಿಗಳು ಇಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಣಿಗೊಳ್ಳುತ್ತಿರುತ್ತವೆ.

ಪ್ರತಿ ವರ್ಷ ಗಣೇಶ ಚತುರ್ಥಿ ಸಮೀಪಿಸುತ್ತಿರುವಂತೆ ಇಲ್ಲಿನ ರಾಮಚಂದ್ರ ಕೇಶವ ಭಂಡಾರಿ, ಗಜಾನನ ಸತ್ಯನಾರಾಯಣ ಭಂಡಾರಿ, ಮಂಜುನಾಥ ಪ್ರಭಾಕರ ಡಾರಿ, ರಮೇಶ್ ಸತ್ಯನಾರಾಯಣ ಭಂಡಾರಿ ಇವರ ಪ್ರತಿಮನೆಯಲ್ಲೂ ಸರಿಸುಮಾರು ಮುನ್ನೂರರಿಂದ ನಾಲ್ಕು ನೂರಕ್ಕೂ ಹೆಚ್ಚು ಮಣ್ಣಿನ ಗಣಪತಿ ಮೂರ್ತಿಗಳು ಮೈದಳೆದು ಗಣೇಶ ಚತುರ್ಥಿಯ ಮನೆಮನೆಗಳ ಪೂಜೆಗೆ ಸಿದ್ಧವಾಗುತ್ತಲೇ ಇರುತ್ತವೆ.

ಕಲಾಕಾರರ ಕುಟುಂಬ

ಇಡೀ ಕುಟುಂಬವೇ ಕಲೆ, ಸಂಗೀತ, ಯಕ್ಷಗಾನಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ತಲೆಮಾರುಗಳಿಂದಲೂ ತಮ್ಮ ಕಲಾವೃತ್ತಿಯನ್ನು ಪಾಲಿಸಿಕೊಂಡೇ ಬರುತ್ತಿದೆ. ಹಿಂದಿನಿಂದಲೂ ಪಾರಂಪರಿಕ ಪಂಚವಾದ್ಯ ಮೇಳಗಳನ್ನು ನಡೆಸಿಕೊಂಡು ಬಂದಿದ್ದ ಭಂಡಾರಿ ಕುಟುಂಬದಲ್ಲಿ ಯಕ್ಷಗಾನದ ಮದ್ದಳೆವಾದಕರಾಗಿರುವ ಪ್ರಭಾಕರ ಭಂಡಾರಿ ರಾಜ್ಯ ಪ್ರಶಸ್ತಿ ವಿಜೇತರೂ ಹೌದು. ಮಂಜುನಾಥ ಭಂಡಾರಿ ಸಹ ಮದ್ದಳೆವಾದಕರಾಗಿ ಖ್ಯಾತಿ ಗಳಿಸಿದವರು. ಅಲ್ಲದೇ ಕೆಲವು ವಾದ್ಯಗಳ ತಯಾರಿಕೆಯಲ್ಲಿಯೂ ಈ ಕುಟುಂಬ ಖ್ಯಾತಿ ಗಳಿಸಿದೆ.

ಅಜ್ಜನ ಕಲಾಪರಂಪರೆಯ ಮುಂದುವರಿಕೆ

‘ನಮ್ಮ ಕುಟುಂಬಗಳಲ್ಲಿ ಮಣ್ಣಿನ ಗಣಪತಿ ಮೂರ್ತಿ ತಯಾರಿಕೆಯನ್ನು ಬಹಳ ಹಿಂದಿನಿಂದಲೂ ಮಾಡುತ್ತಿದ್ದೇವೆ. ಆದರೆ ಇದು ಮನಗೆ ತಾತನಿಂದ ಬಂದ ವಿದ್ಯೆ. ಅವರು ಮಾಡುತ್ತಿದ್ದಾಗ ನೋಡಿ ನೋಡಿ, ಅವರಿಗೆ ಸಹಾಯಕರಾಗಿ ಕೆಲಸ ಮಾಡುತ್ತಲೇ ಈ ಕಲೆಯನ್ನು ರೂಢಿಸಿಕೊಂಡಿದ್ದೇವೆ. ಮೂರು ತಲೆಮಾರಿನ ಹಿಂದೆ ಅಜ್ಜ ಮಣ್ಣಿನ ಗಣಪತಿ ಮೂರ್ತಿಗಳಿಗೆ ಪಚ್ಚ ಬಳಪದ ನೈಸರ್ಗಿಕ ಬಣ್ಣ ಬಳಸುತ್ತಿದ್ದರು. ತರುವಾಯ ವಾಟರ್ ಕಲರ್ ಬಳಕೆ ಆರಂಭವಾಯಿತು. ನಾವೂ ಪರಿಸರಕ್ಕೆ ಯಾವುದೇ ಹಾನಿಯಾಗಬಾರದು ಎನ್ನುವ ದೃಷ್ಟಿಯಿಂದ ವಾಟರ್ ಕಲರ್ ಬಳಿಸಿಯೇ ಮೂರ್ತಿ ತಯಾರು ಮಾಡುತ್ತೇವೆ’ ಎನ್ನುತ್ತಾರೆ ರಾಮಚಂದ್ರ ಕೇಶವ ಭಂಡಾರಿ.

ಮೂರು ತಿಂಗಳ ಪರಿಶ್ರಮ

‘ಮಣ್ಣಿನ ಮೂರ್ತಿ ತಯಾರಿಕೆಯಂದರೆ ಅದೊಂದು ತಪಸ್ಸು. ಮೊದಲು ಶುದ್ಧವಾದ ಅಂಟು ಮಣ್ಣು ಸಂಗ್ರಹಿಸಬೇಕು. ಮೊದಲೆಲ್ಲಾ ಹೇರಳವಾಗಿ ಸಿಗುತ್ತಿದ್ದ ಈ ಜೇಡಿ ಮಣ್ಣು ಈಗ ಸಿಗುವುದು ಸ್ವಲ್ಪ ಕಷ್ಟ. ಈ ಸಾರಿ ಶಿರಸಿಯ ಹೆಗ್ಗರಣಿಯಿಂದ ಒಂದು ಲಾರಿಯಷ್ಟು ಮಣ್ಣು ತಂದಿದ್ದೇವೆ. ಇದಾದ ಮೇಲೆ ತಂದ ಮಣ್ಣಿನಲ್ಲಿರುವ ಕಸಕಡ್ಡಿಗಳನ್ನು ಬೇರ್ಪಡಿಸಿ, ಹದಗೊಳಿಸಬೇಕು. ತರುವಾಯ ಹಂತ ಹಂತವಾಗಿ ಮೂರ್ತಿ ನಿರ್ಮಾಣ ಕೈಗೊಳ್ಳಬೇಕು. ಮೂರ್ತಿಗಳನ್ನು ಆಕಾರಕ್ಕೆ ತಕ್ಕಂತೆ ನುಣುಪುಗೊಳಿಸಿ, ಹಾರ ಕಿರೀಟ, ಸೇರಿದಂತೆ ಶಾಸ್ತ್ರೋಕ್ತ ಪ್ರಮಾಣದಲ್ಲಿ ಅಂಗವಿನ್ಯಾಸ ಮಾಡಿ, ಬಣ್ಣಗಾರಿಕೆ ಮಾಡಬೇಕು. ಈ ಎಲ್ಲ ಹಂತವೂ ಅವಸರದಿಂದ ಆಗುವದಿಲ್ಲ. ಮೂರ್ತಿಯ ಬಣ್ಣಗಾರಿಕೆಯವರೆಗೆ ಈ ಕೆಲಸದಲ್ಲಿ ಕುಟುಂಬದ ಐದಾರು ಜನ ಹಗಲು ರಾತ್ರಿ ತೊಡಗಿಕೊಂಡರೂ ಕೆಲಸ ಮುಗಿಯುವುದಿಲ್ಲ. ಮೂರು ತಿಂಗಳ ಕಾಲ ನಮ್ಮ ಇಡೀ ಕುಟುಂಬವೇ ಈ ಕಾರ್ಯದಲ್ಲಿ ತೊಡಗಿಕೊಳ್ಳುತ್ತದೆ.

ಇಷ್ಟೆಲ್ಲ ಮುಗಿದ ಮೇಲೂ ಕೆಲಸ ಇದ್ದೇ ಇರುತ್ತದೆ. ಒಂದಡಿಯಿಂದ ಐದು ಅಡಿಯವರೆಗಿನ ಮಣ್ಣಿನ ಮೂರ್ತಿಗಳನ್ನು ಅಚ್ಚು ಬಳಸದೇ ಬೇಡಿಕೆಗನುಗುಣವಾಗಿ ನಿರ್ಮಿಸಲಾಗುತ್ತಿದೆ. ವೆಂಕ್ಟಾಪುರ, ಬಾರಕೂರುವರೆಗಿನವರು, ಕುಮಟಾ ಕತ್ಗಾಲ್ ವರೆಗಿನವರು ಸಹ ಇಲ್ಲಿಗೆ ಬಂದು ಮಣ್ಣಿನ ಗಣಪನ ಮೂರ್ತಿಗಳನ್ನು ಕೊಳ್ಳುತ್ತಾರೆ. ನಾವು ಯಾವುದೇ ಅಚ್ಚು, ಯಂತ್ರ ಬಳಸದೇ ಕೈಯಾರ ಮೂರ್ತಿ ತಯಾರು ಮಾಡುತ್ತೇವೆ ಎನ್ನುವುದೇ ವಿಶೇಷ. ಒಂದೂವರೆ ಸಾವಿರ ರು. ಗಳಿಂದ 200000 ರು. ವರೆಗೆ ಮೂರ್ತಿಗಳ ಬೆಲೆ ಇದೆ. ನಮ್ಮ ಮೂರು ತಿಂಗಳ ಪರಿಶ್ರಮಕ್ಕೆ, ಬಣ್ಣಗಾರಿಕೆಗೆ ಇವು ತೀರಾ ಲಾಭದಾಯಕವಲ್ಲದಿದ್ದರೂ ಕಲಾಪರಂಪರೆ ಉಳಿವು, ಇದೊಂದು ಧಾರ್ಮಿಕ ಕೈಂಕರ್ಯ ಎನ್ನುವ ಕಾರಣಕ್ಕೆ ಇದನ್ನು ಶ್ರದ್ಧೆಯಿಂದ ಮುಂದುವರೆಸಿಕೊಂಡು ಬಂದಿದ್ದೇವೆ’ ಎನ್ನುತ್ತಾರೆ ರಾಮಚಂದ್ರ ಕೇಶವ ಭಂಡಾರಿ.

Last Updated 19, Sep 2018, 9:17 AM IST