ಬಿಜೆಪಿಯಲ್ಲಿ ಇನ್ನೂ ಆಗಿಲ್ಲ ಅಭ್ಯರ್ಥಿ ಫೈನಲ್
ಜೆಡಿಎಸ್ ಪಕ್ಷದಿಂದ ಹುರಿಯಾಳು ಘೋಷಣೆ
ಈ ಬಾರಿ ಅತ್ಯಧಿಕ ಅಭ್ಯರ್ಥಿಗಳು ಅಖಾಡಕ್ಕೆ
ಸೋಮರಡ್ಡಿ ಅಳವಂಡಿ
ಕನ್ನಡಪ್ರಭ ವಾರ್ತೆ ಕೊಪ್ಪಳ
undefined
ಚುನಾವಣೆ ಘೋಷಣೆಯಾಗುವ ಮುನ್ನವೇ ವಿಧಾನಸಭಾ ಕ್ಷೇತ್ರದ ಟಿಕೆಟ್ ಪೈಪೋಟಿಯ ಕಾವು ಏರತೊಡಗಿದೆ. ಈ ಬಾರಿ ಗೆಲ್ಲಲೇ ಬೇಕು ಎನ್ನುವ ಲೆಕ್ಕಾಚಾರದಲ್ಲಿ ಅಳೆದು-ತೂಗಿ ಅಭ್ಯರ್ಥಿಗಳನ್ನು ಅಖಾಡಕ್ಕೆ ಇಳಿಸಲು ರಾಜಕೀಯ ಪಕ್ಷಗಳು ತಾಲೀಮು ನಡಿಸಿವೆ. ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಎರಡು ಬಾರಿ ಗೆದ್ದಿರುವ ಹಾಲಿ ಶಾಸಕ ರಾಘವೇಂದ್ರ ಹಿಟ್ನಾಳ ಅವರು ಹ್ಯಾಟ್ರಿಕ್ ಬಾರಿಸುವ ಧಾವಂತದಲ್ಲಿದ್ದು, ಈ ಗೆಲ್ಲುವ ಕುದುರೆಯನ್ನು ಕಟ್ಟಿಹಾಕುವವರು ಯಾರು ಎನ್ನುವುದೇ ಸದ್ಯ ಚರ್ಚೆಯಾಗುತ್ತಿರುವ ವಿಷಯ.
ಈಗಾಗಲೇ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಪರೋಕ್ಷವಾಗಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರದ ಐದು ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ಕೊಪ್ಪಳ ವಿಧಾನಸಭಾ ಕ್ಷೇತ್ರದಿಂದ ಮತ್ತೆ ರಾಘವೇಂದ್ರ ಹಿಟ್ನಾಳ ಅವರೇ ಸ್ಪರ್ಧೆ ಮಾಡುವುದು ಪಕ್ಕಾ ಆಗಿದೆ. ಅಲ್ಲಿ ಟಿಕೆಟ್‌ಗಾಗಿ ಪೈಪೋಟಿಯೂ ಇಲ್ಲ, ಕೆಪಿಸಿಸಿ ಅಧ್ಯಕ್ಷರು ಕೋರಿಕೆ ಮಾಡಿದರೂ ಮತ್ತೊಬ್ಬರು ಅರ್ಜಿ ಸಲ್ಲಿಕೆ ಮಾಡಿಲ್ಲ. ಹೀಗಾಗಿ, ಹಾಲಿ ಶಾಸಕ ರಾಘವೇಂದ್ರ ಹಿಟ್ನಾಳ ಈಗ ಕ್ಷೇತ್ರದಾದ್ಯಂತ ಸುತ್ತಾಡಿ ಹ್ಯಾಟ್ರಿಕ್ ಬಾರಿಸುವ ತಯಾರಿ ನಡೆಸಿದ್ದಾರೆ.
ಬಿಜೆಪಿಯಲ್ಲಿ ಟಿಕೆಟ್ ಫೈಟ್: ಭಾರತೀಯ ಜನತಾ ಪಾರ್ಟಿ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ತನ್ನ ಹುರಿಯಾಳು ಘೋಷಣೆ ಮಾಡಲು ಹೆಣಗಾಟ ನಡೆಸಿದೆ. ಹೇಗಾದರೂ ಮಾಡಿ ಹಾಲಿ ಶಾಸಕ ರಾಘವೇಂದ್ರ ಹಿಟ್ನಾಳ ಅವರಿಗೆ ಸೋಲಿನ ರುಚಿ ತೋರಿಸಲೇಬೇಕು ಎಂದು ಅಳೆದು-ತೂಗಿ ಟಿಕೆಟ್ ಘೋಷಣೆ ಮಾಡುವ ಸಾಧ್ಯತೆ ಇದೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಸಂಸದರ ಪುತ್ರ ಅಮರೇಶ ಕರಡಿ ಮತ್ತೊಮ್ಮೆ ಕಣಕ್ಕೆ ಇಳಿಯುತ್ತಾರೆ ಎನ್ನುವ ಸುದ್ದಿಗಿಂತ ಅವರ ತಂದೆ ಸಂಸದ ಸಂಗಣ್ಣ ಕರಡಿ ಅಖಾಡಕ್ಕೆ ಇಳಿಯುತ್ತಾರೆ ಎನ್ನುವ ಕುರಿತೇ ಭರ್ಜರಿ ಚರ್ಚೆಯಾಗುತ್ತಿದೆ. ಈ ನಡುವೆ ಸಂಸದ ಸಂಗಣ್ಣ ಕರಡಿ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿಯೇ ಅಧಿಕ ಸುತ್ತಾಟ ನಡೆಸುತ್ತಿದ್ದಾರೆ. ಪಕ್ಷ ಅವಕಾಶ ನೀಡಿದರೆ ಸ್ಪರ್ಧೆ ಮಾಡುವುದಾಗಿಯೂ ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಹೀಗಾಗಿ, ಹಾಲಿ ಸಂಸದರನ್ನು ಅಖಾಡಕ್ಕೆ ಇಳಿಸುವುದೇ ಎನ್ನುವುದು ಇನ್ನೂ ನಿಗೂಢ ರಹಸ್ಯದಂತೆ ಇದೆ.
ಈ ನಡುವೆ ಕಳೆದ ಬಾರಿ ಟಿಕೆಟ್ ಘೋಷಣೆಯಾಗಿ, ಇನ್ನೇನು ನಾಮಪತ್ರ ಸಲ್ಲಿಸಬೇಕಿದ್ದ ಸಿ.ವಿ. ಚಂದ್ರಶೇಖರ ಕೊನೆ ಗಳಿಗೆಯಲ್ಲಾದ ಬೆಳವಣಿಗೆಯಿಂದ ಹಿಂದೆ ಸರಿಯುವಂತಾಯಿತು. ಈ ಬಾರಿ ಕಣಕ್ಕೆ ಇಳಿಯಲು ಸನ್ನದ್ಧರಾಗಿದ್ದಾರೆ. ಆದರೆ, ಪಕ್ಷದ ನಿರ್ದೇಶನಕ್ಕಾಗಿ ಕಾಯುತ್ತಿದ್ದಾರೆ. ಕ್ಷೇತ್ರದಾದ್ಯಂತ ಸುತ್ತಾಡುತ್ತಿದ್ದಾರೆ. ಟಿಕೆಟ್ ಸಿಗುತ್ತದೆ ಎನ್ನುವ ವಿಶ್ವಾಸದಲ್ಲಿದ್ದಾರೆ. ಈ ನಡುವೆ ಅಪ್ಪನಿಗೆ ಟಿಕೆಟ್ ನಿರಾಕರಿಸಿದರೆ ಮತ್ತೊಮ್ಮೆ ಅಖಾಡಕ್ಕೆ ಇಳಿಯುವ ದಿಸೆಯಲ್ಲಿಯೂ ಅಮರೇಶ ಕರಡಿ ಸನ್ನದ್ಧರಾಗಿದ್ದಾರೆ. ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಪಾಟೀಲ್ ಹೆಸರೂ ಚಾಲ್ತಿಯಲ್ಲಿದೆ. ಕೆ. ಬಸವರಾಜ, ಶಂಭುಲಿಂಗನಗೌಡ ಹಲಿಗೇರಿ, ಬಸವರಾಜ ಪುರದ, ಚಂದ್ರು ಹಲಿಗೇರಿ, ಚಂದ್ರು ಕವಲೂರು ಸೇರಿದಂತೆ ಹತ್ತು ಹಲವು ಹೆಸರು ಮುಂಚೂಣಿಯಲ್ಲಿವೆ.
ಜೆಡಿಎಸ್ ಸಿದ್ಧತೆ: ಈ ನಡುವೆ ಜೆಡಿಎಸ್ ವರ್ಷ ಮೊದಲೇ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ತನ್ನ ಹುರಿಯಾಳು ಘೋಷಣೆ ಮಾಡಿದೆ. ಜೆಡಿಎಸ್ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಕೊಪ್ಪಳ ಜಿಲ್ಲಾಧ್ಯಕ್ಷ ವೀರೇಶ ಮಹಾಂತಯ್ಯನಮಠ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದೆ. ಆದರೂ ಜೆಡಿಎಸ್ ಪಕ್ಷದಿಂದ ಕೊನೆಗಳಿಗೆಯಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇಲ್ಲದಿಲ್ಲ. ಬಿಜೆಪಿಯಲ್ಲಿ ಟಿಕೆಟ್ ಕೈ ತಪ್ಪಿದವರು ಜೆಡಿಎಸ್‌ನಿಂದ ಸ್ಪರ್ಧೆ ಮಾಡುತ್ತಾರೆ ಎನ್ನುವ ಮಾತು ಬಲವಾಗಿ ಚರ್ಚೆಯಾಗುತ್ತಿದೆ. ಹಾಲಿ ಸಂಸದ ಸಂಗಣ್ಣ ಕರಡಿ ಜೆಡಿಎಸ್ ಪಕ್ಷದಿಂದ ಸ್ಪರ್ಧೆ ಮಾಡುವುದಕ್ಕೆ ನನಗೇನು ಹುಚ್ಚು ಹಿಡಿದಿದೆಯಾ ಎಂದು ಪ್ರಶ್ನೆ ಮಾಡಿದ್ದರೂ ಅವರು ಹೆಸರು ಜೆಡಿಎಸ್ ಪಕ್ಷದಿಂದ ಕೇಳಿಬರುತ್ತಿದೆ ಎನ್ನುವ ಮಾತು ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿಯೇ ವೈರಲ್ ಆಗುತ್ತಿದೆ.
ವಿಚಿತ್ರ ಬೆಳವಣಿಗೆಗಳು
1) ಬಿಜೆಪಿಯ ಸಿ.ವಿ. ಚಂದ್ರಶೇಖರ ಅವರ ಪುತ್ರನಿಗೆ ಮಗಳನ್ನು ಕೊಟ್ಟು, ಹೆಗಲು ಕೊಡಲು ಮುಂದಾಗಿರುವ ಸುರೇಶ ಭೂಮರಡ್ಡಿ ಅವರು ಸಿ.ವಿ. ಚಂದ್ರಶೇಖರ ಅವರಿಗೆ ಟಿಕೆಟ್ ತಪ್ಪಿದರೆ ಜೆಡಿಎಸ್‌ನಿಂದ ಅಖಾಡಕ್ಕೆ ಇಳಿಯುತ್ತಾರೆ ಎನ್ನುವ ಗುಮಾನಿಯೂ ಇದೆ.
2) ಬಿಜೆಪಿಯಿಂದ ಶಾಸಕರಾಗುವ ಬಯಕೆ ಹೊಂದಿರುವ ಸಂಸದ ಸಂಗಣ್ಣ ಕರಡಿ ಟಿಕೆಟ್ ತಪ್ಪಿದರೆ ಜೆಡಿಎಸ್‌ನಿಂದ ಅಥವಾ ಪಕ್ಷೇತರರಾಗಿ ಸ್ಪರ್ಧೆ ಮಾಡುತ್ತಾರೆ ಎನ್ನುವುದು ಗುಟ್ಟಾಗಿ ಉಳಿಯದ ಚರ್ಚೆ.
3) ಉದ್ಯಮಿ ವೀರನಗೌಡ ಅವರು ಸ್ಪರ್ಧೆ ಮಾಡುತ್ತಾರೆ ಎನ್ನುವ ಚರ್ಚೆಯೂ ಇದೆ. ಬಿಜೆಪಿ ಅಥವಾ ಕಾಂಗ್ರೆಸ್ ಪಕ್ಷವಾ? ಇಲ್ಲ, ಜೆಡಿಎಸ್ ಅಥವಾ ಪಕ್ಷೇತರ ಅಭ್ಯರ್ಥಿಯಾಗುತ್ತಾರೆ ಎನ್ನುವ ಗುಸು ಗುಸು ಇದೆ.
4) ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿಯೂ ಗಣಿ ಉದ್ಯಮಿ ಜನಾರ್ದನ ರೆಡ್ಡಿ ಹೆಸರು ಕೇಳಿ ಬರುತ್ತಿದೆಯಾದರೂ ಅದಿನ್ನು ಅಷ್ಟಾಗಿ ಚಾಲ್ತಿಯಲ್ಲಿಲ್ಲ. ಅವರ ಪತ್ನಿಯನ್ನಾದರೂ ಕೊಪ್ಪಳ ಅಥವಾ ಕೊಪ್ಪಳ ಜಿಲ್ಲೆಯಿಂದ ಅಖಾಡಕ್ಕೆ ಇಳಿಸುತ್ತಾರೆ ಎನ್ನುವುದು ವದಂತಿ.
5) ಇದೆಲ್ಲಕ್ಕಿಂತ ವಿಶೇಷ ಬೆಳವಣಿಗೆ ಎಂದರೇ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೊನೆಗಳಿಗೆಯಲ್ಲಿ ಕೊಪ್ಪಳ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎನ್ನುವ ಕುರಿತು ಚರ್ಚೆಯಾಗುತ್ತಿದೆ. ಈಗಾಗಲೇ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅನೇಕ ನಾಯಕರು ಖುದ್ದು ಅವರನ್ನು ಭೇಟಿಯಾಗಿ ಆಹ್ವಾನ ನೀಡಿದ್ದಾರೆ. ಹಾಲಿ ಶಾಸಕ ರಾಘವೇಂದ್ರ ಹಿಟ್ನಾಳ ಕ್ಷೇತ್ರ ತ್ಯಜಿಸುವುದಾಗಿ ಹೇಳಿದ್ದಾರೆ. ಹೀಗಾಗಿ ಈ ಹೆಸರು ಕೊನೆ ಗಳಿಗೆಯವರೆಗೂ ಇದ್ದೇ ಇರುತ್ತದೆ. ಹಾಗೊಂದು ವೇಳೆ ಸಿದ್ದರಾಮಯ್ಯ ಕೊಪ್ಪಳದಿಂದ ಸ್ಪರ್ಧೆ ಮಾಡಿದ್ದೇ ಆದರೆ ಭಾರಿ ಬೆಳವಣಿಗೆಗಳು ಆಗಲಿವೆ. ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳ ಹೆಸರು ಬದಲಾಗಬಹುದು.