ಕೊಪ್ಪಳದ ಸಚಿವರ ಹುಟ್ಟುಹಬ್ಬದ ಕ್ರೀಡಾಕೂಟಕ್ಕೆ ಸರ್ಕಾರಿ ಶಿಕ್ಷಕರ ನಿಯೋಜನೆ?

By Sathish Kumar KH  |  First Published Nov 26, 2022, 2:15 PM IST

ಸಚಿವ ಹಾಲಪ್ಪ ಬಸಪ್ಪ ಆಚಾರ್ ಅವರ ಅಭಿಮಾನಿಗಳಿಂದ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನಲ್ಲಿ ನ.26 ರಿಂದ ನ.27ರವರೆಗೆ  ಆಯೋಜಿಸಲಾಗಿದ್ದ 'ಗ್ರಾಮೀಣ ಹಬ್ಬ' ಕ್ರೀಡಾಕೂಟಕ್ಕೆ ದೈಹಿಕ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಜರಾಗುವಂತೆ ನಿಯೋಜನೆ ಸಚಿವರ ಅಳಿಯ ಬಸವರಾಜ್‌ ಗೌರಾ ಸೂಚಿಸಿದ್ದರು. ಆದರೆ, ಖಾಸಗಿ ಕಾರ್ಯಕ್ರಮಕ್ಕೆ ಸರ್ಕಾರಿ ಶಿಕ್ಷಕರ ಬಳಕೆಗೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ನಿಯೋಜನೆ ರದ್ದುಪಡಿಸಲಾಗಿದೆ.


ಕೊಪ್ಪಳ (ನ.26): ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಬಸಪ್ಪ ಆಚಾರ್ ಅವರ ಅಭಿಮಾನಿಗಳಿಂದ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನಲ್ಲಿ ನ.26 ರಿಂದ ನ.27ರವರೆಗೆ  ಆಯೋಜಿಸಲಾಗಿದ್ದ 'ಗ್ರಾಮೀಣ ಹಬ್ಬ' ಕ್ರೀಡಾಕೂಟಕ್ಕೆ ದೈಹಿಕ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಜರಾಗುವಂತೆ ನಿಯೋಜನೆ ಸಚಿವರ ಅಳಿಯ ಬಸವರಾಜ್‌ ಗೌರಾ ಸಭೆ ನಡೆಸಿ ಸೂಚಿಸಿದ್ದರು. ಆದರೆ, ಖಾಸಗಿ ಕಾರ್ಯಕ್ರಮಕ್ಕೆ ಸರ್ಕಾರಿ ಶಿಕ್ಷಕರ ಬಳಕೆಗೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ರಾತ್ರೋ ರಾತ್ರಿ ಶಿಕ್ಷಕರ ನಿಯೋಜನೆ ರದ್ದುಪಡಿಸಲಾಗಿದೆ.

ರಾಜ್ಯದಲ್ಲಿ ಜನಪ್ರತಿನಿಧಿಗಳು ಸರ್ಕಾರಿ ಅಧಿಕಾರಿಗಳನ್ನು ತಮ್ಮ ವೈಯಕ್ತಿಕ ಕಾರ್ಯಕ್ರಮಗಳು ಹಾಗೂ ಕಾರ್ಯಕ್ಕೆ ಬಳಸಿಕೊಳ್ಳುವುದು ಹೊಸತೇನಲ್ಲ. ಇತ್ತೀಚಿನ ದಿನಗಳಲ್ಲಿ ಜನಪ್ರತಿನಿಧಿಗಳು ಸರ್ಕಾರಿ ಅಧಿಕಾರಿಗಳನ್ನು ವೈಯಕ್ತಿಕ ಕಾರ್ಯಕ್ರಮಕ್ಕೆ ಬಳಸಿಕೊಳ್ಳುವ ಘಟನೆಗಳಿಗೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಇಂತಹ ಘಟನೆಗಳು ಕಡಿಮೆ ಆಗುತ್ತಿವೆ. ಈಗ ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವ ಹಾಲಪ್ಪ ಬಸಪ್ಪ ಆಚಾರ್‍‌ ಅವರ ಜನ್ಮದಿನಾಚರಣೆ ಅಂಗವಾಗಿ, ಅವರ ಅಭಿಮಾನಿಗಳು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನಲ್ಲಿ ಮೂರು ದಿನಗಳ ಗ್ರಾಮೀಣ ಹಬ್ಬ ಆಯೋಜನೆ ಮಾಡಿದ್ದರು. ಪುರುಷರಿಗೆ ಕಬ್ಬಡ್ಡಿ ಮತ್ತು ಮಹಿಳೆಯರಿಗೆ ಖೊ ಖೋ ಸೇರಿ ವಿವಿಧ ಕ್ರೀಡೆಗಳನ್ನು ಆಯೋಜನೆ ಮಾಡಲಾಗುತ್ತಿದ್ದು, ಇದಕ್ಕೆ ಯಲಬುರ್ಗಾ ತಾಲೂಕಿನ ಎಲ್ಲ ಸರ್ಕಾರಿ ಶಾಲೆಯ ದೈಹಿಕ ಶಿಕ್ಷಕರನ್ನು ನಿಯೋಜನೆ ಮಾಡುವಂತೆ ಸೂಚಿಸಲಾಗಿತ್ತು.

Latest Videos

undefined

ಸಚಿವರ ಅಳಿಯನಿಂದ ಸಭೆ: ಇನ್ನು ಸಚಿವ ಹಾಲಪ್ಪ ಬಸಪ್ಪ ಆಚಾರ್ ಅವರ ಅಳಿಯ ಬಸವರಾಜ್‌ ಗೌರಾ ಅವರು ಶಿಕ್ಷಣ ಇಲಾಖೆಯ ಡಿಡಿಪಿಐ ಮತ್ತು ಬಿಇಒ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿನ ದೈಹಿಕ ಶಿಕ್ಷಕರನ್ನು ಕ್ರೀಡಾಕೂಟಕ್ಕೆ ನಿಯೋಜನೆ ಮಾಡುವಂತೆ ಸಭೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ನ.೨೪ರಂದು ಶಾಲೆಯ ಅವಧಿಯ ನಂತರ ದೈಹಿಕ ಶಿಕ್ಷರನ್ನು ಬಿಡುಗಡೆ ಮಾಡುವಂತೆ ಸೂಚಿಸಲಾಗಿತ್ತು. ನ.25ರಂದು ಪೂರ್ವ ಸಿದ್ಧತೆ ಕಾರ್ಯಗಳು ಮತ್ತು ನ.26 ಮತ್ತು 26 ರಂದು ಕ್ರೀಡಾಕೂಟ ನಡೆಸಿಕೊಡಲು ದೈಹಿಕ ಶಿಕ್ಷಕರು ಗ್ರಾಮೀಣ ಹಬ್ಬ ಕ್ರೀಡಾಕೂಟದಲ್ಲಿ ಭಾಗವಹಿಸಬೇಕಿತ್ತು. ಈ ವೇಳೆ ಸ್ಥಳೀಯ ವಿದ್ಯಾರ್ಥಿಗಳನ್ನು ಕೂಡ ಕ್ರೀಡಾಕೂಟದಲ್ಲಿ ಭಾಗವಹಿಸಲು ಬಿಡುಗಡೆ ಮಾಡುವಂತೆಯೂ ಸಚಿವರ ಅಳಿಯನ ಕಡೆಯಿಂದ ಸೂಚನೆ ನೀಡಲಾಗಿತ್ತು.

ಸ್ಥಳೀಯ ವಿರೋಧದ ಹಿನ್ನೆಲೆ ಆದೇಶ ರದ್ದು: ಸಚಿವರ ವೈಯಕ್ತಿಕ ಕಾರ್ಯಕ್ರಮವಾದ ಗ್ರಾಮೀಣ ಕ್ರೀಡಾಕೂಟಕ್ಕೆ ಸರ್ಕಾರಿ ಶಾಲೆಯ ಶಿಕ್ಷಕರನ್ನು ಬಳಸಿಕೊಳ್ಳುವ ಶಿಕ್ಷಣ ಇಲಾಖೆಯ ನಿರ್ಧಾರಕ್ಕೆ ಸ್ಥಳೀಯರಿಂದ ಭಾರಿ ಪ್ರಮಾಣದಲ್ಲಿ ವಿರೋಧ ವ್ಯಕ್ತವಾಗಿತ್ತು. ಈ ವಿಚಾರ  ಬೇರೆಯ ಹಂತಕ್ಕೆ ತಲುಪಲಿದೆ ಎಂಬ ಭಯದಿಂದ ತಾಲೂಕು ಶಿಕ್ಷಣ ಇಲಾಖೆ ಅಧಿಕಾರಿಯಿಂದ ಶಿಕ್ಷಕರನ್ನು ಗ್ರಾಮೀಣ ಕ್ರೀಡಾಕೂಟಕ್ಕೆ ಕಳುಹಿಸದಿರಲು ನಿರ್ಧಾರ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಕ್ರೀಡಾಕೂಟದ ಹಿಂದಿನ ದಿನ ನ.೨೫ರ ರಾತ್ರಿ ಎಲ್ಲ ದೈಹಿಕ ಶಿಕ್ಷಕರ ನಿಯೋಜನೆ ಆದೇಶವನ್ನು ಏಕಾಏಕಿ ಹಿಂಪಡೆಯಲಾಗಿದೆ. 
 

click me!