ಕುಷ್ಟಗಿ: ಕುಸಿದ ಬೆಲೆ, ರೈತರ ಕಣ್ಣಲ್ಲಿ ಕಣ್ಣೀರು ತರಿಸುತ್ತಿರುವ ಈರುಳ್ಳಿ!

By Web DeskFirst Published Oct 27, 2019, 8:00 AM IST
Highlights

ಹೊಲದಲ್ಲೇ ಕೊಳೆಯುತ್ತಿರುವ ಈರುಳ್ಳಿ| ಅಧಿಕ ಮಳೆ, ದರವೂ ಕುಸಿತ-ರೈತರಿಗೆ ಆಘಾತ| ಈರುಳ್ಳಿ ಖರೀದಿಗೆ ವ್ಯಾಪಾರಸ್ಥರ ಹಿಂದೇಟು|

ಅನಿಲ ಎಸ್‌ ಆಲಮೇಲ

ಕುಷ್ಟಗಿ(ಅ.27): ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ದಿಢೀರ್‌ ಕುಸಿತ, ಅಧಿಕ ಮಳೆ, ವಿದೇಶಿ ರಫ್ತು ಸ್ಥಗಿತ ಈರುಳ್ಳಿ ಬೆಳೆಗಾರರಿಗೆ ಆಘಾತ ಉಂಟುಮಾಡಿದೆ. ಸಂಭ್ರಮದಿಂದ ದೀಪಾವಳಿ ಆಚರಿಸಬೇಕಿದ್ದ ರೈತನ ಕಣ್ಣಲ್ಲಿ ನೀರು ಬರುವಂತಾಗಿದೆ.

ಕಳೆದ ಕೆಲವು ದಿನಗಳ ಹಿಂದೆ ಮಾರುಕಟ್ಟೆಯಲ್ಲಿ ಈರುಳ್ಳಿಗೆ ಉತ್ತಮ ಬೆಲೆ ಇರುವುದರಿಂದ ತಾಲೂಕಿನ ಅಲ್ಲಲ್ಲಿ ಕೆಲ ರೈತರು ಈರುಳ್ಳಿ ಬೆಳೆಯ ಕಡೆಗೆ ಹೆಚ್ಚಿನ ಗಮನ ಹರಿಸಿದ್ದರು. ಆದರೆ ಇತ್ತೀಚೆಗೆ ಮಾರುಕಟ್ಟೆಯಲ್ಲಿ ದಿಢೀರ್‌ ಬೆಲೆ ಕುಸಿತ ಒಂದು ಕಡೆಯಾದರೆ ಇನ್ನೊಂದು ಕಡೆಗೆ ವಿದೇಶಿ ರಫ್ತು ಸಹ ನಿಂತು ಹೋಗಿದೆ. ಜತೆಗೆ ಅಧಿಕ ಮಳೆಯಾಗಿದ್ದರಿಂದ ಹೊಲದಲ್ಲಿದ್ದ ಈರುಳ್ಳಿ ಮನೆ ಸೇರದಂತಾಗಿದೆ ಎಂದು ಈರುಳ್ಳಿ ಬೆಳೆದ ರೈತರಾದ ಪರಸಪ್ಪ ಕತ್ತೆ, ಮಲ್ಲೇಶ ಗೌಡ ಪಾಟೀಲ, ಶರಣಪ್ಪ ಸೇರಿದಂತೆ ಇತರರು ತಮ್ಮ ಅಳಲು ತೋಡಿಕೊಂಡರು.

ನೆಲಕಚ್ಚಿದ ಬೆಲೆ:

ಈ ಸಮಯದಲ್ಲಿ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕ್ವಿಂಟಲ್‌ಗೆ 3 ಸಾವಿರದಿಂದ 3,500 ವರೆಗೆ ಇರಬೇಕಿತ್ತು. ಆದರೆ ಮಳೆಯ ಅವಾಂತರದಿಂದಾಗಿ ದರ ಕುಸಿದಿದೆ. ಸದ್ಯ ಮಾರುಕಟ್ಟೆಯಲ್ಲಿ ಕ್ವಿಂಟಲ್‌ ಈರುಳ್ಳಿ ಬೆಲೆ 1 ಸಾವಿರದಿಂದ  1500 ವರೆಗೆ ಇಳಿದಿದೆ. ಕೆಲವು ದಿನಗಳ ಹಿಂದೆ ಮಾರುಕಟ್ಟೆಯಲ್ಲಿ ಉತ್ತಮ ದರವಿದ್ದಿದ್ದರಿಂದ ರೈತರು ಈರುಳ್ಳಿ ಕಿತ್ತಿದ್ದರು. ತಮ್ಮ ಜಮೀನಿನಲ್ಲಿಯೇ ರಾಶಿ ಹಾಕಿದ್ದರು. ಆದರೆ ಅದೇ ಸಂದರ್ಭದಲ್ಲಿ ಭಾರಿ ಮಳೆಯೂ ಸುರಿಯಿತು. ಹೀಗಾಗಿ ಕಿತ್ತಿದ್ದ ಈರುಳ್ಳಿ ಹೊಲದಲ್ಲೇ ಕೊಳೆತು ಹೋಗಿದೆ.

12 ಎಕರೆ ಹಾನಿ:

ತಾಲೂಕಿನ ಮದ್ಲಗಟ್ಟಿಬಳಿ ಇರುವ ರೈತ ಪರಸಪ್ಪ ಕತ್ತೆ ಅವರಿಗೆ ಸೇರಿದ 12 ಎಕರೆ ಜಮೀನಿನಲ್ಲಿ ಸುಮಾರು 8 ರಿಂದ 10 ಲಕ್ಷದಷ್ಟು ಖರ್ಚು ಮಾಡಿ ನಾಟಿ ಮಾಡಿದ್ದ ಈರುಳ್ಳಿ ಬೆಳೆ ಸಂಪೂರ್ಣ ನಾಶವಾಗಿದೆ. ಇದರಂತೆ ತಾಲೂಕಿನ ಮುದೇನೂರ, ರಾಮತ್ನಾಳ, ತಾವರಗೇರಾ ಭಾಗಗಳಲ್ಲಿರುವ ಈರುಳ್ಳಿ ಬೆಳೆಗಾರರ ಪರಿಸ್ಥಿತಿಯೂ ಅದೇ ರೀತಿಯಾಗಿದೆ.

ವಿದೇಶಿ ರಫ್ತು ಸ್ಥಗಿತ:

ಈರುಳ್ಳಿ ಬೆಲೆ ವಿಪರೀತ ಏರಿದ ಹಿನ್ನೆಲೆಯಲ್ಲಿ ರಫ್ತಿಗೆ ನಿರ್ಬಂಧ ಹೇರಲಾಯಿತು. ಹೀಗಾಗಿ ಏಕಾಏಕಿ ಈರುಳ್ಳಿಗೆ ಬೇಡಿಕೆಯೂ ಕಡಿಮೆಯಾಯಿತು. ಇಲ್ಲಿಯ ರೈತರು ಬೆಂಗಳೂರು, ಕೋಲ್ಕತಾಕ್ಕೆ ಈರುಳ್ಳಿ ಕಳುಹಿಸಿಕೊಡುತ್ತಿದ್ದರು. ಬೇಡಿಕೆ ಇಲ್ಲದ ಹಿನ್ನೆಲೆಯಲ್ಲಿ ಅದೂ ಸಾಧ್ಯವಾಗಲಿಲ್ಲ. ಹೀಗಾಗಿ ಈರುಳ್ಳಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕುವಂತಾಯಿತು.

ಕೇಳುವವರಿಲ್ಲ:

ಕಷ್ಟುಪಟ್ಟು ಅಷ್ಟು-ಇಷ್ಟು ಬೆಳೆದ ಈರುಳ್ಳಿಗೆ ಮಾರುಕಟ್ಟೆಕಲ್ಪಿಸಲು ರೈತರು ಹರಸಾಹಸ ಮಾಡುತ್ತಿದ್ದಾರೆ. ಎಷ್ಟಕ್ಕಾದರೂ ಮಾರಾಟವಾಗಲಿ ಎಂದು ಸಂತೆ ಮಾರುಕಟ್ಟೆಗೆ ತಂದರೆ ಈರುಳ್ಳಿ ಖರೀದಿಸಲು ವ್ಯಾಪಾರಸ್ಥರು ಹಿಂದೇಟು ಹಾಕುತ್ತಿದ್ದಾರೆ. ವಾಹನ ಬಾಡಿಗೆ ಖರ್ಚು ಸಹ ರೈತರೇ ಭರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಕೆಲವರು ಸಂತೆ ಮಾರುಕಟ್ಟೆಗೆ ತಂದ ಈರುಳ್ಳಿಯಲ್ಲಿ ಅಲ್ಲಿಯೇ ಬಿಸಾಕಿ ಹೋಗಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಪ್ರತಿವರ್ಷದಂತೆ ಉತ್ತಮ ನಿರೀಕ್ಷೆಯಿಂದಾಗಿ ನನ್ನ 12 ಎಕರೆ ಜಮೀನಿನ ಪೂರ್ತಿಯಾಗಿ ಈರುಳ್ಳಿ ಬೆಳೆಯನ್ನೇ ನಾಟಿ ಮಾಡಿದ್ದೆ. ಆದರೆ ಅಧಿಕ ಮಳೆಯಿಂದಾಗಿ ಜಮೀನಿನಲ್ಲಿ ನಾಟಿ ಮಾಡಿದ್ದ ಈರುಳ್ಳಿ ಸದ್ಯ ನೀರಿನಲ್ಲಿಯೇ ಕೊಳೆತು ಹೋಗಿರುವುದರಿಂದ ಕಣ್ಣಲ್ಲಿ ನೀರು ಬರುವಂತಾಗಿದೆ ಎಂದು ಈರುಳ್ಳಿ ಬೆಳೆಗಾರರಾದ ಪರಸಪ್ಪ ಕತ್ತೆ, ಹನಮಂತಪ್ಪ ಅವರು ಹೇಳಿದ್ದಾರೆ. 

ಕಳೆದ ಬಾರಿಗಿಂತ ಈ ಬಾರಿ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕುಸಿತದಿಂದಾಗಿ ರೈತರು ತೀವ್ರ ಸಂಕಷ್ಟ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಜತೆಗೆ ನಮಗೂ ವ್ಯಾಪಾರ ಮಾಡುವುದಕ್ಕೆ ತೀವ್ರ ಕಷ್ಟವಾಗುತ್ತಿದೆ ಎಂದು ತರಕಾರಿ ವ್ಯಾಪಾರಿ ಮುತ್ತಣ್ಣ ತೆಗ್ಗಿನಮನಿ ಅವರು ತಿಳಿಸಿದ್ದಾರೆ. 
 

click me!