
ಗಂಗಾವತಿ[ಅ.25]: ತುಂಗಭದ್ರಾ ನದಿಗೆ ಪ್ರವಾಹ ಬಂದ ಸಂದರ್ಭದಲ್ಲಿ ತಾಲೂಕಿನ ವಿರೂಪಾಪುರಗಡ್ಡೆಯ ಬಳಿ ನದಿದಂಡೆಯಲ್ಲಿರುವ ಶಾಲೆಯ ಮಕ್ಕಳಿಗೆ ಬಯಲಲ್ಲೆ ಪಾಠ ಮಾಡಬೇಕಾದ ಅನಿವಾರ್ಯತೆಯನ್ನು ಗಮನಿಸಿದ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಕ್ಕಳನ್ನು ‘ಮಾತಾ ಆಶ್ರಮ’ಕ್ಕೆ ಸ್ಥಳಾಂತರಿಸಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
‘ಪ್ರವಾಹ ಬಂದರೆ ಈ ಮಕ್ಕಳಿಗೆ ಬಯಲಲ್ಲೇಪಾಠ’ ಎಂಬ ಶೀರ್ಷಿಕೆಯಡಿ ಅ.23 ರಂದು ‘ಕನ್ನಡಪ್ರಭ’ದಲ್ಲಿ ಪ್ರಕಟವಾದ ವರದಿಗೆ ಸ್ಪಂದಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ ಅವರು, ನದಿ ನೀರಿನ ಪ್ರಮಾಣ ಇಳಿಮುಖವಾಗುವವರೆಗೆ ಸಮೀಪದಲ್ಲಿರುವ ಮಾತಾ ಆಶ್ರಮದಲ್ಲಿರುವ ಒಂದುಕೊಠಡಿಯಲ್ಲಿ ಮಕ್ಕಳಿಗೆ ಪಾಠ ಹೇಳುವುದಕ್ಕಾಗಿ ತಾತ್ಕಾಲಿಕ ವ್ಯವಸ್ಥೆ ಮಾಡಿದ್ದಾರೆ. ವಿರೂಪಾಪುರ ಗಡ್ಡೆಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 5 ನೇ ತರಗತಿಯವರಿಗೆ ಇದ್ದು, ಸುಮಾರು 40 ವಿದ್ಯಾರ್ಥಿಗಳು ಶಾಲೆಗೆಬರುತ್ತಿದ್ದರು. ಇಬ್ಬರು ಶಿಕ್ಷಕರು ಇರುವ ಈ ಶಾಲೆ ತುಂಗಭದ್ರಾ ನದಿ ತೀರದಲ್ಲಿಯೇ ಇದೆ. ಇದರಿಂದಾಗಿ ನದಿಗೆ ಅಧಿಕ ಪ್ರಮಾಣದದಲ್ಲಿ ನೀರು ಬಂದಿದ್ದರಿಂದ 1 ಕಿಮೀ ದೂರದಲ್ಲಿರುವ ರಾಘವೇಂದ್ರ ಕಾಲನಿಯಲ್ಲಿಮರದ ಕೆಳಗೆ ವಿದ್ಯಾರ್ಥಿಗಳಿಗೆ ಪಾಠ ಹೇಳಲಾಗುತ್ತಿತ್ತು. ಈ ಕುರಿತು ಕನ್ನಡಪ್ರಭ ಸಮಗ್ರವರದಿ ಮಾಡಿದ್ದರಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಭೇಟಿ ನೀಡಿ ಪರ್ಯಾಯ ವ್ಯವಸ್ಥೆ ಮಾಡಿದ್ದಾರೆ.
ಬಿಸಿಯೂಟ ವ್ಯವಸ್ಥೆ:
ವಿರೂಪಾಪುರಗಡ್ಡೆಯ ರಾಘವೇಂದ್ರ ಕಾಲನಿಯಲ್ಲಿ ಮರದ ಕೆಳಗೆ ಪಾಠ ಹೇಳುತ್ತಿರುವ ಶಿಕ್ಷಕರ ಬಳಿ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ ಅವರು ತೆರಳಿ ಮಕ್ಕಳ ಯೋಗಕ್ಷೇಮ ಮತ್ತು ಮಕ್ಕಳ ಶಿಕ್ಷಣದ ಬಗ್ಗೆ ಅರಿತುಕೊಂಡರು. ಮಕ್ಕಳಿಗೆ ಬಿಸಿಯೂಟ ಇಲ್ಲದಿರುವುದರಿಂದ ಸಣ್ಣಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಕ್ಷರ ದಾಸೋಹ ಯೋಜನೆಯ ಬಿಸಿಯೂಟವನ್ನು ತರಿಸಿಕೊಂಡು ಮಕ್ಕಳಿಗೆ ವ್ಯವಸ್ಥೆ ಮಾಡಿದ್ದಾರೆ. ಅಲ್ಲದೇ ಮಕ್ಕಳಿಗೆ ಕ್ಷೀರ ಭಾಗ್ಯ ಯೋಜನೆಯಡಿಯಲ್ಲಿ ಹಾಲು ವಿತರಿಸಿದ್ದಾರೆ.
ಗಂಗಾವತಿ: ಪ್ರವಾಹ ಬಂದರೆ ಇಲ್ಲಿನ ಮಕ್ಕಳಿಗೆ ಬಯಲಲ್ಲೇ ಪಾಠ
ನೀರು ಇಳಿದ ಬಳಿಕ ಶಾಲೆ ಪ್ರಾರಂಭ:
ವಿರೂಪಾಪುರಗಡ್ಡೆಯ ನದಿ ತೀರದಲ್ಲಿರುವ ಶಾಲೆಯ ಸುತ್ತಮತ್ತಲು ನೀರು ನುಗ್ಗಿದ್ದು, ನೀರಿನ ಪ್ರಮಾಣ ಇಳಿಮುಖವಾದ ನಂತರ ಸ್ವಚ್ಛಗೊಳಿಸಿ ಮತ್ತೆ ಶಾಲೆ ಪ್ರಾರಂಭಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೂಚನೆ ನೀಡಿದ್ದಾರೆ. ಶಾಲೆಗೆ ನೀರು ನುಗ್ಗಿದ್ದರಿಂದ ಶಾಲೆ ಸಂಪೂರ್ಣವಾಗಿ ಮಣ್ಣು ಮತ್ತು ನೀರಿನ ಪಾಚಿನಿಂದ ಕೂಡಿರುತ್ತದೆ. ಸ್ವಚ್ಛತೆಗೊಳಿಸಿ ಮೇಲಧಿಕಾರಿಗಳ ಅನುಮತಿ ಪಡೆದು ಶಾಲೆ ಪ್ರಾರಂಭಿಸಲು ಸೂಚಿಸಿದ್ದಾರೆ. (ಸಾಂದರ್ಭಿಕ ಚಿತ್ರ)