
ಬೆಂಗಳೂರು (ಏ.16): ಯೋಗೇಶ್ ಗೌಡ ಕೊಲೆ ಪ್ರಕರಣದ ಸಂಬಂಧ ನಡೆದ ಹೋರಾಟದಲ್ಲಿ ಗೆದ್ದಿದ್ದೇವೆ. ಸತ್ಯದ ಪರವಾಗಿ ಧ್ವನಿ ಎತ್ತಿದವರ ಹತ್ತಿಕ್ಕುವ ಪ್ರಯತ್ನ ನಡೆದಿತ್ತು. ಆದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ ಎಂದು ಕೋರ್ಟ್ ತೋರಿಸಿದೆ ಎಂದು ಹೋರಾಟಗಾರ ಬಸವರಾಜ್ ಕೊರವರ್ ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಕಾನೂನು ಹೋರಾಟ ನಡೆಸಿದ ಬಸವರಾಜ್ ಕೊರವರ್ ತೀರ್ಪು ಪ್ರಕಟವಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ರಾಜಕೀಯ ಮತ್ತು ಹಣ ಬಲದಿಂದ ಮುಚ್ಚಿ ಹಾಕಬಹುದು ಎಂದು ಸಂಚು ರೂಪಿಸಿದವರಿಗೆ ಹಿನ್ನಡೆ ಆಗಿದೆ. ಪೊಲೀಸ್ ಅಧಿಕಾರಿಗಳು ರಾಜಕಾರಣಿಗಳ ಮಾತುಗಳನ್ನು ಕೇಳಿದರೆ ಏನಾಗುತ್ತದೆ ಎಂಬುದು ಗೊತ್ತಾಗಿದೆ. ಈ ಪ್ರಕರಣದಲ್ಲಿ ಹೋರಾಟಕ್ಕೆ ಧಾರವಾಡದಲ್ಲಿ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದಗಳು. ಕೊಲೆ ಪ್ರಕರಣಕ್ಕೆ ಸಾಮಾನ್ಯವಾಗಿ 10 ವರ್ಷ ಮೇಲ್ಪಟ್ಟ ಶಿಕ್ಷೆ ಆಗಬಹುದು. ಅದನ್ನು ಕೋರ್ಟ್ ನಿರ್ಧರಿಸುತ್ತದೆ. ಆದರೆ, ನಾವು ಜೀವಾವಧಿ ಶಿಕ್ಷೆ ಆಗಬೇಕೆಂದು ಬಯಸುತ್ತೇವೆ ಎಂದು ಹೇಳಿದರು.
ಸಿಬಿಐನ ತನಿಖಾಧಿಕಾರಿ ರಾಕೇಶ್ ರಂಜನ್, ಸಮೀವುಲ್ಲಾ, ರಮೇಶ್ ಉತ್ತಮ ಕೆಲಸ ಮಾಡಿದ್ದಾರೆ. ಸರ್ಕಾರಿ ಅಭಿಯೋಜಕರಿಗೂ ಅಭಿನಂದನೆಗಳು. ಇಷ್ಟು ವರ್ಷ ವಾದ ಮಂಡಿಸಿದ ವಕೀಲ ದೀಪಕ್ ಶೆಟ್ಟರಿಗೆ ಧನ್ಯವಾದಗಳು. ರಾಜರ ಮನಸ್ಥಿತಿ ಹೊಂದಿರುವ ವಿನಯ್ ಕುಲಕರ್ಣಿ ಹಾಗೂ ಕೆಲ ರಾಜಕೀಯ ಮುಖಂಡರಿಗೆ ಇದೊಂದು ಪಾಠವಾಗಿದೆ. ಯೋಗೇಶ್ ಗೌಡ ಮತ್ತು ಅವರ ತಾಯಿ ಆತ್ಮಕ್ಕೆ ಶಾಂತಿ ದೊರಕಿದೆ ಎಂದರು.
ಸಿಬಿಐನ ತನಿಖಾಧಿಕಾರಿ ರಾಕೇಶ್ ರಂಜನ್ ಸುಮಾರು 14 ಪ್ರಕರಣಗಳ ತನಿಖೆ ನಡೆಸಿ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸಿದ್ದು, ಇದರಲ್ಲಿ 13 ಪ್ರಕರಣದ ಅಪರಾಧಿಗಳಿಗೆ ಶಿಕ್ಷೆಯಾಗಿದೆ ಎಂದು ತಿಳಿದು ಬಂದಿದೆ.
ವಿಚಾರಣಾ ನ್ಯಾಯಾಲಯದ ಮುಂದೆ ಮಾಫಿ ಸಾಕ್ಷಿಯಾಗಿರುವ ಪ್ರಕರಣದ 17ನೇ ಆರೋಪಿಯಾಗಿರುವ ಹಾಗೂ 9ನೇ ಪ್ರಮುಖ ಸಾಕ್ಷಿಯಾಗಿರುವ ಶಿವಾನಂದ ಶ್ರೀಶೈಲ ಬಿರಾದರ್‌ನನ್ನು ವಿಚಾರಣೆಗೊಳಪಡಿಸಲು ಅನುಮತಿ ಕೋರಿ ಪ್ರಾಸಿಕ್ಯೂಷನ್ ಅರ್ಜಿ ಸಲ್ಲಿಸಬಹುದು. ಜತೆಗೆ 24ನೇ ಸಾಕ್ಷಿ ಶಿವಾನಂದ ಛಲವಾದಿ, 44ನೇ ಸಾಕ್ಷಿ ಬಾಬು ಕಟಗಿ, 54ನೇ ಸಾಕ್ಷಿ ಶಂಕರ್‌ಗೌಡ ಬಸನಗೌಡ ಪಾಟೀಲ್ ಹಾಗೂ ಇತರೆ ಸ್ವತಂತ್ರ ಸಾಕ್ಷಿಗಳು ಹಾಗೂ 1ನೇ ಸಾಕ್ಷಿ ಡಾ. ದತ್ತಾತ್ರೆಯ ಗುಡಗಂಟಿ, 32ನೇ ಸಾಕ್ಷಿ ಆನಂದ್ ಈರಪ್ಪ ಉದ್ದಣ್ಣನವರ್, 33ನೇ ಸಾಕ್ಷಿ ವಿನಾಯಕ್ ಬಿಂಜಿಯಾವರ್, 34ನೇ ಸಾಕ್ಷಿ ಮೋಹನ್ ಈಚರಪ್ಪ ಮುಳಮುತ್ತಲ್, 35ನೇ ಸಾಕ್ಷಿ ವಿವೇಕಾನಂದ ದಳವಾಯಿ ಮತ್ತು 20ನೇ ಸಾಕ್ಷಿ ನಟರಾಜ್ ಸರ್ಜಾ, 53ನೇ ಸಾಕ್ಷಿ ವಿಜಯ್ ಕುಲಕರ್ಣಿ ವಿರುದ್ಧ ಸಿಆರ್‌ಪಿಸಿ 340ರ ಅಡಿಯಲ್ಲಿ ಸುಳ್ಳು ಸಾಕ್ಷ್ಯ ಮತ್ತು ದಾಖಲೆಗಳನ್ನು ಸಲ್ಲಿಸಿದ ಆರೋಪದಡಿ ಸೆಷನ್ಸ್ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಲು ಕೋರ್ಟ್ ಆದೇಶಿಸಿದೆ. ಇದರಲ್ಲಿ ಶಿವಾನಂದ ಛಲವಾದಿ ಪೊಲೀಸ್ ಅಧಿಕಾರಿಯಾಗಿದ್ದಾರೆ.