
ಧಾರವಾಡ: ಯೋಗೇಶ್ ಗೌಡ ಕೊle ಪ್ರಕರಣ ಸಂಬಂಧ ಜಾಮೀನು ಅರ್ಜಿ ರದ್ದಾದ ಬೆನ್ನಲ್ಲೇ ಧಾರವಾಡದ ಶಿವಗಿರಿಯಲ್ಲಿರುವ ತಮ್ಮ ನಿವಾಸದಿಂದ ಅಪರಾಧಿ ವಿನಯ್ ಕುಲಕರ್ಣಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ಮನೆಯಿಂದ ಹೊರಬರುತ್ತಿದ್ದಂತೆಯೇ ನೆರೆದಿದ್ದ ಕಾರ್ಯಕರ್ತರನ್ನು ತಬ್ಬಿಕೊಂಡು ಭಾವುಕರಾದ ಅವರು, ಕಣ್ಣೀರು ಹಾಕುತ್ತಲೇ ಕೈಮುಗಿದು ಬೆಂಗಳೂರಿನತ್ತ ತೆರಳಿದ್ದಾರೆ.
ಜಾಮೀನು ರದ್ದಾದ ಸುದ್ದಿ ಹೊರಬೀಳುತ್ತಿದ್ದಂತೆ ನಿವಾಸದ ಹೊರಗೆ ಹಾಗೂ ಒಳಗೆ ಬಿರುಸಿನ ಬೆಳವಣಿಗೆಗಳು ನಡೆದವು. ಬೆಂಗಳೂರಿಗೆ ತೆರಳಲು ಸಿದ್ಧತೆಗಳು ಆರಂಭವಾದವು. ಆಪ್ತ ಸಹಾಯಕ ಮಾರುತಿ ಅವರು ಗನ್‌ಮ್ಯಾನ್‌ಗಳನ್ನು ಕರೆಸಿ ಮಾತನಾಡಿ, ನಿವಾಸದ ಎದುರು ಸಜ್ಜಾಗಿರುವಂತೆ ಸೂಚನೆ ನೀಡಿದರು. ಗನ್‌ಮ್ಯಾನ್‌ಗಳು ಬ್ಯಾಗ್ ಹಾಗೂ ಲಗೇಜ್ ಪ್ಯಾಕ್ ಮಾಡಿ ಕಾರಿನಲ್ಲಿ ಇರಿಸಿದರು. ಇದಕ್ಕೂ ಮುನ್ನ ಅಪರಾಧಿಗಳಾದ ವಿನಾಯಕ್ ಕಟಗಿ ಮತ್ತು ಸಂದೀಪ್ ಸೇರಿದಂತೆ ಕೆಲವರು ನಿವಾಸಕ್ಕೆ ಆಗಮಿಸಿ ವಿನಯ್ ಕುಲಕರ್ಣಿ ಅವರೊಂದಿಗೆ ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚಿಸಿ ತೆರಳಿದರು. ಮನೆಯೊಳಗೆ ಕುಟುಂಬಸ್ಥರು ಮತ್ತು ಕೆಲ ಆಪ್ತರೊಂದಿಗೆ ವಿನಯ್ ಕುಲಕರ್ಣಿ ಮಾತುಕತೆ ನಡೆಸಿದರು.
ಜಾಮೀನು ರದ್ದಾದ ಹಿನ್ನೆಲೆಯಲ್ಲಿ ಸುಮಾರು ಎರಡು ತಿಂಗಳ ಹಿಂದೆ ಹಕ್ಕುಪತ್ರ ವಿತರಣೆ ಸಮಾರಂಭದಲ್ಲಿ ವಿನಯ್ ಕುಲಕರ್ಣಿ ಆಡಿದ್ದ ಭಾವನಾತ್ಮಕ ಮಾತುಗಳ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. "ಅಧಿಕಾರ ಶಾಶ್ವತವಲ್ಲ, ನಾವು ಮಾಡುವ ಕೆಲಸ ಶಾಶ್ವತವಾಗಿ ಉಳಿಯುತ್ತದೆ. ಅಧಿಕಾರ ಬರುತ್ತದೆ, ಹೋಗುತ್ತದೆ. ಆದರೆ ವಿನಯ್ ಕುಲಕರ್ಣಿ ಈ ಕೆಲಸ ಮಾಡಿದ್ದಾನೆ ಎನ್ನುವ ನೆನಪು ಜನರಲ್ಲಿ ಉಳಿಯುತ್ತದೆ. ಶಾಸಕನಾಗುವುದು ದೊಡ್ಡದಲ್ಲ, ಜನರ ಕೆಲಸ ಮಾಡುವುದು ದೊಡ್ಡದು. ನಾನು ಜಿಲ್ಲೆಗೆ ಬರದೇ ಇದ್ದರೂ ನನ್ನನ್ನು ಶಾಸಕನನ್ನಾಗಿ ಆಯ್ಕೆ ಮಾಡಿದ್ದೀರಿ, ಕ್ಷೇತ್ರದ ಜನರ ಆಶೀರ್ವಾದ ನನ್ನ ಮೇಲಿದೆ. ಗ್ರಾಮೀಣ ಕ್ಷೇತ್ರದ ಅಭಿವೃದ್ಧಿ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು ಆ ಸಂದರ್ಭದಲ್ಲಿ ಹೇಳಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 21 ಮಂದಿ ಆರೋಪಿಗಳಿದ್ದರು. ಅವರಲ್ಲಿ ಇಬ್ಬರು ಮಾಫಿ ಸಾಕ್ಷಿಗಳಾಗಿದ್ದು, A-1 ಬಸವರಾಜ ಮುತ್ತಗಿ ಮತ್ತು A-17 ಶಿವಾನಂದ ಬಿರಾದಾರ ಅವರ ಹೆಸರುಗಳು ಈ ಪಟ್ಟಿಯಲ್ಲಿ ಸೇರಿವೆ. A-20 ವಾಸುದೇವ ನಾಯಕ (ಎಸಿಪಿ) ಮತ್ತು A-21 ಸೋಮಶೇಖರ್ ನೇಮಗೌಡ ಸೇರಿದಂತೆ ಇಬ್ಬರನ್ನು ಪ್ರಕರಣದಿಂದ ಖುಲಾಸೆಗೊಳಿಸಲಾಗಿತ್ತು.
ಉಳಿದ 17 ಮಂದಿಯಲ್ಲಿ A-19 ಚನ್ನಕೇಶವ ಟಿಂಗರಿಕರ್ (ಇನ್ಸ್‌ಪೆಕ್ಟರ್) ಅವರಿಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದ್ದು, ಇತರ 16 ಆರೋಪಿಗಳು ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದರು. ಈ ಪೈಕಿ ಹೈಕೋರ್ಟ್‌ನಿಂದ ಮೊದಲ ಹಂತದಲ್ಲಿ 9 ಮಂದಿಗೆ ಮತ್ತು ಎರಡನೇ ಹಂತದಲ್ಲಿ 7 ಮಂದಿಗೆ ಜಾಮೀನು ಮಂಜೂರಾಗಿತ್ತು. A-9 ಅಶ್ವತ್ಥ ಹೊರತುಪಡಿಸಿ ಇತರರಿಗೆ ಜಾಮೀನು ದೊರೆತಿತ್ತು. ಮೊದಲ ಹಂತದಲ್ಲಿ ಜಾಮೀನು ಪಡೆದಿದ್ದ ವಿನಯ್ ಕುಲಕರ್ಣಿ ಮತ್ತು ಚಂದ್ರಶೇಖರ ಇಂಡಿ ಸೇರಿದಂತೆ 9 ಮಂದಿಯ ವಿರುದ್ಧ ಸಿಬಿಐ ಹಾಗೂ ಯೋಗೇಶ್ ಗೌಡ ಸಹೋದರ ಗುರುನಾಥ ಗೌಡ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಈ ಮೇಲ್ಮನವಿಗಳ ಕುರಿತ ತೀರ್ಪು ಈಗ ಹೊರಬಿದ್ದಿದ್ದು ಜಾಮೀನು ರದ್ದಾಗಿದೆ. ಎರಡು ವಾರದೊಳಗೆ ಶರಣಾಗುವಂತೆ ಕೋರ್ಟ್ ಅಪರಾಧಿಗಳಿಗೆ ಸೂಚನೆ ನೀಡಿದೆ.