ತುಮಕೂರಿನ ರುದ್ರಭೂಮಿಯಲ್ಲಿ ಯಶೋಧಾ ಕಾರ್ಯ| ರುದ್ರಭೂಮಿಯಲ್ಲಿ 7 ವರ್ಷಗಳಿಂದ ಯಶೋಧಾ ಶವ ಸುಡುವ ಕಾರ್ಯದಲ್ಲಿ ತೊಡಗಿರುವ ಯಶೋಧಾ| ಶವ ದಹಿಸುವ ಕೆಲಸ ಮಾತ್ರ ಈಕೆಯದ್ದೇ|
ತುಮಕೂರು(ಏ.23): ಸ್ಮಶಾನದಲ್ಲಿ ಶವ ಸುಡುವ ಕಾಯಕ ಮಾಡುತ್ತಿರುವ ‘ಕನ್ನಡಪ್ರಭ’ ಅಸಮಾನ್ಯ ಕನ್ನಡಿಗ ಪ್ರಶಸ್ತಿ ಪುರಸ್ಕೃತೆ ಯಶೋಧಾ ಈಗ ಕೋವಿಡ್‌ನಿಂದ ಸಾವನ್ನಪ್ಪುತ್ತಿರುವವರಿಗೂ ಅಂತ್ಯಸಂಸ್ಕಾರ ನೆರವೇರಿಸುವ ಮೂಲಕ ಸಾರ್ಥಕ ಕೆಲಸಕ್ಕೆ ಮುಂದಾಗಿದ್ದಾರೆ.
ತುಮಕೂರಿನ ಗಾರ್ಡನ್ ಏರಿಯಾದಲ್ಲಿರುವ ರುದ್ರಭೂಮಿಯಲ್ಲಿ 7 ವರ್ಷಗಳಿಂದ ಯಶೋಧಾ ಶವ ಸುಡುವ ಕಾರ್ಯದಲ್ಲಿ ತೊಡಗಿದ್ದಾರೆ. ಕೋವಿಡ್‌ನಿಂದ ಮೃತಪಟ್ಟವರಿಗೆ ಅಂತ್ಯಸಂಸ್ಕಾರ ನೆರವೇರಿಸಲು ಟೊಂಕ ಕಟ್ಟಿರುವ ಯಶೋಧಾ ಅವರು ದಿನ ಬೆಳಗ್ಗೆ 6ರಿಂದ ರಾತ್ರಿ 10ರವರೆಗೂ ಶವ ಸುಡುವ ಕಾರ್ಯದಲ್ಲಿ ತೊಡಗಿದ್ದಾರೆ.
ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯ ಬಂದ್
25 ದಿನಗಳಿಂದ 50ಕ್ಕೂ ಹೆಚ್ಚು ಶವವನ್ನು ದಹಿಸಿದ್ದಾರೆ. ಇದರಲ್ಲಿ 25ಕ್ಕೂ ಹೆಚ್ಚು ಕೋವಿಡ್‌ನಿಂದ ಮೃತಪಟ್ಟಶವಗಳಿಗೆ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ಕೋವಿಡ್‌ನಿಂದ ಮೃತಪಟ್ಟವರನ್ನು ಆಸ್ಪತ್ರೆಯಿಂದ ನೇರವಾಗಿ ಆ್ಯಂಬುಲೆನ್ಸ್ ಮೂಲಕ ತಂದು ಸೌದೆ ಒಲೆ ಮೇಲೆ ಇಟ್ಟು ಹೋಗುತ್ತಾರೆ. ಇನ್ನು ದಹಿಸುವ ಕೆಲಸ ಮಾತ್ರ ಈಕೆಯದ್ದೇ. ಸದ್ಯ ಒಬ್ಬ ಹುಡುಗನನ್ನು ಶವ ಸುಡಲು ಸಹಾಯಕ್ಕೆ ತೆಗೆದುಕೊಂಡಿದ್ದಾರೆ. ಆತನಿಗೆ ಪಿಪಿಇ ಕಿಟ್ ಹಾಕಿಸುತ್ತಾರೆ. ಯಶೋಧಾ ಮುಖಕ್ಕೆ ಮಾಸ್ಕ್, ಶೀಲ್ಡ್ ಹಾಕಿ, ಪ್ಲಾಸ್ಟಿಕ್ ಚೀಲ ಹೊದ್ದುಕೊಂಡು ಶವ ಸುಡುವ ಕಾರ್ಯಕ್ಕೆ ಮುಂದಾಗುತ್ತಿದ್ದಾರೆ.
ಕೋವಿಡ್‌ನಿಂದ ಸತ್ತವರನ್ನು ಕೆಲ ಕುಟುಂಬಸ್ಥರು ಹೂಳುತ್ತಾರೆ. ಹೂಳುವ ಕಾರ್ಯದಲ್ಲೂ ಯಶೋಧಾ ಅವರದ್ದೇ ಉಸ್ತುವಾರಿ. ಕೋವಿಡ್‌ನಿಂದ ಮೃತಪಟ್ಟವರ ಬಗ್ಗೆ ಮಾಹಿತಿ ಬಂದ ಕೂಡಲೇ 7 ಅಡಿ ಗುಂಡಿ ತೋಡಿಸಿ ಮಣ್ಣು ಮಾಡುವ ಪ್ರಕ್ರಿಯೆಯ ಉಸ್ತುವಾರಿ ನೋಡಿಕೊಳ್ಳುತ್ತಾರೆ. ಯಶೋಧಾ ಅವರ ಗಂಡ ಗೂಳಯ್ಯ ಶವಸಂಸ್ಕಾರ ಮಾಡುವ ಕೆಲಸ ಮಾಡುತ್ತಿದ್ದರು. 7 ವರ್ಷಗಳ ಹಿಂದೆ ಹಠಾತ್ತಾಗಿ ಸಾವನ್ನಪ್ಪಿದಾಗ ಶವಕ್ಕೆ ಸಂಸ್ಕಾರ ಕಾರ್ಯದ ನೊಗವನ್ನು ಯಶೋಧಾ ಹೊತ್ತಿದ್ದಾರೆ.