43 ಕುಟುಂಬಕ್ಕೆ ಪರಿಹಾರ ತಿರಸ್ಕೃತ ಪ್ರಕರಣ|‘ಕನ್ನಡಪ್ರಭ’, ‘ಸುವರ್ಣ ನ್ಯೂಸ್’ಸರಣಿ ವರದಿಯಿಂದ ಎಚ್ಚೆತ್ತ ಜಿಲ್ಲಾಡಳಿತ ಎಲ್ಲಾ ಕುಟುಂಬಕ್ಕೂ ಪರಿಹಾರ ನೀಡಲು ತೀರ್ಮಾನ| ಪ್ರತಿ ಕುಟುಂಬಕ್ಕೆ ಜಿಲ್ಲಾಡಳಿತದಿಂದ 5 ಲಕ್ಷ ರು. ಪರಿಹಾರ|
ಆನಂದ್ ಎಂ.ಸೌದಿ
ಯಾದಗಿರಿ[ನ.29]: ಆತ್ಮಹತ್ಯೆ ಮಾಡಿಕೊಂಡಿದ್ದ ಯಾದಗಿರಿ ಜಿಲ್ಲೆಯ ಸುಮಾರು 43 ಕ್ಕೂ ಹೆಚ್ಚು ರೈತರ ಕುಟುಂಬಗಳಿಗೆ ಸರ್ಕಾರದ ಪರಿಹಾರ ತಿರಸ್ಕೃತಗೊಂಡಿತ್ತು. ಈ ಬಗ್ಗೆ ಸರಣಿ ವರದಿಗಳ ಮೂಲಕ ಜಿಲ್ಲಾಡಳಿತಕ್ಕೆ ಚುರುಕು ಮುಟ್ಟಿಸಿದ್ದ ‘ಕನ್ನಡಪ್ರಭ’ ಹಾಗೂ ‘ಸುವರ್ಣ ನ್ಯೂಸ್’ ಪ್ರಯತ್ನಕ್ಕೆ ಕೊನೆಗೂ ಫಲ ಸಿಕ್ಕಿದೆ.
undefined
ಆತ್ಮಹತ್ಯೆ ಮಾಡಿಕೊಂಡಿದ್ದ ರೈತರ ಕುಟುಂಬದ ಯಾವುದೇ ಸದಸ್ಯರ ಹೆಸರಲ್ಲಿ ಜಮೀನು ಇದ್ದರೂ ಪರವಾಗಿಲ್ಲ. ಸಾಲದ ದಾಖಲೆಗಳು ಮಾತ್ರ ಮೃತ ರೈತರ ಹೆಸರಲ್ಲಿರಬೇಕು ಅನ್ನೋ ನಿಯಮಾವಳಿ ಇತ್ತು. ಇದರಿಂದಾಗಿ ನೆರೆ ಹಾಗೂ ಬರದ ಬವಣೆಗೆ ನೊಂದು ಯಾದಗಿರಿ ಜಿಲ್ಲೆಯಲ್ಲಿ ಕಳೆದೈದು ವರ್ಷಗಳ ಅವಧಿಯಲ್ಲಿ (2014-15 ರಿಂದ 2019-20) 239 ರೈತರು ಆತ್ಮಹತ್ಯೆಗೆ ಶರಣಾಗಿದ್ದವರಲ್ಲಿ 43ಕ್ಕೂ ಹೆಚ್ಚು ರೈತರಿಗೆ ಪರಿಹಾರ ತಿರಸ್ಕೃತಗೊಂಡಿತ್ತು.
ಕನ್ನಡಪ್ರಭ, ಸುವರ್ಣ ನ್ಯೂಸ್ ದನಿ, ನೊಂದ ರೈತರಿಗೆ ಸಾಂತ್ವನದ ಹನಿ
ಇಂತಹ ರೈತ ಕುಟುಂಬಗಳ ದುಸ್ಥಿತಿ ಬಗ್ಗೆ ಆ.28 ರಂದು ‘ಕನ್ನಡಪ್ರಭ’ ಹಾಗೂ ‘ಸುವರ್ಣ ನ್ಯೂಸ್’ ವರದಿ ಪ್ರಕಟಿಸಿತ್ತು. ನಂತರ ಸೆ.4 ರಿಂದ ಸೆ.30 ರವರೆಗೆ ಪ್ರತಿಯೊಂದು ರೈತ ಕುಟುಂಬದ ಸಂಕಷ್ಟಹಾಗೂ ಮನೆ ಯಜಮಾನನ ನಂತರ ಉಳಿದ ಸದಸ್ಯರ ದಯನೀಯ ಸ್ಥಿತಿಯ ಬಗ್ಗೆ ‘ಅನ್ನದಾತ ಅತಂತ್ರ’ ಅನ್ನೋ ಶಿರೋನಾಮೆಯಡಿ ಸರಣಿ ವರದಿ ಪ್ರಕಟಿಸಿತ್ತು. ಜಿಲ್ಲೆಯ ಜನಪ್ರತಿನಿಧಿಗಳನ್ನು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರ ಗಮನಕ್ಕೂ ಇದು ಬಂದಿತ್ತು. ‘ಕನ್ನಡಪ್ರಭ’ ಹಾಗೂ ‘ಸುವರ್ಣ ನ್ಯೂಸ್’ ವರದಿಗಳು ವಿಧಾನಸೌಧದಲ್ಲೂ ಪ್ರತಿಧ್ವನಿಸಿತ್ತು. ಪರಿಷತ್ ಸದಸ್ಯ, ಬೀದರ್‌ನ ಅರವಿಂದ ಅರಳಿ ಅಧಿವೇಶನದಲ್ಲೂ ‘ಕನ್ನಡಪ್ರಭ’ ಹಾಗೂ ‘ಸುವರ್ಣ ನ್ಯೂಸ್’ ವರದಿಗಳನ್ನು ಪ್ರದರ್ಶಿಸಿ, ಚರ್ಚೆ ನಡೆಸಿದ್ದರು.
ಈ ವಿಚಾರ ವ್ಯಾಪಕ ಚರ್ಚೆಗೆ ಗ್ರಾಸವಾಗಿ, ಸಂಕಷ್ಟದಲ್ಲಿರುವ ಕುಟುಂಬಗಳ ನೆರವಿಗೆ ಜಿಲ್ಲಾಡಳಿತ ಧಾವಿಸಬೇಕು ಎಂದು ರೈತ ಹಾಗೂ ಜನ ಸಮುದಾಯ ಆಗ್ರಹಿಸಿತ್ತು. ಕನ್ನಡಪ್ರಭದ ಸಹಯೋಗದಲ್ಲಿ, ಪರಿಹಾರ ತಿರಸ್ಕೃತಗೊಂಡ ರೈತರ ಕುಟುಂಬಗಳು ಜಿಲ್ಲಾಧಿಕಾರಿಗೆ ಮೇಲ್ಮನವಿ ಸಲ್ಲಿಸಿದವು. ಕೊನೆಗೆ, ನಿಯಮಾವಳಿಗೂ ಧಕ್ಕೆ ಬಾರದಂತೆ ಹಾಗೂ ಮಾನವೀಯತೆ ಆಧಾರವನ್ನೂ ಪರಿಗಣಿಸಿ ಪರಿಹಾರ ನೀಡಲು ಜಿಲ್ಲಾಡಳಿತ ಸಭೆಯಲ್ಲಿ ಸಮ್ಮತಿ ಸೂಚಿಸಿತು. ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ್ ಹಾಗೂ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಆರ್.ದೇವಿಕಾ ಜಿಲ್ಲಾಧಿಕಾರಿಗಳಿಗೆ ಇದನ್ನು ಮನವರಿಕೆ ಮಾಡಿದರು. ಕನ್ನಡಪ್ರಭ ವರದಿಗಳಿಗೆ ಕೊನೆಗೂ ಫಲ ಸಿಕ್ಕಂತಾಯ್ತು.
ವಿಶೇಷ ಸಭೆಯಲ್ಲಿ ತೀರ್ಮಾನ
ಮಂಗಳವಾರ ಜಿಲ್ಲಾಧಿಕಾರಿ ಕೂರ್ಮಾರಾವ್ ಅಧ್ಯಕ್ಷತೆಯಲ್ಲಿ ಮೇಲ್ಮನವಿ ಪ್ರಾಧಿಕಾರದ ವಿಶೇಷ ಸಭೆ ಕರೆಯಲಾಗಿತ್ತು. ಇಲ್ಲಿ ನಿಯಮಾವಳಿ ಗೊಂದಲದಿಂದಾಗಿ ಪರಿಹಾರದಿಂದ ವಂಚಿತಗೊಂಡಿದ್ದ 43ಕ್ಕೂ ಹೆಚ್ಚು ರೈತರ ಕುಟುಂಬಗಳಿಗೆ ಪರಿಹಾರ ನೀಡುವಲ್ಲಿ ಜಿಲ್ಲಾಡಳಿತ ನಿರ್ಧರಿಸಿದೆ. ಪ್ರತಿ ರೈತ ಕುಟುಂಬಕ್ಕೆ ಸರ್ಕಾರದ 5 ಲಕ್ಷ ಪರಿಹಾರ ನೀಡಲಾಗುತ್ತಿದೆ. ಆತ್ಮಹತ್ಯೆ ಮಾಡಿಕೊಂಡ ರೈತನ ಮಕ್ಕಳಿಗೆ ಶಿಕ್ಷಣ ಇಲಾಖೆಯ ಮೂಲಕ ಉಚಿತ ಶಿಕ್ಷಣ ನೀಡಿಸುವುದು, ಮೊದಲ ಆದ್ಯತೆ ಮೇರೆಗೆ ಅವರಿಗೆ ಆಸರೆ-ಆಶ್ರಯ ಮನೆಗಳನ್ನು ಒದಗಿಸುವುದು, ಕುಟುಂಬದ ಸದಸ್ಯರೊಬ್ಬರಿಗೆ ಹೊರಗುತ್ತಿಗೆ ಆಧಾರದ ಮೇಲೆ ವಿವಿಧೆಡೆ ಉದ್ಯೋಗ ನೀಡುವ ತೀರ್ಮಾನವನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ.
ರೈತರ ಆತ್ಮಹತ್ಯೆ : ಪರಿಹಾರ ಪಡೆಯಲು ನೂರೆಂಟು ನಿಯಮಗಳ ಅಡ್ಡಿ
‘ಕನ್ನಡಪ್ರಭ’ ಹಾಗೂ ‘ಸುವರ್ಣ ನ್ಯೂಸ್’ ವರದಿಗಳು ಜಿಲ್ಲಾಡಳಿತದ ಗಮನ ಸೆಳೆದಿವೆ. ಪರಿಹಾರ ವಂಚಿತ ರೈತ ಕುಟುಂಬಗಳಿಗೆ ನ್ಯಾಯ ಒದಗಿಸಲಾಗುತ್ತದೆ. ಪುನಾ ಪರಿಶೀಲಿಸಿ ಪರಿಹಾರ ನೀಡುವಂತೆ ನಿರ್ಧರಿಸಲಾಗಿದೆ ಎಂದು ಯಾದಗಿರಿ ಜಿಲ್ಲಾಧಿಕಾರಿ ಕೂರ್ಮಾರಾವ್ ಅವರು ಹೇಳಿದ್ದಾರೆ.
ಮಾನವೀಯ ನೆಲೆಗಟ್ಟಿನಲ್ಲಿ ಮೊದಲು ಆದ್ಯತೆ ನೀಡಿ ಹಾಗೂ ನಿಮಯಗಳಿಗೂ ಧಕ್ಕೆ ಬಾರದಂತೆ ಪರಿಹಾರ ನೀಡಲಾಗುತ್ತದೆ. ಕನ್ನಡಪ್ರಭದ ವರದಿಗಳು ಜಿಲ್ಲಾಡಳಿತಕ್ಕೆ ನಿಜಕ್ಕೂ ಸಹಕಾರಿಯಾಗಿವೆ. ನಡಾವಳಿಯಲ್ಲಿ ಇದನ್ನು ಉಲ್ಲೇಖಿಸಲಾಗುತ್ತದೆ ಎಂದು ಯಾದಗಿರಿ ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ್ ಅವರು ತಿಳಿಸಿದ್ದಾರೆ.