ಧಾರವಾಡ ಜೊತೆಗೆ ಐದು ದಶಕಗಳ ನಂಟು ಹೊಂದಿದ್ದ ನಿಸಾರ್ ಅಹಮದ್

By Kannadaprabha NewsFirst Published May 4, 2020, 7:21 AM IST
Highlights

ಧಾರವಾಡ ಸಾಹಿತ್ಯ ಸಂಭ್ರಮ, ಬೇಂದ್ರೆ ಭವನಕ್ಕೆ ಆಗಮಿಸಿದ್ದ ನಿತ್ಯೋತ್ಸವ ಕವಿ ಕೆ.ಎಸ್‌. ನಿಸಾರ್ ಅಹಮದ್ ‌| 2019ರ ಜನವರಿ 31ರಂದು ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ನ ಪ್ರತಿಷ್ಠಿತ ಅಂಬಿಕಾತನಯದತ್ತ ಪ್ರಶಸ್ತಿ ಸ್ವೀಕರಿಸಲು ಬಂದಿರುವುದೇ ಕೊನೆಯ ಧಾರವಾಡದ ಭೇಟಿ| ನಿಸಾರ್ ಅಹಮದ್ ಅವರ ಅಗಲಿಕೆ ನಿಜಕ್ಕೂ ದುಃಖದ ಸಂಗತಿ: ಸಾಹಿತಿ ಹ.ವೆಂ. ಕಾಖಂಡಕಿ|

ಧಾರವಾಡ(ಮೇ.04):  ಕವಿ, ಸಾಹಿತಿಗಳ ಊರು ಧಾರವಾಡದೊಂದಿಗೆ ನಿತ್ಯೋತ್ಸವ ಕವಿ ಎಂದೇ ಹೆಸರಾಗಿದ್ದ ಕೆ.ಎಸ್‌. ನಿಸಾರ್ ಅಹಮದ್ ಐದು ದಶಕಗಳಿಂದಲೂ ನಂಟು ಹೊಂದಿದ್ದರು.

2019ರ ಜನವರಿ 31ರಂದು ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ನ ಪ್ರತಿಷ್ಠಿತ ಅಂಬಿಕಾತನಯದತ್ತ ಪ್ರಶಸ್ತಿ ಸ್ವೀಕರಿಸಲು ಬಂದಿರುವುದೇ ಕೊನೆಯ ಧಾರವಾಡದ ಭೇಟಿ. ಇನ್ನೋರ್ವ ಕವಿ ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ ಅವರೊಂದಿಗೆ ಈ ಪ್ರಶಸ್ತಿಯನ್ನು ಹಂಚಿಕೊಂಡ ನಿಸಾರ್ ಅಹಮದ್‌ ಅವರು, ಬೇಂದ್ರೆ ಹೆಸರಿನ ಪ್ರಶಸ್ತಿ ಸಂದಿರುವುದು ದೊಡ್ಡ ಗೌರವ ತಂದಿದೆ ಎಂದು ಹೆಮ್ಮೆಯಿಂದ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ್ದರು. ಜತೆಗೆ ಬೇಂದ್ರೆ ಟ್ರಸ್ಟ್‌ಗೆ ವಾರ್ಷಿಕ 10 ಲಕ್ಷ ಮಾತ್ರ ಅನುದಾನ ಕೊಡುತ್ತಿರುವ ಸರ್ಕಾರದ ಕ್ರಮವನ್ನು ಖಂಡಿಸಿ ಓರ್ವ ಹಿರಿಯ ಕವಿಗೆ ಸರ್ಕಾರ ಅಪಚಾರ ಎಸಗಿದೆ ಎಂದು ತರಾಟೆಗೂ ತೆಗೆದುಕೊಂಡಿದ್ದನ್ನು ಈಗ ಸ್ಮರಿಸಬಹುದು.

ನಿತ್ಯೋತ್ಸವ ಕವಿ ಕೆ. ಎಸ್. ನಿಸಾರ್ ಅಹಮದ್ ಇನ್ನಿಲ್ಲ!

ನಿಸಾರ್ ಅಹಮದ್ ಅವರ ಸಾಕಷ್ಟುಕವಿತೆಗಳನ್ನು ಧಾರವಾಡದ ಆಕಾಶವಾಣಿಯಲ್ಲಿ ಗಾಯಕರು ಪ್ರಸ್ತುತ ಪಡಿಸಿದ್ದು, ಅವರ ಕಾವ್ಯಗಳು, ಅವುಗಳ ವಸ್ತುಗಳ ಕುರಿತು ಆಕಾಶವಾಣಿಯಲ್ಲಿ ಒಂದೆರಡು ಬಾರಿ ನಿಸಾರ್ ಅಹಮದ್‌ ಅವರು ಆಕಾಶವಾಣಿಗೆ ಬಂದು ಹೋಗಿದ್ದಾರೆ. ಇದರೊಂದಿಗೆ 2017ರಲ್ಲಿ ಧಾರವಾಡದಲ್ಲಿ ನಡೆದ ಸಾಹಿತ್ಯ ಸಂಭ್ರಮವನ್ನು ಇವರು ಉದ್ಘಾಟಿಸಿ ಮಾತನಾಡಿದ್ದರು. ಅಲ್ಲದೆ ಕರ್ನಾಟಕ ವಿವಿಗೆ ಹಲವು ಬಾರಿ ಉಪನ್ಯಾಸಕ್ಕಾಗಿ ಬರುತ್ತಿದ್ದರು.

67ರಲ್ಲಿ ಧಾರವಾಡಕ್ಕೆ ಮೊದಲ ಭೇಟಿ:

1967ರಲ್ಲಿ ಶ್ರೀರಂಗರು ಸರ್ಕಾರದ ಯೋಜನೆ ಅಂಗವಾಗಿ ಆಯೋಜಿಸಿದ್ದ ಕುಟುಂಬ ಯೋಜನೆ ಎಂಬ ಕವಿಗೋಷ್ಠಿ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ಧಾರವಾಡಕ್ಕೆ ಆಗಮಿಸಿದ್ದ ನಿಸಾರ್ ಅಹಮದ್  ಅವರನ್ನು ಇಡೀ ಧಾರವಾಡ ಊರನ್ನು ನನ್ನ ಸ್ಕೂಟರ್‌ ಮೇಲೆ ತೋರಿಸಿ ಪೇಢೆ ತಿನ್ನಿ ಕಳುಹಿಸಿದ್ದೇ ಎಂದು ಅವರೊಂದಿನ ಒಡನಾಟವನ್ನು ಹಿರಿಯ ಕವಿ ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ ಬಿಚ್ಚಿಡುತ್ತಾರೆ. ಭೂಗರ್ಭ ಶಾಸ್ತ್ರ ವಿಷಯದಲ್ಲಿ ಪ್ರಾಧ್ಯಾಪಕರಾಗಿದ್ದ ಅವರನ್ನು ಬೆಂಗಳೂರಿಗೆ ಹೋದಾಗಲೆಲ್ಲ ಚಂಪಾ ಅವರೊಂದಿಗೆ ಭೇಟಿಯಾಗುತ್ತಿದ್ದೇನು. ನಿತ್ಯೋತ್ಸವ ಹೆಸರಿನಲ್ಲಿ ಮೊಟ್ಟಮೊದಲ ಹಾಡಿನ ಕ್ಯಾಸೆಟ್‌ ಮಾಡಿದ್ದು, ಈ ಕಾರ್ಯಕ್ರಮಕ್ಕೂ ನಾನು ಭಾಗವಹಿಸಿದ್ದೇನು. ಕೊನೆಯವರೆಗೂ ಅವರೊಂದಿಗೆ ಪ್ರೀತಿಯಿಂದ ಉಳಿದುಕೊಂಡಿದ್ದರು. ಅವರ ಸಮಗ್ರ ಕಾವ್ಯವನ್ನು ತರಳಬಾಳು ಸ್ವಾಮೀಜಿ ಅವರು ಪ್ರಕಟಿಸಿದ್ದು ವಿಶೇಷವೇ ಸರಿ. ಅವರು ನವ್ಯ ಹಾಗೂ ರಮ್ಯ ಸಂಪ್ರದಾಯದಲ್ಲಿ ಕವಿತೆಗಳನ್ನು ಬರೆಯುತ್ತಿದ್ದರು ಎಂದರು.

ನಿಸಾರ್‌ ಅಹ್ಮದ್ ಜೊತೆಗಿನ ಒಡನಾಟ ನೆನೆಸಿಕೊಂಡ ಜೋಗಿ

2017ರ ಧಾರವಾಡ ಸಾಹಿತ್ಯ ಸಂಭ್ರಮ ಉದ್ಘಾಟಿಸಿದ ಕೆ.ಎಸ್‌. ನಿಸಾರ್ ಅಹಮದ್‌ ಅವರ ಅಗಲಿಕೆ ನಿಜಕ್ಕೂ ದುಃಖದ ಸಂಗತಿ. ಕನ್ನಡದ ಶ್ರೇಷ್ಠ ಕವಿಗಳಲ್ಲಿ ಒಬ್ಬರಾಗಿದ್ದ ಇವರು ಭಾವಗೀತೆಗಳ ಮೊದಲ ಕ್ಯಾಸೆಟ್‌ ಕನ್ನಡಕ್ಕೆ ಕೊಟ್ಟವರು. ಕನ್ನಡ ಸಾಹಿತ್ಯ ಲೋಕ ಬಹುಮುಖ್ಯ ಲೇಖಕನನ್ನು ಕಳೆದುಕೊಂಡಂತಾಗಿದೆ ಎಂದು ಧಾರವಾಡದ ಸಾಹಿತಿ ಹ.ವೆಂ. ಕಾಖಂಡಕಿ ಅವರು ಹೇಳಿದ್ದಾರೆ. 

click me!