1 ತಿಂಗಳಿನಿಂದ ಪ್ರತಿನಿತ್ಯ 800 ಜನರ ಹೊಟ್ಟೆ ತುಂಬಿಸುತ್ತಿರೋ ಭಾಜಪಾ ಯುವ ಮುಖಂಡ

By Suvarna NewsFirst Published May 3, 2020, 10:34 PM IST
Highlights

ಕೊರೋನಾ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವಾಗುವ ಕಾರಣದಿಂದ ಹತ್ತು ಹಲವು ಸಂಘ ಸಂಸ್ಥೆಗಳು ಸೇವಾ ಕಾರ್ಯದಲ್ಲಿ ತೊಡಗಿವೆ.  ಅನೇಕರು ವ್ಯಕ್ತಿಗತವಾಗಿ ತಮ್ಮ ಶಕ್ತ್ಯಾನುಸಾರ ಸೇವಾ ಕಾರ್ಯದಲ್ಲಿ ತೊಡಗಿದ್ದಾರೆ.ಇಲ್ಲೊಬ್ಬರು ಕಳೆದು ಒಂದು ತಿಂಗಳಿನಿಂದ ಪ್ರತಿನಿತ್ಯ ಬಡವರ ಹೊಟ್ಟೆ ತುಂಬಿಸುತ್ತಿದ್ದಾರೆ.

ಬೆಂಗಳೂರು, (ಮೇ. 03): ಭಾರತೀಯ ಜನತಾ ಪಕ್ಷದ ಯುವ ಮುಖಂಡ, ಯಶವಂತಪುರ ಮಂಡಲದ ಪ್ರಧಾನ ಕಾರ್ಯದರ್ಶಿ, ಹಾಗೂ ಮಿಷನ್ ದಿಶಾದ ಕಾರ್ಯಕರ್ತ ಶಶಿಕುಮಾರ್ ಹಾಗೂ ಪರಿವಾರದವರು ಕಳೆದ ಒಂದು ತಿಂಗಳಿನಿಂದ ಪ್ರತಿನಿತ್ಯ ಸಂಜೆ ಸುಮಾರು 800 ಜನರಿಗೆ ಆಹಾರವನ್ನು ಒದಗಿಸುತ್ತಿದ್ದಾರೆ.

ಮುಂದುವರಿದ ಭಾಗವಾಗಿ ನಿನ್ನೆ (ಶನಿವಾರ) ಸುಮಾರು 15 ಟನ್ ತಾಜಾ ತರಕಾರಿಯನ್ನು ರೈತರಿಂದ ನೇರವಾಗಿ ಖರೀದಿಸಿದ್ದು, ಅದನ್ನು ವಿಂಗಡಿಸಿ ಚೀಲಕ್ಕೆ ಹಾಕುವ ಕೆಲಸವನ್ನು ಮಿಷನ್ ದಿಶಾ ಕಾರ್ಯಕರ್ತರೂ ಸೇರಿದಂತೆ ಅನೇಕ ಸ್ವಯಂಸೇವಕರ ಸಹಾಯದಿಂದ ಮಾಡಲಾಯಿತು.

ಕಾಂಗ್ರೆಸ್‌ ನಾಯಕರ ಬಳಿಕ ಸಂಸದ ತೇಜಸ್ವಿ ಸೂರ್ಯರಿಂದ ಕಾರ್ಮಿಕರಿಗೆ ವಿಶೇಷ ಬೀಳ್ಕೊಡುಗೆ...!

 ಅದನ್ನು ಇಂದು (ಭಾನುವಾರ) ಬೆಳಗ್ಗೆ 10 ಗಂಟೆಯಿಂದ ಬಿ ಆರ್ ಎಸ್ ಕಲ್ಯಾಣ ಮಂಟಪ, ವಾಜರಹಳ್ಳಿಯಲ್ಲಿ  ಸುಮಾರು 2000 ಬಡ ಜನರಿಗೆ ಕರ್ನಾಟಕ ಸರಕಾರದ ಸಹಕಾರ ಸಚಿವರು ಹಾಗೂ ಯಶವಂತಪುರ ಕ್ಷೇತ್ರದ ಶಾಸಕ ಎಸ್ ಟಿ ಸೋಮಶೇಖರ್ ಅವರ ಉಪಸ್ಥಿತಿಯಲ್ಲಿ ವಿತರಿಸಲಾಯಿತು. 

ಭಾಜಪಾದ ಯಶವಂತಪುರ ಮಂಡಲ ಅಧ್ಯಕ್ಷ ಶ್ರೀ ಅನಿಲ್ ಚಳಗೇರಿ ಹಾಗೂ ಹೆಮ್ಮಿಗೆಪುರ ವಾರ್ಡ್‌ ಬಿಬಿಎಂಪಿ ಸದಸ್ಯ ಶ್ರೀ ಆರ್ಯ ಶ್ರೀನಿವಾಸ್ ಅವರೂ ಕೂಡಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ತಾಜಾ ತರಕಾರಿಯನ್ನು ಉಚಿತವಾಗಿ ಹಂಚುವ ಕಾರ್ಯಕ್ರಮ ಈ ಭಾಗದ ಬಡ ಜನರಲ್ಲಿ ನವೋತ್ಸಾಹವನ್ನು ತಂದುಕೊಟ್ಟಿದ್ದು ಎಲ್ಲರ ಶ್ಲಾಘನೆಗೆ ಪಾತ್ರವಾಯಿತು. ಕಾರ್ಯಕ್ರಮವನ್ನು ಅಚ್ಚುಗಟ್ಟಾಗಿ ನಡೆಸಿಕೊಡಲು ಮಿಷನ್ ದಿಶಾದ ಸ್ವಯಂಸೇವಕರು ನೆರವು ನೀಡಿದರು. 

ಸಾಮಾಜಿಕ ಅಂತರವನ್ನು ಕಾಯುವುದರ ಜೊತೆಗೆ, ಮುಖಕ್ಕೆ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಲಾಗಿತ್ತು. ಅದರ ಜೊತೆಗೇ, ತರಕಾರಿಯನ್ನು ರೈತರಿಂದ ನೇರವಾಗಿ ಖರೀದಿಸಲಾಗಿದ್ದು, ಮಾರುಕಟ್ಟೆಯಿಲ್ಲದೇ ಕಷ್ಟದಲ್ಲಿದ್ದ ರೈತರಿಗೂ ಬಹಳಷ್ಟು ಸಹಕಾರಿಯಾಗಿದೆ.

ತನು ಮನ ಧನದಿಂದ ಸದಾ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಶಶಿಕುಮಾರ್ ಅವರು, ಇತ್ತೀಚೆಗಷ್ಟೇ ಮೈಸೂರಿನ ಪ್ರಾಣಿ ಸಂಗ್ರಹಾಲಯದ ಪ್ರಾಣಿಗಳ ಆಹಾರದ ಅವಶ್ಯಕತೆಗಾಗಿ 3 ಲಕ್ಷ ರೂಪಾಯಿ ದಾನ ಮಾಡಿರುವುದನ್ನೂ ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು.

click me!