ಮಹಾಪುರುಷರ ತ್ಯಾಗದಿಂದ ಭಾರತ ಸಂಸ್ಕೃತಿ, ಸಂಸ್ಕಾರ ವಿಶ್ವಮಾನ್ಯ: ಈಶ್ವರಪ್ಪ

By Kannadaprabha News  |  First Published Mar 9, 2023, 9:07 PM IST

ಮಹಾಪುರುಷರ ತ್ಯಾಗ ಮತ್ತು ಪ್ರಯತ್ನದಿಂದಾಗಿ ಭಾರತದ ಸಂಸ್ಕೃತಿ ಮತ್ತು ಸಂಸ್ಕಾರ ವಿಶ್ವಮಾನ್ಯವಾಗಿದೆ. ಪಂಚಾಚಾರ್ಯರ ಕೊಡುಗೆ ಅಪಾರ ಎಂದು ಶಾಸಕ ಕೆ.ಎಸ್‌.ಈಶ್ವರಪ್ಪ ಹೇಳಿದರು.


ಶಿವಮೊಗ್ಗ (ಮಾ.9) ಮಹಾಪುರುಷರ ತ್ಯಾಗ ಮತ್ತು ಪ್ರಯತ್ನದಿಂದಾಗಿ ಭಾರತದ ಸಂಸ್ಕೃತಿ ಮತ್ತು ಸಂಸ್ಕಾರ ವಿಶ್ವಮಾನ್ಯವಾಗಿದೆ. ಪಂಚಾಚಾರ್ಯರ ಕೊಡುಗೆ ಅಪಾರ ಎಂದು ಶಾಸಕ ಕೆ.ಎಸ್‌.ಈಶ್ವರಪ್ಪ(KS Eshwarappa) ಹೇಳಿದರು.

ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ಗುರುವಾರ ಶಿವಮೊಗ್ಗ ಜಿಲ್ಲಾ ಬೇಡ ಜಂಗಮ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ ಹಾಗೂ ಸಮಾಜದ ಪ್ರಥಮ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

Latest Videos

undefined

ಭ್ರಷ್ಟಾಚಾರದ ವಿರುದ್ಧ ಬಂದ್‌ ಮಾಡಲು ಕಾಂಗ್ರೆಸ್‌ಗೆ ನೈತಿಕತೆ ಇದ್ಯಾ? : ಈಶ್ವರಪ್ಪ

ದೇಶದ ಅನೇಕ ಸಾಧುಸಂತರು ಮತ್ತು ಸಾಧಕರು ದೇಶದ ಐಕ್ಯತೆ ಮತ್ತು ಶಾಂತಿಗಾಗಿ ನಿರಂತರ ಪ್ರಯತ್ನ ನಡೆಸುತ್ತಿರುವುದರಿಂದ ನಮ್ಮ ದೇಶ ಮಾತ್ರವಲ್ಲದೆ ಇಡೀ ವಿಶ್ವವೇ ಶಾಂತಿಯಿಂದ ಇದೆ. ಪಂಚಾಚಾರ್ಯರು ವಿಶ್ವಕ್ಕೆ ಶಾಂತಿ ಬೋಧಿಸಿದವರು. ಸಮಾಜದ ಏಳಿಗೆಗಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ. ಅವರ ತತ್ವ- ಸಿದ್ಧಾಂತಗಳನ್ನು ಸ್ವಲ್ಪಮಟ್ಟಿಗಾದರೂ ಅಳವಡಿಸಿಕೊಳ್ಳಬೇಕು. ಅವರ ಮಾರ್ಗದಲ್ಲಿ ಮುಂದುವರಿಯಬೇಕು. ಸಮಾಜ ಸಂಘಟಿತವಾಗಿ ಇನ್ನು ಹೆಚ್ಚಿನ ರೀತಿಯಲ್ಲಿ ಶ್ರಮಿಸಬೇಕು ಎಂದರು.

ವಿಶ್ರಾಂತ ಪಾಚಾರ್ಯರಾದ ಬಿಟಿಎಂ ಗುರುಸಿದ್ಧಶಾಸ್ತ್ರಿ ಉಪನ್ಯಾಸ ನೀಡಿ, ಪಂಚಾಚಾರ್ಯರು ಎಲ್ಲ ಯುಗಗಳಲ್ಲೂ ಬೇರೆ ಬೇರೆ ಹೆಸರಿನಲ್ಲಿ ಅವತಾರ ಮಾಡಿ ಧರ್ಮಕಾರ್ಯಗಳನ್ನು ನಡೆಸಿದ್ದಾರೆ. ‘ಸಿದ್ಧಾಂತ ಶಿಖಾಮಣಿ’ ಗ್ರಂಥದಲ್ಲಿ ಮನುಷ್ಯನ ಏಳಿಗೆಗೆ ಬೇಕಾದ ಮತ್ತು ವಿಶ್ವದ ಶಾಂತಿಗೆ ಬೇಕಾದ ಎಲ್ಲ ತತ್ವಗಳಿಗೆ ಬಸವೇಶ್ವರರು ಮತ್ತು ಪಂಚಾಚಾರ್ಯರು ವೀರಶೈವ ಧರ್ಮದ 2 ಕಣ್ಣುಗಳಿದ್ದ ಹಾಗೆ. ಗಾಂಧೀಜಿ ಕೂಡ ವೀರಶೈವ ಧರ್ಮದ ತತ್ವವನ್ನೇ ದೇಶದ ಸಮಸ್ತ ಅಭಿವೃದ್ಧಿಗೆ ಸಾಕು ಎಂದಿದ್ದರು. 10 ಸೂತ್ರಗಳ ಮೂಲಕ ಇಡೀ ಜಗತ್ತು ಯಾವ ರೀತಿಯ ಸಾಧನೆ ಮಾಡಬೇಕು ಎಂಬುದನ್ನು ಪಂಚಾಚಾರ್ಯರು ತಿಳಿಸಿದ್ದಾರೆ ಎಂದು ಹೇಳಿದರು.

ಮೊದಲು ಲಿಂಗದೀಕ್ಷೆ ಪಡೆಯಬೇಕು. ಜಂಗಮ ಕೇವಲ ಪೂಜೆ ಮಾಡಿದರಷ್ಟೇ ಸಾಲದು. ಆಚಾರ ವಿಚಾರಗಳಿಂದ ಆತ ಜಂಗಮ ಆಗಬೇಕು. ವಿಜ್ಞಾನ, ತಂತ್ರಜ್ಞಾನದಿಂದ ಶಾಂತಿ ಸಾಧ್ಯವಿಲ್ಲ. ಅಧ್ಯಾತ್ಮ ಮತ್ತು ವಿಜ್ಞಾನವಿದ್ದರೆ ಮಾತ್ರ ಜಗತ್ತಿನಲ್ಲಿ ಶಾಂತಿ ಇರುತ್ತದೆ ಎಂಬುದನ್ನು ಪಂಚಾಚಾರ್ಯರು ತಿಳಿಸಿದ್ದಾರೆ. ಹಿಂದಿನಿಂದಲೂ ಜಂಗಮರು ಆರ್ಥಿಕವಾಗಿ ಅತ್ಯಂತ ಹಿಂದುಳಿದಿದ್ದು, ಕಷ್ಟದಿಂದ ಬದುಕು ನಡೆಸುತ್ತಿದ್ದಾರೆ. ಹಾಗಾಗಿ ಅವರನ್ನು ಪರಿಶಿಷ್ಟವರ್ಗಕ್ಕೆ ಸೇರಿಸಬೇಕೆಂಬ ಬೇಡಿಕೆಯಿದ್ದು, ಸರ್ಕಾರದ ಪ್ರತಿನಿಧಿಗಳು ಕೂಡಲೇ ಜಂಗಮರಿಗೆ ಪರಿಶಿಷ್ಟವರ್ಗಕ್ಕೆ ಸೇರಿಸಿ ಪ್ರಮಾಣ ಪತ್ರ ನೀಡಬೇಕು. ಬ್ರಿಟಿಷರ ಕಾಲದಿಂದಲೂ ಬೇಡ ಜಂಗಮ ಸಮಾಜ ಅತ್ಯಂತ ಹಿಂದುಳಿದಿದೆ ಎಂದು ಹೇಳಿದರು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ತರೀಕೆರೆ ಹಿರೇಮಠದ ಶ್ರೀ ಷ.ಬ್ರ. ಜಗದೀಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿದ್ದರು. ಶಾಸಕ ಆಯನೂರು ಮಂಜುನಾಥ್‌ ಗುರುತಿನ ಚೀಟಿ ವಿತರಿಸಿ ಮಾತನಾಡಿದರು. ಡಾ.ಕೊಟ್ಟೂರೇಶ್‌ ರಾಸ್ತಾಪುರ ಮಠ ಹಾಗೂ ಬಸವೇಶ್ವರ ವೀರಶೈವ ಸಮಾಜದ ಅಧ್ಯಕ್ಷ ಎಸ್‌.ಎಸ್‌. ಜ್ಯೋತಿಪ್ರಕಾಶ್‌ ಅವರನ್ನು ಸನ್ಮಾನಿಸಲಾಯಿತು.

40% ಕಮಿಷನ್‌ ಸಿಗಲ್ಲ ಅಂತ ಸರ್ಕಾರ ಮನೆ ಹಂಚಿಲ್ಲ: ಮಧು ಬಂಗಾರಪ್ಪ

ಸಮಾಜದ ಅಧ್ಯಕ್ಷ ಎಚ್‌.ಮಲ್ಲಿಕಾರ್ಜುನ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಕೆ.ಆರ್‌.ಸೋಮನಾಥ್‌, ಅಡವೀಶಯ್ಯ, ವೀರಸಂಗಯ್ಯ ಬಿದರೆ, ಎಚ್‌.ಶಶಿಧರ್‌, ನಿಂಗರಾಜು, ಎಚ್‌.ಎಂ. ಲೋಕೇಶ್‌, ಎಂ.ಈ. ಸುಜಯ ಪ್ರಸಾದ್‌, ಜಗದೀಶ್ವರಯ್ಯ ಎಂ.ಮುದವಾಲ, ಸುನಂದ ಎಂ.ವಿಜಯಕುಮಾರ್‌, ಜ್ಯೋತಿ ನಾಗರಾಜಯ್ಯ, ಉಮೇಶ್‌ ಹಿರೇಮಠ್‌, ರಶ್ಮಿ ಮಲ್ಲಿಕಾರ್ಜುನ ಸ್ವಾಮಿ ಮತ್ತಿತರರು ಇದ್ದರು.

click me!