ಶಿವಮೊಗ್ಗದಲ್ಲಿ ಮತ್ತೆ ಕೊರೋನಾ ಸ್ಫೋಟ ಸಂಭವಿಸಿದ್ದು ಒಂದೇ ದಿನ ಹೊಸದಾಗಿ 23 ಕೋವಿಡ್ 19 ಪ್ರಕರಣಗಳು ಪತ್ತೆಯಾಗಿವೆ. ಜುಲೈ 02ರ ಅಂತ್ಯದ ವೇಳೆಗೆ ಜಿಲ್ಲೆಯಲ್ಲಿ ಕೊರೋನಾ ಪೀಡಿತರ ಸಂಖ್ಯೆ 199ಕ್ಕೆ ಏರಿಕೆಯಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಶಿವಮೊಗ್ಗ(ಜು.03): ಜಿಲ್ಲೆಯಲ್ಲಿ ಕೋರೋನಾ ಸೋಂಕಿತರ ಸಂಖ್ಯೆ ದ್ವಿಶತಕ ಸಮೀಪಕ್ಕೆ ಸಾಗಿದೆ. ಗುರುವಾರ ಒಂದೇ ದಿನ ಬರೋಬ್ಬರಿ 23 ಜನರಲ್ಲಿ ಕರೋನಾ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 199ಕ್ಕೇರಿದೆ. ಶಿವಮೊಗ್ಗ, ಸೊರಬ, ಶಿಕಾರಿಪುರ ಹಾಗೂ ಭದ್ರಾವತಿ ತಾಲೂಕಿನಲ್ಲಿ ಸೋಂಕಿತರು ಪತ್ತೆಯಾಗಿದ್ದು, ಗುರುವಾರ 23 ಮಂದಿ ಸೋಂಕಿತರನ್ನು ನಿಗದಿತ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಶಿವಮೊಗ್ಗ ನಗರದಲ್ಲಿ ಪೆನ್ಸನ್‌ಮೊಹಲ್ಲಾ, ಗೋಪಾಳದ ಆದಿರಂಗನಾಥಸ್ವಾಮಿ ದೇವಸ್ಥಾನ ರಸ್ತೆ ಹಾಗೂ ಅಶೋಕನಗರ 2ನೇ ತಿರುವು ಸೀಲ್ ಡೌನ್ ಮಾಡಲಾಗಿದೆ. ಖಾಸಗಿ ಹೆಲ್ತ್‌ಕೇರ್‌ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗೂ ಕೊರೋನಾ ಸೋಂಕು ಬಂದಿದೆ. ಕಾಶಿಪುರದ ಪ್ರತಿಷ್ಠಿತ ಶಾಲೆಯ ಶಿಕ್ಷಕಿಯಲ್ಲೂ ಸೋಂಕು ಕಂಡುಬಂದಿದೆ ಎನ್ನಲಾಗಿದೆ. ಶಿವಮೊಗ್ಗ ತಾಲೂಕು ಬೇಡರಹೊಸಳ್ಳಿ ಗ್ರಾಮದ ಯುವಕನೋರ್ವನಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಆತನನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಸನಗರ ತಾಲೂಕಿನ ಮಾವಿನಕೊಪ್ಪದಲ್ಲಿ 1, ಮಾವಿನಕಟ್ಟೆ 2, ನಂಜವಳ್ಳಿ 1, ಪಾಶೆಟ್ಟಿಕೊಪ್ಪ 2, ಸೂರೇಕೊಪ್ಪದಲ್ಲಿ 1 ಪ್ರಕರಣಗಳು ಬೆಳಕಿಗೆ ಬಂದಿದ್ದು, ಹೊಸನಗರ ತಾಲೂಕಿನ ನಂಜವಳ್ಳಿ, ಪಟ್ಟಣದ 10ನೇ ವಾರ್ಡ್, ಮಾವಿನಕೊಪ್ಪ, ಪಾಶೆಟ್ಟಿಕೊಪ್ಪ ಪ್ರದೇಶ ಸೀಲ್‌ಡೌನ್ ಆಗಿವೆ.
ಮಹಾಮಾರಿ ಕೊರೋನಾಗೆ ಮತ್ತೊಂದು ಬಲಿ: ಕೊಪ್ಪಳ ತಬ್ಬಿಬ್ಬು..!
ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ನಾಡಕಚೇರಿ ನೌಕರನೊಬ್ಬನ ಪತ್ನಿಗೆ ಸೋಂಕು ತಗುಲಿದೆ ಎಂಬ ಶಂಕೆ ಹಿನ್ನೆಲೆಯಲ್ಲಿ ನಾಡ ಕಚೇರಿ ಹಾಗೂ ಗ್ರಾಮದ ಸುತ್ತಮುತ್ತ ಔಷಧಿ ಸಿಂಪಡಣೆ ಮಾಡಲಾಗಿದೆ. ಪಿ-16645 ರಿಂದ ಪಿ-16667 ರವರೆಗೆ ಒಟ್ಟು 23 ಸೋಂಕಿತರಲ್ಲಿ, ಯಾವುದೇ ಟ್ರಾವೆಲ್ ಹಿಸ್ಟರಿ, ಸೋಂಕಿತರ ಸಂಪರ್ಕವಿಲ್ಲದ 8 ಮಂದಿಗೆ ಸೋಂಕು ಬಂದಿದೆ. ಇವರುಗಳಿಗೆ ಸೋಂಕು ಹೇಗೆ ಬಂದಿದೆ ಎಂಬುದನ್ನು ಜಿಲ್ಲಾಡಳಿತ ಪತ್ತೆ ಹಚ್ಚುತ್ತಿದೆ.
ಇನ್ನು 9 ಮಂದಿಗೆ ಶೀತ, ಜ್ವರ, ಕೆಮ್ಮು ಲಕ್ಷಣಗಳಿದ್ದವು. ನಾಲ್ವರಿಗೆ ಸೋಂಕಿತರ ಸಂಪರ್ಕದಿಂದ ಸೋಂಕು ತಗುಲಿದೆ. ಇಬ್ಬರು ಅಂತರಾಜ್ಯ ಪ್ರಯಾಣದ ಟ್ರಾವೆಲ್ ಹಿಸ್ಟರಿ ಹೊಂದಿದ್ದಾರೆ. ಸೋಂಕಿತರ ಪೈಕಿ 12 ಮಹಿಳೆಯರು, 11 ಮಂದಿ ಪುರುಷರಿದ್ದಾರೆ. ಗುರುವಾರ 8 ಮಂದಿ ಚಿಕಿತ್ಸೆಯಿಂದ ಗುಣ ಮುಖರಾಗಿ ಬಿಡುಗಡೆಯಾಗಿದ್ದಾರೆ. ಇಲ್ಲಿಯವರೆಗೆ 117 ಮಂದಿ ಬಿಡುಗಡೆಗೊಂಡಿದ್ದು, 80 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಿವಮೊಗ್ಗದಲ್ಲಿ ಮತ್ತೊಂದು ಬಲಿ:
ಶಿವಮೊಗ್ಗ: ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರ ಬೆನ್ನಲ್ಲೇ ಮಹಾಮಾರಿ ಸೋಂಕಿಗೆ ಮತ್ತೊಂದು ಬಲಿಯಾಗಿದ್ದು, ಸಾವಿನ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ 50 ವರ್ಷದ ವ್ಯಕ್ತಿ ಮತಪಟ್ಟಿದ್ದು, ಕಳೆದ ನಾಲ್ಕು ದಿನಗಳ ಹಿಂದೆ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದರು. ವೃತ್ತಿಯಲ್ಲಿ ಶಿಕ್ಷಕರಾಗಿರುವ ಇವರು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷರಾಗಿದ್ದರು. ಇತ್ತೀಚೆಗೆ ಬೆಂಗಳೂರಿಗೆ ತೆರಳಿದ್ದ ಅವರು ಸನ್ಮಾನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ. ಅಲ್ಲಿಂದ ಹಿಂತಿರುಗಿ ಬಂದ ಬಳಿಕ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ದಾವಣಗೆರೆ ಜಿಲ್ಲೆಯ ಚನ್ನಗಿರಿ ಮೂಲದ ವದ್ಧೆಯೋರ್ವರು ಸೋಂಕಿನಿಂದ ಸಾವನ್ನಪ್ಪಿದ್ದರು. ಬಳಿಕ ಶಿಕಾರಿಪುರದ ಖವಾಸಪುರದ ಅಜ್ಜಿ ಹಾಗೂ ಇಂದು ಮತಪಟ್ಟ ಶಿಕ್ಷಕ ಸೇರಿದಂತೆ ಜಿಲ್ಲೆಯಲ್ಲಿ ಮೂವರು ಕರೋನಾಗಿ ಬಲಿಯಾಗಿದ್ದಾರೆ. ಮೃತರ ಸಂಖ್ಯೆ ಏರುತ್ತಲಿರುವುದು ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ.