ಹಾಡಹಾಗಲೇ ರಸ್ತೆಯಲ್ಲಿ ಕಾಡುಕೋಣ, ಜಿಂಕೆಯ ಓಡಾಟ..!

By Kannadaprabha NewsFirst Published May 13, 2020, 7:22 AM IST
Highlights

ವಾರದ ಹಿಂದೆ ಮಂಗಳೂರು ನಗರಕ್ಕೆ ಎರಡು ಕಾಡುಕೋಣಗಳು ಬಂದಿದ್ದು ಬಹಳ ದೊಡ್ಡ ಸುದ್ದಿಯಾಗಿತ್ತು. ಇದೀಗ ಉಡುಪಿ ಜಿಲ್ಲೆಯ 2 ಜನವಸತಿ ಪ್ರದೇಶಗಳಲ್ಲಿಯೂ ಕಾಡುಕೋಣಗಳು ಸಂಚರಿಸುತ್ತಿರುವುದು ಜನರ ಅಚ್ಚರಿಗೆ ಕಾರಣವಾಗಿದೆ.

ಉಡುಪಿ(ಮೇ 13): ಲಾಕ್‌ ಡೌನ್‌ ಮನುಷ್ಯರ ಓಡಾಟದ ಸ್ವಾತಂತ್ರ್ಯವನ್ನು ಕಸಿದುಕೊಂಡಿದ್ದರೆ, ಪ್ರಾಣಿ, ಪಕ್ಷಿ, ಉರಗಗಳಿಗೆ ಸ್ವಚ್ಛಂದವಾಗಿ ಓಡಾಡುವ ಸ್ವಾತಂತ್ರ್ಯವನ್ನು ನೀಡಿದೆ.

ವಾರದ ಹಿಂದೆ ಮಂಗಳೂರು ನಗರಕ್ಕೆ ಎರಡು ಕಾಡುಕೋಣಗಳು ಬಂದಿದ್ದು ಬಹಳ ದೊಡ್ಡ ಸುದ್ದಿಯಾಗಿತ್ತು. ಇದೀಗ ಉಡುಪಿ ಜಿಲ್ಲೆಯ 2 ಜನವಸತಿ ಪ್ರದೇಶಗಳಲ್ಲಿಯೂ ಕಾಡುಕೋಣಗಳು ಸಂಚರಿಸುತ್ತಿರುವುದು ಜನರ ಅಚ್ಚರಿಗೆ ಕಾರಣವಾಗಿದೆ.

ಗುಜರಾತ್‌ನಿಂದ ಧಾರವಾಡದಲ್ಲಿ ಕೊರೋನಾ ಬಾಂಬ್‌ ಸ್ಫೋಟ..!

ವಾರದ ಹಿಂದೆ ಪೆರ್ಡೂರು ಪರಿಸರದಲ್ಲಿ ಹಾಡುಹಗಲೇ ಕಾಡುಕೋಣವೊಂದು ಜನರಿಗೆ ಕಾಣಸಿಕ್ಕಿತ್ತು. ಹಿಂದೆ ಈ ಪರಿಸರದಲ್ಲಿ ಕಾಡುಕೋಣಗಳು ಸಾಮಾನ್ಯವಾಗಿದ್ದವು, ಆದರೆ 10 - 15 ವರ್ಷಗಳಲ್ಲಿ ನೋಡುವುದಕ್ಕೆ ಸಿಕ್ಕಿರಲಿಲ್ಲ, ಈಗ ಕಾಡುಕೋಣ ಬಂದಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಇದೀಗ ಸೋಮವಾರ ಬೆಳ್ಳಂಬೆಳಗ್ಗೆ ಉಡುಪಿ ಸಮೀಪದ ಕುಕ್ಕೆಹಳ್ಳಿ ಗ್ರಾಮದಲ್ಲಿಯೂ ಕಾಡುಕೋಣವನ್ನು ಕಂಡು ಸ್ಥಳೀಯರು ಹೌಹಾರಿದ್ದಾರೆ. ರಸ್ತೆ ಪಕ್ಕದಲ್ಲಿಯೇ ಗಂಭೀರವಾಗಿ ನಡೆದುಕೊಂಡ ಹೋದ ಕಾಡುಕೋಣ ಯಾರಿಗೂ ಹಾನಿಮಾಡದೆ ಕಾಡಿನೊಳಗೆ ಮರೆಯಾಗಿದೆ.

ಲಾಕ್‌ಡೌನ್‌: ಮಂಗಳೂರಿಂದ ನಡೆದು ಹುಬ್ಬಳ್ಳಿಗೆ ಬಂದಿ​ದ್ದ​ವರು ಇಲ್ಲಿಂದರೂ ಕಾಲ್ಕಿತ್ತರು..!

ಕೆಲವು ದಿನಗಳ ಹಿಂದೆ ಹಿರಿಯಡ್ಕ ಸಮೀಪದ ಬೈಲೂರಿನಲ್ಲಿ ಬೊಗಳುವ ಜಿಂಕೆ (ಬಾರ್ಕಿಂಗ್‌ ಡೀರ್‌) ಕಾಣಸಿಕ್ಕಿತ್ತು. ಜನರನ್ನು ನೋಡುತಿದ್ದಂತೆ ಪಕ್ಕದ ಕಾಡಿನಲ್ಲಿ ಓಡಿ ಮರೆಯಾಗಿದೆ. ಸುತ್ತಮುತ್ತ ಮನೆಗಳಿರುವ ಗ್ರಾಮದಲ್ಲಿ ಜಿಂಕೆ ಕಾಣಿಸಿಕೊಂಡಿದ್ದು ಕೂಡ ಅಚ್ಚರಿಗೆ ಕಾರಣವಾಗಿದೆ.

ಜೊತೆಗೆ ಕಾಡುಕೋಳಿಗಳು, ನವಿಲುಗಳು ಕೂಡ ಕಾಡಿಂಚಿನಿಂದ ಹೊರಗೆ ಬಂದು ಮನುಷ್ಯನ ಅಂಗಳದವರೆಗೆ ಬಂದಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ಕೊರೋನ ಲಾಲಾಕ್‌ ಡೌನ್‌ನಿಂದ ಜನರೆಲ್ಲರೂ ಮನೆಯಲ್ಲಿಯೇ ಇರುವುದರಿಂದ ಪ್ರಕೃತಿಯಲ್ಲಿ ಪ್ರಾಣಿಗಳು ಭಯವಿಲ್ಲದೇ ಓಡಾಡುತ್ತಿವೆ. ವಾಹನಗಳ ಓಡಾಟ ಇಲ್ಲ, ಶಬ್ದ - ವಾಯು ಮಾಲಿನ್ಯ ಇಲ್ಲ, ಆದ್ದರಿಂದ ಪ್ರಾಣಿಗಳು ಖುಶಿಯಿಂದ ಸ್ವಚ್ಛ ಪರಿಸರದಲ್ಲಿ ಓಡಾಡುತ್ತಿವೆ.

ಹಾವುಗಳೀಗ ಬಿಂದಾಸ್‌ ಆಗಿ ತಿರುಗಾಡುತ್ತಿವೆ

ಕಾಡುಪ್ರಾಣಿಗಳ ನಂಬರ್‌ ವನ್‌ ಶತ್ರು ಮನುಷ್ಯ. ಆದರೆ ಲಾಕ್‌ಡೌನ್‌ ಸಂದರ್ಭದಲ್ಲಿ ಮನುಷ್ಯ ಮನೆ ಸೇರಿದ್ದಾನೆ, ಆದ್ದರಿಂದ ಪ್ರಾಣಿಗಳಿಗೆ ಸ್ವಾತಂತ್ರ್ಯ ಸಿಕ್ಕಿದೆ. ಕಳೆದೊಂದುವರೆ ತಿಂಗಳಲ್ಲಿ ಹಾವುಗಳು ಬಿಂದಾಸ್‌ ಆಗಿ ಮನೆಗಳ ಸುತ್ತಮುತ್ತ ತಿರುಗಾಡುವುದನ್ನು ನಾನು ಗಮನಿಸಿದ್ದೇನೆ. ಆದರೆ ಮನುಷ್ಯನ ಅಪಾಯದಿಂದ ತಪ್ಪಿಸಿಕೊಂದ ಹಾವುಗಳು ಬೀದಿ ನಾಯಿಗಳ ಬಾಯಿಗೆ ಬೀಳುತ್ತಿವೆ. ಒಂದೇ ತಿಂಗಳಲ್ಲಿ ಇಂತಹ 6 ಪ್ರಕರಣಗಳನ್ನು ನಾನು ನೋಡಿದ್ದೇನೆ. ಇದು ಖಂಡಿತಾ ಲಾಕ್‌ ಡೌನ್‌ನ ಪ್ರಭಾವ ಎನ್ನುತ್ತಾರೆ ಉರಗತಜ್ಞ ಗುರುರಾಜ ಸನೀಲ್‌.

click me!