Cheetah Operation: ಬೆಳಗಾವಿಯ ಗಾಲ್ಫ್‌ ಮೈದಾನದಲ್ಲಿ ಎಲ್ಲಿದೆ ಚಿರತೆ?

By Kannadaprabha NewsFirst Published Aug 31, 2022, 1:41 PM IST
Highlights

ಕಾಡಿನಿಂದ ನಾಡಿಗೆ ಚಿರತೆ ಬಂದು ಬರೋಬ್ಬರಿ 26 ದಿನಗಳು ಕಳೆದಿವೆ. ಅರಣ್ಯ ಇಲಾಖೆ ಚಿರತೆ ಶೋಧ ಕಾರ್ಯ ಕೈಗೊಂಡಿದ್ದರೂ ಪ್ರಯೋಜನ ಮಾತ್ರ ಶೂನ್ಯ

ಶ್ರೀಶೈಲ ಮಠದ

ಬೆಳಗಾವಿ(ಆ.31):  ಬೆಳಗಾವಿ ಕ್ಲಬ್‌ ರಸ್ತೆಯ ಗಾಲ್ಫ್‌ ಕೋರ್ಸ್‌ ಮೈದಾನದಲ್ಲಿ ಚಿರತೆ ನಿಜವಾಗಿಯೂ ಇದೆಯಾ? ಇರುವುದಾದರೂ ಎಲ್ಲಿದೆ? ಅದನ್ನು ಹಿಡಿಯುವುದಾದರೂ ಯಾವಾಗ....?. ಇವು ಬೆಳಗಾವಿ ನಾಗರಕರು ಕೇಳುತ್ತಿರುವ ಪ್ರಶ್ನೆಗಳು. ಕಾಡಿನಿಂದ ನಾಡಿಗೆ ಚಿರತೆ ಬಂದು ಬರೋಬ್ಬರಿ 26 ದಿನಗಳು ಕಳೆದಿವೆ. ಅರಣ್ಯ ಇಲಾಖೆ ಚಿರತೆ ಶೋಧ ಕಾರ್ಯ ಕೈಗೊಂಡಿದ್ದರೂ ಪ್ರಯೋಜನ ಮಾತ್ರ ಶೂನ್ಯ. ಜಾಧವ ನಗರದ ಕಟ್ಟಡ ಕಾರ್ಮಿಕರೊಬ್ಬರ ಮೇಲೆ ದಾಳಿ ನಡೆಸಿದ್ದ ಚಿರತೆ ಬಳಿಕ ಅಲ್ಲಿಂದ ನೇರವಾಗಿ ಗಾಲ್ಫ್‌ ಮೈದಾನಕ್ಕೆ ನುಸುಳಿದೆ. 

ಚಿರತೆ ಶೋಧಕ್ಕೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದ್ದರೂ ಮೊದಮೊದಲು ಚಿರತೆ ಕುರಿತು ಯಾವುದೇ ಸುಳಿವು ಸಿಕ್ಕಿರಲಿಲ್ಲ. ಎರಡು ದಿನಗಳ ಬಳಿಕ ಸಿಸಿಟಿವಿ ಕ್ಯಾಮೆರಾದಲ್ಲಿ ಚಿರತೆ ಚಲನವಲನದ ದೃಶ್ಯ ಸೆರೆಯಾಗಿತ್ತು. ಅರಣ್ಯ ಮತ್ತು ಪೊಲೀಸ್‌ ಇಲಾಖೆ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿದರೂ ಚಿರತೆ ಸುಳಿವು ಸಿಗಲಿಲ್ಲ. ಬಳಿಕ ಅರಣ್ಯಇಲಾಖೆ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಜಿಲ್ಲಾಡಳಿತ ಕೂಡ ಇದರ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಚಿರತೆ ಕ್ಲಬ್‌ ರಸ್ತೆಯ ಮೇಲೆಯೇ ಬೆಳಂಬೆಳಗ್ಗೆ ಓಡಾಡಿದರೂ ಸುತಾರಂ ಇದನ್ನು ಅರಣ್ಯ ಇಲಾಖೆ ಅಧಿಕಾರಿಗಳು ನಂಬಲೇ ಇಲ್ಲ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಚಿರತೆ ಕುರಿತ ದೃಶ್ಯಗಳು ಇಲ್ಲಿಯದ್ದಲ್ಲ. ಬೇರೆ ಕಡೆಯದ್ದು ಎಂದು ಸಬೂಬು ಹೇಳಿ ತಮ್ಮ ಜವಾಬ್ದಾರಿಯಿಂದ ನುಣುಚಿಕೊಂಡರು.

ಬೆಳಗಾವಿ: 25 ದಿನವಾದರೂ ಸಿಗದ ಚಿರತೆ, ಹೆಚ್ಚಿದ ಆತಂಕ

ಅದ್ಯಾವಾಗ ಚಿರತೆ ಬೆಳಂಬೆಳಗ್ಗೆ ಹಿಂಡಲಗಾ ರಸ್ತೆಯ ಗಾಂಧಿ ವೃತ್ತದ ಬಳಿ ಇರುವುದನ್ನು ಖಾಸಗಿ ಬಸ್‌ ಚಾಲಕರೊಬ್ಬರ ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದರೋ ಆಗ ಅರಣ್ಯಇಲಾಖೆ ಅಧಿಕಾರಿಗಳು ಚಿರತೆ ಇರುವುದನ್ನು ಖಚಿತ ಪಡಿಸಿಕೊಂಡರು. ಅದೇ ದಿನವೇ ಚಿರತೆ ಸೆರೆಗೆ ಬಲೆಬೀಸಿದ್ದರು. ಆದರೆ, ಅವರ ಕಣ್ಣೆದುರಲ್ಲೇ ಚಿರತೆ ಓಡಿಹೋಯಿತು. ಬಲೆ ಬೀಸುವಷ್ಟರಲ್ಲಿ ಅದು ತಪ್ಪಿಸಿಕೊಂಡು ಮರಳಿ ಗಾಲ್ಫ್‌ ಮೈದಾನದೊಳಗೆ ಓಡಿಹೋಯಿತು. ಆ ಬಳಿಕ ಮತ್ತೆ ಚಿರತೆಯ ಸುಳಿವೇ ಸಿಕ್ಕಿಲ್ಲ. ಸಿಕ್ಕರೂ ಅದನ್ನು ಹಿಡಿಯಲು ಮಾತ್ರ ಆಗುತ್ತಿಲ್ಲ.

ಬೇಟೆ ನಾಯಿಗಳು ಬಂದವು, ನುರಿತ ಗಜಪಡೆಯೂ ಶಿವಮೊಗ್ಗದ ಸಕ್ರೆ ಬೈಲ್‌ ಬಿಡಾರದಿಂದ ಬಂದಿತು. ಜೆಸಿಬಿಗಳು ಸದ್ದು ಮಾಡಿದವು, ಹಂದಿ ಹಿಡಿಯುವವರು ಹಂದಿ ಬಲೆ ಬೀಸಿದರೂ ಚಾಲಾಕಿ ಚಿರತೆ ಮಾತ್ರ ಸಿಗಲಿಲ್ಲ. ನುರಿತ ಅರೆವಳಿಕೆ ತಜ್ಞ ವೈದ್ಯರ ತಂಡವು ಕಾರ್ಯಾಚರಣೆಯಲ್ಲಿದೆ. ಹೀಗೆ 26ನೇ ದಿನವೂ ಚಿರತೆ ಶೋಧ ಕಾರ್ಯ ಮುಂದುವರಿದಿದೆ.

ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳ ಅರಣ್ಯ ಇಲಾಖೆ 350 ಸಿಬ್ಬಂದಿಯನ್ನು ಚಿರತೆ ಶೋಧ ಕಾರ್ಯಕ್ಕೆ ನಿಯೋಜಿಸಲಾಗಿದೆ. ಪದೇಪದೇ ಕಾಣಿಸಿಕೊಂಡಿದ್ದ ಚಿರತೆ ಇದೀಗ ಮತ್ತೆ ಅದರ ಸುಳಿವೇ ಸಿಗುತ್ತಿಲ್ಲ. ಅದರ ಚಲನವಲನದ ಕುರುಹು ಸಿಕ್ಕಿಲ್ಲ. ಅರಣ್ಯ ಇಲಾಖೆ ಚಿರತೆ ಹಿಡಿಯಲು ಏನೆಲ್ಲಾ ಕಾರ್ಯಾಚರಣೆ ಕೈಗೊಂಡಿದ್ದರೂ ಚಿರತೆ ಮಾತ್ರ ಕೈಗೆ ಸಿಗುತ್ತಿಲ್ಲ. ಪದೇಪದೇ ಅರಣ್ಯ ಇಲಾಖೆಗೆ ಚಳ್ಳೆಹಣ್ಣು ತಿನ್ನುಸುತ್ತಲೇ ಇದೆ.

ರಕ್ಷಣಾ ಇಲಾಖೆಗೆ ಸೇರಿರುವ ಬೆಳಗಾವಿ ಕ್ಲಬ್‌ ರಸ್ತೆಯಲ್ಲಿರುವ ಗಾಲ್ಫ್‌ ಕೋರ್ಸ್‌ ಮೈದಾನದ ಭವ್ಯವಾದ ಸುಮಾರು 250 ಎಕರೆ ಪ್ರದೇಶದಲ್ಲಿ ಅರಣ್ಯದಂತಹ ಪ್ರದೇಶವಿದೆ. ಇಲ್ಲಿ ದಟ್ಟವಾಗಿ ಗಿಡ ಗಂಟೆಗಳು ಬೆಳೆದುನಿಂತಿವೆ. ಅರಣ್ಯ ಇಲಾಖೆ ಅಧಿಕಾರಿಗಳೇ ಚಿರತೆ ಹಿಡಿಯುವುದೇ ಬಹುದೊಡ್ಡ ಸವಾಲಾಗಿದೆ. 26 ದಿನವಾದರೂ ಚಿರತೆ ಹಿಡಿಯಲು ಆಗದ ಅರಣ್ಯಇಲಾಖೆ ಸಿಬ್ಬಂದಿ ಕಾರ್ಯ ವೈಖರಿಯನ್ನು ಪ್ರಶ್ನಿಸುವಂತಾಗಿದೆ. ಚಿರತೆ ಕಣ್ಣುಮುಂದೆ ಹಾದು ಹೋದರೂ ಅದನ್ನು ಹಿಡಿಯಲಾಗಲಿಲ್ಲ. ಬಲೆ ಬೀಸುವಷ್ಟರಲ್ಲಿ ಚಿರತೆ ಅಲ್ಲಿಂದ ತಪ್ಪಿಸಿಕೊಂಡು ತಲೆಮರೆಸಿಕೊಂಡಿತು. ಮೊದಲು ಕೂಡ ಕಾರ್ಯಾಚರಣೆಗೆ ಅಡ್ಡಿಯಾಗಿದ್ದ ಮಳೆ ಇದೀಗ ಮತ್ತೆ ಎರಡು ದಿನಗಳಿಂದ ಸುರಿಯುತ್ತಿರುವುದು ಕೂಡ ಚಿರತೆ ಶೋಧ ಕಾರ್ಯಕ್ಕೆ ಅಡ್ಡಿಯಾಗಿದೆ. ಚಿರತೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ ಎನ್ನುವ ಆರೋಪಗಳು ಕೇಳಿಬರುತ್ತಿವೆ.

ಶಾಲೆಗೆ ರಜೆ: ಮಕ್ಕಳಿಗೆ ಸಜೆ

ಚಿರತೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಗಾಲ್ಫ್‌ ಮೈದಾನದಿಂದ 1 ಕಿ.ಮೀ ವ್ಯಾಪ್ತಿ ಅಂತರದಲ್ಲಿರುವ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಆದರೆ, ಗಾಲ್ಫ್‌ ಮೈದಾದ ಎದುರಿಗೆ ಇರುವ ವನಿತಾ ವಿದ್ಯಾಲಯ ಪ್ರಾಥಮಿಕ ,ಮಾಧ್ಯಮಿಕ ಶಾಲೆಗೆ ರಜೆ ಘೋಷಿಸಿದೆ. ಅಲ್ಲದೇ, ಪ್ರೌಢಶಾಲೆ ತರಗತಿಗಳನ್ನು ಬೋಗಾರವೇಸ್‌ ಬಳಿಯಿರುವ ಕಟ್ಟಡದಲ್ಲಿ ನಡೆಸಲಾಗುತ್ತಿದೆ. ಆದರೆ, ಮಕ್ಕಳು ಸೈಕಲ್‌ ಮೇಲೆಯೇ ಹಿಂಡಲಗಾ ರಸ್ತೆ ಮಾರ್ಗವಾಗಿ ಗಾಂಧಿವೃತ್ತದ ಬಳಿ ಕಾಯ್ದು ಹೋಗುತ್ತಾರೆ. ಮಕ್ಕಳು ಭಯದಿಂದಲೇ ಇಲ್ಲಿ ಸಂಚರಿಸುವಂತಾಗಿದೆ. ಚಿರತೆ ಎಲ್ಲಿ ದಾಳಿ ಮಾಡುತ್ತದೆಯೋ ಎಂಬ ಭಯಭೀತಿ ಪೋಷಕರನ್ನು ಕಾಡುತ್ತಲೇ ಇದೆ.

ಬೆಳಗಾವಿ: ಗಂಡು ಚಿರತೆ ಸರೆಗೆ ಬೋನುಗಳಿಗೆ ಹೆಣ್ಣು ಚಿರತೆ ಯೂರಿನ್‌ ಸ್ಪ್ರೇ

ನಿತ್ಯ ಲಕ್ಷ ಖರ್ಚು

ಗಣೇಶೋತ್ಸವ ಸಂಭ್ರಮ ಬಂದರೂ ಚಿರತೆಯದ್ದೆ ಚಿಂತೆ ಬೆಳಗಾವಿ ನಾಗರಿಕರನ್ನು ಕಾಡುತ್ತಿದೆ. ಒಂದೆಡೆ ಮಳೆ, ಇನ್ನೊಂದೆಡೆ ಚಿರತೆ ಭೀತಿ ನಡುವೆಯೇ ಗಣೇಶೋತ್ಸವ ಆಚರಿಸುವಂತಾಗಿದೆ. ಚಿರತೆ ಶೋಧ ಕಾರ್ಯಕ್ಕೆ ನಿತ್ಯ ಲಕ್ಷಾಂತರ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ದಿನ ಕಳೆದಂತೆ ಖರ್ಚು ಹೆಚ್ಚುತ್ತಲೇ ಇದೆ. ಖರ್ಚು ವಿನಾಕಾರಣ ವ್ಯರ್ಥವಾಗುತ್ತಿದೆ ಹೊರತು ಚಿರತೆ ಹಿಡಿಯಲು ಆಗುತ್ತಿಲ್ಲ. ಇಡೀ ಅರಣ್ಯಇಲಾಖೆ ಸಿಬ್ಬಂದಿ ಗಾಲ್ಫ್‌ ಮೈದಾನದಲ್ಲೇ ಮೊಕ್ಕಾಂ ಹೂಡಿದ್ದಾರೆ. ಆದರೆ, ಅವರ ಪ್ರಯತ್ನ ಮಾತ್ರ ಫಲಕೊಟ್ಟಿಲ್ಲ. ಕೋಂಬಿಂಗ್‌ ಕಾರ್ಯ ಮುಂದುವರೆದಿದೆ. ಆದರೆ, ನಿಜವಾಗಿಯೂ ಚಿರತೆ ಇರುವುದಾದರೂ ಎಲ್ಲಿ ಎನ್ನುವ ಪ್ರಶ್ನೆ ನಾಗರಿಕರನ್ನು ಕಾಡುತ್ತಿದೆ.

ಬೆಳಗಾವಿ ಗಾಲ್ಫ್‌ ಮೈದಾನಕ್ಕೆ ನುಸುಳಿರುವ ಚಿರತೆ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಆದರೆ, ಮಳೆ ಆಗಿರುವುದು ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಏನೇ ಆದರೂ ಚಿರತೆ ಪತ್ತೆ ಹಚ್ಚಲಾಗುವುದು ಅಂತ ಬೆಳಗಾವಿ ಎಸಿಎಫ್‌ ಮಲ್ಲಿನಾಥ ಕುಸ್ನಾಳ ತಿಳಿಸಿದ್ದಾರೆ.  
 

click me!