ಕಾರವಾರ: ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ಪುನೀತ್‌ ಜತೆ ಗಣೇಶ..!

By Kannadaprabha News  |  First Published Aug 31, 2022, 11:36 AM IST

ಪುನೀತ್‌ ರಾಜಕುಮಾರ್‌ ನೆನಪಿಗಾಗಿ ಅಂಕೋಲಾದ ಅವರ್ಸಾದಲ್ಲಿ ಕೋಟ್ಯಧಿಪತಿ ಸೆಟ್‌, ವಿಶೇಷ ಪ್ರಯತ್ನಕ್ಕೆ ಮುಂದಾದ ಕಲಾವಿದ ದಿನೇಶ ಮೇತ್ರಿ


ಜಿ.ಡಿ. ಹೆಗಡೆ

ಕಾರವಾರ(ಆ.31):  ಕನ್ನಡದ ಕೋಟ್ಯಧಿಪತಿ ಅಂಕೋಲಾ ತಾಲೂಕಿನ ಅವರ್ಸಾದಲ್ಲಿ ನಡೆಯುತ್ತಿದೆ. ಡಾ. ಪುನೀತ್‌ ರಾಜಕುಮಾರ ಜತೆ ಹಾಟ್‌ಸೀಟಿನಲ್ಲಿ ಲಂಬೋದರ ಆಸೀನನಾಗಿದ್ದಾನೆ.......! ಇದು ನಿಜವಲ್ಲ. ಸದಾ ನಗು ಮೊಗದಿಂದ, ತಮ್ಮದೇ ಆದ ವಿಶಿಷ್ಟ ನಿರೂಪಣೆಯಿಂದ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮ ನಡೆಸಿ ಕೊಡುತ್ತಿದ್ದ ದಿ. ಪುನೀತ್‌ ಅವರ ನೆನಪಿಗಾಗಿ ಈ ಬಾರಿ ಅವರ್ಸಾ ಸಾರ್ವಜನಿಕ ಗಣೇಶೋತ್ಸವದಲ್ಲಿ ಕನ್ನಡದ ಕೋಟ್ಯಧಿಪತಿ ಸೆಟ್‌ ಹಾಕಲಾಗಿದೆ.

Latest Videos

undefined

ಕುತ್ತಿಗೆಗೆ ಟೈ ಕಟ್ಟಿ, ಸೂಟು-ಬೂಟು ಧರಿಸಿ ಕುಳಿತಿರುವ ದಿ. ಪುನೀತ್‌ ಮೂರ್ತಿ ಒಂದು ಕಡೆಯಿದ್ದರೆ ಅವರ ಎದುರು ಏಕದಂತನ ಮೂರ್ತಿ ಇದೆ. ಮಂಟಪದ ಹಿಂಬದಿಯಲ್ಲಿ, ಅಕ್ಕಪಕ್ಕದಲ್ಲಿ ಕೋಟ್ಯಧಿಪತಿ ಲೋಗೋವನ್ನು ಅಂಟಿಸಲಾಗಿದೆ. ನಗುಮೊಗದ ಪುನೀತ್‌ ಅವರ ಮೂರ್ತಿ ಅತ್ಯಂತ ಆಕರ್ಷಕವಾಗಿದ್ದು, ನೈಜ ಕಾರ್ಯಕ್ರಮ ಇರುವಂತೆಯೇ ಭಾಸವಾಗುತ್ತಿದೆ.

ಕಲಾವಿದರ ಕೈಚಳಕ: ಪೆನ್ಸಿಲ್ ಮೊನೆಯಲ್ಲಿ ಅಶ್ವತ್ಥ ಎಲೆಯಲ್ಲಿ ಮೂಡಿದ ಗಣಪ

ಇಂತಹದ್ದೊಂದು ವಿಶೇಷ ಪ್ರಯತ್ನವನ್ನು ಸ್ಥಳೀಯ ಕಲಾವಿದ ದಿನೇಶ ಮೇತ್ರಿ ಹಾಗೂ ಕುಟುಂಬದವರು ಮಾಡಿದ್ದಾರೆ. 9 ದಿನಗಳವರೆಗೆ ಗಣೇಶೋತ್ಸವ ಇಲ್ಲಿ ನಡೆಯುತ್ತದೆ. ಈ ಎರಡೂ ಮೂರ್ತಿ ಒಂಬತ್ತು ಅಡಿ ಎತ್ತರವಿದೆ. ಕಳೆದ 1 ತಿಂಗಳಿನಿಂದ ಪುನೀತ್‌ ಹಾಗೂ ಗಣೇಶನ ಮೂರ್ತಿ ತಯಾರಿಯಲ್ಲಿ ದಿನೇಶ ಹಾಗೂ ಅವರ ಕುಟುಂಬ ತೊಡಗಿಸಿಕೊಂಡಿದೆ. ಇದರ ಹೊರತಾಗಿ ಈ ಕುಟುಂಬದಿಂದ 170 ಗಜಾನನ ಮೂರ್ತಿಗಳನ್ನು ತಯಾರಿಸಲಾಗಿದೆ. ಪ್ರತಿವರ್ಷವೂ ಅವರ್ಸಾದ ಗಣೇಶೋತ್ಸವದಲ್ಲಿ ವಿಭಿನ್ನವಾಗಿ ಕಲಾಕೃತಿ ತಯಾರಿಸುತ್ತಾರೆ.

ತಲೆತಲಾಂತರದಿಂದಲೂ ಗಣಪತಿ ಮೂರ್ತಿಯನ್ನು ನಮ್ಮ ಕುಟುಂಬವರು ತಯಾರಿಸುತ್ತಾ ಬಂದಿದ್ದಾರೆ. ಈಚೆಗೆ ವಿಭಿನ್ನವಾಗಿ ಮೂರ್ತಿ ತಯಾರಿಕೆಯನ್ನು ನಾವು, ನಮ್ಮ ಕುಟುಂಬದ ಸದಸ್ಯರು ಮಾಡುತ್ತಿದ್ದೇವೆ. ಮೂರ್ತಿ ತಯಾರಿಕೆಗೆ ಎಲ್ಲರೂ ಸಹಕಾರ ನೀಡುತ್ತಾರೆ ಅಂತ ಮೇತ್ರಿ ಕುಟುಂಬದ ಸದಸ್ಯ ಲಕ್ಷ್ಮೀಕಾಂತ ತಿಳಿಸಿದ್ದಾರೆ.  

ಕಲಾವಿದರ ಕಲಾಭಕ್ತಿ, ತಪಸ್ಸಿನಿಂದ ಪುನೀತ್‌ ಮೂರ್ತಿ ಆಕರ್ಷಕವಾಗಿ ಮೂಡಿಬಂದಿದೆ. ಪುನೀತ್‌ ಕಾರ್ಯ ಎಲ್ಲರಿಗೂ ಮಾದರಿ. ಅವರ ನೆನಪಿಗೆ ಈ ಬಾರಿ ಅವರ ಮೂರ್ತಿ ಮಾಡಲಾಗಿದೆ. ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಕೂಡ ಗಣೇಶೋತ್ಸವದಲ್ಲಿ ಆಯೋಜಿಸುತ್ತೇವೆ ಅಂತ ಅವರ್ಸಾ ಪ್ರತಿಭಾ ಪುರಸ್ಕಾರ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ನಾಗೇಂದ್ರ ಮಹಾದೇವ ನಾಯ್ಕ ಹೇಳಿದ್ದಾರೆ. 

ಗಣಪತಿ ಇಬ್ಬರಿಗೆ ಪತಿ! ಬಪ್ಪ ಎರಡೆರಡು ಮದುವೆಯಾದದ್ದು ಯಾಕಪ್ಪಾ?

ಮನೆಯಲ್ಲೂ ಗಣಪ

ದಿನೇಶ ಅವರ ಮನೆಯಲ್ಲೂ 9 ದಿನಗಳವರೆಗೆ ಗಣೇಶ ಪೂಜೆ ನಡೆಯುತ್ತದೆ. ಕೋವಿಡ್‌ ಕಾರಣದಿಂದ ಕಳೆದ 2 ವರ್ಷ ಸಣ್ಣ ಪ್ರಮಾಣದಲ್ಲಿ ಗಣೇಶ ಚತುರ್ಥಿ ಆಚರಣೆಯಾಗಿತ್ತು. ಅದಕ್ಕೂ ಮೊದಲು ವಿಷ್ಣುವಿನ ಕುದುರೆ ಅವತಾರದ ಮೇಲೆ ಗಣಪ, ಹರ ಹರ ಮಹಾದೇವ ಧಾರಾವಾಹಿಯಲ್ಲಿ ಬರುವ ಈಶ್ವರನ ಕೈ ಮೇಲೆ ಭೂಮಿ, ಅದರ ಮೇಲೆ ವಿನಾಯಕ ಮೂರ್ತಿ ಮಾಡಿದ್ದರು. ಹಾಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಮೂರ್ತಿಯನ್ನೂ ಕೆಲವರ್ಷದ ಹಿಂದೆ ಮಾಡಿದ್ದರು.

ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮ ಮಾದರಿ ಗಣೇಶೋತ್ಸವ

ಅಂಕೋಲಾ ತಾಲೂಕಿನ ಅವರ್ಸಾದಲ್ಲಿ ನಡೆಯುವ ಸಾರ್ವಜನಿಕ ಗಣೇಶೋತ್ಸವದಲ್ಲಿ ವಿಘ್ನೇಶನೊಂದಿಗೆ ಈ ಬಾರಿ ದಿ.ಡಾ. ಪುನೀತ್‌ ರಾಜಕುಮಾರ್‌ ಅವರ ಕಲಾಕೃತಿ ತಯಾರಿಸಿದ್ದಾರೆ. ಕನ್ನಡಿಗರ ಮನ ಗೆದ್ದಿದ್ದ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದ ಮಾದರಿಯಲ್ಲಿ ಈ ಬಾರಿ ಗಣೇಶೋತ್ಸವ ನಡೆಸಲಾಗುತ್ತಿದೆ.
 

click me!