ಬೆಂಗ್ಳೂರಲ್ಲಿ ಕರೆಂಟ್‌ ಇರದಿದ್ರೆ ಈ ನಂಬರ್‌ಗೆ ವಾಟ್ಸಾಪ್‌ ಮಾಡಿ..!

By Girish GoudarFirst Published May 25, 2022, 8:30 AM IST
Highlights

*  ಬೆಸ್ಕಾಂ ವಾಟ್ಸಾಪ್‌ ಸಹಾಯವಾಣಿ ಆರಂಭ
*  ಕರೆ ಸಂಪರ್ಕ ಸಾಧ್ಯವಾಗದ ಹಿನ್ನೆಲೆಯಲ್ಲಿ ಕ್ರಮ
*  ಮುಂದೆ ಮೆಸ್ಕಾಂ, ಹೆಸ್ಕಾಂ, ಜೆಸ್ಕಾಂ ಮತ್ತು ಚೆಸ್ಕಾಂಗೂ ಜಾರಿ
 

ಬೆಂಗಳೂರು(ಮೇ.25):  ಬೆಸ್ಕಾಂ ಸಹಾಯವಾಣಿಗೆ ಕರೆ ಮಾಡಿದರೆ ಸಂಪರ್ಕ ಸಾಧ್ಯವಾಗುವುದೇ ಇಲ್ಲ ಎಂದು ಇನ್ನು ಮುಂದೆ ಬೇಸರ ಮಾಡಿಕೊಳ್ಳುವ ಪ್ರಮೇಯವೇ ಉಂಟಾಗುವುದಿಲ್ಲ. 8 ಜಿಲ್ಲೆಗೆ 11 ‘ವಾಟ್ಸಾಪ್‌ ಸಹಾಯವಾಣಿ’ ಸಂಖ್ಯೆಗಳನ್ನು ಲೋಕಾರ್ಪಣೆ ಮಾಡಲಾಗಿದ್ದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಇಂಧನ ಸಚಿವ ವಿ.ಸುನೀಲ್‌ ಕುಮಾರ್‌, ವಿದ್ಯುತ್‌ ವ್ಯತ್ಯಯ ಮತ್ತಿತರ ಸಾರ್ವಜನಿಕರ ಕುಂದು ಕೊರತೆ ಶೀಘ್ರ ಬಗೆಹರಿಸಲು ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗೆ 11 ವಾಟ್ಸಾಪ್‌  ಸಹಾಯವಾಣಿ ಸಂಖ್ಯೆ ಬಿಡುಗಡೆ ಮಾಡುತ್ತಿದ್ದೇವೆ. ಮಳೆಗಾಲ ಹಾಗೂ ತುರ್ತು ಸಂದರ್ಭಗಳಲ್ಲಿ ಹಾಲಿ ಸಹಾಯವಾಣಿ ಸಂಖ್ಯೆ 1912ಗೆ ಸಾವಿರಾರು ಕರೆ ಬರುತ್ತಿದ್ದು ಸುಲಭವಾಗಿ ಸಂಪರ್ಕ ಲಭ್ಯವಾಗುತ್ತಿರಲಿಲ್ಲ. ಆದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪ್ಪಷ್ಟಪಡಿಸಿದರು.

ಭದ್ರತಾ ಠೇವಣಿ ಹೆಚ್ಚಿಸಿ ಶಾಕ್‌ ಕೊಟ್ಟ ಬೆಸ್ಕಾಂ, 30 ದಿನದಲ್ಲಿ ಪಾವತಿಯಾಗದಿದ್ದರೆ ವಿದ್ಯುತ್ ಕಟ್!

ಈ ರೀತಿ ಮಾಡಿದ್ದರಿಂದ 1912ಗೆ ಬರುವ ಕರೆಗಳ ಒತ್ತಡ ಕಡಿಮೆ ಆಗುತ್ತದೆ. ಗ್ರಾಹಕರು ವಾಟ್ಸ್‌ಆ್ಯಪ್‌ ಸಂದೇಶ ಕಳುಹಿಸುವ ಮೂಲಕ ಎಲ್ಲ ರೀತಿಯ ವಿದ್ಯುತ್‌ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಪಡೆಯಬಹುದು. ಮುಂದಿನ ದಿನಗಳಲ್ಲಿ ಮೆಸ್ಕಾಂ, ಹೆಸ್ಕಾಂ, ಜಿಸ್ಕಾಂ ಮತ್ತು ಚೆಸ್ಕಾಂ ವ್ಯಾಪ್ತಿಯಲ್ಲೂ ವಾಟ್ಸಾಪ್‌ ಸಹಾಯವಾಣಿ ಸಂಖ್ಯೆಗಳನ್ನು ಬಿಡುಗಡೆ ಮಾಡಲಾಗುವುದು ಎಂದು ವಿವರಿಸಿದರು.

ನೋಡಲ್‌ ಅಧಿಕಾರಿಗಳ ನಿಯೋಜನೆ

ಇತ್ತೀಚೆಗೆ ಸುರಿದ ಭಾರೀ ಗಾಳಿ, ಮಳೆಗೆ ಬೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್‌ ವ್ಯತ್ಯಯವಾಗಿದ್ದರಿಂದ ಬೆಸ್ಕಾಂ 1912 ಸಹಾಯವಾಣಿ ಕೇಂದ್ರವನ್ನು ಇನ್ನಷ್ಟು ಬಲಪಡಿಸಲು ನಿರ್ಧರಿಸಲಾಗಿದ್ದು, ನೋಡಲ್‌ ಅಧಿಕಾರಿಗಳನ್ನು ನಿಯೋಜಿಲಾಗಿದೆ. ಸಹಾಯಕ ಕಾರ್ಯನಿರ್ವಾಹಕ ಎಂಜನಿಯರ್‌ಗಳನ್ನು 3 ಪಾಳಿಯಲ್ಲಿ ನಿಯೋಜಿಸಲಾಗಿದ್ದು, ಸಹಾಯವಾಣಿ ಮತ್ತು ಬೆಸ್ಕಾಂ ವಿಭಾಗ ಹಾಗೂ ಉಪ ವಿಭಾಗಗಳ ನಡುವೆ ಸಮನ್ವಯ ಸಾಧಿಸಲು ಅನುಕೂಲವಾಗುತ್ತದೆ ಎಂದು ಹೇಳಿದರು.

Power Reduction Trouble: ನಗರ ವ್ಯಾಪ್ತಿಯಲ್ಲಿ ಬೇಕಾಬಿಟ್ಟಿ ವಿದ್ಯುತ್‌ ಕಡಿತ!

ವಾಟ್ಸಾಪ್‌ ಸಹಾಯವಾಣಿ ವಿವರ

ಬೆಂಗಳೂರು ನಗರ ಜಿಲ್ಲೆ: ದಕ್ಷಿಣ ವೃತ್ತ- 8277884011, ಪಶ್ಚಿಮ ವೃತ್ತ- 8277884012, ಪೂರ್ವ ವೃತ್ತ- 8277884013, ಉತ್ತರ ವೃತ್ತ- 8277884014. ಕೋಲಾರ ಜಿಲ್ಲೆ- 8277884015, ಚಿಕ್ಕಬಳ್ಳಾಪುರ ಜಿಲ್ಲೆ- 8277884016, ಬೆಂಗಳೂರು ಗ್ರಾಮಾಂತರ ಜಿಲ್ಲೆ- 8277884017, ರಾಮನಗರ ಜಿಲ್ಲೆ- 8277884018, ತುಮಕೂರು ಜಿಲ್ಲೆ- 8277884019, ಚಿತ್ರದುರ್ಗ ಜಿಲ್ಲೆ- 8277884020, ದಾವಣಗರೆ ಜಿಲ್ಲೆ- 8277884021.

ಸಿಬ್ಬಂದಿ ಕೊರತೆಯಿಲ್ಲ

ರಾಜ್ಯದ ಯಾವ ಎಸ್ಕಾಂಗಳಲ್ಲೂ ಸಿಬ್ಬಂದಿ ಕೊರತೆಯಿಲ್ಲ. ಪ್ರತಿ ಎಸ್ಕಾಂಗೂ 400 ಲೈನ್‌ಮ್ಯಾನ್‌ ನೇಮಕಕ್ಕೆ ಆದೇಶಿಸಲಾಗಿದೆ. ಪವರ್‌ ಮ್ಯಾನ್‌ಗಳ ನೇಮಕ ಸೇರಿದಂತೆ ಎಲ್ಲ ಸಿಬ್ಬಂದಿಗಳ ಹುದ್ದೆಯನ್ನು ಭರ್ತಿ ಮಾಡಲಾಗಿದೆ. ಮಳೆಗಾಲದಲ್ಲಿ ಎಲ್ಲಿಯೂ ತೊಂದರೆ ಆಗದಂತೆ ನೋಡಿಕೊಳ್ಳಲಾಗಿದೆ ಅಂತ ಇಂಧನ ಸಚಿವ ವಿ.ಸುನೀಲ್‌ ಕುಮಾರ್‌ ತಿಳಿಸಿದ್ದಾರೆ. 

click me!