* ಮಳೆಯಾಶ್ರಿತ ರೈತರಿಂದ ಬಿತ್ತನೆ ಕಾರ್ಯ ಆರಂಭ
* ಗರಿಗೆದರಿದ ಕೃಷಿ ಚಟುವಟಿಕೆ, ಮಿಶ್ರ ಬೆಳೆ ಬಿತ್ತನೆ
* ಮಳೆಯಿಂದ ಉಂಟಾಗಿರುವ ಹಸಿಯಲ್ಲೇ ಮಿಶ್ರಬೆಳೆ ಬಿತ್ತನೆ
ಕೃಷ್ಣ ಎನ್. ಲಮಾಣಿ
ಹೊಸಪೇಟೆ(ಮೇ.25): ವಿಜಯನಗರ ಜಿಲ್ಲೆಯ ಮಳೆಯಾಶ್ರಿತ ರೈತರಿಗೆ ಅಕಾಲಿಕ ಮಳೆಯೇ ಆಸರೆಯಾಗಿದ್ದು, ಜಿಲ್ಲೆಯ ರೈತರು ಒಂದು ಕಡೆಯಲ್ಲಿ ಮಿಶ್ರ ಬೆಳೆ ಬಿತ್ತನೆ ಮಾಡುತ್ತಿದ್ದರೆ, ಇನ್ನೊಂದೆಡೆಯಲ್ಲಿ ಹೊಲಗಳನ್ನು ಉಳುಮೆ ಮಾಡುತ್ತಿದ್ದಾರೆ. ಹಾಗಾಗಿ ಜಿಲ್ಲಾದ್ಯಂತ ಕೃಷಿ ಚಟುವಟಿಕೆ ಗರಿಗೆದರಿದೆ.
ಜಿಲ್ಲೆಯ ಹರಪನಹಳ್ಳಿ, ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು ಮತ್ತು ಕೂಡ್ಲಿಗಿ ಹಾಗೂ ಹೊಸಪೇಟೆ ತಾಲೂಕುಗಳಲ್ಲಿ ರೈತರು ಅಕಾಲಿಕ ಮಳೆಯನ್ನೇ ವರದಾನವನ್ನಾಗಿ ಮಾಡಿಕೊಂಡಿದ್ದಾರೆ. ಹಾಗಾಗಿ ಮಳೆಯಿಂದ ಉಂಟಾಗಿರುವ ಹಸಿಯಲ್ಲೇ ಮಿಶ್ರಬೆಳೆ ಬಿತ್ತನೆ ಮಾಡುತ್ತಿದ್ದಾರೆ.
ರೈತರಿಗೆ ಗುಡ್‌ನ್ಯೂಸ್: ತುಂಗಭದ್ರ ಜಲಾಶಯಕ್ಕೆ ದಾಖಲೆ ಪ್ರಮಾಣದಲ್ಲಿ ಹರಿದುಬಂದ ನೀರು
ಬೇಗನೆ ಮುಂಗಾರು ಎಂಟ್ರಿ:
ಈ ಬಾರಿ ಮುಂಗಾರು ಮಳೆ ರಾಜ್ಯಕ್ಕೆ ಬೇಗನೆ ಪ್ರವೇಶಿಸಿರುವುದನ್ನು ಅರಿತುಕೊಂಡಿರುವ ರೈತರು, ಬಿತ್ತನೆ ಕಾರ್ಯ ಆರಂಭಿಸಿದ್ದಾರೆ. ವಿಜಯನಗರ ಜಿಲ್ಲೆಯಲ್ಲಿ ನೀರಾವರಿಗಿಂತ ಮಳೆಯಾಶ್ರಿತ ಪ್ರದೇಶವೇ ಹೆಚ್ಚಿದೆ. ಹಾಗಾಗಿ ರೈತರು ಬಿತ್ತನೆ ಕಾರ್ಯ ಆರಂಭಿಸಿದ್ದಾರೆ.
ಮಿಶ್ರ ಬೇಸಾಯ:
ಜಿಲ್ಲೆಯ ರೈತರು ಹೆಸರು, ಅಲಸಂದಿ ಹಾಗೂ ಜೋಳವನ್ನು ಮಿಶ್ರ ಬಳೆಯಾಗಿ ಬಿತ್ತನೆ ಮಾಡುತ್ತಿದ್ದಾರೆ. ಇನ್ನೂ ಹಲವು ರೈತರು ಬಿತ್ತನೆಗಾಗಿ ಹೊಲಗಳನ್ನು ಹದಗೊಳಿಸುತ್ತಿದ್ದಾರೆ. ಉಳುಮೆ ಕಾರ್ಯವೂ ಭರದಿಂದ ಸಾಗಿದೆ. ಜಿಲ್ಲೆಯ ಹಗರಿಬೊಮ್ಮನಹಳ್ಳಿ, ಹೊಸಪೇಟೆ, ಕೂಡ್ಲಿಗಿ, ಕೊಟ್ಟೂರು ತಾಲೂಕುಗಳ ಹೊಲಗಳು ಅಕಾಲಿಕ ಮಳೆಗೆ ಬಹುತೇಕ ಹಸಿಯಾಗಿವೆ. ರೈತರು ತಮ್ಮ ಅನುಭವದ ಆಧಾರದ ಮೇಲೆ ಬಿತ್ತನೆ ಮಾಡುತ್ತಿದ್ದು, ಈಗ ಬಿತ್ತನೆ ಮಾಡಿದರೆ ಖಂಡಿತ ಬೆಳೆ ಬರುತ್ತದೆ. ಹಾಗಾಗಿ ಕೃಷಿ ಕಾರ್ಯ ಆರಂಭಿಸಿದ್ದೇವೆ ಎಂದು ಕೊಟ್ಟೂರು ತಾಲೂಕಿನ ದೂಪದಹಳ್ಳಿ ಗ್ರಾಮದ ರೈತ ಬಸವರಾಜ ಹೇಳಿದರು.
ಕೊಟ್ಟೂರಿನ ಬಣವಿಕಲ್ಲು, ಗಜಾಪುರ, ಹಾಳ್ಯಾ, ತಿಮ್ಮಲಾಪುರ ಸೇರಿದಂತೆ ಹೊಸಪೇಟೆ, ಕೂಡ್ಲಿಗಿ ಭಾಗದಲ್ಲೂ ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ.
ಇತ್ತ ಕೃಷಿ ಇಲಾಖೆಯಿಂದಲೂ ರೈತರಿಗೆ ರಸಗೊಬ್ಬರ ಹಾಗೂ ಬಿತ್ತನೆ ಬೀಜ ಕೂಡ ಪೂರೈಕೆ ಮಾಡಲಾಗುತ್ತಿದೆ. ಹಾಗಾಗಿ ಜಿಲ್ಲೆಯಲ್ಲಿ ಉತ್ಸಾಹದೊಂದಿಗೆ ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಕೃಷಿ ಇಲಾಖೆಯಿಂದ ರೈತ ಸಂಪರ್ಕ ಕೇಂದ್ರಗಳಲ್ಲಿ ರಸಗೊಬ್ಬರ ಹಾಗೂ ಬಿತ್ತನೆ ಬೀಜ ಸರಬರಾಜು ಮಾಡಲಾಗಿದೆ. ಬಿತ್ತನೆ ಬೀಜ ಹಾಗೂ ರಸಗೊಬ್ಬರ ಖರೀದಿ ಶುರು ಮಾಡಿದ್ದಾರೆ.
ಜಿಲ್ಲೆಯಲ್ಲಿ ಸೂರ್ಯಕಾಂತಿ, ಮೆಕ್ಕೆಜೋಳ, ಜೋಳ, ಅಲಸಂದಿ, ಹೆಸರು ಸೇರಿದಂತೆ ಹಲವು ಬೆಳೆಗಳನ್ನು ರೈತರು ಬೆಳೆಯುತ್ತಾರೆ.
ಕೋಟಿಗಟ್ಟಲೇ ಬೆಲೆ ಬಾಳೋ ಭೂಮಿ ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಯತ್ನ: ಅಕ್ರಮಕ್ಕೆ ಸಾಥ್ ನೀಡಿದ ಸರ್ಕಾರಿ ಅಧಿಕಾರಿಗಳು
ಮಳೆ ನಂಬಿ ಬಿತ್ತನೆ ಮಾಡ್ತಾ ಇದ್ವಿ. ಭಾರಿ ಮಳಿ ಬಿದೈತಿ. ಹೊಲ ಹಸಿ ಇರೋದರಿಂದ ಬಿತ್ತನೆ ಮಾಡ್ತಾ ಇದೀವಿ. ಮಳೆ ಬರೈತಿತಿ ಅಂತ ನಂಬಿಕೆ ಇದೆ. ಹಾಗಾಗಿ ಬಿತ್ತನೆ ಮಾಡ್ತಾ ಇದ್ವಿ ಅಂತ ದೂಪದಹಳ್ಳಿ ರೈತ ನಾಗರಾಜ ಹೇಳಿದ್ದಾರೆ.
ಮಳೆ ದೇವರು ಕೊಟ್ಟವರ. ಈ ಸಲ ಬೇಗನೆ ಬಂದೈತಿ. ಹಾಗಾಗಿ ಬಿತ್ತನೆ ಮಾಡ್ತಾ ಇದೀವಿ. ಹದಿನೈದು ದಿನಕ್ಕೊಮ್ಮೆ ಮಳೆಯಾದ್ರೆ ಸಾಕು, ಜೋಳ ಮತ್ತು ಹೆಸರು, ಅಲಸಂದಿ ಬೆಳೆ ಬಂದು ಬಿಡ್ತೈತಿ ಅಂತ ಕೊಟ್ಟೂರಿನ ಇಮಾಮ್‌ಸಾಬ್ ತಿಳಿಸಿದ್ದಾರೆ.
ಮಳೆ ಬಂದಿರೋದಕ್ ನಮಗೆ ಕೆಲ್ಸ ಸಿಕೈತಿ. ಬಿತ್ತನೆಗೆ ಬಂದೀವಿ. ಒಬ್ಬರಿಗೆ ದಿನಕ್ ನೂರು ರು. ಕೂಲಿ ಸಿಗೈತಿ. ಹೆಂಗಾದ್ರು ಜೀವನ ನಡೆತೈತಿ. ಮಳೆ ದೇವರು ನಮ್ಮ ಮ್ಯಾಲೆ ಕೃಪೆ ತೋರಾರಯನ್ ಅಂತ ಕೂಲಿ ಕಾರ್ಮಿಕರು ಬಸಮ್ಮ, ನಿಂಗಮ್ಮ ಹಾಳ್ಯಾ ಹೇಳಿದ್ದಾರೆ.