
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ನಾಲ್ಕು ಕಪ್ಪು ವೃತ್ತಗಳಿರುವ ವಿಶೇಷ ಟ್ರಾಫಿಕ್ ಸಿಗ್ನಲ್ ಹಲವರನ್ನು ಆಕರ್ಷಿಸಿದೆ. ಬೆಂಗಳೂರಿನಲ್ಲಿ ಈ ಸೈನ್ ಬೋರ್ಡ್ ಕಾಣಿಸುತ್ತಿದ್ದಂತೆ, ವ್ಯಕ್ತಿಯೋರ್ವ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಈ ಸೈನ್ ಬೋರ್ಡ್ ಅನ್ನು ಯಾಕೆ ಅಳವಡಿಸಿದ್ದಾರೆ ಎಂದು ವೈಟ್‌ಫೀಲ್ಡ್ ಟ್ರಾಫಿಕ್ ಪೊಲೀಸರು ವಿವರಣೆ ನೀಡಿದ್ದಾರೆ. ಅಸಲಿಗೆ ಈ ಸೈನ್ ಬೋರ್ಡ್ ಅರ್ಥ ಏನು ಅಂತ ತಿಳಿದುಕೊಳ್ಳೋಣಾ..
ಸಾಮಾನ್ಯವಾಗಿ ರಸ್ತೆಯ ಪಕ್ಕದಲ್ಲಿ ಅಳವಡಿಸುವ ಟ್ರಾಫಿನ್ ಸೈನ್ ಬೋರ್ಡ್ ವಾಹನ ಸವಾರರಿಗೆ ಹಲವು ವಿಚಾರಗಳನ್ನು ಸೂಚಿಸುತ್ತವೆ. ಪ್ರತಿಯೊಂದು ಗುರುತಿಗೂ ಒಂದು ವಿಶೇಷ ಅರ್ಥ ಇರುತ್ತದೆ. ಆದರೆ ಬೆಂಗಳೂರಿನ ಹೋಪ್ ಫಾರ್ಮ್ ಜಂಕ್ಷನ್‌ನಲ್ಲಿ ಅಳವಡಿಸಲಾಗಿರುವ ಒಂದು ವಿಶಿಷ್ಟವಾದ ಫಲಕವು ಸದ್ಯ ಎಲ್ಲರ ಗಮನ ಸೆಳೆಯುತ್ತಿದೆ. ಬಿಳಿಯ ಬೋರ್ಡ್ ಮೇಲೆ ನಾಲ್ಕು ಕಪ್ಪು ವೃತ್ತಗಳನ್ನು ಕಾಣಬಹುದಾಗಿದೆ. ಈ ಚಿಹ್ನೆಯ ಅರ್ಥವನ್ನು ತಿಳಿಯುವ ಕುತೂಹಲದಿಂದ, ಅನಿರುದ್ಧ ಮುಖರ್ಜಿ ಎಂಬ ಪ್ರಯಾಣಿಕರೊಬ್ಬರು ಆ ಫಲಕದ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದರು. ಅಲ್ಲದೆ, ಅವರು ಸಂಚಾರ ಪೊಲೀಸ್ ಅಧಿಕಾರಿಗಳಲ್ಲಿ ಆ ಚಿಹ್ನೆಗೆ ಸಂಬಂಧಿಸಿದ ವಿವರಗಳನ್ನು ನೀಡುವಂತೆಯೂ ಕೋರಿದರು.
ಈ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿರುವ ವೈಟ್‌ಫೀಲ್ಡ್ ಟ್ರಾಫಿಕ್ ಪೊಲೀಸರಿಗೆ ಈ ಸೈನ್ ಬೋರ್ಡ್ ಬಗ್ಗೆ ವಿವರಿಸಿದ್ದಾರೆ. ಆ ಪ್ರದೇಶದಲ್ಲಿ ದೃಷ್ಟಿಹೀನ ವ್ಯಕ್ತಿಗಳು ಈ ಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿರಬಹುದು ಎಂಬುದರ ಕುರಿತು ವಾಹನ ಸವಾರರಿಗೆ ಎಚ್ಚರಿಕೆ ನೀಡಲು, ನಾಲ್ಕು ಕಪ್ಪು ವೃತ್ತಗಳ ಚಿಹ್ನೆಯನ್ನು ಹೊಂದಿರುವ ಫಲಕವನ್ನು ಅಳವಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನ ಹೋಪ್ ಫಾರ್ಮ್ ಜಂಕ್ಷನ್ ಬಳಿ ದೃಷ್ಟಿಹೀನ ವಿದ್ಯಾರ್ಥಿಗಳಿಗಾಗಿ ಒಂದು ಶಾಲೆ ಇದೆ. ಈ ಕಾರಣದಿಂದ ಈ ಪ್ರದೇಶದಲ್ಲಿ ರಸ್ತೆದಾಟಲು ಮುಂದಾಗಬಹುದು. ಆದ್ದರಿಂದ ಅವರ ಭದ್ರತೆಯ ದೃಷ್ಟಿಯಿಂದ ಈ ಬೋರ್ಡ್ ಅನ್ನು ಟ್ರಾಫಿಕ್ ಪೊಲೀಸರು ಅಳವಡಿಸಿದ್ದಾರೆ.
ಇಂತಹ ಸೈನ್ ಬೋರ್ಡ್ ಎಲ್ಲಿ ಕಾಣಿಸಿದರೂ ವಾಹನ ಸವಾರು ಎಚ್ಚರಿಕೆಯಿಂದ ಇರಬೇಕು. ವಾಹನ ವೇಗ ಕಡಿಮೆ ಮಾಡಿ, ಈ ಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿರುವ ಪಾದಚಾರಿಗಳನ್ನು ಗಮನಿಸಿ ಡ್ರೈವಿಂಗ್ ಮಾಡಬೇಕಿದೆ. ಕಣ್ಣಿನ ದೃಷ್ಟಿದೋಷ ಇರುವ ವ್ಯಕ್ತಿಗಳು ರಸ್ತೆಯ ಮೇಲೆ ನಡೆದುಕೊಂಡು ಹೋಗುವಾಗ ಪದೇ ಪದೇ ಹರ್ನ್ ಮಾಡುವುದು ಅಥವಾ ವೇಗವಾಗಿ ವಾಹನ ಚಾಲನೆ ಮಾಡುವುದು ಸರಿಯಲ್ಲ.
ರಸ್ತೆ ಸುರಕ್ಷತೆಯ ನಿಟ್ಟಿನಲ್ಲಿ ಇಂತಹ ವಿಶೇಷ ಸೂಚನೆಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಪ್ರತಿ ಟ್ರಾಫಿಕ್ ಸೈನ್ ಬೋರ್ಡ್ ಹಿಂದೆಯೂ ಒಂದು ವಿಶೇಷ ಉದ್ದೇಶ ಇರುತ್ತದೆ. ಆದ್ದರಿಂದ ಹೊಸದಾಗಿ ಕಾಣಿಸುವ ಇಂತಹ ಸೈನ್ ಬೋರ್ಡ್‌ಗಳ ಬಗ್ಗೆ ತಿಳಿದುಕೊಳ್ಳಬೇಕಿದೆ. ಜೊತೆಗೆ ಟ್ರಾಫಿಕ್ ನಿಯಮಗಳನ್ನು ಪಾಲಿಸುವುದು ಚಾಲಕರ ಕರ್ತವ್ಯವಾಗಿದೆ.