
ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇಂದು ಅವರನ್ನು ಭೇಟಿ ಮಾಡಲು ಅವರ ಪತ್ನಿ ವಿಜಯಲಕ್ಷ್ಮೀ ಜೈಲಿಗೆ ಆಗಮಿಸಿದ್ದರು. ವಿಶೇಷವೆಂದರೆ.. ಈ ಬಾರಿ ಅವರ ಜೊತೆಗೆ ದರ್ಶನ್ ಆಪ್ತ ಸ್ನೇಹಿತರಾದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮತ್ತು ನಟ ಝೈದ್ ಖಾನ್ ಕೂಡ ಆಗಮಿಸಿದ್ದರು.
ವಿಜಯಲಕ್ಷ್ಮೀ, ದರ್ಶನ್ ಪುಟ್ಟಣ್ಣಯ್ಯ ಮತ್ತು ಝೈದ್ ಖಾನ್ ದರ್ಶನ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ದರ್ಶನ್ ಆರೋಗ್ಯ ಮತ್ತು ಜೈಲಿನಲ್ಲಿನ ಸೌಕರ್ಯಗಳ ಬಗ್ಗೆ ಈ ವೇಳೆ ವಿಚಾರಿಸಲಾಗಿದೆ ಎಂದು ತಿಳಿದುಬಂದಿದೆ.
ಝೈದ್ ಖಾನ್ ಅವರು ದರ್ಶನ್‌ಗಾಗಿ ಹಣ್ಣುಹಂಪಲುಗಳನ್ನು ತಂದಿದ್ದರು ಎಂದು ತಿಳಿದುಬಂದಿದೆ. ಜೈಲಿನ ನಿಯಮದಂತೆ ತಪಾಸಣೆಯ ನಂತರ ಅವುಗಳನ್ನು ಒಳಗೆ ಒಯ್ಯಲು ಅನುಮತಿ ನೀಡಲಾಯಿತು. ಸಂಕಷ್ಟದ ಸಮಯದಲ್ಲಿ ದರ್ಶನ್ ಅವರಿಗೆ ಬೆಂಬಲವಾಗಿ ನಿಲ್ಲಲು ಆಪ್ತರು ಭೇಟಿ ನೀಡಿದ್ದಾರೆ. ಕಳೆದ ಕೆಲವು ದಿನಗಳಿಂದ ದರ್ಶನ್ ಅವರ ಆರೋಗ್ಯದ ಬಗ್ಗೆ ಕೆಲವು ಸುದ್ದಿಗಳು ಹರಿದಾಡುತ್ತಿದ್ದವು. ಈ ಹಿನ್ನೆಲೆಯಲ್ಲಿ ಇಂದಿನ ಭೇಟಿ ಪ್ರಾಮುಖ್ಯತೆ ಪಡೆದಿದೆ. ರೇಣುಕಾಸ್ವಾಮಿ ಕೇಸ್‌ನಲ್ಲಿ ದರ್ಶನ್ ಎ2 (A2) ಆರೋಪಿಯಾಗಿದ್ದಾರೆ.