ಮುಖ್ಯಮಂತ್ರಿಯವರು ಖಾಸಗಿಯಾಗಿ ಆಸ್ಪತ್ರೆ ನಿರ್ಮಿಸುವುದಿದ್ದರೂ ಅದಕ್ಕೆ ಅಗತ್ಯವಿರುವ ಭೂಮಿ, ರಸ್ತೆ ಸಂಪರ್ಕದ ಜತೆಗೆ ಅಗತ್ಯವಿದ್ದಲ್ಲಿ ಅನುದಾನ ನೆರವನ್ನೂ ನೀಡುವ ಭರವಸೆಯನ್ನು ನೀಡಿದ್ದಾರೆ: ಕೋಟ
ಕಾರವಾರ(ಸೆ.18): ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನು ಒಂದೇ ದಿನದಲ್ಲಿ ಮಾಡಲು ಸಾಧ್ಯವಿಲ್ಲ. ಆದರೆ ಖಂಡಿತವಾಗಿ ಉತ್ತರಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆಯನ್ನು ನಿರ್ಮಾಣ ಮಾಡಿಯೇ ಮಾಡುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು. ನಗರಕ್ಕೆ ಆಗಮಿಸಿದ್ದ ವೇಳೆ ಮಾಧ್ಯಮದವರ ಜತೆ ಮಾತನಾಡಿದ ಅವರು, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿರುವ ಟೀಕೆ ಟಿಪ್ಪಣಿಗಳನ್ನು ಗಮನಿಸಿದ್ದೇವೆ. ನಾವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಆರೋಗ್ಯ ಸಚಿವ ಡಾ.ಸುಧಾಕರ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಮುಖ್ಯಮಂತ್ರಿಯವರು ಖಾಸಗಿಯಾಗಿ ಆಸ್ಪತ್ರೆ ನಿರ್ಮಿಸುವುದಿದ್ದರೂ ಅದಕ್ಕೆ ಅಗತ್ಯವಿರುವ ಭೂಮಿ, ರಸ್ತೆ ಸಂಪರ್ಕದ ಜತೆಗೆ ಅಗತ್ಯವಿದ್ದಲ್ಲಿ ಅನುದಾನ ನೆರವನ್ನೂ ನೀಡುವ ಭರವಸೆಯನ್ನು ನೀಡಿದ್ದಾರೆ ಎಂದರು.
ಮುಖ್ಯಮಂತ್ರಿ ಜಿಲ್ಲೆಗೆ ಆಗಮಿಸುವ ಬಗ್ಗೆ ಪ್ರಶ್ನಿಸಿದಾಗ, ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸೇರಿದಂತೆ ವಿವಿಧ ಯೋಜನೆಗಳ ಅನುಷ್ಠಾನ ಹಾಗೂ ಉದ್ಘಾಟನೆ ಮಾಡುವ ಕಾರ್ಯಕ್ರಮಗಳಿವೆ. ಹೀಗಾಗಿ ಅಧಿವೇಶನದ ನಂತರ ಸಿಎಂ ಜಿಲ್ಲೆಗೆ ಬರುತ್ತಾರೆ ಎಂದು ತಿಳಿಸಿದರು.
undefined
COASTAL CLEANUP DAY; ಕಾರವಾರ ಕಡಲತೀರ ಸ್ವಚ್ಛಗೊಳಿಸಿದ ಗವರ್ನರ್ ಥಾವರಚಂದ್
ಆರ್ಥಿಕ ಇಲಾಖೆ ಆಸ್ಪತ್ರೆ ಯೋಜನೆ ತಿರಸ್ಕರಿಸಿದ ಬಗ್ಗೆ ಕೇಳಿದಾಗ, ಇಲಾಖೆ ಒಪ್ಪಲಿಲ್ಲ ಎನ್ನುವ ಕಾರಣಕ್ಕೆ ಯೋಜನೆ ಬಿಡಲು ಸಾಧ್ಯವಿಲ್ಲ. ಆರ್ಥಿಕ ಇಲಾಖೆಯನ್ನು ಒಪ್ಪಿಸುವವರೆಗೆ ಮುಖ್ಯಮಂತ್ರಿಯನ್ನು ಕಾಡುತ್ತೇವೆ. ಆರ್ಥಿಕ ಇಲಾಖೆಯಿಂದ ಅನುಮೋದನೆಯನ್ನು ತಂದೇ ತರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಆಸ್ಪತ್ರೆಯ ವಿಷಯದಲ್ಲಿ ರಾಜಕೀಯ ಇಲ್ಲ: ಶಾಸಕಿ ರೂಪಾಲಿ
ಕಾರವಾರ: ಉತ್ತರ ಕನ್ನಡಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಾತ್ವಿಕ ಒಪ್ಪಿಗೆ ನೀಡಿದ್ದಾರೆ. ಅಧಿವೇಶನ ಬಳಿಕ ಜಿಲ್ಲೆಗೆ ಬಂದು ಘೋಷಣೆ ಮಾಡಲಿದ್ದಾರೆ. ಇದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ನಿರಂತರವಾಗಿ ಹೋರಾಡುತ್ತಿರುವ ಕಾರವಾರ ಶಾಸಕಿ ರೂಪಾಲಿ ನಾಯ್ಕ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.
ಶುಕ್ರವಾರ ಅಧಿವೇಶನದ ನಡುವೆ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಸ್ಪೆಷಾಲಿಟಿ ಆಸ್ಪತ್ರೆಯ ಅಗತ್ಯತೆ, ಜನರು ಅನುಭವಿಸುತ್ತಿರುವ ನೋವು, ಪರದಾಟ ಇವೆಲ್ಲವನ್ನೂ ವಿವರಿಸಿದಾಗ ಸಿಎಂ ಆಸ್ಪತ್ರೆ ಮಂಜೂರು ಮಾಡಲು ತಾತ್ವಿಕವಾಗಿ ಒಪ್ಪಿದರು. ಅಲ್ಲದೆ, ಆರ್ಥಿಕ ಇಲಾಖೆಯಿಂದ ಅನುಮತಿ ಪಡೆಯುವುದಾಗಿ ಭರವಸೆ ನೀಡಿದ್ದಾರೆ ಎಂದು ರೂಪಾಲಿ ತಿಳಿಸಿದ್ದಾರೆ.
ಗುರುವಾರ ವಿಧಾನಸಭೆಯಲ್ಲಿ ಆಸ್ಪತ್ರೆ ಕುರಿತು ತಾವು ಪ್ರಶ್ನಿಸಿದಾಗ ಆರೋಗ್ಯ ಸಚಿವ ಡಾ.ಸುಧಾಕರ ಗೈರಾಗಿದ್ದರು. ಆ ಹಿನ್ನೆಲೆಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮುಂದಿನ ವಾರ ಚರ್ಚೆಗೆ ಅವಕಾಶ ಮಾಡಿಕೊಡುವುದಾಗಿ ಹೇಳಿದ್ದರು. ಆಸ್ಪತ್ರೆ ವಿಷಯದಲ್ಲಿ ರಾಜಕಾರಣ ಮಾಡುವುದಿಲ್ಲ. ಜಿಲ್ಲೆಯ ಜನತೆಯ ಹಿತದೃಷ್ಟಿಯಿಂದ ಸ್ಪೆಷಾಲಿಟಿ ಆಸ್ಪತ್ರೆ ಆಗಲೇಬೇಕು. ಮುಖ್ಯಮಂತ್ರಿ ನೀಡಿರುವ ಭರವಸೆ ಈಡೇರಿಸಲಿದ್ದಾರೆ ಎಂಬ ವಿಶ್ವಾಸ ಇದೆ ಎಂದರು.
ಸಮ್ಮಿಶ್ರ ಸರ್ಕಾರ ಇರುವ ಸಮಯದಿಂದ ಈ ತನಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ತಾವು 24 ಮನವಿಗಳನ್ನು ಸರ್ಕಾರಕ್ಕೆ ನೀಡಿದ್ದೇವೆ. ಆದರೆ ಮೂರು ಬಾರಿ ಆರ್ಥಿಕ ಇಲಾಖೆಯಿಂದ ಪ್ರಸ್ತಾವನೆ ತಿರಸ್ಕರಿಸಲಾಗಿತ್ತು. ಕ್ರಿಮ್ಸ್ ಸಲ್ಲಿಸಿದ ಪ್ರಸ್ತಾವನೆ ಸರಿ ಇರಲಿಲ್ಲ ಎಂದು ಒಮ್ಮೆ, ಕೊರೋನಾ ಇರುವುದರಿಂದ ಇನ್ನೊಮ್ಮೆ ತಿರಸ್ಕರಿಸಲಾಗಿತ್ತು ಎಂದು ವಿವರಿಸಿದರು.
ಕಾರವಾರ: ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಜನಾಕ್ರೋಶ
ಈಗಾಗಲೇ ಕಾರವಾರದಲ್ಲಿ ಉದ್ದೇಶಿತ 450 ಬೆಡ್‌ಗಳ ಆಸ್ಪತ್ರೆಗೆ .160 ಕೋಟಿ ಬಿಡುಗಡೆಯಾಗಿದೆ. ಇನ್ನು ಹೆಚ್ಚುವರಿಯಾಗಿ .30-40 ಕೋಟಿ ಇದ್ದಲ್ಲಿ ಸ್ಪೆಷಾಲಿಟಿ ಆಸ್ಪತ್ರೆಯಾಗಿಸಬಹುದು. ಇದಕ್ಕಾಗಿ ಅಂದು ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ .30 ಕೋಟಿ ನೀಡುವಂತೆ ಆರ್ಥಿಕ ಇಲಾಖೆಗೆ ಸೂಚಿಸಿದ್ದರೂ ಇಲಾಖೆ ನೀಡಿರಲಿಲ್ಲ ಎಂದರು.
ರೂಪಾಲಿ ಎಲ್ಲರ ಪರವಾಗಿ ಗರ್ಜಿಸಿದ್ದಾರೆ:
ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕುರಿತು ಮಾತನಾಡಿ, ಉತ್ತರ ಕನ್ನಡದಲ್ಲಿ ನಿಶ್ಚಿತವಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆಗುತ್ತದೆ ಎಂದರು. ಎಲ್ಲ ಜನಪ್ರತಿನಿಧಿಗಳ ಪರವಾಗಿ ರೂಪಾಲಿ ನಾಯ್ಕ ಸದನದಲ್ಲಿ ಗರ್ಜಿಸಿದ್ದಾರೆ. ಮುಖ್ಯಮಂತ್ರಿ ಅವರನ್ನೂ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಅಧಿವೇಶನ ಮುಗಿದ ಬಳಿಕ ಮುಖ್ಯಮಂತ್ರಿ ಜಿಲ್ಲೆಗೆ ಆಗಮಿಸಿ ಸೂಪರ್ ಸ್ಪೆಷಾಲಿಟಿ ಘೋಷಣೆ ಮಾಡಲಿದ್ದಾರೆ ಎಂದು ಹೇಳಿದರು.
ಸುಸಜ್ಜಿತ ಆಸ್ಪತ್ರೆ ಬಗ್ಗೆ ರಾಜ್ಯಪಾಲರ ಸ್ಪಂದನೆ
ಕಾರವಾರದಲ್ಲಿ ಶನಿವಾರ ಅಂತಾರಾಷ್ಟ್ರೀಯ ಕಡಲತೀರ ಸ್ವಚ್ಛತಾ ದಿನಾಚರಣೆಗೆ ಆಗಮಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರಿಗೆ ಮನವಿ ನೀಡಿ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರಿಗೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಮನವಿ ಸಲ್ಲಿಸಿದ್ದಾರೆ. ರಾಜ್ಯಪಾಲರೂ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ರೂಪಾಲಿ ರಾಜ್ಯಪಾಲರ ಸಮ್ಮುಖದಲ್ಲಿಯೇ ಹೇಳಿರುವುದು ಗಮನಾರ್ಹವಾಗಿದೆ.