ನಮಗ ತಿನ್ನಾಕ ಹಿಡಿ ಹಿಟ್ಟೂಇಲ್ಲ; ದನಕ್ಕ ಹೊಟ್ಟೂಇಲ್ಲ ನೆರೆ ಸಂತ್ರಸ್ತೆ ಭೀಮವ್ವಳ ನೋವಿನ ಮಾತು

By Kannadaprabha NewsFirst Published Sep 9, 2022, 2:17 PM IST
Highlights

‘ನಮಗ ತಿನ್ನಾಕ ಹಿಡಿ ಹಿಟ್ಟೂಇಲ್ಲ, ದನಕ್ಕ ಹಾಕಾಕ ಹೊಟ್ಟೂಇಲ್ಲ.. ನಮ್‌ ಬದುಕ್‌ ನೀರಾಗ ಕೊಚ್ಕೊಂಡು ಹೋಗೈತ್ರಿ..’! ಇದು ಕಳೆದ 3 ದಿನಗಳ ಹಿಂದೆ ಸುರಿದ ಮಳೆಗೆ ಮನೆಯಲ್ಲಿ ನೆನೆದಿದ್ದ ದವಸ ಧಾನ್ಯವನ್ನು ಒಣಗಿಸಲು ಸ್ವಚ್ಛಗೊಳಿಸುತ್ತಿದ್ದ ಹುಬ್ಬಳ್ಳಿ ತಾಲೂಕಿನ ಇಂಗಳಹಳ್ಳಿಯ ಭೀಮವ್ವ ಕಂಬಾರ ಹೇಳುವ ಮಾತು.

ಶಿವಾನಂದ ಗೊಂಬಿ

 ಹುಬ್ಬಳ್ಳಿ (ಸೆ.9) : ‘ನಮಗ ತಿನ್ನಾಕ ಹಿಡಿ ಹಿಟ್ಟೂಇಲ್ಲ, ದನಕ್ಕ ಹಾಕಾಕ ಹೊಟ್ಟೂಇಲ್ಲ.. ನಮ್‌ ಬದುಕ್‌ ನೀರಾಗ ಕೊಚ್ಕೊಂಡು ಹೋಗೈತ್ರಿ..’! ಇದು ಕಳೆದ 3 ದಿನಗಳ ಹಿಂದೆ ಸುರಿದ ಮಳೆಗೆ ಮನೆಯಲ್ಲಿ ನೆನೆದಿದ್ದ ದವಸ ಧಾನ್ಯವನ್ನು ಒಣಗಿಸಲು ಸ್ವಚ್ಛಗೊಳಿಸುತ್ತಿದ್ದ ಹುಬ್ಬಳ್ಳಿ ತಾಲೂಕಿನ ಇಂಗಳಹಳ್ಳಿಯ ಭೀಮವ್ವ ಕಂಬಾರ ಹೇಳುವ ಮಾತು. ಕಳೆದ ಮೂರು ದಿನಗಳ ಹಿಂದೆ ಕುಂಭದ್ರೋಣ ಮಳೆಗೆ ಕಿರೇಸೂರ, ಹೆಬಸೂರ, ಮಂಟೂರ, ಇಂಗಳಹಳ್ಳಿ, ಅಣ್ಣಿಗೇರಿ, ಯಮನೂರ ಸೇರಿದಂತೆ ಹಲವು ಗ್ರಾಮಗಳು ಅಕ್ಷರಶಃ ನಲುಗಿವೆ. ಈ ಊರುಗಳಿಗೆ ಮಳೆ ನೀರು ನುಗ್ಗಿ ನೂರಾರು ಮನೆಗಳಲ್ಲಿ ಎದೆವರೆಗೂ ನೀರು ನಿಂತಿದೆ. ಇದರಿಂದಾಗಿ ಜನತೆ ತಮ್ಮ ಜೀವ ಉಳಿಸಿಕೊಳ್ಳುವುದು ಕಷ್ಟಎಂಬಂತಹ ಮನಸ್ಥಿತಿಗೆ ತಲುಪಿದ್ದುಂಟು.

ಹುಬ್ಬಳ್ಳಿ-ಧಾರವಾಡ ಪ್ರವಾಹ ಪೀಡಿತ ಸ್ಥಳಗಳಿಗೆ ಸಚಿವರ ಭೇಟಿ

ಮನೆಯಲ್ಲಿದ್ದ ಜೋಳ, ಗೋದಿ, ಅಕ್ಕಿ, ಹೆಸರು, ಕಡಲೆ ಸೇರಿದಂತೆ ವಿವಿಧ ದವಸ ಧಾನ್ಯ ಕೂಡ ಮಳೆ ನೀರಲ್ಲಿ ಕೊಚ್ಚಿಕೊಂಡು ಹೋಗಿದ್ದರೆ, ಕೆಲವೊಂದಿಷ್ಟುನೀರಲ್ಲಿ ನಿಂತು ಹಾಳಾಗಿದೆ. ಇನ್ನು ಅಡುಗೆಗೆಂದು ಬೀಸಿಟ್ಟಿದ್ದ ಹಿಟ್ಟೆಲ್ಲವೂ ನೀರಲ್ಲಿ ನೆನೆದು ಸಂಪೂರ್ಣ ಹಾಳಾಗಿದೆ. ಅಂದು ರಾತ್ರಿ ಮನೆ ಬಿಟ್ಟು ಗುಡಿ, ಗುಂಡಾರ, ಶಾಲೆ, ಸಮುದಾಯ ಭವನ ಸೇರಿದ್ದ ಜನತೆಯೆಲ್ಲ ಮರುದಿನ ನೀರು ಇಳಿದ ಮೇಲೆ ಮನೆಗಳಿಗೆ ಬಂದಿದ್ದಾರೆ.

ಮನೆಗೆ ಬಂದು ನೋಡಿದಾಗಲೇ ದವಸ-ಧಾನ್ಯ ನೀರಾಗ ನಿಂತಿರುವುದು, ಹಿಟ್ಟು, ಹೊಟ್ಟು ನೆನೆದು ಹಾಳಾಗಿರುವುದು ಗೊತ್ತಾಗಿದೆ. ಮನೆಗೆ ನುಗ್ಗಿದ್ದ ನೀರನ್ನು ಹೊರಗೆ ಹಾಕಿ, ಸ್ವಚ್ಛಗೊಳಿಸಿ ದವಸ-ಧಾನ್ಯದ ತುಂಬಿಟ್ಟಿದ್ದ ಚೀಲ ಬಿಚ್ಚಿ ಸ್ವಚ್ಛಗೊಳಿಸುತ್ತಿದ್ದಾರೆ. ನೆನೆದಿರುವ ಕಾಳನ್ನು ಮನೆ ಹೊರಗೆ ಒಣಗಲು ಹಾಕಿದ್ದಾರೆ. ಇಂಗಳಹಳ್ಳಿಯ ಹಳ್ಳದ ಪಕ್ಕದ ಎಲ್ಲ ಮನೆಗಳಲ್ಲೂ ಇದೇ ದೃಶ್ಯ ಗೋಚರಿಸುತ್ತದೆ.

ಮನೆ ಹೊರಗೆ ಕುಳಿತು ಸ್ವಚ್ಛಗೊಳಿಸುತ್ತಿದ್ದ ಭೀಮವ್ವ, ಗುಡ್ಡಮ್ಮ, ಯಲ್ಲಮ್ಮಳ ಬಳಿ ಮಾತಿಗಿಳಿಯುತ್ತಿದ್ದಂತೆ ಕಣ್ಣೀರು ಸುರಿಸಿದರು. ‘ಏನ್ಮಾಡೋದ್ರಿ.. ಅಡುಗಿ ಮಾಡಕೊಂದ ತಿನ್ನಬೇಕಂದ್ರ ಹಿಡಿ ಹಿಟ್ಟು ಉಳಿದಿಲ್ಲ. ಎಲ್ಲ ಹಾಳಾಗೈತಿ. ದವಸ-ಧಾನ್ಯ ಎಲ್ಲ ಕೊಚ್ಕೊಂಡು ಹೋಗ್ಯಾವ. ಅತ್ತ ದನಕ್ಕಾದರೂ ಹೊಟ್ಟೆತುಂಬಾ ಹೊಟ್ಟು ಹಾಕೋಣಂದ್ರೆ ಅದೂ ಇಲ್ಲ. ಎಲ್ಲ ನೆನೆದು ಹಾಳಾಗೈತಿ.. ನಮ್ಮ ಜತೆ ದನಾನೂ ಉಪವಾಸ ಅದಾವ್ರಿ.. ಹೊಟ್ಟಿಹಸಿದು ಅಂಬಾ ಅಂತಾ ಕೂಗ್ತಾವ್ರಿ ದನಾ.. ಏನ್ಮಾಡಬೇಕೋ ಗೊತ್ತಾಗವಲ್ತು.. ದನಾ ಕೂಗೋದು ಕೇಳಿದ್ರ ಕರಳು ಹಿಂಡಿದಂಗ ಆಗತೈತಿ.. ಎಂದು ರೋದಿಸುತ್ತಲೇ ಅತಿವೃಷ್ಟಿಯ ಭೀಕರತೆ ಬಿಚ್ಚಿಟ್ಟರೆ, ಅತ್ತ ದನದ ಕೊಟ್ಟಿಗೆಗೆ ಕರೆದುಕೊಂಡು ಹೋಗಿ ನೆನೆದಿರುವ ಮೇವನ್ನು ಪುರುಷರು ತೋರಿಸಿದರು.

ಅಂದು ಮಳೆಯಾದ ರಾತ್ರಿ ಜನರೆಲ್ಲ ಊರೊಳಗಿನ ದೇವಸ್ಥಾನಕ್ಕೆ ಹೋಗಿದ್ದರು. ಆದರೆ ಜಾನುವಾರುಗಳು ಮಾತ್ರ ದನದ ಕೊಟ್ಟಿಗೆಯಲ್ಲೇ ನುಗ್ಗಿದ್ದ ನೀರಲ್ಲೇ ನಿಂತಿದ್ದವು. ಬೆಳಿಗ್ಗೆ ಬಂದ ಮೇಲೆ ಕೊಟ್ಟಿಗೆಯಲ್ಲಿನ ನೀರನ್ನು ತೆಗೆದು ಹೊರಗೆ ಹಾಕಿದೆವು ಎಂದು ತಿಳಿಸುತ್ತಾರೆ ನಾರಾಯಣಪ್ಪ ಕಂಬಾರ. ಒಟ್ಟಿನಲ್ಲಿ ಮಳೆಯಿಂದ ದವಸ ಧಾನ್ಯ, ಹಿಟ್ಟು ಹೊಟ್ಟು ಎಲ್ಲವೂ ಕೊಚ್ಚಿಕೊಂಡು ಹೋಗಿದೆ. ಇದು ಜನರನ್ನು ಹೈರಾಣು ಮಾಡಿದೆ. ಜನತೆಗೇನೋ ಕಾಳಜಿ ಕೇಂದ್ರ ತೆರೆದು ಅಲ್ಪಸ್ವಲ್ಪ ಹೊಟ್ಟೆಗೆ ಜಿಲ್ಲಾಡಳಿತ ಕೊಟ್ಟಿದೆ. ಇದರೊಂದಿಗೆ ಜಾನುವಾರುಗಳಿಗೆ ಮೇವು ಕೊಡುವ ವ್ಯವಸ್ಥೆ ಮಾಡಬೇಕೆಂಬುದು ಜನರ ಒಕ್ಕೊರಲಿನ ಆಗ್ರಹ.

ನೀರಿನಲ್ಲಿ ಕೊಚ್ಚಿಹೋದ ಆಟೋ , ಜೀವ ಉಳಿಸಿಕೊಂಡು ಮನೆಗೆ ಬಂದ ಚಾಲಕ

ಮಳಿ ಬಂದ ದಿನಾ ನಮ್‌ ಜೀವ ಉಳಿಸಿಕೊಳ್ಳೊದ್‌ ಕಷ್ಟಾಆಗಿತ್ತು. ಹೀಂಗಾಗಿ ದನಗಳನ್ನು ಕೊಟ್ಟಿಗೆಯಲ್ಲೇ ಬಿಟ್ಟು ಹೋಗಿದ್ದವು. ರಾತ್ರಿಯಿಡೀ ಅವು ನೀರಾಗ ನಿಂತಿದ್ದವು. ಮರುದಿನ ಬೆಳಗ್ಗೆ ಬಂದು ಕೊಟ್ಟಿಗೆಯಲ್ಲಿನ ನೀರನ್ನು ಹೊರಹಾಕಿ ಸ್ವಚ್ಛಗೊಳಿಸಿದೇವು. ಆದರೆ ಮೇವೆಲ್ಲ ನೆನೆದು ದನಕ್ಕೆ ಹಾಕುವುದು ಕಷ್ಟವೆಂಬಂತಾಗಿದೆ.

ಮಾಬೂಬಸಾಬ್‌ ಗೋರಿಮನಿ, ಇಂಗಳಹಳ್ಳಿಯ ಯುವಕ

click me!