
ಮಂಗಳೂರು (ಸೆ.9) : ಅತಿವೃಷ್ಟಿಹಾನಿ ಅಧ್ಯಯನಕ್ಕಾಗಿ ಕೇಂದ್ರ ಸರ್ಕಾರದ ಅಂತರ್ ಸಚಿವಾಲಯದ ಅಧಿಕಾರಿಗಳ ಅಧ್ಯಯನ ತಂಡವು ಗುರುವಾರ ಜಿಲ್ಲೆಯ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಹಾನಿಗೀಡಾದ ಕಡಲ ತೀರ, ರಸ್ತೆ, ಸೇತುವೆ, ಮನೆಗಳನ್ನು ಪರಿಶೀಲಿಸಿತು. ಜಿಲ್ಲೆಯಲ್ಲಿ ಜುಲೈನಿಂದ ಸುರಿದ ತೀವ್ರ ಮಳೆಯಿಂದಾಗಿ ಕೃಷಿ ಹಾಗೂ ತೋಟಗಾರಿಕಾ ಬೆಳಗಳು, ಮೂಲಭೂತ ಸೌಕರ್ಯಗಳು, ಬೆಳೆ, ಮಾನವ ಹಾಗೂ ಜಾನುವಾರುಗಳ ಜೀವ ಹಾನಿ ಬಗ್ಗೆ ಅಧ್ಯಯನ ತಂಡಕ್ಕೆ ನಗರದ ಖಾಸಗಿ ಹೊಟೇಲ್‌ನಲ್ಲಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಮಾಹಿತಿ ನೀಡಿದರು. ಅತಿವೃಷ್ಟಿಯಿಂದಾಗಿ ಹಾನಿಗೊಳಗಾದ ಪರಿಹಾರಕ್ಕಾಗಿ ಒಟ್ಟು 311 ಕೋಟಿ ರು. ಪರಿಹಾರಕ್ಕೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದೂ ಅವರು ಹೇಳಿದರು.
ದಕ್ಷಿಣ ಕನ್ನಡ: ಪ್ರಯಾಣಿಕನ ಒದ್ದು ರಸ್ತೆಗೆ ತಳ್ಳಿದ ಬಸ್ ನಿರ್ವಾಹಕ ಅಮಾನತು
ನಂತರ ಅಧಿಕಾರಿಗಳು ವಿಪರೀತ ಕಡಲ್ಕೊರೆತ ಉಂಟಾಗಿರುವ ಉಳ್ಳಾಲದ ಬಟಪ್ಪಾಡಿಗೆ ತೆರಳಿ ಅಲ್ಲಿನ ವಾಸ್ತವ ಪರಿಸ್ಥಿತಿಯನ್ನು ಅವಲೋಕಿಸಿದರು. ರಸ್ತೆ ಹಾನಿ, ಕಡಲ್ಕೊರೆತದಿಂದಾದ ಹಾನಿ ವೀಕ್ಷಿಸಿದ ತಂಡದ ಸದಸ್ಯರು ಸ್ಥಳೀಯರ ಸಮಸ್ಯೆಗಳನ್ನು ಆಲಿಸಿದರು. ನಂತರ ಹೊಸಬೆಟ್ಟು- ಮೀನಕಳಿಯಗೆ ತೆರಳಿ ಕಡಲ್ಕೊರೆತ, ರಸ್ತೆ ಹಾನಿ, ತೀವ್ರ ಮಳೆಯಿಂದಾಗಿ ಮನೆಗಳಿಗಾದ ಹಾನಿ ಸೇರಿದಂತೆ ಸ್ಥಿತಿಗತಿಗಳನ್ನು ಪರಿಶೀಲಿಸಿದರು.
ಜಿಲ್ಲೆಯಲ್ಲಿ ಅಧಿಕ ಮಳೆಯಿಂದ ಉಂಟಾದ ಕಡಲ್ಕೊರೆತ ಹಾಗೂ ಇತರ ಹಾನಿಗಳ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದ ಅಧಿಕಾರಿಗಳು, ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ತಿಳಿಸಿದರು. ತಂಡದ ಮುಖ್ಯಸ್ಥರಾಗಿರುವ ಗೃಹ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ಆಶಿಶ್ ಕುಮಾರ್, ಕೇಂದ್ರ ಹಣಕಾಸು ಸಚಿವಾಲಯದ ಉಪ ನಿರ್ದೇಶಕ ಮಹೇಶ್ ಕುಮಾರ್, ಕೇಂದ್ರ ಇಂಧನ ಸಚಿವಾಲಯದ ಸಹಾಯಕ ನಿರ್ದೇಶಕಿ ಭವ್ಯಾ ಪಾಂಡೆ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಡಾ. ಮನೋಜ್ ರಾಜನ್ ಇದ್ದರು.
ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕುಮಾರ್, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಸಹಾಯಕ ಆಯುಕ್ತ ಮದನ್ ಮೋಹನ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಸೀತಾ, ತಹಸೀಲ್ದಾರ್ ಪುಟ್ಟರಾಜ್, ಜಿಲ್ಲಾ ವಿಪತ್ತು ನಿರ್ವಹಣಾ ಪರಿಣತ ವಿಜಯ್ ಕುಮಾರ್ ಪೂಜಾರ್ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.
ಎಲ್ಲ ರೈತರನ್ನೂ ವಿಮೆ ವ್ಯಾಪ್ತಿಗೊಳಪಡಿಸಿ: ಆಶೀಶ್ ಕುಮಾರ್
ಉಡುಪಿ ಜಿಲ್ಲೆಯಲ್ಲಿ ಮಳೆಯಿಂದ ಆಗಿರುವ ಹಾನಿಯ ಬಗ್ಗೆ ಕೇಂದ್ರ ಸರ್ಕಾರದ ಅಧ್ಯಯನ ತಂಡದ ಮುಖ್ಯಸ್ಥ ಹಾಗೂ ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಆಶೀಶ್ ಕುಮಾರ್, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್ ರಾಜನ್, ಕೇಂದ್ರ ಹಣಕಾಸು ಇಲಾಖೆಯ ಉಪ ನಿರ್ದೇಶಕ ಮಹೇಶ್ ಕುಮಾರ್, ಕೇಂದ್ರ ಇಂಧನ ಇಲಾಖೆಯ ಸಹಾಯಕ ನಿರ್ದೇಶಕಿ ಭವ್ಯಾ ಪಾಂಡೆ ಅವರು ಜಿಲ್ಲೆಯಲ್ಲಿ ಮಳೆಯಿಂದ ಹೆಚ್ಚು ಹಾನಿಗೀಡಾದ ವಿವಿಧ ಪ್ರದೇಶಗಳಿಗೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ನಡೆದ ಸಭೆಯಲ್ಲಿ ಆಶೀಶ್ ಕುಮಾರ್ ಮಾತನಾಡಿ, ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಮತ್ತು ಇತರ ಬೆಳೆ ವಿಮೆಯ ಶೇ.98ರಷ್ಟುಪ್ರೀಮಿಯಂ ಹಣವನ್ನು ಸರ್ಕಾರವೇ ಪಾವತಿಸುತ್ತದೆ. ಕೇವಲ ಶೇ.2ರಷ್ಟುಹಣವನ್ನು ರೈತರು ಪಾವತಿಸಿದರೆ ರೈತರಿಗೆ ಮಳೆಯಿಂದಾದ ನಷ್ಟಕ್ಕೆ ಪರಿಹಾರ ನೀಡಲಾಗುತ್ತದೆ. ಈ ಬಗ್ಗೆ ಜಿಲ್ಲೆಯ ರೈತರಲ್ಲಿ ಅರಿವು ಮೂಡಿಸಿ, ಹೆಚ್ಚಿನ ಸಂಖ್ಯೆಯಲ್ಲಿ ರೈತರು ಈ ಬೆಳೆ ವಿಮೆಗೊಳಪಡುವಂತೆ ಮಾಡಬೇಕು ಎಂದವರು ಅಧಿಕಾರಿಗಳಿಗೆ ಸೂಚಿಸಿದರು. ಮೀನುಗಾರಿಕೆಗೆ ತೆರಳುವ ಎಲ್ಲ ಬೋಟುಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಬೇಕು, ಆಗ ಮಾತ್ರ ವಿಕೋಪದ ಸಂದರ್ಭದಲ್ಲಿ ಪರಿಹಾರ ಸಿಗುತ್ತದೆ ಎಂದವರು ಹೇಳಿದರು. ಜಿಲ್ಲಾಧಿಕಾರಿ ಕೂರ್ಮಾರಾವ್ ಅವರು ಜಿಲ್ಲೆಯ ಮಳೆಹಾನಿಯ ವಿವರಗಳನ್ನು ನೀಡಿದರು. ಈ ಬಾರಿಯ ಮಳೆಗೆ 2 ಜನ ಮೃತಪಟ್ಟು, 65 ಮನೆಗಳು ಪೂರ್ಣ ಪ್ರಮಾಣದಲ್ಲಿ ಕುಸಿದಿವೆ, 424 ಮನೆಗಳಿಗೆ ಭಾಗಶಃ ಹಾನಿಯಾಗಿದೆ. 1239.73 ಹೆಕ್ಟೇರ್ ಕೃಷಿಭೂಮಿಯಲ್ಲಿ ಬೆಳೆ ಹಾನಿಯಾಗಿದೆ ಎಂದರು. ಸರ್ಕಾರದ ಖಜಾನೆ ವ್ಯವಸ್ಥೆಗೆ Karnataka Bank ಸೇರ್ಪಡೆ
ಉಡುಪಿ ಜಿಲ್ಲೆಯ ವಿಕೋಪ ನಿರ್ವಹಣೆಗೆ ಮೆಚ್ಚುಗೆ :
ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ತಕ್ಷಣ ಸ್ಥಳಕ್ಕೆ ಧಾವಿಸಿ ಸ್ಪಂದಿಸಲು ಉಡುಪಿ ಜಿಲ್ಲಾಡಳಿತವು ಜಿಲ್ಲಾ ವಿಪತ್ತು ನಿರ್ವಹಣಾ ಯೋಜನೆಯನ್ನು ರಾಜ್ಯದಲ್ಲಿಯೇ ಉತ್ತಮ ರೀತಿಯಲ್ಲಿ ರೂಪಿಸಿದೆ. ಜಿಲ್ಲೆಯಲ್ಲಿ 300ಕ್ಕೂ ಹೆಚ್ಚು ಆಪತ್ ಮಿತ್ರ ಸ್ವಯಂ ಸೇವಕರಿಗೆ ಹಾಗೂ 180 ಕ್ಕೂ ಹೆಚ್ಚು ನೆಹರು ಯುವಕೇಂದ್ರದ ಸ್ವಯಂ ಸೇವಕರಿಗೆ ತರಬೇತಿ ನೀಡಿರುವುದಕ್ಕೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್ ರಾಜನ್ ಮೆಚ್ಚುಗೆ ವ್ಯಕ್ತಪಡಿಸಿದರು.