ಜಾತ್ರೆಗೂ ಮುನ್ನವೇ ತುಂಗಭದ್ರಾ ನದಿಯಲ್ಲಿ ಖಾಲಿಯಾದ ನೀರು|ನದಿಗೆ ಬಂದ ನೀರು ಜಾತ್ರೆಯೊಳಗೆ ಬತ್ತಿ ಹೋಗಿದೆ| ಮೈಲಾರಲಿಂಗೇಶ್ವರ ಜಾತ್ರೆಗೆ ನಾನಾ ಕಡೆಗಳಿಂದ ಬರುವ ಲಕ್ಷಾಂತರ ಭಕ್ತರು|
ಹೂವಿನಹಡಗಲಿ(ಫೆ.06): ನಾಡಿನ ಸುಪ್ರಸಿದ್ಧ ಮೈಲಾರಲಿಂಗೇಶ್ವರ ಜಾತ್ರೆಗೆ ಬರುವ ಲಕ್ಷಾಂತರ ಭಕ್ತರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ, ಭದ್ರಾ ಡ್ಯಾಂನಿಂದ ಬಿಟ್ಟ ನೀರೆಲ್ಲ ಖಾಲಿಯಾಗಿದ್ದು ತುಂಗಭದ್ರಾ ನದಿಯಲ್ಲಿ ನೀರು ಸಂಪೂರ್ಣ ಖಾಲಿಯಾಗಿ ಬಣಗುಡುತ್ತಿದೆ.
ಮೈಲಾರ ಜಾತ್ರೆಗೂ ಮುನ್ನವೇ ತುಂಗಭದ್ರಾ ನದಿಯಲ್ಲಿ ಬಹುತೇಕ ಕಡೆಗಳಲ್ಲಿ ನೀರೇ ಇಲ್ಲ. ಜಾತ್ರೆಗೆ ಪೂರ್ವಭಾವಿಯಾಗಿ ಭದ್ರಾ ಡ್ಯಾಂನಿಂದ ಜ. 6 ಮತ್ತು 7ರಂದು ತುಂಗಭದ್ರಾ ನದಿಗೆ ಅರ್ಧ ಟಿಎಂಸಿ ನೀರು ಹರಿಸಲಾಗಿತ್ತು. ನದಿಗೆ ಬಂದ ನೀರು ಜಾತ್ರೆಯೊಳಗೆ ಬತ್ತಿ ಹೋಗಿದೆ. ಇದರಿಂದ ಜಾತ್ರೆಗೆ ಬರುವ ಭಕ್ತರಿಗೆ ನೀರಿನ ಸಮಸ್ಯೆ ಎದುರಾಗಲಿದೆ.
undefined
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಮೈಲಾರ, ಕುರುವತ್ತಿ, ಹರವಿ ಇತರ ಕಡೆಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿವೆ. ಜತೆಗೆ ನದಿಯ ಎರಡು ಭಾಗದಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ರೈತರು ಬತ್ತ ಬೆಳೆಯುತ್ತಾರೆ. ಇದಕ್ಕಾಗಿ ಸಾಕಷ್ಟುನೀರು ಬಳಕೆಯಾಗುತ್ತಿದೆ. ಇದರಿಂದ ಭದ್ರಾ ಡ್ಯಾಂನಿಂದ ಬಿಟ್ಟನೀರು ಖಾಲಿಯಾಗಿದೆ.
ಫೆ. 9ರಂದು ಭರತ ಹುಣ್ಣಿಮೆ ಭಾನುವಾರ ಬಂದಿರುವ ಹಿನ್ನೆಲೆಯಲ್ಲಿ ಅಂದಿನಿಂದ ಮೈಲಾರಲಿಂಗೇಶ್ವರ ಜಾತ್ರೆಗೆ ನಾನಾ ಕಡೆಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಅಂದು ದೇವಸ್ಥಾನದಲ್ಲೇ ಭಕ್ತರು ಭಾರತ ಹುಣ್ಣಿಮೆ ಆಚರಣೆ ಮಾಡುತ್ತಾರೆ. ಫೆ. 11ರಂದು ಮೈಲಾರಲಿಂಗೇಶ್ವರನ ಕಾರ್ಣಿಕ ಇರುವ ಹಿನ್ನೆಲೆಯಲ್ಲಿ 8ರಿಂದ 10 ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಜತೆಗೆ ಎತ್ತಿನ ಬಂಡಿಗಳನ್ನು ಕಟ್ಟಿಕೊಂಡಿರುವ ಬರುವ ಭಕ್ತರಿಗೆ ಹಾಗೂ ಎತ್ತುಗಳ ಸ್ನಾನಕ್ಕೆ ನದಿಯನ್ನೇ ಆಶ್ರಯಸುತ್ತಾರೆ. ಆದರೆ ನದಿಯಲ್ಲಿ ಕೆಲವು ಗುಂಡಿಗಳಲ್ಲಿ ಮಾತ್ರ ನೀರು ನಿಂತಿದೆ.
ಕುಡಿಯುವ ನೀರು ಮತ್ತು ಬಳಕೆಗಾಗಿ ತಾಲೂಕು ಆಡಳಿತ ಮತ್ತು ಮೈಲಾರ ಗ್ರಾಮ ಪಂಚಾಯಿತಿ ಕೊಳವೆ ಬಾವಿಗಳಿಂದ ನೀರು ಪೂರೈಕೆ ಮಾಡಲು ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಆದರೆ ಸೇರುವ ಲಕ್ಷಾಂತರ ಪರಿಷೆಗೆ ಕೊಳವೆ ಬಾವಿ ನೀರು ಸಾಲುವುದಿಲ್ಲ. ಆದರಿಂದ ಜಿಲ್ಲಾಡಳಿತ ಮತ್ತೆ ಭದ್ರಾ ಡ್ಯಾಂನಿಂದ ಜಾತ್ರೆಯೊಳಗೆ ಅಗತ್ಯ ನೀರು ಬಿಡಿಸುವ ಪ್ರಯತ್ನ ಮಾಡಬೇಕು ಎಂದು ಭಕ್ತರು ಒತ್ತಾಯಿಸುತ್ತಿದ್ದಾರೆ.
ನದಿಯಲ್ಲಿ ನೀರಿನ ಹರಿವು ಕಡಿಮೆಯಾದ ಕೂಡಲೇ ಅಕ್ರಮ ಮರಳು ದಂಧೆಕೋರರು ಸಿಕ್ಕ ಸಿಕ್ಕ ಕಡೆಗಳಲ್ಲಿ ಮರಳು ಸಾಗಾಣಿಕೆ ಮಾಡುತ್ತಾರೆ. ಇದರಿಂದ ಮತ್ತೆ ನದಿಯಲ್ಲಿ ಗುಂಡಿಗಳು ನಿರ್ಮಾಣವಾಗುತ್ತವೆ. ಸ್ನಾನಕ್ಕೆಂದು ಹೋಗುವ ಭಕ್ತರು, ನೀರಿನ ಆಳದ ಅರಿವು ಇಲ್ಲದಂತೆ ನೀರಿಗಿಳಿದು ಪ್ರಾಣಾಪಾಯಕ್ಕೆ ಸಿಲುಕುವ ಸಂಭವವಿದೆ. ಆದರಿಂದ ನದಿಯಲ್ಲಿ ಗುಂಡಿಗಳು ನಿರ್ಮಾಣ ಆಗದಂತೆ ಎಚ್ಚರಿಕೆ ವಹಿಸಬೇಕು. ಜತೆಗೆ ಜಾತ್ರೆಗೆ ಬರುವ ಭಕ್ತರಿಗೆ ನೀರಿನ ಅನುಕೂಲ ಮಾಡಿಕೊಡಬೇಕು ಎಂದು ಭಕ್ತರ ಆಗ್ರಹವಾಗಿದೆ.
ಫೆ. 11ರಂದು ನಡೆಯುವ ಮೈಲಾರಲಿಂಗೇಶ್ವರನ ಕಾರ್ಣಿಕಕ್ಕೆ ಹೆಚ್ಚು ಭಕ್ತರು ಸೇರುತ್ತಾರೆ. ಬರುವ ಭಕ್ತರ ಅನುಕೂಲಕ್ಕಾಗಿ ಕುಡಿಯುವ ನೀರು, ರಸ್ತೆ, ಸ್ವಚ್ಛತೆ, ವಿದ್ಯುತ್ ಸಂಪರ್ಕ, ತಾತ್ಕಾಲಿಕ ಶೌಚಾಲಯಗಳ ಕಾಮಗಾರಿ ಪ್ರಗತಿಯಲ್ಲಿದೆ. ಜತೆಗೆ ಕಾರ್ಣಿಕ ಸ್ಥಳ ಡೆಂಕಣ ಮರಡಿಯಲ್ಲಿ ಈಗಾಗಲೇ ಪೊಲೀಸ್ ವಾಚಿಂಗ್ ಟವರ್, ಕಾರ್ಣಿಕ ಸ್ಥಳದ ಸುತ್ತಲೂ ಬ್ಯಾರಿಕೇಡ್ ನಿರ್ಮಾಣವಾಗುತ್ತಿದೆ. ಜವಾಬ್ದಾರಿ ಹೊತ್ತಿರುವ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಮೈಲಾರ ಗ್ರಾಪಂ ಅಧಿಕಾರಿಗಳು ಸ್ಥಳದಲ್ಲೇ ಇದ್ದು ಕಾಮಗಾರಿ ಮಾಡಿಸುತ್ತಿದ್ದಾರೆ.
ಭದ್ರಾ ಡ್ಯಾಂನಿಂದ ತುಂಗಭದ್ರಾ ನದಿಗೆ ಒಟ್ಟು 3 ಟಿಎಂಸಿ ನೀರು ಬಿಡಬೇಕಿದ್ದು, ಅದರಲ್ಲಿ ಜ. 6ರಂದು ಅರ್ಧ ಟಿಎಂಸಿ ನೀರು ಬಿಟ್ಟಿದ್ದಾರೆ. ಆ ನೀರು ಖಾಲಿಯಾಗಿರುವ ಮಾಹಿತಿ ಇದೆ. ಈಗ ಮತ್ತೆ ಮೈಲಾರ ಜಾತ್ರೆಗೆ ಅಗತ್ಯವಿರುವಷ್ಟುನೀರನ್ನು ಭದ್ರಾ ಡ್ಯಾಂನಿಂದ ಬಿಡುಗಡೆಯಾಗುತ್ತದೆ. ಅದು ಜಾತ್ರೆಯೊಳಗೆ ನೀರು ಬರುತ್ತದೆ. ಜತೆಗೆ ಕುರುವತ್ತಿ ಬಸವೇಶ್ವರ ಜಾತ್ರೆ ಮುಗಿಯುವವರೆಗೂ ನೀರಿನ ಅಗತ್ಯವಿದೆ. ಹಾಗಾಗಿ ನೀರು ಬರುತ್ತದೆ ಎಂದು ಹೂವಿನಹಡಗಲಿ ತಹಸೀಲ್ದಾರ್ ಕೆ. ರಾಘವೇಂದ್ರ ರಾವ್ ಹೇಳಿದ್ದಾರೆ.
ಮೇಲಧಿಕಾರಿಗಳ ಆದೇಶದಂತೆ ಈ ಬಾರಿ ಉತ್ತಮ ಗುಣಮಟ್ಟದ ಶೌಚಾಲಯ ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕೆ ಅಗತ್ಯ ನೀರಿನ ವ್ಯವಸ್ಥೆಯ ಜತೆಗೆ ಜಾತ್ರೆ ಮುಗಿಯುವವರೆಗೂ, ಉಪಯೋಗಕ್ಕೆ ಬರುವಂತೆ ಸಿಬ್ಬಂದಿ ನಿಯೋಜನೆ ಮಾಡಿ ಜನರಿಗೆ ವ್ಯವಸ್ಥಿತ ರೀತಿಯಲ್ಲಿ ಸೌಲಭ್ಯ ಕಲ್ಪಿಸಿ ಕೊಡುತ್ತಿದ್ದೇವೆ ಎಂದು ಹೂವಿನಹಡಗಲಿ ತಾಪಂ ಇಒ ಯು.ಎಚ್. ಸೋಮಶೇಖರ ತಿಳಿಸಿದ್ದಾರೆ.