ಬೆಂಗ್ಳೂರಲ್ಲಿ ಜಲಕ್ಷಾಮ: ಮದುವೆ ಛತ್ರಗಳಲ್ಲಿ ನೀರಿಗಾಗಿ ಪೀಕಲಾಟ..!

Published : Mar 12, 2024, 09:33 AM IST
ಬೆಂಗ್ಳೂರಲ್ಲಿ ಜಲಕ್ಷಾಮ: ಮದುವೆ ಛತ್ರಗಳಲ್ಲಿ ನೀರಿಗಾಗಿ ಪೀಕಲಾಟ..!

ಸಾರಾಂಶ

ರಾಜಾಜಿನಗರದ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಮುಂದಿನ ದಿನಗಳಲ್ಲಿ ಸುಮಾರು 15 ಮದುವೆಗಳು ಬುಕ್‌ ಆಗಿವೆ. ಅದರಂತೆ ಇಲ್ಲಿರುವ ಸುಮಾರು 20ಕ್ಕೂ ಹೆಚ್ಚಿನ ಛತ್ರಗಳಲ್ಲಿ ನಿರಂತರವಾಗಿ ವಿವಾಹ, ಉಪನಯನಕ್ಕೆ ಮುಂಗಡ ಕಾಯ್ದಿರಿಸಲಾಗಿದೆ. ಆದರೆ ಇವೆಲ್ಲ ಛತ್ರಗಳಿಗೀಗ ಕಾರ್ಯಕ್ರಮಗಳಿಗೆ ನೀರೊದಗಿಸುವ ಸವಾಲು ಎದುರಾಗಿದೆ.

ಮಯೂರ್ ಹೆಗಡೆ

ಬೆಂಗಳೂರು(ಮಾ.12):  ನೀರಿನ ಅಭಾವ ನಗರದಲ್ಲಿರುವ ಕಲ್ಯಾಣ ಮಂಟಪಗಳ ಮಾಲಿಕರಿಗೆ ಪೀಕಲಾಟ ತಂದಿಟ್ಟಿದೆ. ಅದರಲ್ಲೂ ಇನ್ನೊಂದು ವಾರದ ಬಳಿಕ ಮದುವೆ ಸೀಸನ್‌ ಶುರುವಾಗಲಿದ್ದು, ಈಗಾಗಲೇ ಬುಕ್ಕಿಂಗ್‌ ಆದ ಮದುವೆಯನ್ನು ನಿಭಾಯಿಸುವುದು ಹೇಗೆ ಎನ್ನುವ ಚಿಂತೆ ಕಲ್ಯಾಣ ಮಂಟಪಗಳ ಮಾಲಿಕರನ್ನು ಕಾಡುತ್ತಿದೆ.

ರಾಜಾಜಿನಗರದ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಮುಂದಿನ ದಿನಗಳಲ್ಲಿ ಸುಮಾರು 15 ಮದುವೆಗಳು ಬುಕ್‌ ಆಗಿವೆ. ಅದರಂತೆ ಇಲ್ಲಿರುವ ಸುಮಾರು 20ಕ್ಕೂ ಹೆಚ್ಚಿನ ಛತ್ರಗಳಲ್ಲಿ ನಿರಂತರವಾಗಿ ವಿವಾಹ, ಉಪನಯನಕ್ಕೆ ಮುಂಗಡ ಕಾಯ್ದಿರಿಸಲಾಗಿದೆ. ಆದರೆ ಇವೆಲ್ಲ ಛತ್ರಗಳಿಗೀಗ ಕಾರ್ಯಕ್ರಮಗಳಿಗೆ ನೀರೊದಗಿಸುವ ಸವಾಲು ಎದುರಾಗಿದೆ.

Water Crisis: ಬೆಂಗಳೂರಿಗೆ ಕುಡಿಯುವ ನೀರಿನ ಅಭಾವ ಹೆಚ್ಚಿದ್ದೇಕೆ..? ಈ ಹಿಂದಿಲ್ಲದ ಬೇಸಿಗೆ ಹಾಹಾಕಾರ ರಾಜಧಾನಿಗೆ ಈಗೇಕೆ..?

ಬಹುತೇಕ ಎಲ್ಲ ಛತ್ರಗಳು ಬೋರ್‌ ಹೊಂದಿದ್ದು, ಹೆಚ್ಚಿನವು ಬತ್ತಿ ಹೋಗಿವೆ. ಕಾವೇರಿ ನೀರಿನ ಪೂರೈಕೆ ವ್ಯತ್ಯಯದಿಂದ ನೀರಿನ ಸಂಗ್ರಹ ಕೂಡ ಕಷ್ಟವಾಗಿದೆ. ಒಂದೂವರೆ ತಾಸು ಸಣ್ಣದಾಗಿ ನೀರು ಪೂರೈಕೆ ಆಗುತ್ತಿದ್ದು, ಸಂಪ್‌ ತುಂಬುತ್ತಿಲ್ಲ. ಕಾರ್ಯಕ್ರಮ, ಅಡುಗೆ, ಅತಿಥಿಗಳ ವಸತಿ ಸೇರಿ ಒಂದು ಮದುವೆಗೆ ಕನಿಷ್ಠ 30-50 ಸಾವಿರ ಲೀಟರ್‌ ನೀರಿನ ಸಂಗ್ರಹ ಬೇಕಾಗುತ್ತದೆ. ಆದರೆ, ಇಷ್ಟೊಂದು ನೀರು ಸಂಗ್ರಹ ಅಸಾಧ್ಯವಾದ ಕಾರಣ ಬಹುತೇಕ ಚೌಟ್ರಿಗಳು ಟ್ಯಾಂಕರ್‌ಗಳ ಮೊರೆ ಹೋಗಿವೆ.

ಒಂದು ಮದುವೆಗೆ ಕನಿಷ್ಠ 4-5 ಟ್ಯಾಂಕರ್‌ ನೀರು ಬೇಕಾಗುತ್ತಿದೆ. ಕಾರ್ಯಕ್ರಮ ಬುಕ್‌ ಮಾಡಲು ಬಂದವರಿಗೆ ಮಿತವಾಗಿ ನೀರು ಬಳಸಿ ಎಂದು ಹೇಳಲಾಗಲ್ಲ. ಹೀಗಾಗಿ ಹೆಚ್ಚುವರಿ ಖರ್ಚನ್ನು ನಾವೇ ಭರಿಸುತ್ತಿದ್ದೇವೆ ಎಂದು ರಾಜಾಜಿನಗರದ ಆರ್‌ಎನ್‌ಎಸ್‌ ಕನ್ವೆನ್ಷನ್‌ ಹಾಲ್‌ನ ವ್ಯವಸ್ಥಾಪಕರು ತಿಳಿಸಿದರು.

ಪದ್ಮಾವತಿ ಕಲ್ಯಾಣ ಮಂಟಪದ ವ್ಯವಸ್ಥಾಪಕ ಸಿ.ನಾರಾಯಣ, ಜಿಲ್ಲಾಡಳಿತ ಟ್ಯಾಂಕರ್‌ ನೀರಿಗೆ ದರ ನಿಗದಿಸಿದ್ದರೂ ಒಂದು ಟ್ಯಾಂಕ್‌ ನೀರಿಗೆ ಎರಡರಿಂದ ಎರಡೂವರೆ ಸಾವಿರ ರುಪಾಯಿ ಪಡೆಯುತ್ತಿದ್ದಾರೆ. ದುಡ್ಡು ಕೊಟ್ಟರೂ ನೀರು ಸಿಗದ ಪರಿಸ್ಥಿತಿಯಿದೆ. ಕಳೆದ ವಾರ ನಡೆದ ಮದುವೆಗಳಿಗೆ ಟ್ಯಾಂಕರ್‌ ನೀರನ್ನೇ ತರಿಸಿ ಬಳಸಿದ್ದೇವೆ. ಎರಡು ತಿಂಗಳಲ್ಲಿ ಛತ್ರದಲ್ಲಿ ಸಾಕಷ್ಟು ಕಾರ್ಯಕ್ರಮ ಬುಕ್‌ ಆಗಿವೆ. ಇವುಗಳಿಗೆ ನೀರನ್ನು ಹೊಂದಿಸುವುದು ಹೇಗೆಂಬ ಚಿಂತೆಯಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಹೆಚ್ಚುವರಿ ಬೋರ್‌ ಕೊರೆಸಲು ಈಗ ಜಲಮಂಡಳಿಯಿಂದ ಅನುಮತಿ ಪಡೆಯಬೇಕಾಗಿದೆ. ಇದರಿಂದ ಶೀಘ್ರ ಬೋರ್‌ ಕೊರೆಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಟ್ಯಾಂಕರ್‌ ನೀರು ಅನಿವಾರ್ಯ. ಕಲ್ಯಾಣ ಮಂಟಪಗಳು ನೀರಿಗೆ ಹೆಚ್ಚುವರಿ ಖರ್ಚನ್ನು ಭರಿಸುತ್ತಿವೆ. ಇದರ ಹೊಣೆಯನ್ನು ಗ್ರಾಹಕರ ಮೇಲೆ ವಿಧಿಸುವುದು ಅನಿವಾರ್ಯ. ಆದರೆ, ನಾವು ಸದ್ಯಕ್ಕೆ ಹಾಗೆ ಮಾಡುತ್ತಿಲ್ಲ ಎಂದರು.

ಹಾಹಾಕಾರದ ನಡುವೆ ತಮಿಳುನಾಡಿಗೆ ಕಾವೇರಿ ನೀರು ಹರಿಸಿದ ವರದಿ, ಕರ್ನಾಟಕ ಸರ್ಕಾರದ ಸ್ಪಷ್ಟನೆ!

ಅನವಶ್ಯಕ ನೀರು ಪೋಲು ಮಾಡದಂತೆ ನಾವೇ ಕೆಲ ನಿರ್ಬಂಧ ವಿಧಿಸುತ್ತಿದ್ದೇವೆ. ಈಗಲೇ ಹೀಗಾದರೆ ಏಫ್ರಿಲ್‌, ಮೇ ತಿಂಗಳ ಕಾರ್ಯಕ್ರಮ ಹೇಗೆ ನಿಭಾಯಿಸುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆ. ಇದರ ನಡುವೆ ನೀರಿನ ಅಭಾವದ ಕಾರಣಕ್ಕೆ ಬುಕ್‌ ಆಗಿರುವ ಮದುವೆಗಳು ಮಳೆಗಾಲಕ್ಕೆ ಮುಂದಕ್ಕೆ ಹೋಗುವ ಆತಂಕವೂ ಇದೆ ಎಂದು ಛತ್ರವೊಂದರ ಮಾಲಿಕರು ತಿಳಿಸಿದರು.

ನೀರಿನ ಅಭಾವ ಈ ಮದುವೆ ಸೀಸನ್ನನ್ನು ಕಾಡಲಿದೆ. ಒಂದು ಮದುವೆಗೆ ಕನಿಷ್ಠ ನಾಲ್ಕು ಟ್ಯಾಂಕರ್‌ ನೀರು ಬೇಕು. ಎರಡು ತಿಂಗಳಲ್ಲಿ ಛತ್ರದಲ್ಲಿ ಸಾಕಷ್ಟು ಕಾರ್ಯಕ್ರಮ ಬುಕ್‌ ಆಗಿವೆ. ಇವುಗಳಿಗೆ ನೀರನ್ನು ಹೊಂದಿಸುವುದು ಹೇಗೆಂಬ ಚಿಂತೆಯಾಗಿದೆ ಎಂದು ಪದ್ಮಾವತಿ ಕಲ್ಯಾಣ ಮಂಟಪ ವ್ಯವಸ್ಥಾಪಕ ಸಿ.ನಾರಾಯಣ ತಿಳಿಸಿದ್ದಾರೆ.

PREV
Read more Articles on
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
Bengaluru Weather: ರಾಜ್ಯಕ್ಕೆ ಈಶಾನ್ಯ ಮಾರುತ- ದಶಕದ ದಾಖಲೆಯ ಚಳಿಗೆ ಸಿದ್ಧರಾಗಿ; ಬೆಂಗಳೂರು ಸ್ಥಿತಿ ಏನು ನೋಡಿ!