Breaking: ಬೆಂಗಳೂರು ಬಿಜಿಎಸ್ ಮೇಲ್ಸೇತುವೆಯಿಂದ ಕಳಚಿಬಂದ ನಟ್ಟು, ಬೋಲ್ಟ್, ಕಬ್ಬಿಣದ ಪ್ಲೇಟ್

By Sathish Kumar KHFirst Published Mar 11, 2024, 3:31 PM IST
Highlights

ಬೆಂಗಳೂರಿನಿಂದ ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಬಿಜಿಎಸ್ ಮೇಲ್ಸೇತುವೆಯ ಜಾಯಿಂಟ್‌ನ ನಟ್, ಬೋಲ್ಟ್ ಹಾಗೂ ಕಬ್ಬಿಣದ ಪ್ಲೇಟ್ ಕಳಚಿ ಬಂದಿದ್ದರೂ ದುರಸ್ತಿ ಮಾಡುವವರೇ ಇಲ್ಲ.

ಬೆಂಗಳೂರು (ಮಾ.11): ಬೆಂಗಳೂರಿನಿಂದ ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ಮೇಲ್ಸೇತುವೆ ಬಾಲಗಂಗಾಧರನಾಥ ಸ್ವಾಮಿ (ಬಿಜಿಎಸ್‌) ಮೇಲ್ಸೇತುವೆಯ ಜಾಯಿಂಟ್‌ನಲ್ಲಿನ ನಟ್‌ ಬೋಲ್ಡ್ ಕಳಚಿ ಕಬ್ಬಿಣದ ಪ್ಲೇಟ್ ಮಾರುದ್ದ ದೂರದಲ್ಲಿ ಬಿದ್ದಿದೆ. ಆಗಿಂದಾಗ್ಗೆ ಈ ಫ್ಲೈಓವರ್‌ನಲ್ಲಿ ದುರಸ್ತಿ ಕಾಣಿಸಿಕೊಳ್ಳುತ್ತಿದ್ದರೂ, ಬಿಬಿಎಂಪಿ ಮಾತ್ರ ಸೂಕ್ತ ನಿರ್ವಹಣಾ ಕಾರ್ಯ ಮಾಡುತ್ತಿಲ್ಲ. ಫ್ಲೈಓವರ್ ಜಾಯಿಂಟ್‌ನಿಂದ ಕಬ್ಬಿಣದ ಪ್ಲೇಟ್ ಕಳಚಿ ಬಂದಿದ್ದು, ಅಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ ವಾಹನ ಸಂಚಾರ ನಿಷೇಧಿಸಿದ್ದಾರೆ. ಆದರೆ, ಬಿಬಿಎಂಪಿ ಮಾತ್ರ ಇನ್ನೂ ದುರಸ್ತಿ ಕಾರ್ಯವನ್ನೇ ಕೈಗೊಂಡಿಲ್ಲ.

ಬೆಂಗಳೂರು ಎಂದಾಕ್ಷಣ ಮೆಲ್ಸೇತುವೆ, ರಸ್ತೆ ಗುಂಡಿ, ಮುಖ್ಯವಾಗಿ ಸಂಚಾರ ದಟ್ಟಣೆಯಿಂದ ಸುದ್ದಿಯಾಗುತ್ತಲೇ ಇರುತ್ತದೆ. ಈ ವರ್ಷ ಮಳೆಗಾಲದಲ್ಲಿ ಹೆಚ್ಚಾಗಿ ಮಳೆಯಾಗದ ಹಿನ್ನೆಲೆಯಲ್ಲಿ ರಸ್ತೆ ಗುಂಡಿ ಸಮಸ್ಯೆ ಬಹುವಾಗಿ ಕಾಣಿಸಿಕೊಂಡಿಲ್ಲ. ಭೋರ್ಗರೆದು ಮಳೆ ಸುರಿದಿದ್ದರೆ, ಬಿಬಿಎಂಪಿ ಕಳಪೆ ಕಾಮಗಾರಿ, ನಿರ್ವಹಣಾ ಕಾರ್ಯಗಳ ನಿರ್ಲಕ್ಷ್ಯ ಜನರ ಕಣ್ಣಿಗೆ ಬೀಳುತ್ತಿತ್ತು. ಇನ್ನು ಬಿಬಿಎಂಪಿಯಿಂದ ಮೊದಲ ಬಾರಿಗೆ ನಿರ್ಮಾಣ ಮಾಡಿದ ದೊಡ್ಡ ಸೇತುವೆಗಳಲ್ಲಿ ಬಾಲಗಂಗಾಧರನಾಥ ಸ್ವಾಮಿ ಮೇಲ್ಸೇತುವೆಯೂ ಒಂದಾಗಿದೆ. ಆದರೆ, ಇದನ್ನು ನಿರ್ವಹಣೆ ಮಾಡುವಲ್ಲಿ ಮಾತ್ರ ಬಿಬಿಎಂಪಿ ಪ್ರತಿ ವರ್ಷ ನಿರ್ಲಕ್ಷ್ಯ ತೋರುತ್ತಿದೆ.

ಕರ್ನಾಟಕದಲ್ಲೂ ಕಾಟನ್ ಕ್ಯಾಂಡಿ ಬ್ಯಾನ್, ಗೋಬಿ ಮಂಚೂರಿಗೆ ಬಣ್ಣ ನಿಷೇಧ; ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆದೇಶ

ನಗರದ ಪುಟ್ಟಣ್ಣಚೆಟ್ಟಿ ಪುರಭವನದಿಂದ ಕೆ.ಆರ್. ಮಾರುಕಟ್ಟೆಯ ವೃತ್ತದ ಬಳಿಯಿರುವ ಟ್ರಾಫಿಕ್ ತಪ್ಪಿಸಿ ಮೈಸೂರು ರಸ್ತೆಯ ಸಿರ್ಸಿ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ಈ ಬಿಜಿಎಸ್‌ ಮೇಲ್ಸೇತುವೆ ಪ್ರತಿ 1 ರಿಂದ 2 ವರ್ಷಕ್ಕೊಮ್ಮೆ ಸುದ್ದಿಯಾಗುತ್ತಲೇ ಇರುತ್ತದೆ. ಈ ವರ್ಷ ಸಿರ್ಸಿ ವೃತ್ತದ ಬಳಿ ಮೇಲ್ಸೇತುವೆಯ ಒಂದು ಜಾಯಿಂಟ್‌ನ ಕಬ್ಬಿಣ ಕಿತ್ತುಕೊಂಡು ಬಂದಿದೆ. ಇನ್ನು ಅದರ ನಟ್ಟು-ಬೋಲ್ಟ್‌ ಕೂಡ ಕಳಚಿಕೊಂಡು ಹೋಗಿವೆ. ಇಲ್ಲಿ ಯಾವುದಾದರೂ ಭಾರಿ ವಾಹನ ಸಂಚಾರ ಮಾಡಿದರೆ, ಮೇಲ್ಸೇತುವೆಗೇ ಹಾನಿಯಾಗುವ ಸಾಧ್ಯತೆಯಿದೆ. ಇದರಿಂದ ಮೇಲ್ಸೇತುವೆ ಮೇಲೆ ಸಂಚಾರ ಮಾಡುವ ಜನರು ಆತಂಕ ಪಡುವಂತಾಗಿದೆ.

ದುರಸ್ತಿ ಕಾರ್ಯಕ್ಕೆ ಬರದ ಬಿಬಿಎಂಪಿ: ಮೇಲ್ಸೇತುವೆಯ ಜಾಯಿಂಟ್‌ನಲ್ಲಿ ರಾತ್ರಿ ವೇಲೆಯೇ ಸಮಸ್ಯೆ ಕಂಡುಬಂದಿದೆ. ಇದನ್ನು ಬೆಳಗ್ಗೆ ಗುರುತಿಸಿದ ಟ್ರಾಫಿಕ್ ಪೊಲೀಸರು ದುರಸ್ತಿಗೊಂಡಿರುವ ಜಾಯಿಂಟ್‌ನ ಭಾಗದಲ್ಲಿ ಬ್ಯಾರಿಕೇಡ್ ಅಳವಡಿಕೆ ಮಾಡಿದ್ದಾರೆ. ಆದರೆ, ಮಧ್ಯಾಹ್ನವಾದರೂ ಈ ಬಗ್ಗೆ ಬಿಬಿಎಂಪಿ ಜಾಗ್ರತೆಯನ್ನೇ ವಹಿಸಿಲ್ಲ. ಇನ್ನು ಮಧ್ಯಾಹ್ನ 12 ಗಂಟೆಯಾದರೂ ದುರಸ್ತಿ ಮಾಡುವುದಕ್ಕೆಂದು ಪಾಲಿಕೆಯ ಯಾವ ಅಧಿಕಾರಿಗೂ ಬಂದು ಸ್ಥಳ ಪರಿಶೀಲನೆ ಮಾಡಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.

ಜೀವನದಲ್ಲಿ ಮೊಟ್ಟ ಮೊದಲ ಬಾರಿಗೆ ವಿಧಾನಸೌಧ ಮುಂದೆ ಮಾತನಾಡಿದ ನಟ ಸಾಧುಕೋಕಿಲ

ಮೇಲ್ಸೇತುವೆ ನಿರ್ವಹಣೆ ಮಾಡದ ಪಾಲಿಕೆ: ಬಿಬಿಎಂಪಿಯಲ್ಲಿ ಪ್ರತಿವರ್ಷ ಮೇಲ್ಸೇತುವೆಗಳ ನಿರ್ವಹಣೆ ಹಾಗೂ ರಸ್ತೆ ಗುಂಡಿಗಳನ್ನು ಮುಚ್ಚಲು ಕೋಟ್ಯಾಂತರ ರೂ. ಅನುದಾನ ಮೀಸಲಿಡಲಾಗುತ್ತದೆ. ಆದರೆ, ಅಧಿಕಾರಿಗಳು ಮಾತ್ರ ಮೇಲ್ಸೇತುವೆ ನಿರ್ವಹಣೆಯನ್ನೇ ಮಾಡುವುದಿಲ್ಲ. ಯಾವುದಾದರೂ ಫ್ಲೈಓವರ್‌ನಲ್ಲಿ ಸಮಸ್ಯೆ ಕಂಡುಬಂದಾಗ ಮಾತ್ರ ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಾರೆ. ಇನ್ನು ಕಳೆದ ಎರಡು ವರ್ಷಗಳ ಹಿಂದೆಯೂ ಬಿಜಿಎಸ್ ಮೇಲ್ಸೇತುವೆಯಲ್ಲಿ ಸಮಸ್ಯೆ ಕಂಡುಬಂದಾಗ ಮಾತ್ರ ರಿಪೇರಿ ಮಾಡಿ ನಿರ್ವಹಣಾ ಕಾರ್ಯಗಳನ್ನು ಕೈಗೊಂಡಿತ್ತು. ಇದಾದ ನಂತರ, ಮೇಲ್ಸೇತುವೆ ಕಡೆಗೆ ಅಧಿಕಾರಿಗಳು ತಿರುಗಿಯೂ ನೋಡುವುದಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

click me!