ಬೆಂಗಳೂರು: ಈಗ ಆಸ್ಪತ್ರೆಗಳಲ್ಲೂ ನೀರಿಗಾಗಿ ಪರದಾಟ..!

Published : Mar 12, 2024, 12:04 PM IST
ಬೆಂಗಳೂರು: ಈಗ ಆಸ್ಪತ್ರೆಗಳಲ್ಲೂ ನೀರಿಗಾಗಿ ಪರದಾಟ..!

ಸಾರಾಂಶ

ಮುಂದಿನ ದಿನಗಳಲ್ಲಿ ನೀರಿನ ಅಭಾವದಿಂದ ಎದುರಾಗಬಹುದಾದ ಸಂಭವನೀಯ ಸಮಸ್ಯೆಗಳ ಕುರಿತು ಎಚ್ಚೆತ್ತುಕೊಂಡಿರುವ ಜಲಮಂಡಳಿ ಅಧಿಕಾರಿಗಳು, ಆಸ್ಪತ್ರೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನೀರಿನ ಬಳಕೆ, ಬೇಡಿಕೆ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಮಂಜುನಾಥ ನಾಗಲೀಕರ್ 

ಬೆಂಗಳೂರು(ಮಾ.12):  ನಗರದ ಕೆಲವು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ನೀರಿನ ಅಭಾವ ಎದುರಾಗಿರುವ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ನಗರದ ಎಲ್ಲಾ ಆಸ್ಪತ್ರೆಗಳು ನೀರು ಉಳಿಸುವ ಮತ್ತು ಮಿತವಾಗಿ ಬಳಸುವ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿವೆ.

ಮುಂದಿನ ದಿನಗಳಲ್ಲಿ ನೀರಿನ ಅಭಾವದಿಂದ ಎದುರಾಗಬಹುದಾದ ಸಂಭವನೀಯ ಸಮಸ್ಯೆಗಳ ಕುರಿತು ಎಚ್ಚೆತ್ತುಕೊಂಡಿರುವ ಜಲಮಂಡಳಿ ಅಧಿಕಾರಿಗಳು, ಆಸ್ಪತ್ರೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನೀರಿನ ಬಳಕೆ, ಬೇಡಿಕೆ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಮತ್ತು ಕೊರತೆಯಾಗುವ ಸಾಧ್ಯತೆ ಇದ್ದು, ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಆಸ್ಪತ್ರೆಗಳಲ್ಲಿನ ಪೈಪ್‌ಲೈನ್‌ಗಳಲ್ಲಿ ಮತ್ತು ನಲ್ಲಿ ಗಳಲ್ಲಿ ಸೋರಿಕೆ ತಡೆಯುವುದು ಮತ್ತು ಟ್ಯಾಂಕರ್ ರಿಪೇರಿ ಮುಂತಾದ ಕೆಲಸಗಳನ್ನು ಎಲ್ಲಾ ಆಸ್ಪತ್ರೆಗಳಲ್ಲಿ ಶರವೇಗದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ. 

Water Crisis: ಬೆಂಗಳೂರಿಗೆ ಕುಡಿಯುವ ನೀರಿನ ಅಭಾವ ಹೆಚ್ಚಿದ್ದೇಕೆ..? ಈ ಹಿಂದಿಲ್ಲದ ಬೇಸಿಗೆ ಹಾಹಾಕಾರ ರಾಜಧಾನಿಗೆ ಈಗೇಕೆ..?

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಹೊಸದಾಗಿ 1 ಬೋರ್‌ವೆಲ್ ಕೊರೆಸಲು ಯೋಜಿಸಲಾಗಿದ್ದು, ಸಂಭವನೀಯ ಸಮಸ್ಯೆಗೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳು ಕೂಡ ನೀರಿನ ಅಭಾವ ಎದುರಿಸುತ್ತಿವೆ. ಹೀಗಾಗಿ, ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ, ರೋಗಿಗಳು, ರೋಗಿಗಳ ಕಡೆಯವರಿಗೆ ನೀರಿನ ಮಿತ ಬಳಕೆ ಕುರಿತು ಸೂಚನೆ ನೀಡಲಾಗುತ್ತಿದೆ. ವಾಟ್ಸ್‌ಆ್ಯಪ್ ಮೂಲಕ ಹಾಗೂ ನೇರವಾಗಿಯೂ ಈ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.

ನೀರಿನ ಸಮಸ್ಯೆ: 

ಇಂದಿರಾನಗರದ ಇಎಸ್‌ಐ ಆಸ್ಪತ್ರೆಯಲ್ಲಿ ನೀರಿನ ಅಭಾವವಾಗಿದೆ. ಕೊಳವೆ ಬಾವಿಯಲ್ಲಿ ಅಂತರ್ಜಲ ಕುಸಿದಿದೆ. ಜಲಮಂಡಳಿ ಯಿಂದಸಮರ್ಪಕವಾಗಿನೀರು ಪೂರೈಕೆಯಾಗುತ್ತಿಲ್ಲ. ಟ್ಯಾಂಕರ್ ನೀರು ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ. ಆದರೂ, ನಿರ್ವಹಣೆ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಹೇಗಿರುತ್ತದೆ ಎಂಬುದನ್ನು  ಈಗಲೇ ಹೇಳಲಾಗದು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ರೋಗಿಗಳನ್ನು ದಾಖಲಿಸಿಕೊಳ್ಳುತ್ತಿಲ್ಲ!

ನಗರದ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದ್ದು, ನೀರು ಹೆಚ್ಚು ಬಳಕೆಯಾಗುವ ಚಿಕಿತ್ಸೆಗಳಿಗೆ ಸಂಬಂಧಿಸಿದ ರೋಗಿಗಳ ದಾಖಲೆ ಸ್ಥಗಿತಗೊಳಿಸಿದೆ. ಬೋರ್‌ವೆಲ್‌ ರಿಪೇರಿ ಮಾಡಿಸಿದ್ದರೂ, ನಮ್ಮಲ್ಲಿ 50% ನೀರಿನ ಕೊರತೆ ಇದೆ. ಹೀಗಾಗಿ, ಸ್ನಾನ ಮಾಡಿಸಲು ಅಗತ್ಯವಿರುವ ಚಿಕಿತ್ಸೆಯ ರೋಗಿಗಳ ದಾಖಲಾತಿ ತಾತ್ಕಾಲಿಕವಾಗಿ ನಿಲ್ಲಿಸಿದೆ. ಈ ಮೊದಲು ವಾರ್ಡ್‌ಗಳಲ್ಲಿ 24 ತಾಸು ಬಿಸಿ ನೀರು ಸರಬರಾಜಾಗುತ್ತಿತ್ತು. ಅದನ್ನು ಕಡಿತಗೊಳಿಸಲಾಗಿದೆ. ಹೆಚ್ಚು ನೀರು ಬೇಕಾಗುವ ಚಿಕಿತ್ಸೆಗಳನ್ನು ನಿಲ್ಲಿಸಲಾಗಿದೆ ಎಂದು ನಗರದ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ಮುಖ್ಯಸ್ಥೆ ಡಾ। ಸುರೇಖಾ ತಿಳಿಸಿದರು. ಬೋರ್‌ವೆಲ್ ನೀರು ಸಮರ್ಪಕವಾಗಿ ಲಭ್ಯವಿದೆ. ಆದರೂ, ಮುಂಜಾಗೃತಾ ಕ್ರಮಗಳನ್ನು ಅನುಸರಿಸುತ್ತಿದ್ದೇವೆ ಎಂದು ಕೆ.ಸಿ.ಜನರಲ್ ಆಸ್ಪತ್ರೆ ಮುಖ್ಯಸ್ಥೆ ಡಾ। ಇಂದಿರಾ ಕಬಾಡೆ ತಿಳಿಸಿದರು. 

ಬೆಂಗಳೂರಿಗೆ ಬೇಕಿರೋದು 8 ಟಿಎಂಸಿ, ಕೆಆರ್‌ಎಸ್ ಡ್ಯಾಂನಲ್ಲಿ 34 ಟಿಎಂಸಿ ನೀರಿದೆ: ರಾಮ್ ಪ್ರಸಾತ್ ಮನೋಹರ್

ನಗರದ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯಲ್ಲಿ ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲದಿದ್ದರೂ, ಮುಂಜಾಗ್ರತೆ ಕೈಗೊಳ್ಳಲಾಗುತ್ತಿದೆ. ಆಸ್ಪತ್ರೆ, ಶೌಚಗೃಹಗಳಲ್ಲಿ ಸ್ವಚ್ಛತೆ ಹಾಗೂ ಗಾರ್ಡನಿಂಗ್ಗೆ ಶುದ್ದೀಕರಣ ಘಟಕದ ನೀರನ್ನು ಬಳಕೆ ಮಾಡಲಾಗುತ್ತಿದೆ. ನೀರು ಸೋರಿಕೆ ಪರಿಶೀಲನೆ ನಡೆಸಿಪ್ರತ್ಯೇಕವಾಗಿ ಪ್ಲಂಬರ್‌ನ್ನು ನಿಯೋಜಿಸಿ ಎಂದು ಬೌರಿಂಗ್ ಆಸ್ಪತ್ರೆ ಅಧಿಕಾರಿಗಳು ಹೇಳಿದ್ದಾರೆ.

ಅಭಾವ ಎದುರಿಸಲು ವಿಕ್ಟೋರಿಯಾ ಸಜ್ಜು

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲದಿದ್ದರೂ ಮುಂಜಾಗೃತ ಕ್ರಮ ವಾಗಿ 2 ಬೋರ್‌ವೆಲ್‌ಗಳನ್ನು ಕೊರೆಸಲು ತೀರ್ಮಾನಿಸಿದೆ ಎಂದು ವೈದ್ಯಕೀಯ ಅಧೀ ಕ್ಷಕ ಡಾ. ದೀಪಕ್ ಹೇಳಿದರು. ಕಳೆದ ವಾರ ಜಲಮಂಡಳಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಆಸ್ಪತ್ರೆಯಲ್ಲಿ ಬಳಕೆಯಾಗುತ್ತಿರುವ ನೀರಿನ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ. ಆಸ್ಪತ್ರೆಯ ಶೌಚಗೃಹಗಳಲ್ಲಿ ಮತ್ತು ಗಾರ್ಡ ನಿಂಗ್‌ಗೆ ಮರುಬಳಕೆಯ ನೀರು ಬಳಸಲು ತೀರ್ಮಾನಿಸಿದೆ. ರೋಗಿಗಳು, ವೈದ್ಯಕೀಯ ಸಿಬ್ಬಂದಿ, ಹಾಸ್ಟೆಲ್ ವಿಭಾಗಗಳಲ್ಲಿ ನೀರಿನ ಮಿತ ಬಳಕೆ, ಉಳಿತಾಯಕ್ಕೆ ಸೂಚಿಸಿದೆ.

PREV
Read more Articles on
click me!

Recommended Stories

ಚಿನ್ನಸ್ವಾಮಿಗೆ ಅಂತಾರಾಷ್ಟ್ರೀಯ ಮತ್ತು IPL ಪಂದ್ಯಗಳು ವಾಪಸ್; ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ
ಕಾಂಗ್ರೆಸ್ ಮುಖಂಡ ಗಣೇಶ್ ಗೌಡ ಕೊಲೆ ರಹಸ್ಯ ರಿವೀಲ್: ಪೊಲೀಸರ ಬಲೆಗೆ ಬಿದ್ದ ಮೂವರು!