ಜಲ ದಿಗ್ಬಂಧನ: ಗಾಯಗೊಂಡ ವ್ಯಕ್ತಿಯನ್ನ ಆಸ್ಪತ್ರೆಗೆ ದಾಖಲಿಸಲು 15 ಕಿಮೀ ಹೊತ್ತು ನಡೆದರು!

By Kannadaprabha NewsFirst Published Aug 26, 2023, 4:19 PM IST
Highlights

 ಕೃಷಿ ಚಟುವಟಿಕೆ ಮಾಡುವಾಗ ಆಕಸ್ಮಿಕವಾಗಿ ಕತ್ತಿಯಿಂದ ಕಾಲು ಕಡಿದುಕೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲು ರಸ್ತೆ ಸಂಪರ್ಕವಿಲ್ಲದೆ 8 ದಿನದ ಬಳಿಕ 15 ಕಿಲೋ ಮೀಟರ್‌ ಜೋಲಿ (ಜೋಳಿಗೆ)ಯಲ್ಲಿ ಹೊತ್ತು ಆಸ್ಪತ್ರೆಗೆ ದಾಖಲಿಸಿದ ಘಟನೆ ಅಂಕೋಲಾ ತಾಲೂಕಿನ ಕೆಂದಗಿ ಗ್ರಾಮದಲ್ಲಿ ನಡೆದಿದೆ.

ಅಂಕೋಲಾ (ಆ.26) :  ಕೃಷಿ ಚಟುವಟಿಕೆ ಮಾಡುವಾಗ ಆಕಸ್ಮಿಕವಾಗಿ ಕತ್ತಿಯಿಂದ ಕಾಲು ಕಡಿದುಕೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲು ರಸ್ತೆ ಸಂಪರ್ಕವಿಲ್ಲದೆ 8 ದಿನದ ಬಳಿಕ 15 ಕಿಲೋ ಮೀಟರ್‌ ಜೋಲಿ (ಜೋಳಿಗೆ)ಯಲ್ಲಿ ಹೊತ್ತು ಆಸ್ಪತ್ರೆಗೆ ದಾಖಲಿಸಿದ ಘಟನೆ ಅಂಕೋಲಾ ತಾಲೂಕಿನ ಕೆಂದಗಿ ಗ್ರಾಮದಲ್ಲಿ ನಡೆದಿದೆ.

ಕೆಂದಗಿ ಗ್ರಾಮ(Kendagi village)ದ ಉಮೇಶ ರಾಮಾ ಗೌಡ ಗದ್ದೆಯಲ್ಲಿ ಕೆಲಸ ಮಾಡುತ್ತಿರುವಾಗ ಆಕಸ್ಮಿಕವಾಗಿ ಕತ್ತಿಯ ಏಟು ಕಾಲಿಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾರೆ. ತ್ವರಿತವಾಗಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಬೇಕಾದಾಗ ಅನಿವಾರ್ಯತೆ ಎದುರಾದರೂ ಸಹ ಗ್ರಾಮದ ಸುತ್ತಲು ಹಳ್ಳ ತುಂಬಿದ್ದರಿಂದ ರೈತ ಉಮೇಶನನ್ನು ಕರೆದೊಯ್ಯಲು ಸಾಧ್ಯವಾಗಲಿಲ್ಲ. ಗ್ರಾಮದ ಸುತ್ತಲೂ ನಾಲ್ಕು ಹಳ್ಳಗಳು ಆವರಿಸಿದ್ದು, ಮಳೆಗಾಲದಲ್ಲಿ ಆ ಗ್ರಾಮ ದ್ವೀಪದಂತಾಗುತ್ತದೆ. ಉಮೇಶ ಸಹ ಜಲ ದಿಗ್ಬಂಧನಕ್ಕೆ ಒಳಗಾಗಿ

 

ಮಗನ‌ ನಾಮಕರಣ ಆಹ್ವಾನ ಪತ್ರಿಕೆಯಲ್ಲೂ ಸೈಬರ್ ಜಾಗೃತಿ ಮೂಡಿಸಿದ ಕಾನ್‌ಸ್ಟೇಬಲ್!

8 ದಿನ ಗಾಯದ ನೋವಿನಲ್ಲಿ ಮನೆಯಲ್ಲಿಯೇ ನರಳಾಟ ನಡೆಸಿದ. ನಂತರ ಆತನನ್ನು ಗುರುವಾರ 15 ಕಿಮೀ ಹೊತ್ತು ಕಾರವಾರದ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಚಿಕಿತ್ಸೆಗೆ ದಾಖಲಿಸಲಾಯಿತು.

ಹಟ್ಟಿಕೇರಿ ಗ್ರಾಪಂ ವ್ಯಾಪ್ತಿಯ ಕೆಂದಗಿ ಗ್ರಾಮವು ಬೋಕಳೆ ಹಳ್ಳ, ವತ್ತಿನ ಹಳ್ಳ, ಕಂಬದ ಹಳ್ಳ ಹಾಗೂ ಕೆಂದಗಿ ದೊಡ್ಡ ಹಳ್ಳವನ್ನು ಆವರಿಸಿದೆ. ಆ ಹಳ್ಳ ದಾಟಿಯೇ ಬರಬೇಕು. ಹಳ್ಳವು ತುಂಬಿ ಹರಿಯುತ್ತಿರುವುದರಿಂದ, ಹಳ್ಳ ದಾಟಲಾಗದೆ ಅರಣ್ಯರೋಧನ ಅನುಭವಿಸುವಂತಾಗಿತ್ತು. ಕಳೆದ ಐದಾರು ದಿನಗಳಿಂದ ಮಳೆಯ ಪ್ರಮಾಣ ಕಡಿಮೆಯಾದ ಪರಿಣಾಮ ಹಳ್ಳದ ಹರಿವಿನ ವೇಗ ಸ್ವಲ್ಪ ಕಡಿಮೆಯಾಗಿತ್ತು. ಕೆಂದಗಿ ಗ್ರಾಮಸ್ಥರು, ಹಟ್ಟಿಕೇರಿ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಗಾಯಗೊಂಡ ರೈತನನ್ನು ಬಿದಿರಿನ ಕಂಬಕ್ಕೆ ಬಟ್ಟೆಕಟ್ಟಿ, ಅದರೊಳಕ್ಕೆ ಆತನನ್ನು ಮಲಗಿಸಿಕೊಂಡು 15 ಕಿಮೀ ಕಡಿದಾದ ಅರಣ್ಯ ರಸ್ತೆಯಲ್ಲಿ, ಹರಸಾಹಸ ಪಟ್ಟು 4 ಹಳ್ಳ ದಾಟಿಕೊಂಡು ಅಂತೂ ಹಟ್ಟಿಕೇರಿಯ ರಾಷ್ಟ್ರೀಯ ಹೆದ್ದಾರಿಗೆ ಬಂದು ತಲುಪಿದ್ದಾರೆ.

ಅಲ್ಲಿಂದ ವಾಹನದಲ್ಲಿ ಕಾರವಾರದ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ವೈದ್ಯರು ಕೂಡಲೆ ಚಿಕಿತ್ಸೆಗೆ ಒಳಪಡಿಸಿದ್ದು, ಗಾಯಗೊಂಡ ರೈತ ಉಮೇಶ ನಾಯ್ಕ ಸ್ವಲ್ಪ ಮಟ್ಟಿಗೆ ಚೇತರಿಕೆ ಕಂಡಿದ್ದಾರೆ.

ಅರಣ್ಯ ರಕ್ಷಕ ಬೀರಾ ಗೌಡ ಅವರು ಉಮೇಶ ಗೌಡ ಅವರನ್ನು ಬಿದರಿನ ಜೋಲಿಯಲ್ಲಿ ಸಾಗಿಸಲು ನೆರವಾದರು. 15 ಕಿ.ಮೀ. ಜೋಲಿಯನ್ನು ಹೊತ್ತುಕೊಂಡು ಕಾಲ್ನಡಿಗೆಯಲ್ಲಿ ಬಂದಿದ್ದಲ್ಲದೇ, ಹಟ್ಟಿಕೇರಿಯ ಹೆದ್ದಾರಿಗೆ ಬಿಟ್ಟು ಮತ್ತೆ ಕಾಲ್ನಡಿಗೆಯಲ್ಲೇ ವಾಪಸ್‌ ಕೆಂದಗಿ ಗ್ರಾಮಕ್ಕೆ ಅವರು ತೆರಳಿದ್ದಾರೆ.

 

ಉತ್ತರ ಕನ್ನಡ: ಒಂದೇ ಒಂದು ಮೇಸೆಜ್‌ಗೆ 32 ಗ್ರಾಮೀಣ ಬಸ್‌ ನಿಲ್ದಾಣ ಸ್ವಚ್ಛ..!

ಅತಿ ಕುಗ್ರಾಮವಾದ ಕೆಂದಗಿ ಗ್ರಾಮಕ್ಕೆ ಅತ್ತ ಸರಿಯಾದ ರಸ್ತೆಯೂ ಇಲ್ಲದೆ, ಇತ್ತ ಹಳ್ಳ ದಾಟಲು ಸೇತುವೆಯು ಇಲ್ಲದೆ ಇಲ್ಲಿಯ ಜನರು ಸಂಕಷ್ಟದ ಪರಿಸ್ಥಿತಿಯಲ್ಲಿ ಬದುಕುವಂತಾಗಿದೆ. ಸರ್ಕಾರ ಈ ಬಗ್ಗೆ ಕ್ರಮ ವಹಿಸಿ ನಾಗರಿಕರ ಅಹವಾಲು ಆಲಿಸಿ, ಮೂಲಭೂತ ಸೌಲಭ್ಯ ಒದಗಿಸಕೊಡುವಂತೆ ಎಬಿವಿಬಿ ಪ್ರಮುಖ ರಾಘವೇಂದ್ರ ನಾಯ್ಕ ಹಟ್ಟಿಕೇರಿ ಆಗ್ರಹಿಸಿದ್ದಾರೆ.

click me!