ನಗರ, ಗ್ರಾಮೀಣ ಭಾಗಗಳಲ್ಲಿ ಶುರುವಾಯ್ತು ಸೌಲಭ್ಯಕ್ಕಾಗಿ ಆಗ್ರಹ, ಸಿಂದಗಿ-ವಿಜಯಪುರ ನಗರದಲ್ಲಿ ಅಧಿಕಾರಿಗಳಿಗೆ ತಲೆನೋವಾದ ಬೈಕಾಟ್ ಹೋರಾಟ.
ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ
ವಿಜಯಪುರ(ಏ.11): ಚುನಾವಣೆಗಳು ಬಂದರೆ ಸಾಕು ಗ್ರಾಮೀಣ ಭಾಗದ ಮೂಲಸೌಲಭ್ಯ ವಂಚಿತರು ಸೌಲಭ್ಯ ಪಡೆದುಕೊಳ್ಳಲು ಚುನಾವಣಾ ಬಹಿಷ್ಕಾರದ ಅಸ್ತ್ರ ಹೂಡುವದು ಸಹಜ. ಈ ಬಾರಿಯೂ ಹಲವು ಗ್ರಾಮೀಣ ಭಾಗ ಹಾಗೂ ವಿಜಯಪುರ ನಗರದ ಹೊರವಲಯದ ಬಡಾವಣೆಯಲ್ಲಿ ಇಂಥದ್ದೆ ಕೂಗು ಕೇಳಿ ಬಂದಿದೆ. ನಗರದ ಹೊರವಲಯದ ಶಿವಗಿರಿ ಬಳಿಯ ವಾರ್ಡ್ ನಂ 17ರ ಸೌಭಾಗ್ಯನಗರದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಿಕೊಡಬೇಕು ಎಂದು ಬಡಾವಣೆಯ ನಾಗರಿಕರು ಮುಂದಿನ ಚುನಾವಣೆ ಬಹಿಷ್ಕಾರ ಮಾಡುವ ಪೋಸ್ಟರ್‌ಗಳನ್ನು ಅಂಟಿಸಿ ಮಹಾನಗರ ಪಾಲಿಕೆಗೆ ಎಚ್ಚರಿಕೆ ನೀಡಿದ್ದಾರೆ.
ಕುಡಿಯುವ ನೀರು, ರಸ್ತೆಗಳದ್ದೆ ಸಮಸ್ಯೆ..!
ಮೂಲಭೂತ ಸೌಕರ್ಯಗಳಾದ 24/7ಕುಡಿಯುವ ನೀರು, ಕಳೆದ ಐದು ವರ್ಷಗಳಿಂದು ಸುಸಜ್ಜಿತ ರಸ್ತೆ ಇಲ್ಲದಿರುವದು, ಕುಡುಕರು, ಕಳ್ಳರ ಹಾವಳಿ ಹೆಚ್ಚಾಗಿದ್ದು, ಯಾವುದೇ ನಿಯಂತ್ರಣವಿಲ್ಲ ದಿರುವದು, ಮಕ್ಕಳಿಗೆ ಆಟದ ಮೈದಾನ, ಹಿರಿಯರಿಗೆ ಉದ್ಯಾನವನ ಇಲ್ಲದಿರುವದು, ರಸ್ತೆ ದೀಪ, ಒಳಚರಂಡಿ ವ್ಯವಸ್ಥೆ ನಿರ್ವಹಣೆ ಮಾಡದಿರುವ ಕಾರಣ ರಾತ್ರಿ ಹೊರಗಡೆ ಬರಲು ಇಲ್ಲಿನ ಜನ ಹೆದರುವಂತಾಗಿದೆ. ಯಾವುದೇ ಭದ್ರತೆ ಇಲ್ಲದಿರುವ ಕುರಿತು ಸಾಕಷ್ಟು ಬಾರಿ ಮಹಾನಗರ ಪಾಲಿಕೆಗೆ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಚುನಾವಣಾ ಬಹಿಷ್ಕಾರದ ಪೋಸ್ಟರ್ ಅಂಟಿಸಿ ವಿನೂತನವಾಗಿ ಪ್ರತಿಭಟಿಸಿದರು.
KARNATAKA ASSEMBLY ELECTIONS 2023: ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಫೋಟ..!
ಪೋಸ್ಟರ್ ಕಿತ್ತ ಕಿಡಿಗೇಡಿಗಳು, ಸ್ಥಳಕ್ಕೆ ಆಯುಕ್ತರ ಭೇಟಿ..!
ಆದರೆ ಯಾರೋ ಈ ಪೋಸ್ಟರ್ ಗಳನ್ಮು ಕಿತ್ತುಕೊಂಡು ಹೋಗಿದ್ದು ಸಹ ಬಡಾವಣೆಯ ಜನತೆಯ ಆಕ್ರೋಶಕ್ಕೆ ಕಾರಣವಾಯಿತು. ಈ ಪೋಸ್ಟರ್ ಗಳು ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಬಡಾವಣೆಗೆ ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಗಿ ಭೇಟಿ ನೀಡಿ ಬಡಾವಣೆ ಸಮಸ್ಯೆಗಳನ್ನು ಆಲಿಸಿದರು. ಶೀಘ್ರ ಎಲ್ಲ ಸೌಕರ್ಯ ಕಲ್ಪಿಸುವ ಭರವಸೆ ನೀಡಿದರು.
ಇದೇ ವೇಳೆ ಬಡಾವಣೆಯ ನಾಗರಿಕರು ತಮ್ಮ ಅಳಲನ್ನು ತೊಡಿಕೊಂಡುರು. ಬಡಾವಣೆಯಲ್ಲಿ 40-50 ಮನೆಗಳಿದ್ದು, ನೂರಾರು ಜನ ಇಲ್ಲಿ ವಾಸಿಸುತ್ತಿದ್ದಾರೆ. ರಸ್ತೆ ಸರಿಯಲ್ಲ ಎಂದು ಶಾಲೆಯ ವಾಹನಗಳು ಬಡಾವಣೆಗೆ ಬರುತ್ತಿಲ್ಲ, ಇದರ ಜತೆ ಮಧ್ಯಾಹ್ನವೇ ಮಹಿಳೆಯರು, ಮಕ್ಕಳು ಮನೆಯಿಂದ ಹೊರಗಡೆ ಬರಲು ಹೆದರುತ್ತಿದ್ದಾರೆ.
ಆಯುಕ್ತರ ಭರವಸೆ, ಬಹಿಷ್ಕಾರ ವಾಪಾಸ್..!
ಆಯುಕ್ತರು ಸಧ್ಯ ಭರವಸೆ ನೀಡಿದ್ದು, ಇನ್ನೂ ಚುನಾವಣೆಗೆ ಸಮಯವಿರುವ ಕಾರಣ ಕಾಯುತ್ತೇವೆ, ಆಕಸ್ಮಿಕವಾಗಿ ಮೂಲಸೌಲಭ್ಯ ಒದಗಿಸದಿದ್ದರೆ ಚುನಾವಣೆ ಬಹಿಷ್ಜಾರ ಇಲ್ಲವೇ ಮುಂದೆ ಏನು ಮಾಡಬೇಕು ಎನ್ನುವದನ್ನು ಬಡಾವಣೆಯ ಹಿರಿಯರು ಚರ್ಚೆ ನಡೆಸುತ್ತೇವೆ ಎಂದು ಎಚ್ಚರಿಸಿದರು.
ಗ್ರಾಮೀಣ ಭಾಗದಲ್ಲಿಯೂ ಬಹಿಷ್ಕಾರದ ಬಿಸಿ..!
ಇದೇ ವೇಳೆ ಆಲಮೇಲ ತಾಲೂಕಿನ ಕೆಲ ಗ್ರಾಮಗಳನ್ನು ವಾಪಸ್ ಸಿಂದಗಿ ತಾಲೂಕಿಗೆ ಸೇರಿಸಬೇಕು ಎಂದು ನಾಲ್ಕು ಗ್ರಾಮಗಳಲ್ಲಿ ಚುನಾವಣಾ ಬಹಿಷ್ಕಾರದ ನಿರ್ಧಾರ ತೆಗೆದುಕೊಂಡಿದ್ದಾರೆ. ಆಲಮೇಲ ತಾಲೂಕಿನ ಗುತ್ತರಗಿ, ಭಂಟನೂರ, ಕೆರೂರ ಹಾಗೂ ಹಂಚಿನಾಳ ಗ್ರಾಮ ಗಳನ್ನು ಸಿಂದಗಿ ತಾಲೂಕಿಗೆ ಸೇರಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಬರುವ ವಿಧಾನಸಭೆ ಚುನಾವಣೆ ಬಹಿಷ್ಕಾರ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಚುನಾವಣಾಧಿಕಾರಿಗಳಾಗಲಿ, ರಾಜಕೀಯ ಮುಖಂಡರು ತಮ್ಮ ಗ್ರಾಮಕ್ಕೆ ಬರಬಾರದು ಎಂದು ಫರ್ಮಾನು ಹೊರಡಿಸಿದ್ದಾರೆ.
ಹೊಸ ತಾಲೂಕು ಆಲಮೇಲ..!
ಹೊಸ ತಾಲೂಕುಗಳ ರಚನೆ ನಂತರ ಆಲಮೇಲ ತಾಲೂಕು ಆಗಿ ಪರಿವರ್ತನೆಯಾಗಿದೆ. ಸಧ್ಯ ನಮ್ಮ ಗ್ರಾಮಗಳು ಸಿಂದಗಿ ಪಟ್ಟಣಕ್ಕೆ ಕೇವಲ. 15ಕಿ.ಮೀಟರ್ ದೂರವಿದ್ದರೆ, ಆಲಮೇಲ ಪಟ್ಟಣ 38 ಕಿ.ಮೀ ದೂರವಿರುವ ಕಾರಣ ವ್ಯವಹಾರಿಕ ಸಂಬಂಧಗಳಿಗೆ ತೊಂದರೆಯಾಗುತ್ತಿದೆ. ರೈತಾಪಿ ವರ್ಗಗಳೇ ಹೆಚ್ಚಿರುವ ಈ ಗ್ರಾಮಗಳಿಂದ ಗೊಬ್ಬರ ಸೇರಿದಂತೆ ಹಲವು ವ್ಯವಹಾರಗಳು ಮಾಡಲು ತೊಂದರೆ ಯಾಗುತ್ತಿದೆ. ನಾವು ಬೆಳೆದ ಬೆಳೆ ಮಾರಾಟ ಮಾಡಲು, ತಹಶೀಲ್ದಾರ್ ಕಚೇರಿ ಸೇರಿದಂತೆ ಎಲ್ಲ ರೀತಿಯ ವ್ಯವಹಾರಗಳಿಗೆ ತೊಂದರೆಯಾಗುತ್ತಿದೆ. ಈ ಸಮಸ್ಯೆ ಬಗ್ಗೆ ತಹಸೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸಹ ಯಾವುದೇ ಸ್ಪಂದನೆ ದೊರೆತಿಲ್ಲ. ಹೀಗಿರುವಾಗ ನಮ್ಮ ಮತದಾನ ಮಾಡುವದರಿಂದ ನಮ್ಮ ಗ್ರಾಮಗಳಿಗೆ ಏನು ಪ್ರಯೋಜನೆ ಇಲ್ಲವಾಗಿದೆ. ಹೀಗಾಗಿ ಚುನಾವಣೆ ಬಹಿಷ್ಕಾರ ಹಾಕಲಾಗಿದೆ. ನಮ್ಮ ಬೇಡಿಕೆ ಈಡೇರಿಸುವ ವರೆಗೆ ಚುನಾವಣೆ ಯಿಂದ ದೂರವಿರುವುದಾಗಿ ತಿಳಿಸಿದ್ದಾರೆ.
ಡಬಲ್ ಎಂಜಿನ್ ಸರ್ಕಾರದಲ್ಲಿ ಬಡವರಿಗಿಲ್ಲ ಮನೆ: ಎಂ.ಬಿ.ಪಾಟೀಲ
ಚುನಾವಣೆ ಚಟುವಟಿಕೆಗಳಿಗೆ ಅವಕಾಶ ನೀಡಲ್ಲ..!
ಚುನಾವಣೆ ಸಂಬಂಧ ಯಾವುದೇ ಚಟುವಟಿಕೆ ನಡೆಸಲು ಅವಕಾಶ ಮಾಡಿಕೊಡುವದಿಲ್ಲ. ಚುನಾವಣಾಧಿಕಾರಿಗಳು, ರಾಜಕೀಯ ಮುಖಂಡರು ತಮ್ಮ ಗ್ರಾಮಗಳಿಗೆ ಕಾಲಿಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನ ಜಿಲ್ಲಾಧಿಕಾರಿಗಳು ಬಗೆಹರಿಸಬೇಕಿದೆ.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.