ನಕಲಿ ಆಹ್ವಾನ ಪತ್ರಿಕೆ ಸಲ್ಲಿಸಿದರೆ ಕಠಿಣ ಕ್ರಮ

By Kannadaprabha News  |  First Published Apr 11, 2023, 8:20 AM IST

ವಿಧಾನ ಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಮತಗಟ್ಟೆಅಧಿಕಾರಿ, ಸಹಾಯಕ ಮತಗಟ್ಟೆಅಧಿಕಾರಿಗಳನ್ನಾಗಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿರುವ ಅಧಿಕಾರಿ, ಸಿಬ್ಬಂದಿಗಳು ನಕಲಿ ಆಹ್ವಾನ ಪತ್ರಿಕೆಗಳನ್ನು ಸಲ್ಲಿಸಿ ಚುನಾವಣಾ ಕರ್ತವ್ಯದಿಂದ ತಪ್ಪಿಸಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್‌. ಪಾಟೀಲ ಸೂಚನೆ ನೀಡಿದರು.


 ತುಮಕೂರು :  ವಿಧಾನ ಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಮತಗಟ್ಟೆಅಧಿಕಾರಿ, ಸಹಾಯಕ ಮತಗಟ್ಟೆಅಧಿಕಾರಿಗಳನ್ನಾಗಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿರುವ ಅಧಿಕಾರಿ, ಸಿಬ್ಬಂದಿಗಳು ನಕಲಿ ಆಹ್ವಾನ ಪತ್ರಿಕೆಗಳನ್ನು ಸಲ್ಲಿಸಿ ಚುನಾವಣಾ ಕರ್ತವ್ಯದಿಂದ ತಪ್ಪಿಸಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್‌. ಪಾಟೀಲ ಸೂಚನೆ ನೀಡಿದರು.

ಎನ್‌.ಐ.ಸಿ. ಕಚೇರಿಯಲ್ಲಿ ಪತ್ರಿಕಾ ಹೇಳಿಕೆ ನೀಡಿದ ಅವರು, ಮದುವೆ, ಮತ್ತಿತರ ಸಮಾರಂಭಗಳಿರುವುದರಿಂದ ಕರ್ತವ್ಯದಿಂದ ಬಿಡುಗಡೆ ಮಾಡಬೇಕೆಂದು ನಕಲಿ ಆಹ್ವಾನ ಪತ್ರಿಕೆಗಳನ್ನು ಸಲ್ಲಿಸುತ್ತಿರುವುದು ಕಂಡು ಬಂದಿದೆ. ಆಹ್ವಾನ ಪತ್ರಿಕೆಯನ್ನು ಮುದ್ರಣ ಮಾಡುವ ಮುದ್ರಕರು ಸೂಕ್ತ ದಾಖಲೆ ಪಡೆಯದೇ ಪತ್ರಿಕೆಗಳನ್ನು ಮುದ್ರಣ ಮಾಡಬಾರದು. ಚುನಾವಣಾ ದಿನ ಹಾಗೂ ಹಿಂದಿನ ದಿನದಂದು ಸಮಾರಂಭವಿರುವ ಬಗ್ಗೆ ಸುಳ್ಳು ಆಹ್ವಾನ ಪತ್ರಿಕೆ ನೀಡಿದ ಚುನಾವಣಾ ಕರ್ತವ್ಯ ನಿಯೋಜಿತರನ್ನು ಆರ್‌.ಪಿ. ಕಾಯ್ದೆ 134ರನ್ವಯ ಅಮಾನತ್ತುಗೊಳಿಸಲಾಗುವುದೆಂದು ಎಚ್ಚರಿಕೆ ನೀಡಿದರು.

Tap to resize

Latest Videos

ಜಿಲ್ಲೆಯ ಎಲ್ಲ ದಲ್ಲಿ ಪಿಆರ್‌ಓ ಹಾಗೂ ಎಪಿಆರ್‌ಓ ಸೇರಿದಂತೆ ಒಟ್ಟು 8622 ಅಧಿಕಾರಿ/ಸಿಬ್ಬಂದಿಗಳಿಗೆ ಏಪ್ರಿಲ್‌ 11ರಂದು ತರಬೇತಿಯನ್ನು ಆಯೋಜಿಸಲಾಗಿದ್ದು, ನಿಯೋಜಿತ ಸಿಬ್ಬಂದಿಗಳು ಗೈರು ಹಾಜರಾಗದೇ ತಪ್ಪದೇ ತರಬೇತಿಯಲ್ಲಿ ಪಾಲ್ಗೊಳ್ಳಬೇಕೆಂದು ಅವರು ನಿರ್ದೇಶನ ನೀಡಿದರು.

ಜಿಲ್ಲೆಯ ಪ್ರತಿ ವಿಧಾಸಭಾ ಕ್ಷೇತ್ರಗಳಲ್ಲಿ ಮಹಿಳಾ ಅಧಿಕಾರಿಗಳೇ ಇರುವ ತಲಾ 5ರಂತೆ ಒಟ್ಟು 55 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದ್ದು, ಇದಕ್ಕಾಗಿ 154 ಮಹಿಳೆಯರಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ದ್ವಿತೀಯ ಪಿಯುಸಿ ಪರೀಕ್ಷಾ ಮೌಲ್ಯಮಾಪನ ಕಾರ್ಯಕ್ಕೆ ತೆರಳಿರುವ ಪಿಆರ್‌ಓ ಹಾಗೂ ಎಪಿಆರ್‌ಓಗಳು ಇಲಾಖಾ ಮುಖ್ಯಸ್ಥರ ಮೂಲಕ ಸಂಬಂಧಿಸಿದ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳಿಗೆ ಸೂಕ್ತ ದಾಖಲೆಗಳೊಂದಿಗೆ ಮನವಿ ಸಲ್ಲಿಸಿದಲ್ಲಿ ಮೌಲ್ಯಮಾಪನದಿಂದ ಮರಳಿದ ನಂತರ ಇವರಿಗೆ ಪ್ರತ್ಯೇಕವಾಗಿ ಚುನಾವಣಾ ತರಬೇತಿ ಆಯೋಜಿಸಲಾಗುವುದು ಎಂದು ಮಾಹಿತಿ ನೀಡಿದರು.

ಪ್ರತಿ ವಿಧಾನ ಸಭಾ ಕ್ಷೇತ್ರಗಳಲ್ಲಿ ಯುವ ಮತದಾರರಿಗಾಗಿ ತಲಾ 4ರಂತೆ ಯುವ ಅಧಿಕಾರಿಗಳನ್ನೊಳಗೊಂಡ ಒಟ್ಟು 44 ಯುವ ಮತಗಟ್ಟೆಹಾಗೂ ವಿಕಲಚೇತನ ಮತದಾರರಿಗಾಗಿ ತಲಾ 4ರಂತೆ ಒಟ್ಟು 44 ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ಎನ್‌.ಐ.ಸಿ. ಅಧಿಕಾರಿ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಇಂದು ಚುನಾವಣಾ ಕಾರ್ಯಾಗಾರ

ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಏಪ್ರಿಲ್‌ 12ರಂದು ಬೆಳಿಗ್ಗೆ 10-30 ಗಂಟೆಗೆ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಪತ್ರಕರ್ತರಿಗಾಗಿ ಒಂದು ದಿನದ ಚುನಾವಣಾ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಾಗಾರದಲ್ಲಿ ಚುನಾವಣಾ ತಯಾರಿ, ಮಾದರಿ ನೀತಿ ಸಂಹಿತೆ ಮತ್ತು ಸ್ವೀಪ್‌ ಕಾರ್ಯಕ್ರಮದ ಅನುಷ್ಠಾನ ಕುರಿತಂತೆ ಮಾಹಿತಿ ನೀಡಲಾಗುವುದು. ಜಿಲ್ಲೆಯ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮದ ಪ್ರತಿನಿಧಿಗಳು ತರಬೇತಿಗೆ ಹಾಜರಾಗಿ ಸದುಪಯೋಗ ಪಡೆಯಬೇಕೆಂದು ಸ್ವೀಪ್‌ ಸಮಿತಿ ಅಧ್ಯಕ್ಷೆ ಹಾಗೂ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಮನವಿ ಮಾಡಿದ್ದಾರೆ.

ನಾಮಪತ್ರ ಸ್ವೀಕಾರ: ನಿಷೇಧಾಜ್ಞೆ ಜಾರಿ .

ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಏಪ್ರಿಲ್‌ 13 ರಿಂದ 20ರವರೆಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಅವಕಾಶವಿದ್ದು, ಈ ಅವಧಿಯಲ್ಲಿ ಜನಸಂದಣಿ ಹೆಚ್ಚಾಗುವುದರಿಂದ ಸಾರ್ವಜನಿಕರ ದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ ಪಾವಗಡ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳ ಕಚೇರಿಯ ಸುತ್ತಮುತ್ತ 100 ಮೀಟರ್‌ ವ್ಯಾಪ್ತಿಯೊಳಗಿನ ಪ್ರದೇಶದಲ್ಲಿ ನಿಷೇಧಾಜ್ಞೆ ಹೊರಡಿಸಿ ಪಾವಗಡ ತಾಲ್ಲೂಕು ತಹಶೀಲ್ದಾರ್‌ ಹಾಗೂ ತಾಲ್ಲೂಕು ದಂಡಾಧಿಕಾರಿ ಕೆ.ಎನ್‌.ಸುಜಾತ ಅವರು ಆದೇಶ ಹೊರಡಿಸಿದ್ದಾರೆ.

ನಿಷೇಧಾಜ್ಞೆಯು ಏಪ್ರಿಲ್‌ 13 ರಿಂದ 20ರವರೆಗೆ ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಜಾರಿಯಲ್ಲಿರುತ್ತದೆ. ನಿಷೇಧಾಜ್ಞೆ ಜಾರಿ ಅವಧಿಯಲ್ಲಿ ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸುವ ಅಭ್ಯರ್ಥಿ ಮತ್ತು ಅವರೊಂದಿಗೆ 4 ಮಂದಿಗೆ ಮಾತ್ರ 137-ಪಾವಗಡ(ಪ.ಜಾತಿ) ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳ ಕಚೇರಿಯನ್ನು ಪ್ರವೇಶಿಸಲು ಅನುಮತಿ ಇರುತ್ತದೆ. ಈ ಅವಧಿಯಲ್ಲಿ ಅನಧಿಕೃತ ವ್ಯಕ್ತಿಗಳು ನಿರ್ಬಂಧಿತ ಪ್ರದೇಶದೊಳಗೆ ಪ್ರವೇಶಿಸುವಂತಿಲ್ಲ. ನಿಷೇಧಾಜ್ಞೆಯನ್ನು ಉಲ್ಲಂಘಿಸಿದ ವ್ಯಕ್ತಿಗಳನ್ನು ಬಂಧಿಸಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

click me!