ಕಾರವಾರಕ್ಕೆ ಬಂತು ವಿಸ್ಟಾಡೋಮ್‌ ರೈಲು..!

By Kannadaprabha News  |  First Published Aug 18, 2021, 9:34 AM IST

*  ಬೆಂಗಳೂರು- ಕಾರವಾರ ಮಧ್ಯೆ ಸಂಚಾರ
*  ಪಶ್ಚಿಮ ಘಟ್ಟದ ಸೌಂದರ್ಯ ಸವಿಯಲು ಅನುಕೂಲ
*  ಮುರ್ಡೇಶ್ವರದಲ್ಲಿ ವಿಸ್ಟಾಡೋಮ್‌ ರೈಲಿಗೆ ಅದ್ಧೂರಿ ಸ್ವಾಗತ
 


ಕಾರವಾರ(ಆ.18): ಬೆಂಗಳೂರಿನಿಂದ ಕಾರವಾರದವರೆಗೆ ವಿಸ್ಟಾಡೋಮ್‌ ಬೋಗಿ ಹೊಂದಿರುವ ರೈಲು ಸೋಮವಾರ ಕಾರವಾರದ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದೆ.

ಯಶವಂತಪುರ- ಕಾರವಾರ- ಯಶವಂತಪುರ ಟ್ರೈ ವೀಕ್ಲಿ ವಿಶೇಷ(ಹಗಲಿನ) ಎಕ್ಸ್‌ಪ್ರೆಸ್‌ ಪ್ರಯಾಣಿಕರಿಗೆ ಕರಾವಳಿ ಕರ್ನಾಟಕದ ಸೌಂದರ್ಯ ಅನುಭವಿಸಲು ಸಹಕಾರಿಯಾಗಿದೆ. ಪ್ರಸ್ತುತ ಯಶವಂತಪುರ ಮತ್ತು ಮಂಗಳೂರು ನಡುವೆ ಚಲಿಸುತ್ತಿರುವ ಈ ರೈಲಿನಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಎರಡು ವಿಸ್ಟಾಡೋಮ್‌ ಬೋಗಿಗಳನ್ನು ಜುಲೈ ತಿಂಗಳಲ್ಲಿ ಪರಿಚಯಿಸಲಾಗಿತ್ತು. ಇದು ಭಾರೀ ಯಶಸ್ಸು ಕೂಡ ಕಂಡಿತ್ತು.

Tap to resize

Latest Videos

ಪ್ರತಿ ಕೋಚ್‌ನಲ್ಲಿ 44 ಒರಗಿರುವ ಮತ್ತು ತಿರುಗುವ ಆಸನಗಳು, ಅಗಲವಾದ ಕಿಟಕಿಗಳು ಮತ್ತು ಅಗಲವಾದ ಹಿಂಭಾಗದ ಕಿಟಕಿಗಳು ಇರುವುದರಿಂದ ವಿಸ್ಟಾಡೋಮ್‌ ಬೋಗಿಗಳು ಪಶ್ಚಿಮ ಘಟ್ಟಗಳ ಸೌಂದರ್ಯವನ್ನು ಪ್ರಯಾಣಿಕರಿಗೆ ಉಣಬಡಿಸುತ್ತಿತ್ತು. ಹೀಗಾಗಿ ಈವರೆಗೆ ಬೆಂಗಳೂರಿನಿಂದ(ಯಶವಂತಪುರ) ಮಂಗಳೂರಿಗೆ ಪ್ರಯಾಣವು ಆಕರ್ಷಕವಾಗಿತ್ತು. ಈಗ ಮಂಗಳೂರಿನಿಂದ ಕಾರವಾರದವರೆಗಿನ ಕರಾವಳಿಯವರೆಗೆ ರೈಲು ಸಂಚಾರ ವಿಸ್ತರಣೆ ಮಾಡಲಾಗಿದ್ದು, ಇಲ್ಲಿನ ಪ್ರಾಕೃತಿಕ ಸೌಂದರ್ಯವನ್ನು ಕೂಡ ಪ್ರಯಾಣಿಕರು ಸವಿಯಬಹುದಾಗಿದೆ. ಒಟ್ಟು 14 ಲಿಂಕೆ ಹಾಫ್‌ಮನ್‌ ಬುಷ್‌(ಎಲ…ಎಚ್‌ಬಿ) ಕೋಚ್‌ಗಳನ್ನು ಹೊಂದಿರುವ ಈ ರೈಲಿನಲ್ಲಿ ಎಸಿ ಚೇರ್‌ಕಾರ್‌ 1, ಸೆಕೆಂಡ್‌ ಸೀಟಿಂಗ್‌ 9, ವಿಸ್ಟಾಡೋಮ್‌ 2, ಜನರೇಟರ್‌ ಕಾರ್‌ 2 ಇರಲಿದೆ.

ಸ್ಥಗಿತಗೊಂಡಿದ್ದ ಬೆಂಗಳೂರು-ಕಾರವಾರ ರೈಲು ಆರಂಭ, ವಿಸ್ಟಾಡೋಮ್ ಕೋಚ್ ಸಹಿತ

ವೇಳಾಪಟ್ಟಿ

ಸೋಮವಾರ, ಬುಧವಾರ, ಶುಕ್ರವಾರ ಬೆಂಗಳೂರಿನಿಂದ ಬೆಳಗ್ಗೆ 7 ಗಂಟೆಗೆ ಹೊರಡಲಿದೆ. ಕಾರವಾರಕ್ಕೆ ರಾತ್ರಿ 11 ಗಂಟೆಗೆ ತಲುಪಲಿದೆ. ಮಂಗಳವಾರ, ಗುರುವಾರ, ಶನಿವಾರ ಕಾರವಾರದಿಂದ ಬೆಳಗ್ಗೆ 5.30ಕ್ಕೆ ಬೆಂಗಳೂರಿಗೆ ತೆರಳಲಿದೆ.

ಮುರ್ಡೇಶ್ವರದಲ್ಲಿ ವಿಸ್ಟಾಡೋಮ್‌ ರೈಲಿಗೆ ಅದ್ಧೂರಿ ಸ್ವಾಗತ

ಕಾರವಾರದಿಂದ ಬೆಂಗಳೂರಿಗೆ ಹೊರಟ ವಿಸ್ಟಾಡೋಮ್‌ ಬೋಗಿಯುಳ್ಳ ರೈಲಿಗೆ ಮಂಗಳವಾರ ಬೆಳಗ್ಗೆ ಮುರ್ಡೇಶ್ವರದಲ್ಲಿ ಅದ್ಧೂರಿಯಾಗಿ ಸ್ವಾಗತಿಸಿ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮುರ್ಡೇಶ್ವರ ನಾಗರಿಕ ಸೇವಾ ಸಮಿತಿಯ ಅಧ್ಯಕ್ಷ ಎಸ್‌.ಎಸ್‌. ಕಾಮತ್‌, ಕೆಲವು ದಿನಗಳಿಂದ ಸ್ಥಗಿತಗೊಂಡ ಕಾರವಾರ- ಯಶ್ವಂತಪುರ ಹಗಲು ರೈಲು ಮತ್ತೆ ಆರಂಭಗೊಂಡಿರುವುದು ಅನುಕೂಲವಾಗಲಿದೆ. ಈ ರೈಲಿನಲ್ಲಿ ವಿಸ್ಟಾಡೋಮ್‌ ಬೋಗಿ ಅಳವಡಿಸಿರುವುದರಿಂದ ಪ್ರಯಾಣಿಕರಿಗೆ ಸಂಚಾರದ ಸಮಯದಲ್ಲಿ ಕರಾವಳಿಯ ಪ್ರಕೃತಿ ಸೊಬಗನ್ನು ವೀಕ್ಷಿಸಲು ಅನುಕೂಲ ಆಗುವುದರೊಂದಿಗೆ ಇಲ್ಲಿಯ ಪ್ರವಾಸೋದ್ಯಮದ ಬೆಳವಣಿಗೆಗೆ ಸಹಕಾರಿಯಾಗಿದೆ.

ಮುರ್ಡೇಶ್ವರದಲ್ಲಿ ಈ ರೈಲು ನಿಲುಗಡೆ ಆಗುತ್ತಿರುವುದು ಖುಷಿ ತಂದಿದೆ. ಪ್ರಸಿದ್ಧ ಪ್ರವಾಸಿ ತಾಣವಾದ ಮುರ್ಡೇಶ್ವರವಿಂದು ದೇಶ- ವಿದೇಶದಲ್ಲಿ ಪ್ರಸಿದ್ಧಿಯಾಗಲು ದಿ. ಆರ್‌.ಎನ್‌. ಶೆಟ್ಟಿಯವರ ಕೊಡುಗೆ ಅಪಾರ. ಮುರ್ಡೇಶ್ವರದ ಮತ್ತಷ್ಟು ಅಭಿವೃದ್ಧಿಗೆ ಸಾರ್ವಜನಿಕರ ಸಹಕಾರವೂ ಅಗತ್ಯವಿದೆ ಎಂದರು.

ಮುರ್ಡೇಶ್ವರ ನಾಗರಿಕ ಸೇವಾ ಸಮಿತಿಯ ಪದಾಧಿಕಾರಿಗಳು, ಲಯನ್ಸ್‌ ಕ್ಲಬ್‌ನ ಗಜಾನನ ನಾಯ್ಕ, ಮಂಜುನಾಥ ನಾಯ್ಕ, ಆಟೋ ಯುನಿಯನ್‌ ಅಧ್ಯಕ್ಷ ಸತೀಶ ನಾಯ್ಕ, ಶ್ರೀಧರ ನಾಯ್ಕ, ಆರೆನ್ನೆಸ್‌ ಆಸ್ಪತ್ರೆಯ ನಾಗರಾಜ ಶೆಟ್ಟಿಸೇರಿದಂತೆ ಗ್ರಾಪಂ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
 

click me!