ಪತ್ನಿಗೆ ಆರ್ಥಿಕ ವ್ಯವಹಾರ ಒಪ್ಪಿಸಿದ ವಿನಯ್‌ ಕುಲಕರ್ಣಿ

By Kannadaprabha NewsFirst Published Jul 28, 2021, 7:29 AM IST
Highlights

* ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ಪತ್ನಿ ಶಿವಲೀಲಾಗೆ ಜಿಪಿಎ ನೀಡಿದ ವಿನಯ್‌
*  ಬೆಳಗಾವಿ ಹಿಂಡಲಗಾ ಜೈಲಿನಿಂದ ಪೊಲೀಸ್‌ ಬಂದೋಬಸ್ತನಲ್ಲಿ ಆಗಮಿಸಿದ ಸಹಿ ಮಾಡಿದ ವಿಕೆ
* ವಿನಯ್‌ ಕುಲಕರ್ಣಿ ಹೊರ ಬರುತ್ತಿದ್ದಂತೆ ಜೈಕಾರ ಹಾಕಿದ ಅಭಿಮಾನಿಗಳು
 

ಧಾರವಾಡ(ಜು.28): ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ಬಂಧನವಾಗಿರುವ ಮಾಜಿ ಸಚಿವ ವಿನಯ್‌ ಕುಲಕರ್ಣಿ ತನ್ನೆಲ್ಲಾ ಆರ್ಥಿಕ ವ್ಯವಹಾರಗಳ ಹೊಣೆಗಾರಿಕೆಯನ್ನು ಪತ್ನಿಗೆ ಸಾಮಾನ್ಯ ಅಧಿಕಾರ ಪತ್ರ(ಜಿಪಿಎ)ಕ್ಕೆ ಸಹಿ ಮಾಡುವ ಮೂಲಕ ಮಂಗಳವಾರ ಒಪ್ಪಿಸಿದ್ದಾರೆ. 

ನೂರಾರು ದನಕರುಗಳು ಇರುವ ಡೇರಿ ಸೇರಿದಂತೆ ಇತರೆ ಹಣಕಾಸು ವ್ಯವಹಾರ ನಡೆಸಲು ಪತ್ನಿಗೆ ಜಿಪಿಎ ನೀಡಲು ಅವಕಾಶ ಕಲ್ಪಿಸುವಂತೆ ಕೆಲ ದಿನಗಳ ಹಿಂದೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವಿನಯ್‌ ಕುಲಕರ್ಣಿ ಮನವಿ ಸಲ್ಲಿಸಿದ್ದರು. ಈ ಮನವಿ ಪುರಸ್ಕರಿಸಿದ ನ್ಯಾಯಾಲಯ ಜಿಪಿಎ ಮಾಡಿಕೊಡಲು ಸಮ್ಮತಿ ನೀಡಿತ್ತು. ಅಂತೆಯೇ, ಮಂಗಳವಾರ ಬೆಳಗ್ಗೆ ಬೆಳಗಾವಿಯ ಹಿಂಡಲಗಾ ಜೈಲಿನಿಂದ ಧಾರವಾಡದ ಮಿನಿ ವಿಧಾನಸೌಧದಲ್ಲಿರುವ ಉಪ ನೋಂದಣಾಧಿಕಾರಿ ಕಚೇರಿಗೆ ಆಗಮಿಸಿದ ವಿನಯ, ಪತ್ನಿ ಶಿವಲೀಲಾ ಕುಲಕರ್ಣಿ ಅವರಿಗೆ ಡೇರಿ ಸೇರಿದಂತೆ ಇತರೆ ಹಣಕಾಸು ವ್ಯವಹಾರವನ್ನು ಒಪ್ಪಿಸಿದ್ದಾರೆ. 

ಸಾಂತ್ವನ ಹೇಳಿದ ಕುಟುಂಬಸ್ಥರು

ಜೈಲಿನಿಂದ ಬಿಗಿ ಬಂದೋಬಸ್ತ್‌ನಲ್ಲಿ ವಿನಯ ಕುಲಕರ್ಣಿ ಅವರನ್ನು ಕರೆತಂದ ಪೊಲೀಸರು ಪತ್ನಿ ಶಿವಲೀಲಾ ಅವರಿಗೆ ಜಿಪಿಎ ನೀಡುವ ಪ್ರಕ್ರಿಯೆ ನಡೆಸಲು ಅನುಕೂಲ ಕಲ್ಪಿಸಿದ್ದರು. ಅಲ್ಲಿಂದ ಹಳೇ ಡಿಎಸ್‌ಪಿ ವೃತ್ತ ಬಳಿಯ ಬ್ಯಾಂಕ್‌ ಆಫ್‌ ಇಂಡಿಯಾಕ್ಕೆ ತೆರಳಿ, ವಿನಯ್‌ ಹಾಗೂ ಶಿವಲೀಲಾ ಹೆಸರಿನಲ್ಲಿ ಜಂಟಿ ಖಾತೆ ತೆರೆಯಲಾಯಿತು. ಬಳಿಕ ವಿನಯ ಅವರನ್ನು ಬೆಳಗಾವಿ ಹಿಂಡಲಗಾ ಜೈಲಿಗೆ ಮತ್ತೆ ಕರೆದೊಯ್ಯಲಾಯಿತು. ಈ ಪ್ರಕ್ರಿಯೆಯಲ್ಲಿ ವಿನಯ ಪುತ್ರಿ ವೈಶಾಲಿ, ಮಗ ಹೇಮಂತ ಹಾಗೂ ಸಹೋದರ ವಿಜಯ ಕುಲಕರ್ಣಿ ಭಾಗಿಯಾದರು.

ಯೋಗೇಶ್ ಗೌಡ ಕೊಲೆ ಕೇಸ್ : ವಿನಯ್ ಕುಲಕರ್ಣಿಗೆ ಬಿಗ್ ಶಾಕ್

ಇಡೀ ಪ್ರಕ್ರಿಯೆಯಲ್ಲಿ ವಿನಯ ಅವರ ಮುಖ ಸಪ್ಪೆಯಾಗಿತ್ತು. ಪತ್ನಿ ಶಿವಲೀಲಾ ಹಾಗೂ ಮಕ್ಕಳು ವಿನಯ್‌ ಅವರ ಆರೋಗ್ಯದ ಬಗ್ಗೆಯೇ ವಿಚಾರಣೆ ಮಾಡಿದರು. ಅಲ್ಲದೇ, ಆದಷ್ಟು ಶೀಘ್ರ ಜಾಮೀನು ದೊರೆಯಲಿದ್ದು, ಚಿಂತೆ ಮಾಡಬೇಡಿ ಎಂದು ಸಾಂತ್ವನ ಹೇಳಿದರು.

ಕೈ ಬೀಸಿದ ವಿಕೆ..

ವಿನಯ್‌ ಕುಲಕರ್ಣಿ ಅವರು ಧಾರವಾಡಕ್ಕೆ ಆಗಮಿಸುತ್ತಿದ್ದಾರೆ ಎಂಬ ಸುದ್ದಿ ತಿಳಿದು ಮುಖಂಡರು ಹಾಗೂ ಕಾರ್ಯಕರ್ತರು ಬೆಳಗ್ಗೆ 10ರೊಳಗೆ ಮಿನಿ ವಿಧಾನಸೌಧ ಆವರಣದಲ್ಲಿ ಸೇರಿದ್ದರು. ಉಪ ನೋಂದಣಿ ಕಚೇರಿಯಿಂದ ವಿನಯ್‌ ಕುಲಕರ್ಣಿ ಹೊರ ಬರುತ್ತಿದ್ದಂತೆ ಅಭಿಮಾನಿಗಳು ಜೈಕಾರ ಹಾಕಿದರು. ಆಗ ವಿನಯ ಅಭಿಮಾನಿಗಳತ್ತ ಕೈ ಬೀಸಿ ವಾಹನದತ್ತ ತೆರಳಿದರು.

ವಿನಯ್‌ ಕುಲಕರ್ಣಿ ಆಗಮನದ ಹಿನ್ನೆಲೆಯಲ್ಲಿ ಉಪ ನೋಂದಣಿ ಕಚೇರಿ ಹಾಗೂ ಬ್ಯಾಂಕ್‌ ಆಫ್‌ ಇಂಡಿಯಾ ಬಳಿ ಪೊಲೀಸ್‌ ಬಂದೋಬಸ್ತ್‌ ಒದಗಿಸಲಾಗಿತ್ತು. ನೂರಾರು ಕಾರ್ಯಕರ್ತರು ಜಮಾಯಿಸಿದ್ದರು.

ಇನ್ನು ಯೋಗೀಶಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿ 2020ರ ನ. 5ರಂದು ವಿನಯ ಕುಲಕರ್ಣಿ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿ ಹಿಂಡಲಗಾ ಜೈಲಿನಲ್ಲಿ ಇಡಲಾಗಿತ್ತು. ಬಂಧನವಾದ ಬಳಿಕ ವಿಚಾರಣೆ ಸಂದರ್ಭ ಹೊರತುಪಡಿಸಿ ಬರೀ ಎರಡು ಬಾರಿ ಮಾತ್ರ ವೈಯಕ್ತಿಕ ವಿಚಾರಗಳಿಗೆ ಜೈಲಿನಿಂದ ಕರೆ ತರಲಾಗಿದೆ. ಕೆಲ ತಿಂಗಳ ಹಿಂದೆ ಅವರ ಮಾವ (ಶಿವಲೀಲಾ ತಂದೆ) ಮೃತರಾಗಿದ್ದ ಸಂದರ್ಭದಲ್ಲಿ ಹಿಂಡಲಗಾ ಜೈಲಿನಿಂದ ಕರೆದೊಯ್ಯಲಾಗಿತ್ತು. ಇದೀಗ ಪತ್ನಿಗೆ ಜಿಪಿಎ ಕೊಡುವ ಕಾರಣಕ್ಕೆ ಅವರನ್ನು ಧಾರವಾಡಕ್ಕೆ ಕರೆತರಲಾಗಿತ್ತು. ಸದ್ಯ ಇವರ ಜಾಮೀನು ವಿಚಾರಣೆ ಸುಪ್ರಿಂ ಕೋರ್ಟಿನಲ್ಲಿದೆ.
 

click me!