ರೈತರಿಗೆ ಇನ್ನೂ ಬಾರದ ಬೆಳೆವಿಮೆ ಪರಿಹಾರ: ಅನ್ನದಾತರ ಆಕ್ರೋಶ

By Kannadaprabha NewsFirst Published Jul 28, 2021, 7:14 AM IST
Highlights

* ವಿಮಾ ಕಂಪನಿಯಿಂದ ಆಗಬೇಕಾಗಿದೆಯಂತೆ ಇತ್ಯರ್ಥ
*  9.92 ಕೋಟಿ ಘೋಷಣೆಯಾಗಿದ್ದರು ಇನ್ನು ಬಂದಿಲ್ಲ
* ಬೆಳೆ ವಿಮೆ ಪರಿಹಾರ ಕುರಿತು ರೈತರ ಆಕ್ರೋಶ
 

ಸೋಮರಡ್ಡಿ ಅಳವಂಡಿ

ಕೊಪ್ಪಳ(ಜು.28): ಪ್ರಧಾನಮಂತ್ರಿ ಫಸಲ್‌ ಬೀಮಾ ಯೋಜನೆ ಜಾರಿಯಾದ ಮೇಲೆ ಬರ ಸೇರಿದಂತೆ ವಿಪತ್ತಿನಿಂದಾಗಿ ಹಾಳಾಗುವ ಬೆಳೆಗೆ ಪರಿಹಾರ ದೊರೆಯುವಂತಾಗಿರುವುದು ನೆಮ್ಮದಿಯ ವಿಷಯವಾಗಿದ್ದರೂ ನಿರ್ವಹಣೆಯ ವೈಫಲ್ಯ ಮತ್ತು ವಿಮಾ ಕಂಪನಿಗಳ ತಾತ್ಸಾರದಿಂದ ರೈತರಿಗೆ ತೊಂದರೆಯಾಗುತ್ತಿದೆ.

2020ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 94641 ರೈತರು ಬೆಳೆ ವಿಮೆಯನ್ನು ಮಾಡಿಸಿದ್ದರು. ಈ ಪೈಕಿ 20302 ರೈತರು ಬೆಳೆ ವಿಮಾ ಪರಿಹಾರಕ್ಕೆ ಅರ್ಹರಾಗಿದ್ದರು. ಇದು ಕೃಷಿ ಇಲಾಖೆಯೇ ನೀಡಿರುವ ಅಧಿಕೃತ ಮಾಹಿತಿ.
ಹೀಗೆ ಅರ್ಹರಾದ ರೈತರಿಗೆ 19.95 ಕೋಟಿ ಬೆಳೆ ವಿಮಾ ಪರಿಹಾರ ಜಮೆಯಾಗಬೇಕಾಗಿತ್ತು. ಆದರೆ, ಇದುವರೆಗೂ ಕೇವಲ 10006 ರೈತರಿಗೆ 10.02 ಕೋಟಿ ಪರಿಹಾರ ಜಮೆಯಾಗಿದೆ. ಉಳಿದ 10296 ರೈತರಿಗೆ 9.92 ಕೋಟಿ ಬೆಳೆ ವಿಮಾ ಪರಿಹಾರ ಬೇಕಾಗಿದ್ದರೂ ಇದುವರೆಗೂ ಬಂದಿಲ್ಲ.

ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ರೈತರು ಬೆಳೆ ವಿಮೆ ಪಾವತಿ ಮಾಡುವ ಕುರಿತು ಜಾಗೃತಿಯನ್ನು ಮೂಡಿಸಲಾಗುತ್ತದೆ. ಆದರೆ, ಘೋಷಣೆಯಾಗಿರುವ ಹಾಗೂ ನ್ಯಾಯಯುತವಾಗಿ ಬರಬೇಕಾಗಿರುವ ಬೆಳೆ ವಿಮಾ ಪರಿಹಾರ ಮಾತ್ರ ಇನ್ನು ಬಾರದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಕೃಷಿ ಸಚಿವರ ಉಸ್ತುವಾರಿ ಕೊಪ್ಪಳ ಜಿಲ್ಲೆಯಲ್ಲೇ ವಿಮೆ ತಾರತಮ್ಯ..!

ಪ್ರದಕ್ಷಿಣೆ ಹಾಕುತ್ತಿರುವ ರೈತರು

ಬೆಳೆ ವಿಮಾ ಪರಿಹಾರದನ್ವಯ ತಮ್ಮ ಬೆಳೆ ಹಾನಿಯಾಗಿದ್ದು, ಪರಿಹಾರ ಬರಬೇಕು ಎನ್ನುವುದು ನಿರ್ಧಾರವಾಗಿದೆ. ಆದರೂ ಬೆಳೆ ವಿಮಾ ಪರಿಹಾರ ಜಮೆಯಾಗದೆ ಇರುವುದರಿಂದ ರೈತರು ಕೃಷಿ ಇಲಾಖೆಗೆ, ಬ್ಯಾಂಕಿಗೆ ಪ್ರದಕ್ಷಿಣೆ ಹಾಕುತ್ತಿದ್ದಾರೆ. ಇದಕ್ಕೆ ಕೃಷಿ ಇಲಾಖೆಯ ಅಧಿಕಾರಿಗಳು ನೇರವಾಗಿ ಏನು ಹೇಳುತ್ತಿಲ್ಲ. ವಿಮಾ ಕಂಪನಿ ಪರಿಹಾರ ನೀಡಬೇಕಾಗಿದೆ. ಹೀಗಾಗಿ, ಈ ಬಗ್ಗೆ ನಮ್ಮ ಬಳಿ ಮಾಹಿತಿ ಇಲ್ಲ ಎನ್ನುತ್ತಿದ್ದಾರೆ. ಬಾರದಿರುವ ಕುರಿತು ಈಗಾಗಲೇ ಸರ್ಕಾರದ ಗಮನಕ್ಕೂ ತರಲಾಗಿದ್ದು, ಇಲ್ಲಿ ಪರಿಹಾರ ಪಾವತಿಯಾಗುವ ಸಮಸ್ಯೆಯನ್ನು ಇತ್ಯರ್ಥ ಮಾಡುವುದಕ್ಕೆ ನಮಗೆ ಅವಕಾಶ ಇಲ್ಲ ಎಂದು ಸಾಗಹಾಕಿ ಕಳುಹಿಸುತ್ತಾರೆ.

ಪ್ರತಿ ವರ್ಷವೂ ಇದೇ ಸಮಸ್ಯೆ

ಇದು ಇದೊಂದು ವರ್ಷದ ಸಮಸ್ಯೆಯಲ್ಲ. ಸುಮಾರು ವರ್ಷಗಳಿಂದಲೂ ಈ ಸಮಸ್ಯೆ ಇದ್ದೇ ಇದೆ. ಹೀಗೆ ಘೋಷಣೆಯಾದ ಬೆಳೆ ವಿಮಾ ನಾನಾ ಕಾರಣಗಳಿಗಾಗಿ ಜಮೆಯಾಗುವುದೇ ಇಲ್ಲ. 2017ರಿಂದ ಇಲ್ಲಿಯವರೆಗೂ ಈ ರೀತಿಯಾಗಿ 16567 ರೈತರಿಗೆ . 18.39 ಕೋಟಿ ಬೆಳೆ ವಿಮೆ ಪರಿಹಾರ ಬರಬೇಕಾಗಿದೆ. ಆದರೆ, ಇದುವರೆಗೂ ಇದು ಬರುತ್ತಲೇ ಇಲ್ಲ. 2016-17ರ ಹಿಂಗಾರಿಯಲ್ಲಿ 3673 ರೈತರಿಗೆ 3.84 ಕೋಟಿ ಬರಬೇಕಾಗಿದೆ. 2017 ಮುಂಗಾರಿನಲ್ಲಿ 22 ರೈತರಿಗೆ . 2.97 ಲಕ್ಷ, 2017-18ರ ಬೇಸಿಗೆಯಲ್ಲಿ 29 ರೈತರಿಗೆ 8 ಲಕ್ಷ, 2018 ಮುಂಗಾರಿನಲ್ಲಿ 707 ರೈತರಿಗೆ 1.69 ಕೋಟಿ, 2018-19 ಬೇಸಿಗೆ ಬೆಳೆಯಲ್ಲಿ 54 ರೈತರಿಗೆ 8 ಲಕ್ಷ, 2019 ಮುಂಗಾರಿನಲ್ಲಿ 640 ರೈತರಿಗೆ 1.33 ಕೋಟಿ, 2019-20ರ ಹಿಂಗಾರು ಬೆಳೆಗೆ 1146 ರೈತರಿಗೆ 1.40 ಕೋಟಿ ಸೇರಿದಂತೆ ಇದುವರೆಗೂ 16567 ರೈತರಿಗೆ . 18.39 ಕೋಟಿ ಬೆಳೆ ವಿಮಾ ಪರಿಹಾರ ಬಾಕಿ ಇದೆ.

ಏನು ಕಾರಣ?

ಇದಕ್ಕೆ ನಿಖರ ಕಾರಣವೇನು ಇಲ್ಲ. ಆದರೆ, ಕೇವಲ ಮೊಬೈಲ್‌ ನಂಬರ್‌ ಸಮಸ್ಯೆ, ಬ್ಯಾಂಕ್‌ ಖಾತೆಯ ಸಂಖ್ಯೆಯ ಸಮಸ್ಯೆ ಹಾಗೂ ವಿಮಾ ಕಂಪನಿ ಬೆಳೆ ವಿಮಾ ಪರಿಹಾರದ ಕುರಿತು ಇತ್ಯರ್ಥ ಮಾಡದೆ ಇರುವುದೇ ಸಮಸ್ಯೆಯಾಗಿದೆ. ರೈತರು ಮಾಡದ ತಪ್ಪಿಗೆ ಈ ರೀತಿಯಾಗಿ ಘೋಷಣೆಯಾಗಿದ್ದ ಬೆಳೆ ವಿಮೆ ಪರಿಹಾರ ಬಾರದಿರುವುದು ಯಾವ ನ್ಯಾಯ? ಎನ್ನುವುದು ಮಾತ್ರ ಪ್ರಶ್ನಾರ್ಥಕವಾಗಿಯೇ ಉಳಿದಿದೆ.

ಕಳೆದ ವರ್ಷದ ಬೆಳೆ ವಿಮಾ ಪರಿಹಾರ ಬಂದಿಲ್ಲ. ಕಾರಣ ಪ್ಯೂಚರ್‌ ವಿಮಾ ಕಂಪನಿಯ ವಿಮಾ ಪರಿಹಾರದ ಕುರಿತು ಇತ್ಯರ್ಥ ಮಾಡಬೇಕಾಗಿದೆ ಎಂದು ಕೃಷಿ ಇಲಾಖೆ ಜೆಡಿ ಸದಾಶಿವ ತಿಳಿಸಿದ್ದಾರೆ.  

click me!