
ಧಾರವಾಡ: ಜಿಲ್ಲೆಯ ಬಹುಚರ್ಚಿತ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಧಾರವಾಡ ಗ್ರಾಮೀಣ ಕ್ಷೇತ್ರದ ಮಾಜಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಹೈಕೋರ್ಟ್‌ನಿಂದ ಜಾಮೀನು ಮಂಜೂರಾಗಿದೆ. ಹೈಕೋರ್ಟ್‌ನ ಈ ಆದೇಶದ ಬೆನ್ನಲ್ಲೇ ಪ್ರಕರಣದ ಮುಂಚೂಣಿ ಹೋರಾಟಗಾರ ಬಸವರಾಜ್ ಕೊರವರ್ ಅವರು ತಮ್ಮ ಮುಂದಿನ ಕಾನೂನು ಹೋರಾಟದ ಹಾದಿಯನ್ನು ಸ್ಪಷ್ಟಪಡಿಸಿದ್ದಾರೆ.
ನ್ಯಾಯಾಲಯದ ಆದೇಶದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಬಸವರಾಜ್ ಕೊರವರ್, "ಹೈಕೋರ್ಟ್ ಯಾವ ಆಧಾರದ ಮೇಲೆ ಮತ್ತು ಯಾವ ಪ್ರಮುಖ ಅಂಶಗಳನ್ನು ಪರಿಗಣಿಸಿ ಈ ತಡೆಯಾಜ್ಞೆ ನೀಡಿದೆ ಎಂಬುದು ನಮಗೆ ಇನ್ನು ಪೂರ್ಣವಾಗಿ ತಿಳಿದಿಲ್ಲ. ಆದೇಶದ ಪ್ರತಿಯನ್ನು ನಾವು ಸಂಪೂರ್ಣವಾಗಿ ಪರಿಶೀಲಿಸಲಿದ್ದೇವೆ. ನ್ಯಾಯಾಲಯದ ಮುಂದೆ ಬಲವಾದ ಸಾಕ್ಷ್ಯಗಳನ್ನು ಮಂಡಿಸುವಲ್ಲಿ ನಾವು ಎಲ್ಲಾದರೂ ವಿಫಲವಾಗಿದ್ದೇವೆಯೇ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ. ತದನಂತರ, ಮೃತ ಯೋಗೇಶ್ ಗೌಡ ಅವರ ಸಹೋದರ ಗುರುನಾಥಗೌಡರ್ ಹಾಗೂ ಅವರ ಕುಟುಂಬದ ಪರವಾಗಿ ನಾವು ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತೇವೆ ಎಂದು ತಿಳಿಸಿದರು.
ಪ್ರಕರಣದ ತನಿಖಾ ಹಂತದ ಸವಾಲುಗಳನ್ನು ಸ್ಮರಿಸಿದ ಅವರು, "ಇದು ಅತ್ಯಂತ ವಿಶೇಷ ಹಾಗೂ ಸೂಕ್ಷ್ಮ ಪ್ರಕರಣವಾಗಿದೆ. ಈ ಪ್ರಕರಣದಲ್ಲಿ ಸಾಕಷ್ಟು ಸಾಕ್ಷಿಗಳನ್ನು ಹೈಜಾಕ್ ಮಾಡಿರುವ ಆಘಾತಕಾರಿ ಸಾಕ್ಷ್ಯಗಳು ಲಭ್ಯವಿದ್ದವು. ಇಷ್ಟೆಲ್ಲಾ ಬೆದರಿಕೆ ಹಾಗೂ ಒತ್ತಡಗಳ ನಡುವೆಯೂ ಸಾಕ್ಷಿದಾರರು ಸ್ವತಃ ನ್ಯಾಯಾಲಯಕ್ಕೆ ಬಂದು ಧೈರ್ಯದಿಂದ ಸಾಕ್ಷಿ ನುಡಿದಿದ್ದರು. ಈ ಎಲ್ಲಾ ಬಲವಾದ ಸಾಕ್ಷ್ಯಗಳನ್ನು ಹೈಕೋರ್ಟ್ ಗಣನೆಗೆ ತೆಗೆದುಕೊಂಡಿರಬಹುದು ಎಂದು ನಾವು ಭಾವಿಸಿದ್ದೆವು. ಆದರೆ ಈಗ ಹೈಕೋರ್ಟ್ ತಡೆಯಾಜ್ಞೆ ನೀಡಿರುವುದು ಬೇಸರ ತರಿಸಿದೆ ಎಂದರು.
ಈ ಪ್ರಕರಣದಲ್ಲಿ ಸಾಕ್ಷಿ ನಾಶಪಡಿಸುವ ಮತ್ತು ಸಾಕ್ಷಿದಾರರ ಮೇಲೆ ಪ್ರಭಾವ ಬೀರುವ ಪ್ರಯತ್ನಗಳು ಇಂದಿಗೂ ನಿರಂತರವಾಗಿ ನಡೆಯುತ್ತಲೇ ಇವೆ. ಇಂತಹ ಪರಿಸ್ಥಿತಿಯಲ್ಲಿ ಹೈಕೋರ್ಟ್ ನೀಡಿರುವ ತಡೆಯಾಜ್ಞೆಯನ್ನು ಪ್ರಶ್ನಿಸಿ ನಾವು ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುತ್ತೇವೆ. ಇನ್ನು ವಿನಯ್ ಕುಲಕರ್ಣಿ ಅವರ ಧಾರವಾಡ ಜಿಲ್ಲೆ ಪ್ರವೇಶದ ಕುರಿತಾದ ಪ್ರಶ್ನೆ ಸದ್ಯಕ್ಕೆ ಉದ್ಭವಿಸುವುದಿಲ್ಲ. ನ್ಯಾಯಾಲಯದ ಸಂಪೂರ್ಣ ಆದೇಶದ ಪ್ರತಿ ಕೈ ಸೇರಿದ ನಂತರವೇ ಈ ಬಗ್ಗೆ ಕಾನೂನು ತಜ್ಞರೊಂದಿಗೆ ಚರ್ಚಿಸಿ ಸೂಕ್ತ ಉತ್ತರ ನೀಡಲಾಗುವುದು ಎಂದು ಬಸವರಾಜ್ ಕೊರವರ್ ಸ್ಪಷ್ಟಪಡಿಸಿದರು.