ನಷ್ಟದ ಸುಳಿಯಲ್ಲಿ ನಮ್ಮ ಮೆಟ್ರೋ..? ನಿತ್ಯ 11 ಲಕ್ಷ ಪ್ರಯಾಣಿಕರೂ ಓಡಾಡಿದ್ರೂ ಕೋಟಿ ಕೋಟಿ ನಷ್ಟ..?

Published : Jul 31, 2026, 12:43 PM IST
Namma Metro Pink Line

ಸಾರಾಂಶ

ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದರೂ, ಕಳೆದ ಮೂರು ವರ್ಷಗಳಲ್ಲಿ ನಿಗಮವು ₹1,164 ಕೋಟಿಗೂ ಅಧಿಕ ನಷ್ಟವನ್ನು ಅನುಭವಿಸಿದೆ. ಹೆಚ್ಚುತ್ತಿರುವ ಕಾರ್ಯಾಚರಣಾ ವೆಚ್ಚ, ಸಾಲದ ಮೇಲಿನ ಬಡ್ಡಿ ಪಾವತಿಗಳಿಂದಾಗಿ ಈ ಆರ್ಥಿಕ ಸಂಕಷ್ಟ ಎದುರಾಗಿದ್ದು, ಇದನ್ನು ಸರಿದೂಗಿಸಲು BMRCL ಪ್ರತಿ ಮೂರು ವರ್ಷಕ್ಕೊಮ್ಮೆ ಶೇ. 12ರಷ್ಟು ದರ ಏರಿಕೆ ಮಾಡಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಬೆಂಗಳೂರು: ಸಿಲಿಕಾನ್ ಸಿಟಿಯ ಜೀವನಾಡಿಯಾಗಿರುವ ನಮ್ಮ ಮೆಟ್ರೋ (Namma Metro) ಪ್ರತಿದಿನ ಲಕ್ಷಾಂತರ ಜನರನ್ನು ನಿರಾಯಾಸವಾಗಿ ತಲುಪಿಸುತ್ತಿದೆ. ಆದರೆ, ಪ್ರತಿಯೊಬ್ಬ ಪ್ರಯಾಣಿಕನಿಗೂ ಅತ್ಯಂತ ಸುರಕ್ಷಿತ ಮತ್ತು ಸುಲಭ ಪ್ರಯಾಣದ ಅನುಭವ ನೀಡುತ್ತಿರುವ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಮಾತ್ರ ಕಳೆದ ಮೂರು ವರ್ಷಗಳಿಂದ ಭಾರಿ ಆರ್ಥಿಕ ನಷ್ಟದ ಹಳಿಗೆ ಸಿಲುಕಿದೆ. ಮೆಟ್ರೋದಲ್ಲಿ ನಿತ್ಯ ಪ್ರಯಾಣಿಸುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದರೂ, ನಿಗಮದ ಆದಾಯದಲ್ಲಿ ಮಾತ್ರ ನಿರೀಕ್ಷಿತ ಮಟ್ಟದ ಚೇತರಿಕೆ ಕಾಣುತ್ತಿಲ್ಲ ಎನ್ನಲಾಗಿದೆ..

ಮೂರು ವರ್ಷಗಳಲ್ಲಿ ಕೋಟಿ ಕೋಟಿ ನಷ್ಟ!

ಕಳೆದ ಮೂರು ವರ್ಷಗಳ ಅವಧಿಯಲ್ಲಿ ಬಿಎಂಆರ್‌ಸಿಎಲ್ ಬರೋಬ್ಬರಿ 1,164 ಕೋಟಿ ರೂ.ಗಳಿಗೂ ಅಧಿಕ ನಷ್ಟವನ್ನು ಅನುಭವಿಸಿದೆ ಎಂದು ಮೂಲಗಳು ತಿಳಿಸಿವೆ. ನಿಗಮದ ಆದಾಯ ಮತ್ತು ವೆಚ್ಚಗಳ ನಡುವಿನ ಅಜಗಜಾಂತರ ವ್ಯತ್ಯಾಸವೇ ಇದಕ್ಕೆ ಪ್ರಮುಖ ಕಾರಣವಾಗಿದೆ.

ಕಳೆದ ಮೂರು ವರ್ಷಗಳ ಆದಾಯ ಮತ್ತು ವೆಚ್ಚದ ಲೆಕ್ಕಾಚಾರ ಹೀಗಿದೆ..

  • ಕಳೆದ ವರ್ಷ (2024-25): ಒಟ್ಟು 1,190 ಕೋಟಿ ರೂ. ಆದಾಯ ಬಂದಿದ್ದರೆ, ಬರೋಬ್ಬರಿ 1,935 ಕೋಟಿ ರೂ. ಖರ್ಚಾಗಿದೆ. (ಸುಮಾರು 623 ಕೋಟಿ ರೂ. ನಷ್ಟ)
  • 2023-24 ರಲ್ಲಿ: 900 ಕೋಟಿ ರೂ. ಆದಾಯದ ಎದುರು 1,213 ಕೋಟಿ ರೂ. ವೆಚ್ಚವಾಗಿದೆ. (ಸುಮಾರು 350 ಕೋಟಿ ರೂ. ನಷ್ಟ)
  • 2022-23 ರಲ್ಲಿ: 784 ಕೋಟಿ ರೂ. ಆದಾಯ ಬಂದಿದ್ದರೆ, 1,363 ಕೋಟಿ ರೂ. ವೆಚ್ಚವಾಗಿದೆ. (ಸುಮಾರು 641 ಕೋಟಿ ರೂ. ನಷ್ಟ)

ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ರೂ ನಷ್ಟ ಯಾಕೆ?

ಪ್ರಸ್ತುತ ನಮ್ಮ ಮೆಟ್ರೋದಲ್ಲಿ ನಿತ್ಯ 11 ಲಕ್ಷಕ್ಕೂ ಅಧಿಕ ಮಂದಿ ಪ್ರಯಾಣಿಸುತ್ತಿದ್ದಾರೆ. ಆದಾಗ್ಯೂ, ಮಾರುಕಟ್ಟೆಯ ಹೆಚ್ಚುತ್ತಿರುವ ಕಾರ್ಯಾಚರಣಾ ವೆಚ್ಚ (O&M Cost), ತಾಂತ್ರಿಕ ವೆಚ್ಚಗಳು, ಸಿಬ್ಬಂದಿ ಸಂಬಳ ಹಾಗೂ ಬೃಹತ್ ಸಾಲದ ಮೇಲಿನ ಬಡ್ಡಿ ಪಾವತಿಗಳು ಬಿಎಂಆರ್‌ಸಿಎಲ್ ಹೆಗಲಿಗೆ ಭಾರವಾಗಿವೆ. ಆದಾಯ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಕಳೆದ ವರ್ಷ ಟಿಕೆಟ್ ದರದಲ್ಲಿ ಗರಿಷ್ಠ ಶೇ. 71 ರಷ್ಟು ಭಾರಿ ಏರಿಕೆ ಮಾಡಲಾಗಿತ್ತು. ಆದರೂ ನಿಗಮವು ನಷ್ಟದ ಸುಳಿಯಿಂದ ಹೊರಬರಲು ಸಾಧ್ಯವಾಗಿಲ್ಲ.

12ರಷ್ಟು ದರ ಏರಿಕೆಗೆ BMRCL ಪ್ರಸ್ತಾಪ!

ಮೆಟ್ರೋ ನಿಗಮವನ್ನು ಆರ್ಥಿಕ ಬಿಕ್ಕಟ್ಟಿನಿಂದ ರಕ್ಷಿಸಲು ಬಿಎಂಆರ್‌ಸಿಎಲ್ ಅಧಿಕಾರಿಗಳು ಈಗ ದರ ಏರಿಕೆಯ ಹೊಸ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರದ ಮುಂದೆ ಇಟ್ಟಿದ್ದಾರೆ. ಪ್ರತಿ ವರ್ಷ ಶೇ. 5 ರಷ್ಟು ದರ ಏರಿಕೆ ಮಾಡುವ ಬದಲು, ಮೂರು ವರ್ಷಕ್ಕೊಮ್ಮೆ ಶೇ. 12 ರಷ್ಟು ಟಿಕೆಟ್ ದರ ಹೆಚ್ಚಳ ಮಾಡಲು ಅವಕಾಶ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ. ಒಂದೊಮ್ಮೆ ಕಾಲಕಾಲಕ್ಕೆ ಪ್ರಯಾಣ ದರವನ್ನು ವೈಜ್ಞಾನಿಕವಾಗಿ ಏರಿಕೆ ಮಾಡದಿದ್ದರೆ, ನಿಗಮವು ತೀವ್ರ ಸಾಲದ ಸುಳಿಗೆ ಸಿಲುಕಲಿದೆ ಎಂದು ಅಧಿಕಾರಿಗಳು ಮನವಿಯಲ್ಲಿ ತಿಳಿಸಿದ್ದಾರೆ. ನಿತ್ಯ ಸಂಚರಿಸುವ ಸಾಮಾನ್ಯ ಮಧ್ಯಮ ವರ್ಗದ ಪ್ರಯಾಣಿಕರಿಗೆ ದರ ಏರಿಕೆ ಸುದ್ದಿ ಆತಂಕ ಮೂಡಿಸಿದ್ದರೂ, ಮೆಟ್ರೋ ನಿಗಮದ ಸುಸ್ಥಿರ ಕಾರ್ಯಾಚರಣೆಗೆ ದರ ಪರಿಷ್ಕರಣೆ ಅನಿವಾರ್ಯ ಎಂಬ ವಾದವನ್ನು ಅಧಿಕಾರಿಗಳು ಮಂಡಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಈ ಪ್ರಸ್ತಾವನೆಗೆ ಒಪ್ಪಿಗೆ ನೀಡುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

PREV
Read more Articles on
click me!

Recommended Stories

Bengaluru ನಮ್ಮ ಮೆಟ್ರೋ: 44.65 ಕಿ.ಮೀ ಮಾರ್ಗಕ್ಕಾಗಿ ಕಟ್ಟಡ ತೆರವಿಗೆ ಟೆಂಡರ್ ಆಹ್ವಾನ
ಕರ್ನಾಟಕ SIR ನೋಟಿಸ್, ದೋಷಪಟ್ಟಿಯಲ್ಲಿ ನಟ ಶಿವರಾಜ್ ಕುಮಾರ್ ಸೇರಿ ಹಲವು ಗಣ್ಯರ ಹೆಸರು