Chikkaballapur: ಮಳೆಗಾಗಿ ಮಕ್ಕಳಿಗೆ ಮದುವೆ: ಹಳೆಯ ಸಂಪ್ರದಾಯದ ಮೊರೆ ಹೋದ ಗ್ರಾಮಸ್ಥರು

By Kannadaprabha News  |  First Published Sep 1, 2023, 10:43 PM IST

ಮಳೆಗಾಗಿ ಗಂಡು ಮಗುವಿಗೆ ಹೆಣ್ಣಿನ ವೇಷ ಹಾಕಿಸಿ ಮಕ್ಕಳ ಅಣಕು ಮದುವೆ ಮಾಡಿಸಿರೋ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಮುಗಳಕೊಪ್ಪೆ ಗ್ರಾಮದಲ್ಲಿ ನಡೆದಿದೆ.


ಚಿಕ್ಕಬಳ್ಳಾಪುರ (ಸೆ.01): ಮಳೆಗಾಗಿ ಗಂಡು ಮಗುವಿಗೆ ಹೆಣ್ಣಿನ ವೇಷ ಹಾಕಿಸಿ ಮಕ್ಕಳ ಅಣಕು ಮದುವೆ ಮಾಡಿಸಿರೋ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಮುಗಳಕೊಪ್ಪೆ ಗ್ರಾಮದಲ್ಲಿ ನಡೆದಿದೆ. ಮುಗಳಕೊಪ್ಪೆ ಗ್ರಾಮದ ಮದ್ಯಭಾಗದ ರಸ್ತೆಯ ಮೇಲೆಯೇ ಮದುವೆ ತಯಾರಿ ನಡೆಸಿ, ಗ್ರಾಮದ ಇಬ್ಬರು ಬಾಲಕರಲ್ಲಿ ಒಬ್ಬ ಹುಡುಗನಿಗೆ ವಧುವಿನ ವೇಷ ಹಾಕಿ, ಮತ್ತೋರ್ವ ಹುಡುಗನಿಗೆ ವರನ ಪೋಷಾಕು ಹಾಕಿ, ಹುಡುಗನಿಗೆ ಪೇಟ, ಬಾಸಿಂಗ ಕಟ್ಟಿ,ಹುಡುಗಿಗೆ ರೇಷ್ಮೆ ಸೀರೆ ಉಡಿಸಿ ಅಲಂಕಾರ ಮಾಡಿ, ಬಾಸಿಂಗ ಕಟ್ಟಿಶಾಸ್ತೊ್ರೕಕ್ತವಾಗಿ ಗ್ರಾಮಸ್ಥರೆ ಮುಂದೆ ನಿಂತು ಅರ್ಚಕರ ನೇತೃತ್ವದಲ್ಲಿ ಬುಧವಾರ ತಡರಾತ್ರಿ ಅಣಕು ಮದುವೆ ಮಾಡುವ ಮೂಲಕ ಮಳೆಗಾಗಿ ಮೊರೆಯಿಟ್ಟಿದ್ದಾರೆ.

ಈ ರೀತಿ ಮದುವೆ ಮಾಡಿದ್ರೆ ಮಳೆಯಾಗುತ್ತೆ ಎಂಬುವುದು ಈ ಗ್ರಾಮದ ಜನರ ನಂಬಿಕೆ. ನಿಜವಾದ ಮದುವೆಯಲ್ಲಿ ಒಂದು ಗಂಡು-ಹೆಣ್ಣಿಗೆ ಯಾವ ರೀತಿ ಮದುವೆ ಮಾಡುತ್ತರೋ ಅದೇ ರೀತಿ ಶಾಸ್ತೊ್ರೕಕ್ತವಾಗಿ ಗ್ರಾಮದ ಜನರೆಲ್ಲಾ ಸೇರಿ ಚಪ್ಪರ ಹಾಕಿ, ಹಸೆ ಬರೆದು, ಅರಿಷಿಣ ಹಚ್ಚಿ , ವಿವಿಧ ಶಾಸ್ತ್ರಗಳನ್ನು ಮಾಡಿ ವರನ ಪೋಷಾಕಿನಲ್ಲಿದ್ದ ಬಾಲಕ ವಧು ವೇಷದಲ್ಲಿದ್ದ ಮತ್ತೋರ್ವ ಬಾಲಕನಿಗೆ ಅರಿಶಿನ ಕೊಂಬು (ತಾಳಿ) ಕಟ್ಟುವ ಮೂಲಕ ಮದುವೆ ಮಾಡಿಸಿದ್ದಾರೆ.

Tap to resize

Latest Videos

ಸತತ 2 ಬಾರಿ ಶಾಸಕರನ್ನಾಗಿ ಆಯ್ಕೆ ಮಾಡಿದಲ್ಲಿ ಸಕಲ ಸೌಲಭ್ಯ ಕಲ್ಪಿಸುವೆ: ಪ್ರದೀಪ್‌ ಈಶ್ವರ್‌

ಮದುವೆಯ ನಂತರ ವಸಿಕೆಗೆ ತಯಾರು ಮಾಡುವ ರೀತಿಯಲ್ಲಿಯೇ ಹಣ್ಣು- ಹಂಪಲು, ಮಿಠಾಯಿ, ಸಿಹಿ ತಿಂಡಿ, ಕಾರಾತಿಂಡಿ ಮತ್ತಿತರ ವಸಿಕೆ ಸಾಮಗ್ರಿಗಳನ್ನು ಇಟ್ಟು, ಗ್ರಾಮಸ್ಥರೆಲ್ಲಾ ಸೇರಿ ನೂತನ ವಧು ವರರಿಗೆ ಉಡುಗೊರೆ(ಮುಯ್ಯಿ) ನೀಡಿದರು. ಈ ವೇಳೆ ಗ್ರಾಮದ ಮಧ್ಯಭಾಗದ ಬೀದಿಯಲ್ಲಿ ಮಹಿಳೆಯರೆಲ್ಲ ಕೂತು ಸೋಬಾನೆ ಗೀತೆ ಹಾಡಿದರೆ. ಹೆಂಗೆಳೆಯರು ಸಿನಿಮಾ ಹಾಡುಗಳನ್ನಾಡಿ ಸಂಭ್ರಮಿಸಿದರು. ನಂತರ ಎಲ್ಲರೂ ಸೇರಿ ಸಹ ಭೋಜನ ನಡೆಸಿದರು. ಈ ಆಚರಣೆಯಲ್ಲಿ ಗ್ರಾಮಸ್ಥರು ಭಾಗವಹಿಸಿದ್ದರು.

ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆ ಬೆಳ ಬೆಳೆಯಾಲಾಗದೇ ಕಂಗೆಟ್ಟಿರುವ ಸಂಧರ್ಭದಲ್ಲಿ ಈ ರೀತಿ ಮಕ್ಕಳಿಗೆ ಮದುವೆ ಮಾಡಿಸಿ ಮಳೆಗಾಗಿ ಪ್ರಾರ್ಥಿಸಿದರೆ ಮಳೆ ಬರುತ್ತದೆ ಎನ್ನುವ ನಂಬಿಕೆ ಜನರದ್ದು. ಹೀಗಾಗಿ ಮಕ್ಕಳ ಮದುವೆ ಮಾಡಿಸಲಾಗಿದೆ. ಊರಿನ ಜನರ ಈ ನಂಬಿಗೆ ಸುಳ್ಳಾಗದೆ, ರಾಜ್ಯವೇ ವರ್ಷಧಾರೆಯ ಕೃಪೆಗೆ ತಣ್ಣಗಾಗಲಿ ಎಂದು ಗ್ರಾಮದ ರೈತ ಮಂಜುನಾಥ್‌ ಹೇಳಿದರು.

ವಯಸ್ಸಾಗಿದೆ, ನನಗೆ ಎಂಪಿ ಟಿಕೆಟ್‌ ಕೊಡಲ್ಲ: ಸಂಸದ ಬಚ್ಚೇಗೌಡ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈ ಬಾರಿ ನೀರಿಕ್ಷಿಸಿದಷ್ಟು ಮಳೆ ಬಾರದೆ ಇದ್ದುದರಿಂದ ರಾಗಿ, ಮೆಕ್ಕೆಜೋಳ,ನೆಲಗಡಲೆ, ಅವರೆ, ಅಲಸಂಡೆ, ಹೆಸರು, ಸಾಸಿವೆ, ಹುಚ್ಚೆಳ್ಳು, ತೊಗರಿ, ಸೇರಿದಂತೆ ಮಳೆಯಾಶ್ರೀತ ಬೆಳೆಗಳೆಲ್ಲವೂ ಒಣಗಿ ಬಾಡಿ ಹೋಗುತ್ತಿವೆ. ಹೀಗಾಗಿ ಅನ್ನದಾತರು ಆಕಾಶದತ್ತ ಮುಖ ಮಾಡಿ ಮಳೆ ಯಾವಾಗ ಬರುತ್ತದೆ ಎಂದು ಕಾದು ನೋಡುವಂತಾಗಿದೆ. ಮಳೆಗಾಗಿ ಹಾತೊರೆಯುತ್ತಿರುವ ಜನರು ಹಳೆಯ ಸಂಪ್ರದಾಯಗಳ ಮೊರೆ ಹೋಗಿದ್ದಾರೆ.

click me!