* ಮೂರು ಕೆರೆ, ಮೂರು ಏತ ನೀರಾವರಿ ಇದ್ರೂ ಕುಡಿಯೋ ನೀರಿಗೆ ಬರ..!
* ನೀರಿಲ್ಲದೇ ಜಾನುವಾರುಗಳು, ರೈತರ ಪರದಾಟ
* ಸಮಸ್ಯೆ ಕುರಿತು ಅಧಿಕಾರಿಗಳು ಜನಪ್ರತಿನಿಧಿಗಳ ಕಡೆ ತಿರುಗಾಡಿ ಸುಸ್ತಾದ ಅನ್ನದಾತರು
ವರದಿ: ಮುಷ್ತಾಕ್ ಪೀರಜಾದೇ ಏಷ್ಯಾನೆಟ್ ಸುವರ್ಣನ್ಯೂಸ್
ಚಿಕ್ಕೋಡಿ, (ಮೇ.09): ಆ ಗ್ರಾಮದ ಅಕ್ಕಪಕ್ಕದಲ್ಲೆ ಒಂದಲ್ಲ ಎರಡಲ್ಲ ಸರಿಯಾಗಿ ಮೂರು ಏತ ನೀರಾವರಿ ಕಾಲುವೆಗಳು ಹಾದು ಹೋಗಿವೆ ಆದರೆ ಒಂದು ಕಾಲುವೆಯಿಂದ ಕೂಡ ಈ ಗ್ರಾಮಕ್ಕೆ ನೀರು ಪೂರೈಕೆಯಾಗುತ್ತಿಲ್ಲ. ಇದೇ ಗ್ರಾಮದ ಮೂರು ಕಿಲೋ ಮೀಟರ್ ದಲ್ಲಿ ಮತ್ತೊಂದು ಗ್ರಾಮದಲ್ಲಿ ಏತ ನೀರಾವರಿ ನೀರು ಬರುತ್ತಿವೆಯಾದರೂ ಆ ಗ್ರಾಮದ ಜನರು ಮುಂದೆ ನೀರು ಹರಿ ಬಿಡದ ಪರಣಾಮ ಈ ಗ್ರಾಮದಲ್ಲಿ ನೀರಿಗಾಗಿ ಹಹಾಕಾರ ಉಂಟಾಗಿದ್ದು, ಜನ ಜಾನುವಾರು ಪರದಾಡುವ ಪರಸ್ಥಿತಿ ಉಂಟಾಗಿದೆ.
ನೀರಿಲ್ಲದೇ ಜಾನುವಾರುಗಳು ರೈತರ ಪರದಾಟ. ಬಾರದ ಏತ ನೀರಾವರಿ ನೀರು ಕಂಗಾಲಾದ ರೈತರು. ಮೂರು ಕಿಲೋ ಮೀಟರ್ ಮೇಲೆ ಮತ್ತೊಂದು ಗ್ರಾಮಕ್ಕೆ ನೀರು ಬಂದರು ಈಗ್ರಾಮಕ್ಕೆ ನೀರು ಬಿಡದೆ ತಡೆ ಒಡ್ಡುತ್ತಿರುವ ಗ್ರಾಮಸ್ಥರು. ಸಮಸ್ಯೆ ಕುರಿತು ಅಧಿಕಾರಿಗಳು ಜನಪ್ರತಿನಿಧಿಗಳ ಕಡೆ ತಿರುಗಾಡಿ ಸುಸ್ತಾದ ಅನ್ನದಾತರು.
ಹೌದು ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಪೂರ್ವ ಭಾಗದ ಗ್ರಾಮಗಳಿಗೆ ನೀರುಣಿಸುವ ಉದ್ದೇಶದಿಂದ ತುಂಗಳ ಏತ ನೀರಾವರಿ, ಕರಿ ಮಸೂತಿ ಏತ ನೀರಾವರಿ ಹಾಗೂ ಬಬಲೇಶ್ವರ ಏತ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ತರಲಾಗಿದ್ದು ಕಾಲುವೆಗಳ ಮುಖಾಂತರ ಹತ್ತಾರು ಗ್ರಾಮಗಳಿಗೆ ನೀರುಣಿಸುವ ಉದ್ದೇಶವಾಗಿದೆ. ಈ ಮೂರು ನೀರಾವರಿ ಯೋಜನೆಗಳು ಅಥಣಿ ತಾಲೂಕಿನ ಅರಟಾಳ ಗ್ರಾಮದ ಸುತ್ತಮುತ್ತಲಿನಲ್ಲಿ ಇವೆ. ಅದರಲ್ಲಿ ಪ್ರಮುಖವಾಗಿ ಬಬಲೇಶ್ವರ ಏತ ನೀರಾವರಿ ಇದ್ದು ಈ ನೀರಾವರಿ ಯೋಜನೆಯು ಅರಟಾಳ ಗ್ರಾಮದಕ್ಕೆ ಬಂದು ಕೊನೆಗೊಳ್ಳುತ್ತದೆ ಅಲ್ಲದೇ ಈ ಬಬಲೇಶ್ವರ ಏತ ನೀರಾವರಿಯ ನೀರು ಇದೀಗ ಅರಟಾಳ ಗ್ರಾಮದ ಪಕ್ಕದಲ್ಲಿಯೇ ಇರುವ ಹಾಲಳ್ಳಿ ಗ್ರಾಮದ ವರೆಗೆ ನೀರು ಬಂದಿದೆ ಆದರೆ ಆ ಗ್ರಾಮದ ಜನರು ಮುಂದೆ ನೀರು ಹರಿ ಬಿಡದ ಪರಿಣಾಮ ಜನ ಜಾನುವಾರುಗಳು ನೀರಿಲ್ಲದೆ ಪರದಾಡುವಂತಾಗಿದೆ.
Chikkodi: ಕಾರ್ಖಾನೆಯಿಂದ ಕೆರೆಗೆ ಫ್ಯಾಕ್ಟರಿ ತ್ಯಾಜ್ಯ ಬಿಡುಗಡೆ: ಜನ ಜಾನುವಾರುಗಳಿಗೆ ಸಮಸ್ಯೆ
ಇನ್ನೂ ಹಾಲಳ್ಳಿ ಗ್ರಾಮಕ್ಕೆ ಹೋಗಿ ನೀರು ಬಿಡುವಂತೆ ಅಲ್ಲಿನ ಗ್ರಾಮದ ಹಿರಿಯರ ಜೊತೆ ಮಾತುಕತೆ ಮಾಡಿದರೆ ನೀರು ಬಿಡುತ್ತೇವೆ ಅಂತ ಹೇಳುತ್ತಾರೆ ಹೊರತು ನೀರು ಬಿಡಲ್ಲ. ಈ ಸಮಸ್ಯೆ ಬಗ್ಗೆ ಸ್ಥಳೀಯ ಐಗಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಅಲ್ಲದೇ ಈ ವಿಷಯಕ್ಕೆ ಸಂಬಂಧಪಟ್ಟಂತೆ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನಕ್ಕೆ ತಂದರು ಕೂಡ ಯಾವುದೇ ಪರಿಣಾಮವಾಗಿಲ್ಲ, ಇನ್ನೂ ಸ್ಥಳೀಯ ಶಾಸಕ ಮಹೇಶ ಕುಮಠಳ್ಳಿಯವರು ಅಮ್ಮಾಜೇಶ್ವರಿ ಯೋಜನೆ ಅನುಷ್ಠನಕ್ಕೆ ತರುತ್ತೇವೆ ಅಂತ ಹೇಳುತ್ತಾರೆ. ಇದೀಗ ನಮಗೆ ಕುಡಿಯುವ ನೀರಿಲ್ಲದೇ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಕೂಡಲೇ ನೀರು ಬಿಡುವಂತೆ ಮಾಡಿ ಇಲ್ಲದೇ ಹೋದಲ್ಲಿ ಮುಂಬರುವ ದಿನಗಳಲ್ಲಿ ಒಂದು ವೇಳೆ ನಮ್ಮ ಗ್ರಾಮಕ್ಕೆ ಆಗುತ್ತಿರುವ ನೀರಿನ ಸಮಸ್ಯೆಯನ್ನ ಪರಿಹರಿಸದೇ ಹೋದಲ್ಲಿ ಗ್ರಾಮ ಪಂಚಾಯತಿ ಸದಸ್ಯರು ರಾಜೀನಾಮೆ ಕೊಡುವುದಲ್ಲದೇ ಮುಂದೆ ಬರುವ ಎಲ್ಲ ಚುನಾವಣೆಗಳನ್ನ ಬಹಿಷ್ಕರಿಸುವುದಲ್ಲದೇ ಹೋರಾಟದ ಎಚ್ಚರಿಕೆ ನೀಡುತ್ತಿದ್ದಾರೆ ಇಲ್ಲಿನ ಗ್ರಾಮ ಪಂಚಾಯತಿ ಸದಸ್ಯರು.
ಮೂರು ಏತ ನೀರಾವರಿ ಯೋಜನೆಯ ಕಾಲುವೆಗಳು ಈ ಗ್ರಾಮದ ಪಕ್ಕಲ್ಲಿಯೇ ಹಾದು ಹೋದ್ರು ಪ್ರಯೋಜನಕ್ಕೆ ಬಾರದಂತಾಗಿದ್ದು ಅದರಲ್ಲೂ ಬಬಲೇಶ್ವರ ಏತ ನೀರಾವರಿ ನೀರು ಕೂದಲೆಳೆ ಅಂತರದಲ್ಲಿದ್ದರು ಕೂಡ ಅಲ್ಲಿರುವ ರೈತರು ನೀರು ಬಿಡದ ಪರಿಣಾಮ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದ್ದು, ಈ ಬಗ್ಗೆ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ಈ ಗ್ರಾಮಸ್ಥರಿಗೆ ಆಗುತ್ತಿರುವ ಸಮಸ್ಯೆಯನ್ನ ಪರಿಹರಿಸುತ್ತಾರಾ ಇಲ್ಲವೋ ಅನ್ನೋದನ್ನ ಕಾದು ನೋಡಬೇಕಿದೆ.