• ಗುಮ್ಮಟನಗರಿಯಲ್ಲಿ 25 ಸಾವಿರ ಜನರಿಂದ ಸಾಮೂಹಿಕ ಯೋಗ..!
• ಸೈನಿಕ ಶಾಲೆಯ ಆವರಣದಲ್ಲಿ ನಡೆದ ಯೋಗಥಾನ್..!
• ಬಿಳಿ ಹಿಜಾಬ್ ಧರಿಸಿ ಯೋಗ ಮಾಡಿದ ಮುಸ್ಲಿಂ ವಿದ್ಯಾರ್ಥಿನಿಯರು..!
ವರದಿ- ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಜ.15): ಗುಮ್ಮಟನಗರಿ ವಿಜಯಪುರದಲ್ಲಿ ಯೋಗಥಾನ್ ಅಂಗವಾಗಿ ಆಯೋಜಿಸಲಾಗಿದ್ದ ಯೋಗ ಪ್ರದರ್ಶನದಲ್ಲಿ 25 ಸಾವಿರಕ್ಕೂ ಅಧಿಕ ಜನರು ಏಕಕಾಲಕ್ಕೆ ಯೋಗ ಪ್ರದರ್ಶನ ಮಾಡಿದರು. ಆದರೆ, ಈ ಯೋಗಥಾನ್‌ನಲ್ಲಿ ಮುಸ್ಲಿಂ ವಿದ್ಯಾರ್ಥಿಯರು ಹಿಜಾಬ್ ಧರಿಸಿಯೇ ಯೋಗಾಭ್ಯಾಸದಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿತ್ತು.
ಸಾಮೂಹಿಕ ಯೋಗದ ಮೂಲಕ ರಾಜ್ಯ ಸರ್ಕಾರ ಗಿನ್ನಿಸ್ ದಾಖಲೆ ಬರೆಯುತ್ತಿದೆ. ಈ ನಿಟ್ಟಿನಲ್ಲಿ ಗುಮ್ಮಟನಗರಿ ವಿಜಯಪುರ ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನಗರದ ಸೈನಿಕ ಶಾಲೆ ಮೈದಾನದಲ್ಲಿ ಬೃಹತ್ ಪ್ರಮಾಣದ ಯೋಗಥಾನ್ ಪ್ರದರ್ಶನ ಹಮ್ಮಿ ಕೊಳ್ಳಲಾಗಿತ್ತು. ವಿವಿಧ ಶಾಲೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು. ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ, ಎಸ್ಪಿ ಆನಂದಕುಮಾರ, ಸಿಇಒ ರಾಹುಲ್ ಸಿಂಧೆ, ಸೈನಿಕ ಶಾಲೆಯ ಮುಖ್ಯಸ್ಥೆ ಪ್ರತಿಭಾ ಬಿಸ್ಮಿ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಕನಿಷ್ಠ 15 ದಿನಕ್ಕೊಮ್ಮೆಯಾದರೂ ಯೋಗ ಮಾಡಿ: ಶಾಸಕ ಅಪ್ಪಚ್ಚು ರಂಜನ್ ಸಲಹೆ
ಏಕಕಾಲದಲ್ಲಿ 25 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಸೇರಿದ್ದ ಜನರು ಯೋಗ ಮಾಡುವ ಮೂಲಕ ದಾಖಲೆ ನಿರ್ಮಿಸಿದರು. ಸೈನಿಕ ಶಾಲೆಯ ಮೈದಾನದಲ್ಲಿ ಒಟ್ಟು ಯೋಗಾಸನ ಮಾಡಲು ಒಟ್ಟು 9 ಬ್ಲಾಕ್ ಮಾಡಲಾಗಿತ್ತು. ಪ್ರತಿ ಬ್ಲಾಕ್ ನಲ್ಲಿ ಸುಮಾರು 25 ಸಾವಿರ ಯೋಗಪಟುಗಳು ತಮ್ಮ ಯೋಗ ಪ್ರರ್ದಶನ ತೋರಿಸಿದರು. ಯೋಗ ಪಟು ಬಸನಗೌಡ ಹೊರನಾಳ ನೇತ್ವತೃದಲ್ಲಿ ಈ ಯೋಗಾಶನದ ಯೋಗಥಾನ್ ಹಮ್ಮಿಕೊಳ್ಳಲಾಗಿತ್ತು.
ಮೋದಿ ಕಾರ್ಯದಿಂದ ವಿಶ್ವಕ್ಕೆ ಹರಡಿದ ಯೋಗ: ಯೋಗಥಾನ್ ಚಾಲನೆ ನೀಡಿ ಮಾತನಾಡಿದ ಸಂಸದ ರಮೇಶ ಜಿಗಜಿಣಗಿ, ಯೋಗ ದೇಹದ ಆರೋಗ್ಯ ಕಾಪಾಡಲು ಪೂರಕವಾಗಿದೆ. ಹಿಂದಿನ ಕೇಂದ್ರದಲ್ಲಿದ್ದ ಸರ್ಕಾರಗಳು ಈ ಬಗ್ಗೆ ಚಿಂತಿಸಲಿಲ್ಲ, ಆದರೆ ನರೇಂದ್ರ ಮೋದಿ ದೇಶದ ಪ್ರಧಾನಿಯಾದ ಮೇಲೆ ವಿಶ್ವ ಸಂಸ್ಥೆಯಲ್ಲಿ ಯೋಗ ದಿನಾಚರಣೆ ಕುರಿತು ಪ್ರಸ್ತಾವನೆ ಸಲ್ಲಿಸಿ, ಈಗ ಇಡಿ ಜಗತ್ತು ಯೋಗದಿನ ಆಚರಣೆ ಮಾಡುತ್ತಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
National Youth Festival:15ರಂದು ಗಿನ್ನಿಸ್ ದಾಖಲೆಗೆ ಯೋಗಥಾನ್!
ಗಿನ್ನಿಸ್ ದಾಖಲೆಗೆ ವಿಜಯಪುರ ಕೊಡುಗೆ: ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವ ಮಾತನಾಡಿ, ಯೋಗಥಾನವನ್ನು ಕರ್ನಾಟಕದಲ್ಲಿ ಗಿನ್ನಿಸ್ ದಾಖಲೆ ನಿರ್ಮಿಸುವ ಉದ್ದೇಶದಿಂದ ಈ ಬಾರಿ ರಾಷ್ಟ್ರೀಯ ಯುವ ದಿನಾಚರಣೆ ಸಂದರ್ಭದಲ್ಲಿ ಆಚರಿಸಲಾಗುತ್ತಿದೆ. ವಿಜಯಪುರ ಜಿಲ್ಲೆಯಲ್ಲಿ ಒಟ್ಟು 25ಸಾವಿರ ಯೋಗಪಟುಗಳು ಯೋಗಥಾನದಲ್ಲಿ ಭಾಗವಹಿಸಿದ್ದಾರೆ. ಗಿನ್ನಿಸ್ ದಾಖಲೆಯನ್ನು ಕರ್ನಾಟಕ ಈ ಬಾರಿ ದಾಖಲಿಸಲು ವಿಜಯಪುರ ಜಿಲ್ಲೆಯ ಕೊಡುಗೆ ಹೆಚ್ಚಿದೆ ಎಂದರು.