ಸನಾತನ ಧರ್ಮ ಉಳಿದರೆ ಮಾತ್ರ ಭಾರತದ ಉಳಿವು ಸಾಧ್ಯ: ಯತ್ನಾಳ

By Kannadaprabha News  |  First Published Sep 23, 2023, 9:15 PM IST

ಡಚ್ಚರು, ಬ್ರಿಟೀಷರು, ಪೋರ್ಚುಗೀಸರು ಕೂಡ ವ್ಯವಸ್ಥಿತವಾಗಿ ಸನಾತನ ಧರ್ಮ ಹಾಳುಗೆಡಹಲು ಪ್ರಯತ್ನಿಸಿದರೂ ಕೂಡ ಅದು ಫಲಪ್ರದವಾಗದೇ ಹಿಂದೂ ಧರ್ಮ ಮತ್ತಷ್ಟು ಹೆಮ್ಮರವಾಗಿ ಬೆಳೆಯುತ್ತಿದೆ: ವಿಜಯಪುರ ಶಾಸಕ ಬಸನಗೌಡ ಯತ್ನಾಳ 


ರಬಕವಿ-ಬನಹಟ್ಟಿ(ಸೆ.23):  ಸನಾತನ ಹಿಂದೂ ಧರ್ಮವನ್ನು ನಾಶ ಮಾಡಲೆಂದೇ ಪಣತೊಟ್ಟಿದ್ದ ದಾಳಿಕೋರರು ಮಣ್ಣಾಗಿ ಹೋಗಿದ್ದಾರೆ ಎಂದು ವಿಜಯಪುರ ಶಾಸಕ ಬಸನಗೌಡ ಯತ್ನಾಳ ಹೇಳಿದರು.

ಶುಕ್ರವಾರದಂದು ತಾಲೂಕಿನ ಕಾಲತಿಪ್ಪಿ ಗ್ರಾಮದಲ್ಲಿ ನಡೆದ ಗಜಾನನ ಉತ್ಸವದ ೩೦ನೇ ವರ್ಷಾಚರಣೆ ಮತ್ತು ಬಂಡಿಗಣಿ ಬಸವಗೋಪಾಲ ನೀಲಮಾಣಿಕ ಮಠದ ಅನ್ನದಾನೇಶ್ವರ ಶ್ರೀಗಳ ೨ನೇ ವರ್ಷದ ಸಪ್ತಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಡಚ್ಚರು, ಬ್ರಿಟೀಷರು, ಪೋರ್ಚುಗೀಸರು ಕೂಡ ವ್ಯವಸ್ಥಿತವಾಗಿ ಸನಾತನ ಧರ್ಮ ಹಾಳುಗೆಡಹಲು ಪ್ರಯತ್ನಿಸಿದರೂ ಕೂಡ ಅದು ಫಲಪ್ರದವಾಗದೇ ಹಿಂದೂ ಧರ್ಮ ಮತ್ತಷ್ಟು ಹೆಮ್ಮರವಾಗಿ ಬೆಳೆಯುತ್ತಿದೆ. ಬ್ರಿಟೀಷರು ನಮ್ಮ ಗುರುಕುಲ ಶಿಕ್ಷಣ ವ್ಯವಸ್ಥೆ ಹಾಳುಗೆಡವಲೆಂದೇ ಮೆಕಾಲೆ ಶಿಕ್ಷಣ ಪದ್ಧತಿಯನ್ನು ಜಾರಿಗೊಳಿಸಿದರೂ ಭಾರತದ ಮಠ-ಮಂದಿರಗಳು ತ್ರಿವಿಧ ದಾಸೋಹ ನೀಡುವ ಮೂಲಕ ಹಿಂದೂ ಸಂಸ್ಕೃತಿಯನ್ನು ಉಳಿಸುವಲ್ಲಿ ಯಶಸ್ವಿಯಾದವು. ಸನಾತನ ಧರ್ಮ ಉಳಿದರೆ ಮಾತ್ರ ಭಾರತ ಉಳಿಯುತ್ತದೆ ಇಲ್ಲವಾದಲ್ಲಿ ವಿಶ್ವಕ್ಕೆ ಸಾಂಸ್ಕೃತಿಕ ಬರಡುತನ ಬಂದೊದಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

Latest Videos

undefined

ಮಲಪ್ರಭಾ, ಘಟಪ್ರಭಾ ನದಿಗಳಿಂದಲೇ ಅಕ್ರಮ ಒತ್ತುವರಿ: ಸರ್ವೇ ಕಾರ್ಯದಲ್ಲಿ ಬಯಲಾಯ್ತು ಅಚ್ಚರಿ ಸತ್ಯ !

ಸನಾತನ ಧರ್ಮದ ಪರಂಪರೆಯ ಅರಿವಿರದ ವಿಷಸರ್ಪಗಳು ಆಗಾಗ್ಗೆ ವಿಷ ಕಕ್ಕುತ್ತಲೇ ಇರುತ್ತವೆ. ಆದರೆ, ಸನಾತನ ಧರ್ಮ ಉಳಿದಿರುವುದು ನೇಗಿಲ ತುದಿಯಲ್ಲಿ. ಎಲ್ಲಿಯವರೆಗೆ ಕೃಷಿ ನಮ್ಮ ದೇಶದಲ್ಲಿ ಅಸ್ತಿತ್ವದಲ್ಲಿ ಇರುತ್ತದೋ ಅಲ್ಲಿಯವರೆಗೆ ಸನಾತನ ಧರ್ಮ, ಸಂಸ್ಕೃತಿ, ಆಚರಣೆಗಳು ಅಬಾಧಿತ ಆಗಿರುತ್ತವೆ. ದಾಳಿಕೋರರು, ವಿಶೇಷವಾಗಿ ಮೊಘಲರು ಹತ್ತಾರು ಪ್ರಲೋಭನೆ, ಬೆದರಿಕೆ ಮೂಲಕ ಮತಾಂತರಕ್ಕೆ ಮುಂದಾದರೂ ಮಹಾರಾಣಾ ಪ್ರತಾಪ್, ಛತ್ರಪತಿ ಶಿವಾಜಿಯಂಥ ಹಿಂದೂ ಕೇಸರಿಗಳು ಕಾಲಕಾಲಕ್ಕೆ ಧರ್ಮ ರಕ್ಷಣೆಗೆ ಕಂಕಣಬದ್ಧರಾದರು ಎಂದರು.

ವಿಚಿತ್ರವೆಂದರೆ ಸ್ವಾತಂತ್ರ್ಯಾ ನಂತರವೂ ನಾವು ಕಲಿತ ಇತಿಹಾಸದಲ್ಲಿ ಮೊಘಲರನ್ನು ಧಾರಾಳಿಗಳೆಂದು ಬಿಂಬಿಸಿದ್ದನ್ನೇ ಓದಿದ ನಾವು ಅದರ ಹಿಂದಿನ ಕರಾಳ ಮುಖವನ್ನು ಅರಿಯಲು ಸಾಧ್ಯವಾಗಿರಲಿಲ್ಲ. ಧಾಳಿಕೋರರನ್ನು ಸಮರ್ಥವಾಗಿ ಎದುರಿಸಿದ್ದ ಪೋರಸ್, ರಾಣಾಪ್ರತಾಪ್, ಶಿವಾಜಿ, ವೀರ ಸಾವರ್ಕರ ನಮಗೆ ಅಜ್ಞಾತವಾಗಿಯೇ ಉಳಿದರು. ನಮ್ಮ ನೈಜ ಇತಿಹಾಸ ಅರಿಯದ ಸ್ಥಿತಿಯಲ್ಲೂ ನಮ್ಮ ಸಂಸ್ಕೃತಿ, ಆಚಾರ-ವಿಚಾರಗಳಿಂದ ಹಿಂದುತ್ವ ಭಾರತದ ಉಸಿರಾಗಿ ಬೆಳೆದಿದೆ. ಸ್ಟಾಲಿನ್, ಉದಯ್ ಮಾರನ್ ಸೇರಿ ಎಡಪಂಥೀಯ ಬುದ್ಧಿಜೀವಿಗಳೆಂಬ ವಿಷಸರ್ಪಗಳ ನಡುವೆ ಹಿಂದುತ್ವ ಬಲಗೊಳ್ಳುತ್ತಿದೆ. ದೇಶದ ಯಾವುದೇ ಮಸೀದಿಯ ಕೆಳಗೆ ಹಿಂದೂ ದೇಗುಲಗಳಿವೆ ಎಂಬುದನ್ನು ಸಾಕಷ್ಟು ನಿದರ್ಶನಗಳು ಪುಷ್ಟೀಕರಿಸಿವೆ. ಒಂದು ಕೋಮಿನ ಓಲೈಕೆ ಮಾಡುತ್ತ ಕೀಳು ರಾಜಕಾರಣ ಮಾಡುತ್ತ ಬಂದ ಕಾಂಗ್ರೆಸ್ ಮತ್ತಿತರ ಕೆಲ ಪಕ್ಷಗಳು ಭಾರತದ ಉಸಿರಾಗಿರುವ ಹಿಂದು ಧರ್ಮೀಯರಿಗೆ ಸತತ ಅನ್ಯಾಯ ಎಸಗುತ್ತಲೇ ಬಂದಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿಂದೂಗಳು ಕೀಳುಭಾಗ್ಯಗಳಿಗೆ ಬಲಿಯಾಗದೇ ಧರ್ಮ ವಿಭಜಕರಿಗೆ ತಕ್ಕಪಾಠ ಕಲಿಸದಿದ್ದರೆ ಮುಂದೆ ಕಾಶ್ಮೀರ್ ಫೈಲ್ಸ್, ಕೇರಳ ಫೈಲ್ಸ್‌ನಂಥ ಘಟನೆಗಳು ಪುನರಾವರ್ತನೆ ಆಗುತ್ತವೆ ಎಂಬುದನ್ನು ಮರೆಯಬಾರದು. ಧರ್ಮ, ಸಂಸ್ಕೃತಿಗಳ ಬುನಾದಿ ಇಲ್ಲದೇ ವಿಶ್ವದ ಯಾವುದೇ ರಾಷ್ಟ್ರ ಪ್ರಗತಿ ಸಾಧಿಸಲು ಸಾಧ್ಯವಿಲ್ಲ. ವಿಶ್ವದ ೧೩ನೇ ಆರ್ಥಿಕ ಶಕ್ತಿಯಾಗಿದ್ದ ಭಾರತ ಕೇವಲ ೯ ವರ್ಷಗಳಲ್ಲಿ ೫ನೇ ಆರ್ಥಿಕ ಶಕ್ತಿಯಾಗಿ ಮುಂಚೂಣಿಗೆ ಬಂದದ್ದು ಮೋದಿ ಅವರಂಥ ಧರ್ಮವಂತ ನಾಯಕ ದೇಶವನ್ನು ಪ್ರತಿನಿಧಿಸುತ್ತಿರುವ ಕಾರಣಕ್ಕೆ ಎಂಬುದು ಅಕ್ಷರಶಃ ಸತ್ಯ. ಮುಂದಿನ ವರ್ಷಗಳಲ್ಲಿ ಭಾರತ ೩ನೇ ಸ್ಥಾನಕ್ಕೇರುವುದೂ ಖಚಿತ. ಅಂತರಿಕ್ಷ, ಸಾಕ್ಷರತೆ, ಆಹಾರ ಉತ್ಪಾದನೆ, ಪರ್ಯಾಯ ಇಂಧನ ತಯಾರಿಕೆ, ಗುಡಿ ಕೈಗಾರಿಕೆಗಳಿಗೆ ಉತ್ತೇಜನ, ಶಸ್ತ್ರಾಸ್ತ್ರಗಳ ಉತ್ಪಾದನೆಯಲ್ಲಿನ ಸ್ವಾವಲಂಬನೆ, ಸ್ವದೇಶಿ ನಿರ್ಮಾಣಕ್ಕೆ ಆದ್ಯತೆ, ಬೃಹತ್ ಕೈಗಾರಿಕೆಗೆ ಆದ್ಯತೆ, ಕೃಷಿಕರಿಗೆ ಹತ್ತಾರು ಯೋಜನೆಗಳ ಮೂಲಕ ಆರ್ಥಿಕ ದೃಢತೆ ರೂಪಿಸಿರುವುದು ಒಬ್ಬ ದೇಶಭಕ್ತ ನಾಯಕನಿಂದ ಮಾತ್ರ ಸಾಧ್ಯ. ಈ ಎಲ್ಲ ಪ್ರತ್ಯಕ್ಷ ನಿದರ್ಶನಗಳನ್ನು ಅರಿತು ಭಾರತೀಯರು ಆಮಿಷಗಳಿಗೆ ಬಲಿಯಾಗದೇ ಬಲಿಷ್ಠ ಭಾರತ ನಿರ್ಮಾಣಕ್ಕೆ ದೇಶಭಕ್ತ ನಾಯಕರಿಗೆ ಪ್ರಾಶಸ್ತ್ಯ ನೀಡಿ ದೇಶಭಕ್ತಿ ಬೆಳೆಸಿಕೊಳ್ಳಬೇಕು. ದೇಶ ಮತ್ತು ಸನಾತನ ಸಂಸ್ಕೃತಿ ನಮ್ಮ ಬದುಕಿನ ಉಸಿರಾಗಬೇಕಾದರೆ ದೇಶದ್ರೋಹಿಗಳಿಗೆ ತಕ್ಕ ಶಾಸ್ತಿ ಮಾಡಬೇಕು ಎಂದರು.

ಕಾಂಗ್ರೆಸ್ ಸರ್ಕಾರಕ್ಕೆ ಕಾಂಗ್ರೆಸ್ಸಿಗರಿಂದಲೇ ಅಪಾಯ: ಮಾಜಿ ಸಚಿವ ಕಾರಜೋಳ

ಶಾಸಕ ಸಿದ್ದು ಸವದಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಿಟ್ಟಿ ಯೋಜನೆಗಳು ಮೀನಿಗೆ ಗಾಳಹಾಕಿದಂತೆ. ಅಲ್ಲಿ ಅಂತಿಮವಾಗಿ ಸಾಯುವುದು ಮೀನು ಎಂಬುದನ್ನು ಎಲ್ಲರೂ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಧರ್ಮ ಉಳಿಸುವವರನ್ನು ಬೆಂಬಲಿಸಿ ದೇಶದ ಜೊತೆ ಧರ್ಮ, ಸಂಸ್ಕೃತಿ ಉಳಿಸಬೇಕು. ಧರ್ಮ ಉಳಿಸುವ ನಿಟ್ಟಿನಲ್ಲಿ ಮಠಾಧೀಶರು ನೇತೃತ್ವ ವಹಿಸಬೇಕು. ಪ್ರತಿ ಮನೆಯ ಮಾತೆಯರು ಜೀಜಾಬಾಯಿ ಆದರೆ ಮನೆಗೊಬ್ಬ ಶಿವಾಜಿ ಹುಟ್ಟಲು ಸಾಧ್ಯ. ಒಳಜಾತಿಗಳು ತೊಲಗಿ ಹಿಂದುತ್ವ ಒಂದೇ ಎಂದು ಅರಿಯಬೇಕು ಎಂದರು.

ಬಡಿಗಣಿ ಅನ್ನದಾನೇಶ್ವರ ಶ್ರೀಗಳಿಗೆ ಪುಷ್ಪಾಲಂಕಾರ ಮಾಡಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಸಚ್ಚಿದಾನಂದ ಅವಧೂತರು, ಮಲ್ಲಯ್ಯಶ್ರೀ, ಶಿವಲಿಂಗಯ್ಯ ಮಠದ ಲಕ್ಕಪ್ಪ ಪಾಟೀಲ, ಸುರೇಶ ಅಕ್ಕಿವಾಟ, ಡಿ.ಆರ್.ಪಾಟೀಲ, ನಾಗಪ್ಪ ಸನದಿ, ಬಸವರಾಜ ಹನಗಂಡಿ, ಬಾಬಾಗೌಡ ಪಾಟೀಲ, ಮಹಾಂತೇಶ ಹಿಟ್ಟಿನಮಠ, ಆನಂದ ಕಂಪು, ಗ್ರಾಪಂ ಅಧ್ಯಕ್ಷೆ ಕಲಾವತಿ ಮಾಂಗ ಉಪಸ್ಥಿತರಿದ್ದರು.

click me!