ಖಾನಾಪುರ ಶಾಸಕ ವಿಠ್ಠಲ ಹಲಗೇಕರ ಸ್ವಗ್ರಾಮದಲ್ಲಿ ಕಲ್ಲು ತೂರಾಟ: ಲಾಠಿ ಚಾರ್ಜ್‌

By Kannadaprabha News  |  First Published Sep 23, 2023, 8:45 PM IST

ಶಾಸಕ ಹಲಗೇಕರ ಮಧ್ಯಸ್ಥಿಕೆಯಲ್ಲಿ ಗ್ರಾಮದಲ್ಲಿ ನಡೆದ ಶಾಂತಿಸಭೆಯಲ್ಲಿ ಒಂದು ಗುಂಪಿನ ಯುವಕರು ಪಾಲ್ಗೊಂಡು, ಮತ್ತೊಂದು ಗುಂಪಿನ ಯುವಕರು ಪಾಲ್ಗೊಳ್ಳಲಿಲ್ಲ. ಆದರೆ, ಅವರು ಗ್ರಾಮದಲ್ಲಿ ಪ್ರತಿಭಟನೆ ಮುಂದುವರೆಸಿದ್ದರಿಂದ ಗ್ರಾಮದಲ್ಲಿ ವಾತಾವರಣ ಬೂದಿ ಮುಚ್ಚಿದ ಕೆಂಡದಂತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಎಸ್‌ಪಿ, ಡಿಎಸ್‌ಪಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ. 


ಖಾನಾಪುರ(ಸೆ.23): ಸ್ಥಳೀಯ ಶಾಸಕ ವಿಠ್ಠಲ ಹಲಗೇಕರ ಅವರ ಸ್ವಗ್ರಾಮ ತಾಲೂಕಿನ ತೋಪಿನಕಟ್ಟಿಯಲ್ಲಿ ಶುಕ್ರವಾರ ಎರಡು ಗುಂಪುಗಳ ಯುವಕರ ನಡುವೆ ಭುಗಿಲೆದ್ದು ವಾಗ್ವಾದ ಕಲ್ಲು ತೂರಾಟ ನಡೆದಿದ್ದು ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರವಾಹ ನಡೆಸಿದ ಘಟನೆ ನಡೆದಿದೆ.

ಶಾಸಕ ಹಲಗೇಕರ ಮಧ್ಯಸ್ಥಿಕೆಯಲ್ಲಿ ಗ್ರಾಮದಲ್ಲಿ ನಡೆದ ಶಾಂತಿಸಭೆಯಲ್ಲಿ ಒಂದು ಗುಂಪಿನ ಯುವಕರು ಪಾಲ್ಗೊಂಡು, ಮತ್ತೊಂದು ಗುಂಪಿನ ಯುವಕರು ಪಾಲ್ಗೊಳ್ಳಲಿಲ್ಲ. ಆದರೆ, ಅವರು ಗ್ರಾಮದಲ್ಲಿ ಪ್ರತಿಭಟನೆ ಮುಂದುವರೆಸಿದ್ದರಿಂದ ಗ್ರಾಮದಲ್ಲಿ ವಾತಾವರಣ ಬೂದಿ ಮುಚ್ಚಿದ ಕೆಂಡದಂತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಎಸ್‌ಪಿ, ಡಿಎಸ್‌ಪಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ. ಗ್ರಾಮದಲ್ಲಿ ಕಲ್ಲು ತೂರಾಟ ನಡೆಸಿದವರ ಪತ್ತೆಗೆ ಪೊಲೀಸ್ ಇಲಾಖೆ ಪ್ರಯತ್ನ ನಡೆಸಿದ್ದು, ಗ್ರಾಮದ ಎರಡೂ ಗುಂಪುಗಳ ತಲಾ 40 ಯುವಕರ ವಿರುದ್ಧ ಖಾನಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಗ್ರಾಮದಲ್ಲಿ ಹೆಚ್ಚಿನ ಭದ್ರತೆಗಾಗಿ ಪೊಲೀಸ್ ತುಕಡಿಗಳನ್ನು ನಿಯೋಜಿಸಲಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

Tap to resize

Latest Videos

ಚಿಕ್ಕೋಡಿ: ರಸ್ತೆ ಮೇಲೆ ಎಸೆದು 4 ತಿಂಗಳ ಹಸುಗೂಸು ಕೊಂದ ಪಾಪಿ ತಂದೆ..!

ಪ್ರಕರಣದ ವಿವರ:

ತೋಪಿನಕಟ್ಟಿ ಗ್ರಾಮದ ಯುವಕರ ನಡುವೆ ಗಣೇಶ ಚತುರ್ಥಿಯ ಮರುದಿನ ಆಚರಿಸುವ ಹುಂದರಿ (ಇಲಿಗಳ ಹಬ್ಬ) ಹಬ್ಬದಂದು ಬುಧವಾರ ರಾತ್ರಿ ಕ್ಷುಲ್ಲಕ ಕಾರಣಕ್ಕಾಗಿ ಪ್ರಾರಂಭವಾದ ಸಣ್ಣ ಜಗಳ ಮರುದಿನ ಗ್ರಾಮದ ಕೆಲವರು ಸೇರಿ ಮತ್ತೆ ಬೆಳೆಸಿದ್ದರಿಂದ ಗುರುವಾರ ಗ್ರಾಮದಲ್ಲಿ ಎರಡೂ ಗುಂಪುಗಳ ನಾಗರಿಕರ ನಡುವೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಎರಡೂ ಗುಂಪುಗಳ ನಡುವೆ ದೊಡ್ಡ ಪ್ರಮಾಣದ ವಾಗ್ವಾದ ನಡೆದ ಬಳಿಕ ಊರಿನ ಹಿರಿಯರು ಎರಡೂ ಗುಂಪಿನವರನ್ನು ಸಮಾಧಾನಪಡಿಸಿದ್ದರು. ಆದರೆ ಇಷ್ಟಕ್ಕೆ ಸುಮ್ಮನಾಗದ ಗ್ರಾಮದ ಒಂದು ಗುಂಪಿನ ಯುವಕರು ತಮ್ಮೂರಿನಲ್ಲಿ ನಡೆದ ಈ ಘಟನೆಯ ಬಗ್ಗೆ ವಿವಿಧ ಸಂಘಟನೆಗಳ ಮುಖಂಡರಿಗೆ ಮಾಹಿತಿ ನೀಡಿದ್ದರಿಂದ ಶುಕ್ರವಾರ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಗ್ರಾಮಕ್ಕೆ ಆಗಮಿಸಿ ಗ್ರಾಮದಲ್ಲಿ ಹಲಗೆಯನ್ನು ಬಾರಿಸಿ ಘೋಷಣೆಗಳನ್ನು ಕೂಗಿ ಮತ್ತೊಂದು ಗುಂಪಿನ ಸಮುದಾಯದವರ ವಿರುದ್ಧ ಪ್ರತಿಭಟನೆ ನಡೆಸಿದರು.

ಚಿಕ್ಕೋಡಿ: ಕೂದಲು ಆರಿಸುವವರ ಮಧ್ಯೆ ಗಲಾಟೆ, ಬಾಲಕನ ಕೊಂದು ಬಾವಿಯಲ್ಲಿ ಎಸೆದ ದುಷ್ಕರ್ಮಿಗಳು

ಈ ವಿಷಯ ತಿಳಿದ ಇನ್ನೊಂದು ಸಮುದಾಯದ ಯುವಕರು ನೂರಾರು ಸಂಖ್ಯೆಯಲ್ಲಿ ಸೇರಿ ತಮ್ಮ ಶಕ್ತಿ ಪ್ರದರ್ಶನಕ್ಕಾಗಿ ಸಿದ್ಧತೆ ನಡೆಸಿದ್ದರು. ವಿಷಯ ತಿಳಿದ ಶಾಸಕ ವಿಠ್ಠಲ ಹಲಗೇಕರ ಮತ್ತು ಖಾನಾಪುರ ಠಾಣೆಯ ಪಿಐ ಮಂಜುನಾಥ ನಾಯ್ಕ ಸ್ಥಳಕ್ಕಾಗಮಿಸಿ ಎರಡೂ ಗುಂಪಿನ ಮುಖಂಡರ ಜೊತೆ ಮಾತುಕತೆ ನಡೆಸಿ ಪರಿಸ್ಥಿತಿ ಶಾಂತಗೊಳಿಸಲು ಯತ್ನಿಸಿದರು. ಒಂದು ಸಮುದಾಯದವರು ಶಾಸಕರ ಮಾತಿಗೆ ಗೌರವ ನೀಡಿ ಮೌನ ವಹಿಸಿದರು. ಅಷ್ಟರಲ್ಲೇ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ಆರಂಭಿಸಿದ್ದರಿಂದ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡು ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.

ಸದ್ಯ ಗ್ರಾಮದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಗಣೇಶೋತ್ಸವದ ಸಂಭ್ರಮದಲ್ಲಿ ಉತ್ಸಾಹ ತುಂಬಿದ್ದ ಗ್ರಾಮದಲ್ಲಿ ಆಕಸ್ಮಿಕವಾಗಿ ನಡೆದ ಈ ಘಟನೆಯ ಬಳಿಕ ಸ್ಮಶಾನಮೌನ ಆವರಿಸಿದೆ. ತೋಪಿನಕಟ್ಟಿ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ನಡೆದಿರುವ ಘಟನೆಯನ್ನು ದೊಡ್ಡದಾಗಿ ಬಿಂಬಿಸುವ ಪ್ರಯತ್ನ ನಡೆದಿದೆ. ನಾನು ಹುಟ್ಟಿ ಬೆಳದಿರುವ ಈ ಊರಿನಲ್ಲಿ ಎಲ್ಲ ಸಮಾಜದವರು ಸಹಬಾಳ್ವೆ ನಡೆಸುತ್ತಿದ್ದು, ಎಲ್ಲ ಸಮುದಾಯದ ಜನತೆಯ ಮನಸ್ಥಿತಿಯನ್ನು ನಾನು ಬಲ್ಲೆ. ಗ್ರಾಮದಲ್ಲಿ ಈ ಹಿಂದೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಈಗ ನಡೆದಿದ್ದು ಗ್ರಾಮದ ಸಾಮರಸ್ಯಕ್ಕೆ ಧಕ್ಕೆ ತಂದಿದೆ. ಸಾಧ್ಯವಾದಷ್ಟು ಗ್ರಾಮದಲ್ಲಿ ಶಾಂತತೆಯನ್ನು ಕಾಪಾಡಲು ಪ್ರಯತ್ನಿಸಲಾಗಿದೆ. ಉಳಿದದ್ದನ್ನು ಪೊಲೀಸ್ ಇಲಾಖೆಯ ಸುಪರ್ದಿಗೆ ಬಿಡಲಾಗಿದೆ.  

click me!