ಬೆಳಗಾವಿ ನಗರ ಪೊಲೀಸ್ ಕಮೀಷನರೇಟ್ ಘಟಕದ ಪ್ರತಿಯೊಂದು ಪೊಲೀಸ್ ಠಾಣೆಗಳಲ್ಲಿ ಸಾಮಾಜಿಕ ಜಾಲತಾಣಗಳ ನಿಗಾ ಘಟಕ ಸ್ಥಾಪಿಸಿ ಉದ್ರೇಕಕಾರಿ ಹಾಗೂ ಕೋಮುಪ್ರಚೋದನೆ ಪೋಸ್ಟ್ ಮಾಡುವವರ ಮೇಲೆ ನಿಗಾ ಇಡಲಾಗಿದೆ.
ಶ್ರೀಶೈಲ ಮಠದ
ಬೆಳಗಾವಿ(ಸೆ.23): ನೆರೆಯ ಮಹಾರಾಷ್ಟ್ರದ ಪುಣೆ, ಮುಂಬೈ ಹೊರತುಪಡಿಸಿದರೆ ರಾಜ್ಯದ ಬೆಳಗಾವಿಯಲ್ಲಿ ಅತೀ ಅದ್ಧೂರಿಯಾಗಿ ಗಣೇಶೋತ್ಸವ ಆಚರಣೆ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ಪೊಲೀಸರು ಸಾಮಾಜಿಕ ಜಾಲತಾಣಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ಈ ಸಂಬಂಧ ಬೆಳಗಾವಿ ನಗರ ಪೊಲೀಸ್ ಕಮೀಷನರೇಟ್ ಘಟಕದ ಪ್ರತಿಯೊಂದು ಪೊಲೀಸ್ ಠಾಣೆಗಳಲ್ಲಿ ಸಾಮಾಜಿಕ ಜಾಲತಾಣಗಳ ನಿಗಾ ಘಟಕ ಸ್ಥಾಪಿಸಿ ಉದ್ರೇಕಕಾರಿ ಹಾಗೂ ಕೋಮುಪ್ರಚೋದನೆ ಪೋಸ್ಟ್ ಮಾಡುವವರ ಮೇಲೆ ನಿಗಾ ಇಡಲಾಗಿದೆ.
ಬೆಳಗಾವಿ ಗಣೇಶ ಉತ್ಸವಕ್ಕೆ ಐತಿಹಾಸಿಕ ಹಿನ್ನೆಲೆಯಿದೆ. ಬೆಳಗಾವಿಯಲ್ಲಿ ಸಾರ್ವಜನಿಕ ಗಣೇಶ ಮಂಡಳಗಳು ಮಂಟಪಗಳಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳು ಆಕರ್ಷಣೀಯ ಹಾಗೂ ವಿಶಿಷ್ಟವಾಗಿರುತ್ತದೆ. ಗಣೇಶ ಮೂರ್ತಿಗಳ ವೀಕ್ಷಣೆಗೆ ಜಿಲ್ಲಾದ್ಯಂತ ನಿತ್ಯ ಸಾವಿರಾರು ಜನರು ಬೆಳಗಾವಿಗೆ ಆಗಮಿಸಿ, ಅಹೋರಾತ್ರಿ ನಗರದಲ್ಲಿ ಸಂಚರಿಸುತ್ತಾರೆ. ಗಣೇಶ ಹಬ್ಬದಲ್ಲಿ ಕಾನೂನು, ಸುವ್ಯವಸ್ಥೆ ಕಾಪಾಡಲು ಪೊಲೀಸರು ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ಅಲ್ಲದೇ, ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಇದರ ಜೊತೆಗೆ ಸಾಮಾಜಿಕ ಜಾಲತಾಣಗಳ ಮೇಲೆ ಪೊಲೀಸರು ವಿಶೇಷ ಕಾಳಜಿ ವಹಿಸಿದ್ದಾರೆ. ಈ ಸಂಬಂಧ ಬೆಳಗಾವಿ ನಗರ , ಉಪನಗರಗಳಲ್ಲಿಯೂ ಜಾಗೃತಿ ಮೂಡಿಸಲಾಗಿದೆ.
ಕರ್ನಾಟಕದಲ್ಲಿ ಮಳೆಯ ಅಭಾವ: ಮೋಡ ಬಿತ್ತನೆಗೆ ಅಂತಿಮ ಹಂತದ ಸಿದ್ಧತೆ
ಶೇರ್, ಪೋಸ್ಟ್ ಮಾಡುವ ಮುನ್ನ ಎಚ್ಚರ ವಹಿಸಿ
ಫೇಸ್‌ಬುಕ್, ವಾಟ್ಸಪ್, ಟ್ವಿಟರ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಹಾಗೂ ಪ್ರಚೋದನಾಕಾರಿ ಮಾಹಿತಿ ಪ್ರಕಟಿಸಿದರೆ ಅಂತಹವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಸೈಬರ್ ತಂಡ ನಿರಂತರವಾಗಿ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಡಲಿದೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಸೂಕ್ಷ್ಮ ಮಾಹಿತಿಗಳು ಹಾಗೂ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಹರಿಯಬಿಡಲಾಗುತ್ತಿದೆ. ಕಿಡಿಗೇಡಿಗಳ ಇಂತಹ ಕೃತ್ಯಗಳು ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಕಾರಣವಾಗಬಹುದು. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸಾಮಾಜಿಕ ಜಾಲತಾಣಗಳ ಮೇಲೆ ಹೆಚ್ಚಿನ ನಿಗಾ ಇಟ್ಟಿದೆ. ಯಾವುದೇ ಪೋಸ್ಟ್‌ಗಳನ್ನು ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುವ ಮೊದಲು ಅದರಲ್ಲಿ ಆಕ್ಷೇಪಾರ್ಹ ಅಂಶಗಳು ಇಲ್ಲ ಎಂಬುವುದನ್ನು ದೃಢಪಡಿಸಿ ಕೊಳ್ಳುವಂತೆ ಸೂಚನೆ ನೀಡಲಾಗಿದೆ. ಪೊಲೀಸ್ ಇಲಾಖೆ, ಸರ್ಕಾರದ ಸೂಚನೆಗಳನ್ನು ಮೀರಿ ಆಕ್ಷೇಪಾರ್ಹ ಮಾಹಿತಿಗಳನ್ನು ಹಾಗೂ ಕೋಮು ಪ್ರಚೋದನಾತ್ಮಕ ಪೋಸ್ಟ್‌ಗಳನ್ನು ಹಂಚಿಕೊಂಡರೆ ಅಂತವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಪ್ರತಿ ಠಾಣೆಯಲ್ಲಿ ನಿಗಾ ಘಟಕ:
ಬೆಳಗಾವಿ ನಗರ ಪೊಲೀಸ್ ಕಮೀಷನರೇಟ್ ಘಟಕದ ಪ್ರತಿಯೊಂದು ಪೊಲೀಸ್ ಠಾಣೆಗಳಲ್ಲಿ ಸಾಮಾಜಿಕ ಜಾಲತಾಣಗಳ ನಿಗಾ ಘಟಕ ಸ್ಥಾಪಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಪ್ರತಿಯೊಂದು ಪೋಸ್ಟ್‌ಗಳ ಮೇಲೆ ಪೊಲೀಸರು ನಿಗಾ ಇಟ್ಟಿದ್ದಾರೆ. ಪೋಸ್ಟ್ ಮಾಡುವ ಮೊದಲು ಯೋಚಿಸಿ,ನಿಮ್ಮ ಪೋಸ್ಟ್, ಟ್ವಿಟ್, ಕಮೆಂಟ್ಸ್, ಹಂಚುಕೊಳ್ಳುವಿಕೆಯಿಂದ ಶಾಂತಿ ಭಂಗ ಉಂಟಾದಲ್ಲಿ ಅದಕ್ಕೇ ನೀವೇ ಜವಾಬ್ದಾರರಾಗುತ್ತೀರಿ.ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ. ಅಹಿತಕರ ಚಟುವಟಿಕೆಗಳಲ್ಲಿ ಯಾರಾದರೂ ತೊಡಗಿದ ಬಗ್ಗೆ ಕಂಡುಬಂದಲ್ಲಿ ಕೂಡಲೇ ನಗರದ ಪೊಲೀಸ್ ಕಂಟ್ರೋಲ್ ರೂಂ. ನಂ.9483931100 ಅಥವಾ 112 ಗೆ ಕರೆ ಮಾಡಿತಿಳಿಸಬೇಕು ಎಂದು ತಿಳಿಸಲಾಗಿದೆ.
ಪೊಲೀಸ್ ಆಯುಕ್ತರ ಕಚೇರಿ ವ್ಯಾಪ್ತಿಯ ಎಲ್ಲ ಠಾಣೆಗಳಲ್ಲಿ ಸಾಮಾಜಿಕ ಜಾಲತಾಣಗಳ ನಿಗಾ ಘಟಕ ಸ್ಥಾಪಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಪ್ರತಿಯೊಂದು ಪೋಸ್ಟ್‌ಗಳ ಮೇಲೆ ಪೊಲೀಸರು ನಿಗಾ ಇಟ್ಟಿದ್ದಾರೆ. ಪೊಲೀಸರೊಂದಿಗೆ ಸಹಕರಿಸಿ, ಗಣೇಶ ಹಬ್ಬವನ್ನು ಶಾಂತರೀತಿಯಿಂದ ಆಚರಿಸಬೇಕು ಎಂದು ಡಿಸಿಪಿ ರೋಹನ ಜಗದೀಶ ತಿಳಿಸಿದ್ದಾರೆ.