ಕೊಪ್ಪಳ: ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ನಿಧನ

By Kannadaprabha News  |  First Published Jul 23, 2021, 9:00 AM IST

* ಹೃದಯಾಘಾತದಿಂದ ಮೃತಪಟ್ಟ ವಿಠ್ಠಪ್ಪ ಗೋರಂಟ್ಲಿ 
* ನಿಷ್ಠುರ ಬರವಣಿಗೆ ಮೂಲಕ ಎಲ್ಲರ ಗಮನ ಸೆಳೆದಿದ್ದ ಹಿರಿಯ ಸಾಹಿತಿ
* ಗೋರಂಟ್ಲಿ ನಿಧನಕ್ಕೆ ಕಂಬನಿ ಮಿಡಿದ ಕೊಪ್ಪಳ ಮೀಡಿಯಾ ಕ್ಲಬ್‌ ಸೇರಿದಂತೆ ಸಾಹಿತ್ಯ ಬಳಗ


ಕೊಪ್ಪಳ(ಜು.23): ಇಲ್ಲಿಯ ಹಿರಿಯ ಪತ್ರಕರ್ತ ಹಾಗೂ ಸಾಹಿತಿ, ಪ್ರಗತಿಪರ ವಿಚಾರಧಾರೆಯ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಠ್ಠಪ್ಪ ಗೋರಂಟ್ಲಿ (78) ಅವರು ಗುರುವಾರ ರಾತ್ರಿ ಭಾಗ್ಯನಗರದ ನಿವಾಸದಲ್ಲಿ ಹೃದಯಾಘಾತದಿಂದ ಪಟ್ಟಿದ್ದಾರೆ. ಅವರಿಗೆ ಪತ್ನಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗ ಇದ್ದಾರೆ.

ಅವರು ಜಿಲ್ಲೆಯ ಹಿರಿಯ ಪತ್ರಕರ್ತರಾಗಿ ಹಲವು ವಿಷಯಗಳ ಕುರಿತು, ಹಲವು ವಿಚಾರಗಳ ಕುರಿತು ನೇರ ಹಾಗೂ ನಿಷ್ಠುರತೆಯಿಂದ ಬರವಣಿಗೆ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಜಿಲ್ಲಾ ಹೋರಾಟದ ವಿಚಾರ, ತುಂಗಭದ್ರಾ ಜಲಾಶಯದ ಹೂಳಿನ ವಿಚಾರ, ಕೈಗಾರಿಕೆಗಳ ಕಾರ್ಮಿಕರ ಶೋಷಣೆಯ ವಿಚಾರ ಸೇರಿದಂತೆ ನೊಂದವರ ಪರ ಧ್ವನಿ ಎತ್ತಿ ಸರ್ಕಾರದ ಗಮನ ಸೆಳೆಯುತ್ತಿದ್ದರು.

Tap to resize

Latest Videos

ಸಾಹಿತ್ಯ ಲೋಕ ಅಗಲಿದ ಕವಿ, ಸಾಹಿತಿ ಡಾ. ಸಿದ್ದಲಿಂಗಯ್ಯ ಇನ್ನು ನೆನಪು ಮಾತ್ರ

4ನೇ ತರಗತಿ ಶಿಕ್ಷಣ ಪಡೆದರೂ 20ಕ್ಕೂ ಹೆಚ್ಚು ಕೃತಿಗಳನ್ನು ಹೊರ ತಂದಿದ್ದರು. ಹಲವು ಕವನ ಸಂಕಲನ ಸೇರಿದಂತೆ ಸಾಹಿತ್ಯ ಕ್ಷೇತ್ರದಲ್ಲೂ ಹೆಚ್ಚು ಕೃಷಿ ಮಾಡಿದ್ದರು. ಇವರ ಸಮಗ್ರ ಸೇವೆ ಪರಿಗಣಿಸಿ ರಾಜ್ಯ ಸರ್ಕಾರವು ರಾಜ್ಯೋತ್ಸವ ಪ್ರಶಸ್ತಿ, ಮಾಧ್ಯಮ ಅಕಾಡಮಿ ಪ್ರಶಸ್ತಿ ನೀಡಿ ಗೌರವಿಸಿತ್ತು. ಇದಲ್ಲದೇ ನೂರಾರು ಸಂಘ ಸಂಸ್ಥೆಗಳು ಇವರ ಜೀವನ ಸಾಧನೆಗೆ, ಜನ ಸೇವೆಗೆ ಸನ್ಮಾನಿಸಿ ಗೌರವಿಸಿದ್ದವು.

ರಾಜಕೀಯ ರಂಗದಲ್ಲೂ ತಮ್ಮದೇ ಚಾಪು ಮೂಡಿಸಿ ಈ ಹಿಂದೆ ತಾಪಂ ಸದಸ್ಯರಾಗಿ, ಮಂಡಲ ಪ್ರಧಾನರಾಗಿ ಸೇವೆ ಮಾಡಿದ್ದರು. ಗುರುವಾರ ಸಂಜೆ ಆರೋಗ್ಯದಲ್ಲಿ ದಿಢೀರ್‌ ಏರುಪೇರಾಗಿ ಮೃತಪಟ್ಟಿದ್ದಾರೆ. ಅವರ ನಿಧನಕ್ಕೆ ಜಿಲ್ಲೆಯ ಜನಪ್ರತಿನಿಧಿಗಳು, ಕೊಪ್ಪಳ ಮೀಡಿಯಾ ಕ್ಲಬ್‌ ಸೇರಿದಂತೆ ಸಾಹಿತ್ಯ ಬಳಗವು ಕಂಬನಿ ಮಿಡಿದಿದೆ.
 

click me!