ಇಂಡಿ: ಅಂಬೇಡ್ಕರ ಭಾವಚಿತ್ರಕ್ಕೆ ಅವಮಾನ, ದಲಿತಪರ ಸಂಘಟನೆಗಳಿಂದ ಪ್ರತಿಭಟನೆ

By Kannadaprabha NewsFirst Published Feb 10, 2021, 9:54 AM IST
Highlights

ಅಂಬೇಡ್ಕರ ಭಾವಚಿತ್ರಕ್ಕೆ ಕಿಡಿಗೇಡಿಗಳು ಚಪ್ಪಲಿಹಾರ ಹಾಕಿ ಅವಮಾನಿಸಿರುವ ಕಿಡಗೇಡಿಗಳು| ವಿಜಯಪುರ ಜಿಲ್ಲೆಉ ಇಂಡಿ ತಾಲೂಕಿನ ಮಾರ್ಸನಳ್ಳಿ ಗ್ರಾಮದಲ್ಲಿ ನಡೆದ ಘಟನೆ| ಕಿಡಿಗೇಡಿಗಳನ್ನು ಬಂಧಿಸಿ ಗಡಿಪಾರು ಮಾಡುವಂತೆ ರಸ್ತೆ ತಡೆದು ಆಕ್ರೋಶ| 

ಇಂಡಿ(ಫೆ.10): ​ ತಾಲೂಕಿನ ಮಾರ್ಸನಳ್ಳಿ ಗ್ರಾಮದ ಅಂಬೇಡ್ಕರ ವೃತ್ತದಲ್ಲಿನ ನಾಮಫಲಕದಲ್ಲಿ ಅಂಬೇಡ್ಕರ ಭಾವಚಿತ್ರಕ್ಕೆ ಕಿಡಿಗೇಡಿಗಳು ಚಪ್ಪಲಿಹಾರ ಹಾಕಿ ಅವಮಾನಿಸಿರುವ ಘಟನೆ ಸೋಮವಾರ ರಾತ್ರಿ ನಡೆದಿದ್ದು, ಮಂಗಳವಾರ ಬೆಳಗ್ಗೆ ಈ ಸುದ್ದಿ ತಿಳಿದು ತಾಲೂಕಿನ ವಿವಿಧ ದಲಿತಪರ ಸಂಘಟನೆಗಳ ಮುಖಂಡರು ಗ್ರಾಮದಲ್ಲಿನ ಇಂಡಿ-ಸಿಂದಗಿ ರಸ್ತೆ ತಡೆದು, ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟಿಸಿದ್ದಾರೆ. 

ಘಟನಾ ಸ್ಥಳಕ್ಕೆ ಡಿವೈಎಸ್ಪಿ ಶ್ರೀಧರ ದೊಡ್ಡಿ, ಇಂಡಿ ನಗರ ಪಿಎಸೈ ಮಾಳಪ್ಪ ಪೂಜಾರಿ, ಗ್ರಾಮೀಣ ಪೊಲೀಸ್‌ ಠಾಣೆ ಪಿಎಸೈ ಸಿರಗುಪ್ಪಿ, ತಹಸೀಲ್ದಾರ್‌ ಚಿದಂಬರ ಕುಲಕರ್ಣಿ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು. ಪ್ರತಿಭಟನಾಕಾರರ ಮನವೊಲಿಸಿ ರಸ್ತೆತಡೆ ಪ್ರತಿಭಟನೆ ತೆರವುಗೊಳಿಸಿದರು.

ಡಿವೈಎಸ್ಪಿ ಶ್ರೀಧರ ದೊಡ್ಡಿ ಅವರು, ಆರೋಪಿಗಳ ಪತ್ತೆಗಾಗಿ ಬೆರಳಚ್ಚುಗಾರರು ಹಾಗೂ ಶ್ವಾನದಳವನ್ನು ಕರೆಸಿಕೊಂಡು ತಪಾಸಣೆ ನಡೆಸಿದರು. ನಂತರ ಪ್ರತಿಭಟನಾಕಾರರಿಗೆ ಆರೋಪಿಗಳನ್ನು ಎರಡ್ಮೂರು ದಿನದಲ್ಲಿ ಪತ್ತೆ ಹೆಚ್ಚಲಾಗುತ್ತದೆ. ವೃತ್ತದಲ್ಲಿ ಅಂಬೇಡ್ಕರ ನೂತನ ಪ್ರತಿಮೆ ಪ್ರತಿಷ್ಠಾಪಿಸಲಾಗುತ್ತದೆ. ವೃತ್ತದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗುತ್ತದೆ ಎಂದು ಭರವಸೆ ನೀಡಿದ ಮೇಲೆ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆದರು.

ನಂತರ ಎಲ್ಲ ಅಧಿಕಾರಿಗಳು ಗ್ರಾಮದ ಪರಿಶಿಷ್ಟಕುಟುಂಬಗಳು, ದಲಿತ ಸಂಘಟನೆ ಮುಖಂಡರು, ಗ್ರಾಮಸ್ಥರು ಅಂಬೇಡ್ಕರ ಅವರ ಭಾವಚಿತ್ರಕ್ಕೆ ಅಭಿಷೇಕ ಮಾಡಿದರು. ನಂತರ ಪ್ರತಿಭಟನಾಕಾರರು ಆರೋಪಿಗಳನ್ನು ಶೀಘ್ರ ಪತ್ತೆ ಹಚ್ಚದಿದ್ದರೆ ಇಂಡಿ ಬಂದ್‌ ಮಾಡಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ತಹಸೀಲ್ದಾರ ಚಿದಂಬರ ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಿದರು.

ವಿಜಯಪುರ; 90 ಕಿಮೀಯಲ್ಲಿ ಕಾರು....ಯುವಕರ ಹುಚ್ಚಾಟ..ವಿಡಿಯೋ ವೈರಲ್!

ಮುಖಂಡರಾದ ರಾಜು ಯಂಟಮನ, ಹರೀಶ ಯಂಟಮಾನ, ಜೈಭೀಮ ನಾಯ್ಕೋಡಿ, ಸೋಮಶೇಖರ ಮ್ಯಾಕೇರಿ, ಶಿವಾನಂದ ಹರಿಜನ, ಶಿವು ಮೇಲಿನಮನಿ, ಶ್ರೀಶೈಲ ಜಾಲವಾದಿ, ಮಂಜು ಯಂಟಮಾನ, ವಿನಾಯಕ ಗುಣಸಾಗರ, ಸಂಜು ಮೇಲಿನಮನಿ, ಶಶಿ ನಾಯ್ಕೋಡಿ, ಮುತ್ತು ಮಾಡ್ಯಾಳ, ರಾಮು ಕಾಂಬಳೆ, ಅಶೋಕ ಶಿವಶರಣ, ನಿತ್ಯಾನಂದ ಕಾಂಬಳೆ, ಕೃಷ್ಣಾ ಅಳ್ಳೊಳ್ಳಿ, ಬಾಬು ದೇವರಮನಿ, ರಾಘು ದೇವರಮನಿ, ಹೊನ್ನಪ್ಪ ಸೊಂಪೂರ, ಶಂಕರ ಕಾಂಬಳೆ, ಚಂದ್ರಕಾಂತ ಮೇಲಿನಮನಿ, ಗ್ರಾಪಂ ಅಧ್ಯಕ್ಷ ಸಿದ್ದಪ್ಪ ಮಾದರ, ದತ್ತು ಬನಸೋಡೆ, ಗುರುಸಿದ್ದ ಗುಂದಗಿ, ಮರೆಪ್ಪ ಬನಸೋಡೆ, ವಿಠಲ ಪಡನೂರ ಅನೇಕರು ಪ್ರತಿಭಟನೆಯಲ್ಲಿದ್ದರು.

ಕಿಡಿಗೇಡಿಗಳನ್ನು ಗಡಿಪಾರು ಮಾಡಿ

ಇಂಡಿ ತಾಲೂಕಿನ ಮಾರ್ಸನಹಳ್ಳಿ ಗ್ರಾಮದಲ್ಲಿ ಅಂಬೇಡ್ಕರರ ಭಾವಚಿತ್ರ ಹೊಂದಿರುವ ನಾಮಫಲಕ್ಕೆ ಅವಮಾನಿಸಿರುವ ಘಟನೆಯನ್ನು ಖಂಡಿಸುತ್ತೇನೆ. ಕಿಡಿಗೇಡಿಗಳು ಯಾರೇ ಆಗಿದ್ದರೂ ಗುರುತಿಸಿ ಗಡಿಪಾರು ಮಾಡಬೇಕು ಎಂದು ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಕಂದಗಲ್ಲ ಒತ್ತಾಯಿಸಿದ್ದಾರೆ.

ತನಿಖೆ ನಡೆಸಲು ಶಾಸಕರ ಸೂಚನೆ

ಇಂಡಿ ತಾಲೂಕಿನ ಮಾರ್ಸನಹಳ್ಳಿ ಗ್ರಾಮದಲ್ಲಿ ಡಾ.ಬಾಬಾಸಾಹೇಬ ಅಂಬೇಡ್ಕರ ಅವರ ಭಾವಚಿತ್ರಕ್ಕೆ ದುಷ್ಕರ್ಮಿಗಳು ಅವಮಾನ ಮಾಡಿರುವುದನ್ನು ಉಗ್ರವಾಗಿ ಖಂಡಿಸುತ್ತೇನೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಘಟನೆ ಕುರಿತು ಸಮಗ್ರ ತನಿಖೆ ನಡೆಸಲು ಜಿಲ್ಲಾಡಳಿತ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಸೂಚಿಸಿದ್ದೇನೆ .ಶ್ವಾನದಳ ತಂದು ಪರಿಶೀಲಿಸಿರುವುದಾಗಿ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣ ತನಿಖೆ ಮಾಡಲು ಡಿವೈಎಸ್ಪಿ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಆರೋಪಿಗಳನ್ನು ಕೂಡಲೇ ಪತ್ತೆ ಹೆಚ್ಚುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಕಿಡಿಗೇಡಿಗಳ ಬಂಧನಕ್ಕೆ ಆಗ್ರಹ

ಮಾರ್ಸನಹಳ್ಳಿಯಲ್ಲಿ ಅಂಬೇಡ್ಕರ ಭಾವಚಿತ್ರಕ್ಕೆ ಅವಮಾನ ಮಾಡಿರುವ ಘಟನೆಯನ್ನು ತೀವ್ರವಾಗಿ ಖಂಡಿಸಲಾಗುತ್ತಿದ್ದು, ಘಟನೆಗೆ ಸಂಬಂಧಿಸಿದ ಕಿಡಿಗೇಡಿಗಳನ್ನು ಶೀಘ್ರ ಬಂಧಿಸಿ, ಅವರನ್ನು ಗಡಿಪಾರು ಮಾಡಬೇಕು. ಇಲ್ಲವೆ ರಾಷ್ಟ್ರದ್ರೋಹ ಪ್ರಕರಣದಲ್ಲಿ ಗಲ್ಲಿಗೇರಿಸಬೇಕು ಕಾಂಗ್ರೆಸ್‌ ಯುವ ಮುಖಂಡ ಶಿವಾನಂದ ಮೂರಮನ, ಶಿವು ತೆನ್ನಿಹಳ್ಳಿ ಇತರರು ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.
 

click me!